ಬೆಂಗಳೂರು: ಬಿಜೆಪಿ ಸರ್ಕಾರದ (BJP Government) ಅವಧಿಯಲ್ಲಿನ ಕಾಮಗಾರಿಗಳ ನ್ಯಾಯಾಂಗ ತನಿಖೆಗೆ ಆದೇಶಿಸಿ, ಆಯೋಗವನ್ನು ನೇಮಕ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತನಿಖಾ ವರದಿ ಬಾರದ ಹೊರತು ಯಾರದ್ದೂ, ಯಾವ ಬಿಲ್ ಅನ್ನೂ ಪಾವತಿ ಮಾಡುವುದಿಲ್ಲ ಎಂಬ ಖಡಕ್ ಸಂದೇಶವನ್ನು ರವಾನೆ ಮಾಡಿದ್ದಾರೆ. ಆದರೆ, ಇತ್ತ ನ್ಯಾಯಾಂಗ ಆಯೋಗಕ್ಕೆ ಕನಿಷ್ಠ ಸೌಕರ್ಯ, ಸೌಲಭ್ಯವನ್ನೂ ನೀಡಿಲ್ಲ. ಒಂದು ಕೊಠಡಿಯನ್ನೂ ಗೊತ್ತುಪಡಿಸಿರುವುದರಿಂದ ತನಿಖೆಯೇ ಆರಂಭಗೊಂಡಿಲ್ಲ. ಈ ಮೂಲಕ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಕಮಿಷನ್ ಪಾಲಿಟಿಕ್ಸ್ (Commission Politics) ಕುತೂಹಲ ಕೆರಳಿಸಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ನಡೆದ ಕಾಮಗಾರಿಗಳ ಗುತ್ತಿಗೆಗೆ (Work Contract) ಸಂಬಂಧಿಸಿ ಬಂದಿರುವ ನೂರಾರು ದೂರುಗಳನ್ನು (commission politics) ಆಧರಿಸಿ 40% ಕಮಿಷನ್ (40 percent Commission) ಹಗರಣದ ನ್ಯಾಯಾಂಗ ತನಿಖೆಗೆ ಆದೇಶ (Order for Judicial Enquiry) ನೀಡಲಾಗಿದೆ. ನಿವೃತ್ತ ನ್ಯಾಯಮೂರ್ತಿ ಬಿ. ವೀರಪ್ಪ (Retired judge B Veerappa) ಅವರು ತನಿಖೆ ನಡೆಸಿ ವರದಿ ನೀಡುವವರೆಗೆ ಹಳೇ ಕಾಮಗಾರಿಗಳ ಬಾಕಿ ಬಿಲ್ ಪಾವತಿ ಮಾಡುವುದಿಲ್ಲ (Old bills will not be paid) ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದರು. ಆದರೆ, ಆಯೋಗ ರಚನೆ ಮಾಡಿ ವಾರ ಕಳೆದರೂ ಸೌಲಭ್ಯವನ್ನು ಮಾತ್ರ ನೀಡಲಾಗಿಲ್ಲ.
ಇದನ್ನೂ ಓದಿ: Karnataka Politics : ಕರ್ನಾಟಕ ಕಾಂಗ್ರೆಸ್ ಎಟಿಎಂ ಸರ್ಕಾರ್; ಇದು ಬಿಜೆಪಿ ಟಕ್ಕರ್!
ಕಮಿಷನ್ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ತನಿಖೆ ಮಾಡಲು ನಿವೃತ್ತ ನ್ಯಾಯಮೂರ್ತಿ ವೀರಪ್ಪ ನೇತೃತ್ವದಲ್ಲಿ ಆಯೋಗವನ್ನು ರಚನೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿತ್ತು. ಆಯೋಗ ರಚನೆಯಾಗಿ ಒಂದು ವಾರವಾದರೂ ನ್ಯಾಯಾಂಗ ತನಿಖೆ ತಂಡಕ್ಕೆ ಕೊಠಡಿಯನ್ನೂ ಕೊಟ್ಟಿಲ್ಲ.
ವಿಧಾನಸೌಧ, ವಿಕಾಸ ಸೌಧ, ಎಂಎಸ್ ಬಿಲ್ಡಿಂಗ್ಗಳಲ್ಲಿ ಕೊಠಡಿ ಕೊಡಲು ಅವಕಾಶ ಇತ್ತು. ಆದರೆ, ಎಲ್ಲಿಯೂ ಸಹ ಕೊಠಡಿಯನ್ನು ಸರ್ಕಾರ ಗೊತ್ತುಪಡಿಸಿಲ್ಲ. ಇಲ್ಲಿಯವರೆಗೂ ಈ ಬಗ್ಗೆ ಸರ್ಕಾರ ಮೌನ ವಹಿಸಿದೆ. ಕೇವಲ ಹೆಸರಿಗಷ್ಟೇ ಆಯೋಗ ರಚನೆ ಮಾಡಲಾಗಿದೆಯೇ ಎಂಬ ಅನುಮಾನ ಮೂಡುವಂತೆ ಆಗಿದೆ. ಅಲ್ಲದೆ, ಆಯೋಗ ರಚನೆ ಮಾಡಿ ತನಿಖೆ ಶುರುವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಈ ಆಯೋಗದಿಂದ ತನಿಖಾ ವರದಿ ಬಾರದವರೆಗೂ ಕಾಮಗಾರಿಗಳ ಬಿಲ್ ಪಾವತಿ ಮಾಡುವುದಿಲ್ಲ ಎಂದೂ ಹೇಳಿದ್ದಾರೆ. ಆದರೆ, ಆಯೋಗಕ್ಕೆ ಕನಿಷ್ಠ ಸೌಲಭ್ಯವನ್ನೂ ನೀಡದಿರುವುದು ಅನುಮಾನಕ್ಕೆ ಕಾರಣವಾಗಿದೆ.
ಸಿದ್ದರಾಮಯ್ಯ ಟ್ವೀಟ್ನಲ್ಲಿ ಹೇಳಿದ್ದೇನು?
ಬಿಜೆಪಿ ಸರ್ಕಾರದ ಕಮಿಷನ್ ಹಗರಣದ ತನಿಖೆ ಭರವಸೆ ನೀಡಿದ್ದೆವು. ತನಿಖೆಗೆ ಆದೇಶ ನೀಡಿದ್ದೇವೆ. ವರದಿ ಬಂದ ಮೇಲೆ ಅರ್ಹ ಗುತ್ತಿಗೆದಾರರಿಗೆ ಬಿಲ್ ಪಾವತಿ ಆಗಲಿದೆ. ಪ್ರಾಮಾಣಿಕ ಗುತ್ತಿಗೆದಾರರಿಗೆ ಯಾರಿಗೂ ತೊಂದರೆ ಆಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕೆಲವೇ ಕೆಲವು ಗುತ್ತಿಗೆದಾರರು ತಮ್ಮ ಸ್ವಾರ್ಥ ಹಾಗೂ ದುರುದ್ದೇಶದ ಈಡೇರಿಕೆಗಾಗಿ ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆಂದು ಸ್ವತಃ ಕರ್ನಾಟಕ ರಾಜ್ಯ ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರು ಹಾಗೂ ಬಿಬಿಎಂಪಿ ಗುತ್ತಿಗೆದಾರರ ಸಂಘದವರೇ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ ಎಂದು ಸಿದ್ದರಾಮಯ್ಯ ವಿವರಿಸಿದ್ದಾರೆ.
ಇದನ್ನೂ ಓದಿ: Commission Politics : ನ್ಯಾಯಾಂಗ ತನಿಖಾ ಆಯೋಗಕ್ಕೆ ಬಿಜೆಪಿಯ 40% ಕಮಿಷನ್ ದಾಖಲೆ ಕೊಡುವೆ: ಕೆಂಪಣ್ಣ
ಸಿದ್ದರಾಮಯ್ಯ ಹೇಳಿದ ಹನ್ನೆರಡು ಪ್ರಮುಖ ವಿಚಾರಗಳು
- ನಾವು ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಹಗರಣಗಳನ್ನು ತನಿಖೆ ಮಾಡಿಸುವ ಭರವಸೆ ನೀಡಿದ್ದೆವು. ನಾಡಿನ ಮತದಾರರು ನಮ್ಮ ಮಾತಿನ ಮೇಲೆ ನಂಬಿಕೆಯಿಟ್ಟು ಬಿಜೆಪಿಯ ಭ್ರಷ್ಟಾಚಾರ, ಕಮಿಷನ್ ಹಾವಳಿ, ತೆರಿಗೆ ಲೂಟಿಯ ವಿರುದ್ಧ ಮತ ಚಲಾಯಿಸಿ 135 ಸ್ಥಾನಗಳಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿ ಸುಭದ್ರ, ಸುಸ್ಥಿರ ಸರ್ಕಾರ ರಚನೆಗೆ ಅವಕಾಶ ನೀಡಿದ್ದಾರೆ. ಈಗ ಜನರಿಗೆ ನೀಡಿದ್ದ ವಚನ ಪಾಲನೆ ನಮ್ಮ ಕರ್ತವ್ಯವಾಗಿದೆ.
- ಬಿಜೆಪಿ ಸರ್ಕಾರದ 40% ಕಮಿಷನ್ ಹಗರಣವನ್ನು ನಿವೃತ್ತ ನ್ಯಾಯಮೂರ್ತಿ ಬಿ. ವೀರಪ್ಪ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದೇವೆ.
- ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಮಗಾರಿಯನ್ನೇ ನಡೆಸದೆ, ಹಳೆಯ ಕಾಮಗಾರಿಗಳಿಗೆ, ಇನ್ನು ಕೆಲವು ಕಡೆ ಅರ್ಧಂಬರ್ಧ ಕೆಲಸ ಮಾಡಿ ಬಿಲ್ ಹಣ ಪಡೆಯಲಾಗಿದೆ.
- ನಿವೃತ್ತ ನ್ಯಾಯಮೂರ್ತಿ ಬಿ. ವೀರಪ್ಪ ನೇತೃತ್ವದಲ್ಲಿ ನ್ಯಾಯಾಂಗ ಸಮಿತಿಯು ಈ ಎಲ್ಲ ಹಗರಣಗಳ ಕುರಿತು ತನಿಖೆ ನಡೆಸುತ್ತಿದ್ದು, ತನಿಖೆ ಪೂರ್ಣವಾಗಿ ವರದಿ ಬರುವ ಮೊದಲೇ ಬಾಕಿಯಿರುವ ಬಿಲ್ ಹಣ ಬಿಡುಗಡೆ ಮಾಡುವುದು ಸಮಂಜಸವಲ್ಲ.
- ನ್ಯಾಯಯುತವಾಗಿ ಕಾಮಗಾರಿ ಮಾಡಿದ ಯಾವೊಬ್ಬ ಗುತ್ತಿಗೆದಾರನಿಗೂ ಅನ್ಯಾಯವಾಗಲು ನಮ್ಮ ಸರ್ಕಾರ ಬಿಡುವುದಿಲ್ಲ. ಈ ಬಗ್ಗೆ ಗುತ್ತಿಗೆದಾರರಿಗೆ ಭಯ ಬೇಡ. ಆದರೆ ಉಪ್ಪು ತಿಂದವರು ನೀರು ಕುಡಿಯಬೇಕಲ್ಲವೇ?
- ನಮ್ಮ ಸರ್ಕಾರದ ವಿರುದ್ಧ ಮಾಜಿ ಸಚಿವರಾದ ಆರ್. ಅಶೋಕ್ ಅವರು ಮಾಡಿರುವ 15% ಕಮಿಷನ್ ಆರೋಪ ಸತ್ಯಕ್ಕೆ ದೂರವಾದದ್ದೇ ಆದರೂ ಅದರಲ್ಲಿ ಅವರು ಕಮಿಷನ್ ದರವನ್ನು 40%ನಿಂದ 15% ಕ್ಕೆ ಇಳಿಸಿರುವುದು ಸಂತೋಷದ ವಿಷಯ.
- ಅಶೋಕ್ ಅವರ ಈ ಹೇಳಿಕೆಯಿಂದ ಬಿಜೆಪಿ ಸರ್ಕಾರಕ್ಕಿಂತ ಕಾಂಗ್ರೆಸ್ ಸರ್ಕಾರ ಉತ್ತಮ ಎಂಬುದು ಅವರ ಮನಸಿನಲ್ಲೇ ಇದೆ ಎನ್ನುವುದನ್ನು ತೋರಿಸುತ್ತದೆ.
- ನಮ್ಮ ಮೇಲಿನ ಆರೋಪಗಳನ್ನು ಸವಾಲಿನಂತೆ ಸ್ವೀಕರಿಸಿ, ಈ ಅಗ್ನಿಪರೀಕ್ಷೆಯಲ್ಲಿ ಗೆದ್ದು ನಮ್ಮದು ಬರೀ ಉತ್ತಮವಲ್ಲ ಅತ್ಯುತ್ತಮ, ಪಾರದರ್ಶಕ, ಜನಪರ ಸರ್ಕಾರ ಎಂಬುದನ್ನು ನಾಡಿನ ಜನತೆಯೆದುರು ಸಾಬೀತು ಮಾಡುತ್ತೇವೆ.
- ರಾಜ್ಯ ಸರ್ಕಾರ ಗುತ್ತಿಗೆದಾರರಿಗೆ ಬಾಕಿ ಬಿಲ್ ಹಣ ಪಾವತಿ ಮಾಡುತ್ತಿಲ್ಲ, ಹೀಗಾಗಿ ರಾಹುಲ್ ಗಾಂಧಿಯವರು ಮಧ್ಯಪ್ರವೇಶಿಸಿ ಬಿಲ್ ಹಣ ಬಿಡುಗಡೆ ಮಾಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒತ್ತಾಯಿಸಿದ್ದಾರೆ. ಆದರೆ ರಾಜ್ಯ ಸರ್ಕಾರಗಳಿಗೆ ಸೂಚನೆ, ನಿರ್ದೇಶನ ನೀಡುವ ಅಧಿಕಾರವಿರುವುದು ದೇಶದ ಪ್ರಧಾನಿಗಳಿಗೆ, ನರೇಂದ್ರ ಮೋದಿ ಅವರು ಮಾಡಬೇಕಿರುವ ಕೆಲಸವನ್ನು ರಾಹುಲ್ ಗಾಂಧಿಯವರಿಗೆ ಮಾಡಿ ಎಂದು ಒತ್ತಾಯಿಸುತ್ತಿರುವುದು ನೋಡಿದರೆ ಸ್ವತಃ ಬೊಮ್ಮಾಯಿಯವರಿಗೆ ಮೋದಿ ಅವರ ಕಾರ್ಯದಕ್ಷತೆ ಬಗ್ಗೆ ನಂಬಿಕೆ ಇದ್ದಂತೆ ಕಾಣುತ್ತಿಲ್ಲ.
- ಈಗಾಗಲೇ ಕರ್ನಾಟಕ ರಾಜ್ಯ ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರು ಹಾಗೂ ಬಿಬಿಎಂಪಿ ಗುತ್ತಿಗೆದಾರರ ಸಂಘದವರು ಬಾಕಿ ಬಿಲ್ ಹಣ ಬಿಡುಗಡೆಗೆ ಸಂಬಂಧಿಸಿದಂತೆ ನನ್ನೊಂದಿಗೆ ಚರ್ಚಿಸಿದ್ದಾರೆ, P.O.W ಕಾಮಗಾರಿಗಳ ಬಿಲ್ ಅನ್ನು ಬಿಡುಗಡೆ ಮಾಡುವಂತೆ ಸೂಚನೆಯನ್ನು ನೀಡಲಾಗಿದೆ. ಕಾಮಗಾರಿಗಳ ಬಿಲ್ ಬಿಡುಗಡೆಗೆ ಸಂಬಂಧಿಸಿದಂತೆ ಇರುವ ಕೆಲವು ಸಾಮಾನ್ಯ ಪ್ರಕ್ರಿಯೆಗಳು ಮುಗಿದ ಕೂಡಲೇ ಈ ಹಣವನ್ನು ಬಿಡುಗಡೆ ಮಾಡಲಾಗುತ್ತದೆ.
- ಕೆಲವೇ ಕೆಲವು ಗುತ್ತಿಗೆದಾರರು ತಮ್ಮ ಸ್ವಾರ್ಥ ಹಾಗೂ ದುರುದ್ದೇಶದ ಈಡೇರಿಕೆಗಾಗಿ ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆಂದು ಸ್ವತಃ ಕರ್ನಾಟಕ ರಾಜ್ಯ ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರು ಹಾಗೂ ಬಿಬಿಎಂಪಿ ಗುತ್ತಿಗೆದಾರರ ಸಂಘದವರೇ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.
- ನಾವು ಕಮಿಷನ್ ಹಿಂದೆ ಬಿದ್ದವರಲ್ಲ, ಕಮಿಷನ್ ಹಗರಣಗಳ ಹಿಂದಿರುವ ಭ್ರಷ್ಟರ ಬೆನ್ನು ಬಿದ್ದಿದ್ದೇವೆ ಎನ್ನಲು ಇದಕ್ಕಿಂತ ಬೇರೆ ಯಾವ ಸಾಕ್ಷಿ ಬೇಕು?