ದಾವಣಗೆರೆ: ಇತ್ತೀಚೆಗೆ ಸಮಾಜದ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂಬ ಕೂಗು ಕೇಳಿ ಬರುತ್ತದೆ. ಅವಕಾಶ ಸಿಕ್ಕಾಗ ಸಮಾಜದ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಿದ್ದಾರೆ. ಇಲ್ಲಿರುವ ಸಚಿವರು ನಮ್ಮ ವೀರಶೈವ – ಲಿಂಗಾಯತ (Veerashaiva Lingayat) ಸಮುದಾಯ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ಕೊಡಬೇಕು. ಯಾವುದೇ ಧರ್ಮಗಳನ್ನು ಅತಿಯಾಗಿ ಓಲೈಸದೆ, ತುಷ್ಟೀಕರಣ ಮಾಡದೆ ಎಲ್ಲರಿಗೂ ಸಮಾನ ಅನುದಾನ ಕೊಡಬೇಕು ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (Former CM BS Yediyurappa) ತಾಕೀತು ಮಾಡಿದ್ದಾರೆ.
ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಅಧಿವೇಶನದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಮುದಾಯದ ಅಧಿಕಾರಿಗಳಿಗೆ ಸರ್ಕಾರಿ ವ್ಯವಸ್ಥೆಯಲ್ಲಿ ಸೂಕ್ತ ಸ್ಥಾನಮಾನ ಕೊಡಿಸಿ ಎಂದು ವೇದಿಕೆ ಮೇಲಿದ್ದ ವೀರಶೈವ ಲಿಂಗಾಯತ ಸಚಿವರಿಗೆ ತಾಕೀತು ಮಾಡಿದರು.
ಶಾಮನೂರು ಶಿವಶಂಕರಪ್ಪ ಅವರು ವೀರಶೈವ ಲಿಂಗಾಯತ ಸಮಾಜವನ್ನು ಒಂದುಗೂಡಿಸಬೇಕು. ನಾವು ಒಟ್ಟಾದರೆ ನಮಗೆ ಭವಿಷ್ಯ ಇದೆ ಎಂದು ಕಾರ್ಯಕ್ರಮ ಮಾಡಿದ್ದಾರೆ. ಒಳಪಂಗಡಗಳ ಗುದ್ದಾಟದಿಂದ ಹೊರ ಬಂದು ಒಂದಾದರೆ ಕಾರ್ಯಕ್ರಮವು ಸಾರ್ಥಕವಾಗುತ್ತದೆ. ನಮ್ಮಲ್ಲಿ ಶಕ್ತಿ ಇದೆ. ಇತರೆ ಸಮುದಾಯಗಳನ್ನು ಜತೆಗೆ ತೆಗೆದುಕೊಂಡು ಹೋದರೆ ದೊಡ್ಡ ಶಕ್ತಿ ಹೊರ ಹೊಮ್ಮುತ್ತದೆ. ವೀರಶೈವ – ಲಿಂಗಾಯತರನ್ನ ಒಬಿಸಿ ಪಟ್ಟಿಗೆ ಸೇರಿಸುವುದು ಬಹಳ ದಿನಗಳ ಹೋರಾಟವಾಗಿದೆ. ಇದಕ್ಕೆ ನನ್ನ ಸಂಪೂರ್ಣ ಬೆಂಬಲವನ್ನು ಕೊಡುತ್ತಿದ್ದೇನೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಶಾಸಕ, ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರಾದ ಈಶ್ವರ್ ಖಂಡ್ರೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಉಜ್ಜಯಿನಿ ಪೀಠದ ಸಿದ್ದಲಿಂಗ ಸ್ವಾಮೀಜಿ, ಸಾಣೆಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಶಾಸಕ ಎಚ್.ಡಿ. ತಮ್ಮಯ್ಯ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು.
ವೀರಶೈವ ಲಿಂಗಾಯತ ಮಹಾಸಭಾದಿಂದ 8 ನಿರ್ಣಯ; ಜಾತಿ ಗಣತಿ ವರದಿ ತಿರಸ್ಕಾರಕ್ಕೆ ಆಗ್ರಹ
ದಾವಣಗೆರೆ: ದಾವಣಗೆರೆಯಲ್ಲಿ ನಡೆಯುತ್ತಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ (All India Veerashaiva Lingayat Mahasabha) 24ನೇ ಮಹಾ ಅಧಿವೇಶನದಲ್ಲಿ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ (Shamanur Shivashankarappa) ಅವರು ಎಂಟು ನಿರ್ಣಯಗಳನ್ನು ಮಂಡನೆ ಮಾಡಿದ್ದಾರೆ. ದೇಶದ ಅಖಂಡತೆ, ಏಕತೆ, ಸಮಗ್ರತೆ, ಭದ್ರತೆಯ ರಕ್ಷಣೆಗೆ ಕಟಿಬದ್ಧವಾಗಿರುವುದು, ವಿಶ್ವಗುರು ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕರೆಂದು ಸರ್ಕಾರ ಅಧಿಕೃತವಾಗಿ ಘೋಷಿಸುವುದು, ಕೇಂದ್ರದ ಒಬಿಸಿ ಪಟ್ಟಿಗೆ ವೀರಶೈವ ಲಿಂಗಾಯತರನ್ನು (Veerashaiva Lingayat) ಸೇರಿಸುವುದು, ಜಾತಿ ಗಣತಿಗೆ (Caste Census) ಸಂಬಂಧಪಟ್ಟಂತೆ ಕಾಂತರಾಜ ವರದಿಯನ್ನು ತಿರಸ್ಕಾರ ಮಾಡುವುದು ಸೇರಿದಂತೆ ಇನ್ನಿತರ ಪ್ರಮುಖ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ವೇದಿಕೆಯಲ್ಲಿದ್ದ ಹಾಗೂ ವೇದಿಕೆ ಮುಂಭಾಗದಲ್ಲಿದ್ದ ವೀರಶೈವ ಲಿಂಗಾಯತ ಸಮುದಾಯ ಜನರು ಎದ್ದು ನಿಂತು ಈ ನಿರ್ಣಯಗಳನ್ನು ಅಂಗೀಕರಿಸಿದರು.
ಮಹಾ ಅಧಿವೇಶನದ 8 ನಿರ್ಣಯಗಳು ಇವು
- ದೇಶದ ಅಖಂಡತೆ, ಏಕತೆ, ಸಮಗ್ರತೆ, ಭದ್ರತೆಯ ರಕ್ಷಣೆಗೆ “ಮಹಾಸಭೆ’’ ಹಾಗೂ ನಮ್ಮ ಸಮಾಜ ಸದಾ ಕಟಿಬದ್ಧವಾಗಿದ್ದು, ಅಂತಹ ಯಾವುದೇ ಹೋರಾಟ, ಪ್ರಯತ್ನಗಳಿಗೆ ಈ ಹಿಂದಿನಂತೆಯೇ ಪ್ರೋತ್ಸಾಹ, ಬೆಂಬಲ ನೀಡುತ್ತದೆ ಎಂದು ಈ ಮಹಾಧಿವೇಶನವು ಪುನರುಚ್ಚರಿಸುತ್ತದೆ.
- ವಿಶ್ವಗುರು ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕರೆಂದು ಸರ್ಕಾರ ಅಧಿಕೃತವಾಗಿ ಘೋಷಿಸಬೇಕು ಎಂದು ಮಹಾಧಿವೇಶನ ಒತ್ತಾಯಿಸುತ್ತದೆ.
- ಕೇಂದ್ರದ ಒಬಿಸಿ ಪಟ್ಟಿಗೆ ವೀರಶೈವ ಲಿಂಗಾಯತರನ್ನು ಸೇರಿಸಬೇಕು. ಒಬಿಸಿ ಪಟ್ಟಿಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರವು ಶಿಫಾರಸು ಮಾಡಬೇಕು. ಕೇಂದ್ರ ಸರ್ಕಾರವು ಈ ಶಿಫಾರಸನ್ನು ಅಂಗೀಕರಿಸಬೇಕು ಎಂದು ಈ ಮಹಾಧಿವೇಶನ ಒತ್ತಾಯಿಸುತ್ತದೆ.
- ಜಾತಿಗಣತಿಗೆ ಸಂಬಂಧಪಟ್ಟ ಕಾಂತರಾಜ ವರದಿಯನ್ನು ರಾಜ್ಯ ಸರ್ಕಾರ ತಿರಸ್ಕಾರ ಮಾಡಬೇಕು. ಎಲ್ಲ ಒಳಪಂಗಡಗಳನ್ನು ಒಳಗೊಂಡ ವಾಸ್ತವಿಕ ಮತ್ತು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ ಆಧಾರದ ಮೇಲೆ ಸಮೀಕ್ಷೆ ಆಗಬೇಕು. ವೈಜ್ಞಾನಿಕವಾಗಿ ಜಾತಿ ಜನಗಣತಿ ಆಗಬೇಕು ಎಂದು ಈ ಮಹಾಧಿವೇಶನ ಒಕ್ಕೊರಲಿನಿಂದ ಒತ್ತಾಯಿಸುತ್ತದೆ
- ಸರ್ಕಾರ ಮುಂದಿನ ದಿನಗಳಲ್ಲಿ ನಡೆಸುವ ಜನ ಗಣತಿಯ ವೇಳೆ ನಮ್ಮ ಸಮಾಜದ ಬಾಂಧವರು ಹಿಂದು ಮತ್ತು ತಮ್ಮ ಉಪ ಜಾತಿಯ ಹೆಸರುಗಳನ್ನು ಬರೆಸಬಾರದು. ಧರ್ಮದ ಕಾಲಂನಲ್ಲಿ ವೀರಶೈವ ಅಥವಾ ಲಿಂಗಾಯತ ಎಂದೇ ಬರೆಸುವಂತೆ ಈ ಮಹಾಧಿವೇಶನ ಮನವಿ ಮಾಡಲು ನಿರ್ಣಯ ಮಾಡಿರುತ್ತದೆ.
- ಎಲ್ಲ ರೈತರಿಗೆ ಅನುಕೂಲ ಆಗುವಂತೆ ರಾಜ್ಯದ ಎಲ್ಲ ನೀರಾವರಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಈ ಮಹಾಧಿವೇಶನವು ಸರ್ಕಾರವನ್ನು ಒತ್ತಾಯಿಸುತ್ತದೆ.
- ಮಾಜಿ ಸಿಎಂ ಎಸ್ ನಿಜಲಿಂಗಪ್ಪ ಅವರ ನಿವಾಸ ಖರೀದಿ ಮಾಡಲು ನಿರ್ಧಾರ. ಆ ಮನೆಯನ್ನು ಖರೀದಿಸಿ ಕಾರ್ಯಪ್ರವೃತ್ತವಾಗಿ ಶ್ರೀ ನಿಜಲಿಂಗಪ್ಪನವರ ಪುಣ್ಯ ಸ್ಮರಣೆಯ ದಿನವಾದ ಆಗಸ್ಟ್ 8, 2024ರೊಳಗೆ ಸ್ಮಾರಕ ನಿರ್ಮಾಣಕ್ಕೆ ಕ್ರಮವಹಿಸಬೇಕು ಎಂದು ಈ ಮಹಾಧಿವೇಶನ ಒತ್ತಾಯಿಸುತ್ತದೆ.
- ಮಹಾಸಭಾದ 24ನೇ ಮಹಾಧಿವೇಶನಕ್ಕೆ ಸಹಕರಿಸಿದ ಎಲ್ಲರಿಗೂ ಈ ಮಹಾಧಿವೇಶನ ತನ್ನ ಕೃತಜ್ಞತೆಯನ್ನು ಸಮರ್ಪಿಸುವ ನಿರ್ಣಯ ಅಂಗೀಕರಿಸುತ್ತದೆ.
ಇದನ್ನೂ ಓದಿ: ಬಿಜೆಪಿಗರು ಬ್ರಿಟಿಷರ ಬೂಟು ನೆಕ್ಕೋರು ಎಂದ ಹರಿಪ್ರಸಾದ್; ನೀವು ಇಟಲಿಯವರ ಬೂಟು ನೆಕ್ಕುತ್ತಿದ್ದೀರಾ ಎಂದ ಬಿಜೆಪಿ!
ಈ ಮೂಲಕ ಮರು ಜಾತಿ ಗಣತಿಯನ್ನು ಮಾಡುವಂತೆ ಒತ್ತಾಯ ಮಾಡಲಾಗಿದೆ. ಅಲ್ಲದೆ, ರೈತರಿಗೆ ಅನುಕೂಲವಾಗುವಂತೆ ನೀರಾವರಿ ಯೋಜನೆಯನ್ನು ರೂಪಿಸಲು ಪ್ರಮುಖವಾಗಿ ಆಗ್ರಹಿಸಲಾಗಿದೆ.