ರಾಮನಗರ: ಗೌರಿ ಗಣೇಶ ಹಬ್ಬ ಆಚರಣೆ ಸಮಯದಲ್ಲಿ ಸುಮಾರು 15 ದಿನಗಳ ಕಾಲ ತಮಿಳುನಾಡಿಗೆ ಮತ್ತೆ ನಿತ್ಯ 5000 ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಒತ್ತಡ ಹಾಕಿದೆ. ಕೋರ್ಟ್ ಆದೇಶದಂತೆ ಬಿಡದಿದ್ದರೆ ತಪ್ಪಾಗುತ್ತದೆ ಎಂದು ನೀರಾವರಿ ಮಂತ್ರಿಗಳು ನೀರು (Cauvery Water Dispute) ಬಿಟ್ಟಿದ್ದಾರೆ. ತರಾತುರಿಯಲ್ಲಿ ಈ ನಿರ್ಧಾರ ಮಾಡಿರುವುದು ರೈತರ ಬದುಕಿನ ಜತೆ ಚೆಲ್ಲಾಟವಾಗಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಸರ್ಕಾರ ನೀರು ಬಿಟ್ಟಿಲ್ಲವೇ ಎಂದು ಕೇಳಿದ್ದಾರೆ. ಹೌದು ಹಿಂದಿನ ಸರ್ಕಾರದಲ್ಲೂ ನೀರು ಬಿಟ್ಟಿದ್ದಾರೆ. ಆದರೆ ಈ ವರ್ಷ ನಮ್ಮ ರೈತರಿಗೆ ನೀರು ಕೊಡುವುದಕ್ಕೆ ಆಗುತ್ತಿಲ್ಲ, ಇವತ್ತು ರೈತರು ಬೆಳೆದ ಬೆಳೆಗಳನ್ನು ನೀರಿಲ್ಲದೆ ನಾಶ ಮಾಡುತ್ತಿದ್ದಾರೆ. ಅನೇಕ ಸಂಘಟನೆಗಳು ಈಗಾಗಲೇ ಪ್ರತಿಭಟನೆ ಮಡುತ್ತಿವೆ. ಸೆ. 11ಕ್ಕೆ ಸಭೆ ಆಗಿದೆ, ಅದಾದ ನಂತರ ಸುಪ್ರೀಂಕೋರ್ಟ್‌ಗೆ ಅರ್ಜಿ ಹಾಕಿದ್ದರು. ನಾನು ಆಗಲೇ ಹೋಗಿ ಅರ್ಜಿ ಹಾಕಿ ಎಂದು ನಮ್ಮವರಿಗೆ ಹೇಳಿದ್ದೆ. ಈಗಾಗಲೇ ಸುಪ್ರೀಂಕೋರ್ಟ್‌ಗೆ ಹೋಗಿರುವುದರಿಂದ ಯಾಕೆ ಭಯ? ಕೋರ್ಟ್ ಆದೇಶ ಏನು ಬರುತ್ತೋ ನೋಡೋಣ ಎಂದು ತಿಳಿಸಿದರು.
ಸುಪ್ರೀಂಕೋರ್ಟ್ ಈಗಾಗಲೇ 2007ರಲ್ಲಿ ಅಂತಿಮ ನೀಡಿದೆ. ದೇವೇಗೌಡರ ಮಾರ್ಗದರ್ಶನದಲ್ಲಿ ಮರು ಅರ್ಜಿ ಹಾಕಿದ್ದೆವು. ಆದಾದ ಬಳಿಕೆ 2018ರಲ್ಲಿ ರಾಜ್ಯದ ಪರವಾಗಿ ಆದೇಶ ಬಂತು. 18 ಟಿಎಂಸಿ ನೀರು ರಾಜ್ಯದ ಬಳಕೆಗಾಗಿ ನೀಡಲಾಗಿತ್ತು. ನೆನ್ನೆ ರಾಜ್ಯಸಭೆಯಲ್ಲಿ ದೇವೇಗೌಡರು ಏಕಾಂಗಿಯಾಗಿ ಹೋರಾಟ ಮಾಡಿದ್ದಾರೆ. ಇಳಿ ವಯಸ್ಸಿನಲ್ಲಿ ನಿಲ್ಲಲು ಆಗದ ಸ್ಥಿತಿಯಲ್ಲಿ ಅವರು ಹೋರಾಟ ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್ ನಾಯಕರು, ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಮಲ್ಲಿಕಾರ್ಜುನ ಖರ್ಗೆ ಎಲ್ಲಿ ಹೋಗಿದ್ದರು ಎಂದು ಕಿಡಿಕಾರಿದರು.
ಇದನ್ನೂ ಓದಿ | Drought in Karnataka : ರಾಜ್ಯದಲ್ಲಿ 42 ಲಕ್ಷ ಹೆಕ್ಟೇರ್ ಬೆಳೆ ಹಾನಿ; 6 ಸಾವಿರ ಕೋಟಿಗಾಗಿ ಕೇಂದ್ರಕ್ಕೆ ಮೊರೆ
ತಮಿಳುನಾಡು ಅರ್ಜಿ ಹಾಕಿದ ತಕ್ಷಣವೇ ಯಾಕೆ ನೀರು ಬಿಟ್ಟಿದ್ದೀರಿ? ಯಾಕೆ ಈ ಸರ್ಕಾರದವರು ಪ್ರೊಟೆಸ್ಟ್ ಮಾಡಲಿಲ್ಲ. ಪ್ರಾಧಿಕಾರ ನೀರು ಬಿಡಿ ಎಂದ ತಕ್ಷಣ ಬಿಡಬೇಕು ಅಂತೇನಿಲ್ಲ. ಸದನದಲ್ಲಿ ದೇವೇಗೌಡರು ಏಕಾಂಗಿಯಾಗಿ ಹೋರಾಟ ಮಾಡಿದರೂ, India ಒಕ್ಕೂಟದ ನಾಯಕ ಖರ್ಗೆ ಅವರು ಕಾವೇರಿ ಬಗ್ಗೆ ಮಾತನಾಡಬೇಕಿತ್ತು, ಯಾಕೆ ಮಾತನಾಡಿಲ್ಲ ಎಂದು ಪ್ರಶ್ನಿಸಿದರು.
ಪ್ರಧಾನಿ ಮೋದಿ ಜತೆ ಚರ್ಚಿಸುವೆ
ದೇವೇಗೌಡರು ಪ್ರಧಾನಿಯಾಗಿದ್ದಾಗ ಭಾರತ-ಬಾಂಗ್ಲಾ ಜಲ ವಿವಾದ ಬಗೆಹರಿಸಿದರು. ನಮ್ಮ ದುರದೃಷ್ಟ ಎಂದರೆ ಇಲ್ಲಿನ ನೀರಿನ ಸಮಸ್ಯೆ ಬಗೆಹರಿಸಲು ಆಗಲಿಲ್ಲ. ನಾವು ಕಟ್ಟಿರುವ ಡ್ಯಾಮ್‌ನಿಂದ ತಮಿಳುನಾಡಿಗೆ ನೀರು ಬಿಡಬೇಕಾ? ಬೇಕಿದ್ದರೆ ಅವರ ದುಡ್ಡಿನಲ್ಲಿ ಎರಡು ಮೂರು ಡ್ಯಾಮ್ ಕಟ್ಟಲಿ ಎಂದ ಅವರು, ರಾಜ್ಯಸಭೆಯಲ್ಲಿ ತಮಿಳುನಾಡು ಸದಸ್ಯರು ನಮಗೆ ಸರಿಯಾಗಿ ನೀರು ಬಿಡುತ್ತಿಲ್ಲ ಎಂದು ಹೇಳಿದ್ದಾರೆ. ನಾನು ದೆಹಲಿ ಹೋದಾಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ವಿಚಾರದ ಬಗ್ಗೆ ಚರ್ಚೆ ನಡೆಸುತ್ತೇನೆ. ನಾನು ಬಿಜೆಪಿ ಸ್ನೇಹಿತರಿಗೂ ಹೇಳುತ್ತೇನೆ. ಎಲ್ಲರೂ ಕೇಂದ್ರದ ಮುಂದೆ ಧೈರ್ಯವಾಗಿ ಕೇಳಬೇಕು ಎಂದು ಹೇಳಿದರು.
ನೀರು ಬಿಡದೇ ಇದ್ದಿದ್ದರೆ ಏನಾಗುತ್ತಿತ್ತು?
ಕೆಆರ್‌ಎಸ್ ಡ್ಯಾಂನಲ್ಲಿ ನೀರು ಎಷ್ಟಿದೆ ಎಂಬುವುದನ್ನು ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರದ ತಂಡ ಸ್ಥಳ ಪರಿಶೀಲನೆ ಮಾಡಿ ಸತ್ಯಾಂಶ ವರದಿ ಕೊಡಬೇಕಲ್ಲವೇ? ಎಲ್ಲರೂ ಒಟ್ಟಾಗಿ ಕುಳಿತು ಚರ್ಚೆ ಮಾಡಬೇಕು. ನಾನು ಅವತ್ತೇ ಹೇಳಿದ್ದೇನೆ. ಸುಪ್ರೀಂ ಕೋರ್ಟ್ ಆದೇಶ ಬರುವವರೆಗೂ ನೀರು ಬಿಡಬೇಡಿ ಅಂತ ಹೇಳಿದ್ದೆ. ನೀರು ಬಿಡದೇ ಇದ್ದಿದ್ದರೆ ಏನು ಆಗುತ್ತಿತ್ತು, ಸರ್ಕಾರ ಬೀಳಿಸುತ್ತಿದ್ದರಾ ಯಾರಾದರೂ ಎಂದು ಪ್ರಶ್ನಿಸಿದರು.
ಇದನ್ನೂ ಓದಿ | Women Reservation Bill: ಇಂಡಿಯಾ ಕೂಟದ ನಾಯಕರೇ ಮಹಿಳಾ ಮೀಸಲಾತಿ ಮಸೂದೆಗೆ ತಡೆ ಒಡ್ಡಿದ್ದರು ಎಂದ ಎಚ್‌ಡಿಕೆ
ಇದೊಂದು ಕೆಟ್ಟ ಸರ್ಕಾರ, ಇದನ್ನು ಮೊದಲು ತೆಗೆಯಬೇಕು. ಅದಕ್ಕಾಗಿಯೇ ಮೈತ್ರಿ ಅವಶ್ಯಕತೆ ಇದೆ. ರಾಜ್ಯದ ಜನರ ಸಮಸ್ಯೆಗಳಿಗೆ ಪರಿಹಾರ ತರುವ ನಿಟ್ಟಿನಲ್ಲಿ ಅವಶ್ಯಕತೆ ಇದೆ. ವಿರೋಧ ಪಕ್ಷ ಶಕ್ತಿಯುತವಾಗಿದ್ದರೆ ಅಲ್ಲವೇ ಹೋರಾಟ ಮಾಡಬೇಕು. ನಮ್ಮವರನ್ನು ಕರೆದುಕೊಂಡು ಹೋಗೊಕೆ ಚರ್ಚೆ ನಡೆಯುತ್ತಿದೆಯಂತೆ. ನಮ್ಮ ಪಕ್ಷದವರಿಗೂ ಆಹ್ವಾನ ಇದೆಯಂತೆ. ನಮ್ಮ ಪಕ್ಷದವರು ಹೋಗುವವರು ಹೋಗಲಿ, ಹೋಗುವವರನ್ನು ತಡೆಯಲು ಆಗುತ್ತಾ? ಎಂದು ಆಪರೇಷನ್ ಹಸ್ತದ ಬಗ್ಗೆ ಕಿಡಿಕಾರಿದ್ದಾರೆ.
ಸಭೆ ನಡೆಸಲು ಸಂಸದನಿಗೆ ಯಾವ ಪವರ್ ಇದೆ?
ಚನ್ನಪಟ್ಟಣದಲ್ಲಿ ಸಂಸದ ಸುರೇಶ್ ಜನಸಂಪರ್ಕ ಸಭೆ ವಿಚಾರ ಪ್ರತಿಕ್ರಿಯಿಸಿ, ಲೋಕಸಭೆ ಸದಸ್ಯನಿಗೆ ಯಾವ ಪವರ್ ಇದೆ. ಅಧಿಕಾರಿಗಳನ್ನು ಸಭೆಗೆ ಕರೆದುಕೊಂಡು ಹೋಗುವ ಪವರ್ ಕೂಡ ಇಲ್ಲ. ಜಿಪಂನಲ್ಲಿ ದಿಶಾ ಸಭೆ ನಡೆಸಲು ಮಾತ್ರ ಅವರಿಗೆ ಅಧಿಕಾರ ಇದೆ. ಈ ಬಗ್ಗೆ ಮುಖ್ಯ ಕಾರ್ಯದರ್ಶಿ ಅವರ ಗಮನಕ್ಕೂ ತಂದಿದ್ದೇನೆ. ಈ ವಿಚಾರವಾಗಿ ಹಕ್ಕುಚ್ಯುತಿ ಮಂಡಿಸುತ್ತೇನೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ | Cauvery Dispute: ತಮಿಳುನಾಡಿಗೆ ನೀರು ಬಿಡುಗಡೆ ಖಂಡಿಸಿ ರೈತರಿಂದ ಗುಳೆ ಚಳವಳಿ; ಹೆದ್ದಾರಿ ತಡೆ ನಡೆಸಿ ಆಕ್ರೋಶ
ನಾನು ಲೋಕಸಭಾ ಸದಸ್ಯನಾಗಿದ್ದಾಗ ಸಾತನೂರಿಗೆ ಹೋಗಲು ಬಿಡಲಿಲ್ಲ. ಸಿಎಂ ಆಗಿದ್ದಾಗ ಏನು ಮಾಡಿದದು ಎನ್ನುತ್ತಾರಲ್ಲ, ಕನಕಪುರ ಡಬಲ್ ರೋಡ್ ಮಾಡಿದ್ದು ಯಾರು ಎಂದು ಕೇಳಿದರು. ರಾಜೀವ್ ಗಾಂಧಿ ಆರೋಗ್ಯ ವಿವಿ ಸ್ಥಳಾಂತರ ಬಗ್ಗೆ ಸ್ಪಂದಿಸಿ, ಅದು ನನ್ನ ಕನಸಿನ ಯೋಜನೆ. ನಾನು ಸಿಎಂ ಆಗಿದ್ದಾಗ ಕನಕಪುರಕ್ಕೆ ಮೆಡಿಕಲ್ ಕಾಲೇಜು ಕೊಟ್ಟಿದ್ದೆ. ಅದು ಚಿಕ್ಕಬಳ್ಳಾಪುರಕ್ಕೆ ಶಿಫ್ಟ್ ಆಗಿತ್ತು. ಡಿಕೆಶಿ ಕಡೆಯವರು ಜಮೀನು ಇದೆ. ಅದಕ್ಕಾಗಿಯೇ ಅವರು ತಕರಾರು ಮಾಡುತ್ತಿದ್ದಾರೆ. ರಾಮನಗರದಿಂದ ಯಾವುದೇ ಕಾರಣಕ್ಕೂ ಮೆಡಿಕಲ್ ಕಾಲೇಜು ಸ್ಥಳಾಂತರವಾಗಲು ಬಿಡಲ್ಲ ಎಂದು ಹೇಳಿದರು.