Site icon Vistara News

Power Point with HPK : ಗೀತಕ್ಕ ಸ್ಪರ್ಧೆ ತೀರ್ಮಾನ ನನ್ನದೆಂದ ಮಧು ಬಂಗಾರಪ್ಪ!

Madhu Bangarappa in Power Point with HPK

ಬೆಂಗಳೂರು: ಸ್ಯಾಂಡಲ್‌ವುಡ್‌ ಕಿಂಗ್‌ ಖ್ಯಾತಿ ಶಿವರಾಜಕುಮಾರ್‌ (Actor Shivarajkumar) ಅವರ ಪತ್ನಿ ಗೀತಾ ಶಿವರಾಜಕುಮಾರ್‌ (Geetha Shivarajkumar) ಅವರಿಗೆ ಈ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ (Shimoga Lok Sabha constituency) ಸ್ಪರ್ಧೆ ಮಾಡುವಂತೆ ಕಾಂಗ್ರೆಸ್‌ ವರಿಷ್ಠರಾದ ರಣದೀಪ್‌ ಸಿಂಗ್‌ ಸುರ್ಜೇವಾಲ ಸೇರಿ ಹಲವರು ಸೂಚಿಸಿದ್ದಾರೆ. ಆದರೆ, ಗೀತಕ್ಕ ಅವರು ತಮ್ಮ ಸ್ಪರ್ಧೆ ತೀರ್ಮಾನವನ್ನು ನನಗೆ ಬಿಟ್ಟಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು (Education Minister Madhu Bangarappa) ಪವರ್‌ ಪಾಯಿಂಟ್‌ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಹೇಳಿದರು.

ವಿಸ್ತಾರ ನ್ಯೂಸ್‌ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ “ಪವರ್‌ ಪಾಯಿಂಟ್‌ ವಿತ್‌ ಎಚ್‌ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ‌ ಶಿಕ್ಷಣ ಸಚಿವ ಮಧು ಬಂಗಾರಪ್ಪ, ನಾನು, ಗೀತಕ್ಕ ಎಲ್ಲರೂ ಕುಳಿತುಕೊಂಡು ಪಕ್ಷ ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತದೋ ಆ ನಿಲುವಿಗೆ ಬದ್ಧರಾಗಿರುತ್ತೇವೆ ಎಂದು ನಾನು ಹೇಳಿದ್ದೇನೆ. ನಾನು ಪಕ್ಷದ ಮುಖ್ಯಸ್ಥನಲ್ಲ, ನಾನು ಪಕ್ಷದ ಒಳಗೆ ಇದ್ದೇನೆ. ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತದೆಯೋ ಆ ತೀರ್ಮಾನಕ್ಕೆ ನಾವು ಬದ್ಧವಾಗಿರುತ್ತೇವೆ ಎಂದು ಹೇಳಿದ್ದಾಗಿ ಸ್ಪಷ್ಟಪಡಿಸಿದರು.

ಗೀತಾ ಶಿವರಾಜಕುಮಾರ್‌ ಅವರಿಗೆ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ಕೊಟ್ಟರೆ ಸ್ಪರ್ಧೆ ಮಾಡುತ್ತಾರೆ. ಒಂದು ವೇಳೆ ಬೇರೆಯವರಿಗೆ ಟಿಕೆಟ್‌ ಕೊಟ್ಟರೆ ನಾವು ಪಕ್ಷಕ್ಕಾಗಿ ದುಡಿಯುತ್ತೇವೆ. ಒಂದು ವೇಳೆ ಗೀತಕ್ಕ ಅವರಿಗೆ ಟಿಕೆಟ್‌ ಕೊಟ್ಟರೂ ಸಹ ಅವರು ಶಿವಮೊಗ್ಗದಲ್ಲಿ ಮಾತ್ರ ಕೆಲಸ ಮಾಡದೆ, ಅಕ್ಕ-ಪಕ್ಕದ ಜಿಲ್ಲೆಗಳಲ್ಲಿಯೂ ಓಡಾಟ ನಡೆಸಬೇಕಾಗುತ್ತದೆ. ಅದನ್ನು ಅವರು ಮಾಡುತ್ತಾರೆ. ಗೀತಕ್ಕ ಈಗಾಗಲೇ ಪಕ್ಷದ ಕೆಲಸವನ್ನು ಮಾಡುತ್ತಿದ್ದಾರೆ. ಹೀಗಾಗಿ ಬಳ್ಳಾರಿ ಸೇರಿದಂತೆ ಹಲವು ಕಡೆ ಕೆಲಸ ಮಾಡುತ್ತಿದ್ದಾರೆ ಎಂದು ಮಧು ಬಂಗಾರಪ್ಪ ಹೇಳಿದರು.

ಗೀತಕ್ಕ ಅವರಿಗೆ ಶಿವಮೊಗ್ಗ ಲೋಕಸಭಾ ಟಿಕೆಟ್‌ ಕೊಡಿಸುತ್ತೀರೋ? ಇಲ್ಲವೋ ಎಂದು ನೀವು ಕೇಳಿದರೆ ನಾನೀಗ ಅದನ್ನು ಹೇಳಲು ಸಾಧ್ಯವಿಲ್ಲ. ಆ ನಿರ್ಧಾರವನ್ನು ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು.

ಶಿವಮೊಗ್ಗ, ಮಂಗಳೂರು ಲೋಕಸಭೆಯಲ್ಲಿ ಕಾಂಗ್ರೆಸ್‌ಗೆ ಗೆಲುವು

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಅತಿ ಹೆಚ್ಚು ಸ್ಥಾನವನ್ನು ಗೆಲ್ಲುತ್ತದೆ. ಶಿವಮೊಗ್ಗ ಮತ್ತು ಮಂಗಳೂರು ಲೋಕಸಭಾ ಕ್ಷೇತ್ರವನ್ನು ನಾವು ನೂರಕ್ಕೆ ನೂರು ಗೆಲ್ಲುತ್ತೇವೆ. ಅದೂ ಕನಿಷ್ಠ ಅಂತರದಿಂದಲ್ಲ, ತೃಪ್ತಿಕರ ಅಂತರದಿಂದ ಗೆಲುವು ಸಾಧಿಸುತ್ತೇವೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಇದನ್ನೂ ಓದಿ : Power Point with HPK : ಸಿಎಂ ಸಿದ್ದರಾಮಯ್ಯಗೆ ಮಾಮ ಎಂದು ಕರೆಯುವ ಶಿವರಾಜಕುಮಾರ್!

ದೇಶದಲ್ಲಿ ಭಾವನಾತ್ಮಕ ಚುನಾವಣೆ ನಡೆಯುವುದಿಲ್ಲ ಎಂದು ಹೇಳಲು ಕರ್ನಾಟಕ ಈ ಬಾರಿ ಒಂದು ಉದಾಹರಣೆಯಾಗಿದೆ. ಅಭಿವೃದ್ಧಿ ಪರ ಕೆಲಸ ಮಾಡುವವರಿಗೆ ಮತ ಹಾಕುವ ಕೆಲಸವನ್ನು ಮತದಾರರು ಮಾಡಿದ್ದಾರೆ. ನಾನು ಈ ವೇದಿಕೆಯಲ್ಲಿ ಇನ್ನೊಂದು ಮಾತನ್ನು ಸ್ಪಷ್ಟವಾಗಿ ಹೇಳುತ್ತೇನೆ. ಲೋಕಸಭಾ ಚುನಾವಣೆ ನಂತರ ನಾನು ಇಲ್ಲಿಗೆ ಮತ್ತೊಮ್ಮೆ ಬಂದು ಕೂರುತ್ತೇನೆ. ಇದರ ಬಗ್ಗೆ ಮಾತನಾಡುತ್ತೇನೆ. ಕರ್ನಾಟಕದಲ್ಲಿ ನಾವು ಹೆಚ್ಚಿನ ಲೋಕಸಭಾ ಸ್ಥಾನವನ್ನು ಗೆಲ್ಲುತ್ತೇವೆ ಎಂದು ಮಧು ಬಂಗಾರಪ್ಪ ಹೇಳಿದರು.‌

Exit mobile version