Site icon Vistara News

Karnataka Drought : ಕಾಡುತ್ತಿದೆ ಹಸಿರು ಬರ; ರೈತರ ಹಿತ ಕಾಪಾಡಿ: ಕೇಂದ್ರ ತಂಡಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ

Central Drought Study Team

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಮಳೆ ಕೊರತೆಯಾಗಿ ತೀವ್ರವಾಗಿ ಬರ (Karnataka Drought) ಪರಿಸ್ಥಿತಿಯು ಕಾಡುತ್ತಿದೆ. ರೈತರು ಬೆಳೆದ ಬೆಳೆಗಳು (Crop damage) ನೆಲಕಚ್ಚಿವೆ. ಅಲ್ಲದೆ, ನೀರಿಗಾಗಿ ಹಾಹಾಕಾರ ಎದುರಾಗಿದೆ. ರಾಜ್ಯಾದ್ಯಂತ ನಡೆದ ಬಿತ್ತನೆ, ಬೆಳೆ ನಾಶದ ಪ್ರಮಾಣ ಸೇರಿದಂತೆ ಇನ್ನಿತರ ವಿಷಯಗಳನ್ನು ಕೇಂದ್ರ ಬರ ಅಧ್ಯಯನ ತಂಡಕ್ಕೆ (Central Drought Study Team) ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಅಂಕಿ-ಅಂಶಗಳ ವಿವರಣೆ ಸಹಿತ ಮಾಹಿತಿ ನೀಡಿದ್ದಾರೆ. ಅಲ್ಲದೆ, ರಾಜ್ಯದ ರೈತರ ರಕ್ಷಣೆಗೆ ಪೂರಕವಾಗಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.

ಗುರುವಾರ ತಮ್ಮನ್ನು ಭೇಟಿಯಾದ ಕೇಂದ್ರ ಬರ ಅಧ್ಯಯನ ತಂಡದೊಂದಿಗೆ ಮಾತುಕತೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ರೈತರ ರಕ್ಷಣೆಗೆ ಪೂರಕವಾಗಿ ಕ್ರಮ ಕೈಗೊಳ್ಳಬೇಕು. ಬರ ಅಧ್ಯಯನ ವೇಳೆ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ‌ST Somashekhar : ಜೆಡಿಎಸ್‌ ಜತೆಗಿನ ಮೈತ್ರಿಗೆ ನನ್ನ ವಿರೋಧ; ಅಧಿಕೃತವಾದ ಬಳಿಕ ನನ್ನ ನಿರ್ಧಾರ: ಎಸ್‌.ಟಿ. ಸೋಮಶೇಖರ್

ರಾಜ್ಯದ ಬರ ಪರಿಸ್ಥಿತಿಯನ್ನು ವಿವರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರದ ಮಾರ್ಗಸೂಚಿಯನ್ವಯ 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಇನ್ನೂ 32 ತಾಲೂಕುಗಳು ನಿಗದಿತ ಮಾನದಂಡಗಳ ಅಡಿಯಲ್ಲಿ ಬರುತ್ತವೆ. ರಾಜ್ಯದಲ್ಲಿ ನೈಋತ್ಯ ಮುಂಗಾರು ವಿಳಂಬದಿಂದ ಹಾಗೂ ಮಳೆಯ ಕೊರತೆಯಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ರಾಜ್ಯದಲ್ಲಿ ಶೇ. 90ರಷ್ಟು ಬಿತ್ತನೆ ಆಗಿದ್ದು, ಅದರಲ್ಲಿ 42 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ರೈತರ ಜಮೀನಿನಲ್ಲಿ ಹಸಿರು ಕಾಣಿಸಿದರೂ ಬೆಳೆಯಿಲ್ಲದ ಪರಿಸ್ಥಿತಿ ಉಂಟಾಗಿದ್ದು, ರಾಜ್ಯದಲ್ಲಿ ಹಸಿರು ಬರ ತಲೆದೋರಿದೆ ಎಂದು ವಾಸ್ತವ ಪರಿಸ್ಥಿತಿಯನ್ನು ವಿವರಿಸಿದರು.

Central Drought Study Team

ರಾಜ್ಯದ ವಸ್ತುಸ್ಥಿತಿಯನ್ನು ಕೇಂದ್ರಕ್ಕೆ ಮನವರಿಕೆ ಮಾಡಿ

ಪ್ರವಾಸದ ಸಂದರ್ಭದಲ್ಲಿ ರಾಜ್ಯದ ವಸ್ತುಸ್ಥಿತಿಯನ್ನು ಅರಿತು ಕೇಂದ್ರಕ್ಕೆ ಮನವರಿಕೆ ಮಾಡುವ ಮೂಲಕ ರೈತರ ಸಂಕಷ್ಟಕ್ಕೆ ಕೇಂದ್ರ ಸರ್ಕಾರ ತ್ವರಿತವಾಗಿ ಸ್ಪಂದಿಸಬೇಕೆಂದು ಸಿಎಂ ಸಿದ್ದರಾಮಯ್ಯ ಕೋರಿದರು.

ಮುಂಗಾರು ವಿಳಂಬ ಹಾಗೂ ಆಗಸ್ಟ್‌ ತಿಂಗಳಲ್ಲಿ ಕಳೆದ 122 ವರ್ಷಗಳಲ್ಲೇ ಅತಿ ಕಡಿಮೆ ಮಳೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಅಣೆಕಟ್ಟುಗಳು ಬರಿದಾಗಿವೆ. ಸೆಪ್ಟೆಂಬರ್‌ ತಿಂಗಳಲ್ಲಿ ಅಲ್ಲಲ್ಲಿ ಚದುರಿದಂತೆ ಮಳೆಯಾಗಿದೆ. ಆದರೆ, ಮುಂಗಾರು ಮುಗಿಯುತ್ತಾ ಬಂದಿದೆ. ಇದು ಕುಡಿಯುವ ನೀರಿನ ಕೊರತೆ, ವಿದ್ಯುತ್‌ ಕೊರತೆಯ ಆತಂಕವನ್ನೂ ಸೃಷ್ಟಿಸಿದೆ ಎಂದು ಸಿಎಂ ಸಿದ್ದರಾಮಯ್ಯ ವಿವರಿಸಿದರು.

ಕೊಡಗು ಜಿಲ್ಲೆಯಲ್ಲಿ ಮಳೆ ಕೊರತೆಯಿಂದಾಗಿ ಕೆ.ಆರ್.ಎಸ್. ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಕುಡಿಯುವ ನೀರಿಗಾಗಿಯೇ ರಾಜ್ಯಕ್ಕೆ 33 ಟಿಎಂಸಿ ನೀರಿನ ಅವಶ್ಯಕತೆಯಿದೆ. ಆದರೆ, ಮಳೆಯ ಕೊರತೆಯಿಂದ ಆತಂಕದ ಸ್ಥಿತಿ ಎದುರಾಗಿದೆ ಎಂದು ಸಿಎಂ ಸಿದ್ದರಾಮಯ್ಯ ವಿವರಿಸಿದರು.

ಬೆಳೆ ನಷ್ಟ ಪರಿಹಾರ ಧನ ಹೆಚ್ಚಿಸಲು ಸಿಎಂ ಮನವಿ

ರಾಜ್ಯದಲ್ಲಿ ಸಣ್ಣ ಮತ್ತು ಮಧ್ಯಮ ರೈತರ ಸಂಖ್ಯೆ ಹೆಚ್ಚಿದ್ದು, ಇವರ ದತ್ತಾಂಶವನ್ನು ಫ್ರೂಟ್ಸ್‌ ತಂತ್ರಾಂಶದಲ್ಲಿ ಸಂಗ್ರಹಿಸಲಾಗಿದೆ. ಜತೆಗೆ ಬೆಳೆ ಸಮೀಕ್ಷೆಯನ್ನು ಸಹ ಡಿಜಿಟಲೈಸ್‌ ಮಾಡಿರುವುದರಿಂದ ನಿಖರ ಮಾಹಿತಿ ದೊರೆಯುತ್ತದೆ. ರೈತರಿಗೆ ಎನ್.ಡಿ.ಆರ್.ಎಫ್. ಮಾರ್ಗಸೂಚಿಯಲ್ಲಿ ನಿಗದಿ ಪಡಿಸಿರುವ ಬೆಳೆ ನಷ್ಟ ಪರಿಹಾರ ಅತ್ಯಂತ ಕಡಿಮೆಯಿದ್ದು, ಹೆಚ್ಚಿಸುವ ಅಗತ್ಯವಿದೆ. ರಾಜ್ಯದಲ್ಲಿ ಹೆಚ್ಚುವರಿಯಾಗಿ ಬೆಳೆ ನಷ್ಟ ಪರಿಹಾರ ನೀಡಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಇದನ್ನೂ ಓದಿ: Shivamogga Violence : ನಾವೇನು ಟೆರರಿಸ್ಟಾ? ಬಿಜೆಪಿ ಸತ್ಯಶೋಧನ ತಂಡದ ಮುಂದೆ ಗಾಯಾಳು ಅಳಲು!

ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಕಂದಾಯ ಇಲಾಖೆ ಕಾರ್ಯದರ್ಶಿ ರಶ್ಮಿ ವಿ. ಮಹೇಶ್‌, ಕೇಂದ್ರ ತಂಡದ ಮುಖ್ಯಸ್ಥ ಅಜಿತ್‌ ಕುಮಾರ್‌ ಸಾಹು ಹಾಗೂ ತಂಡದ ಸದಸ್ಯರು ಉಪಸ್ಥಿತರಿದ್ದರು.

Exit mobile version