Site icon Vistara News

Gruha Lakshmi : ವಾರದೊಳಗೆ ಗೃಹಲಕ್ಷ್ಮಿ ಅದಾಲತ್: ದುಡ್ಡು ಬಂದಿಲ್ವಾ? ಕೇಳಿ!

Lakshmi Hebbalkar and Gruha Lakshmi scheme

ಬೆಂಗಳೂರು: ಕಾಂಗ್ರೆಸ್‌ ಗ್ಯಾರಂಟಿ (Congress Guarantee Scheme) ಯೋಜನೆಗಳಲ್ಲೊಂದಾಗಿರುವ ಗೃಹಲಕ್ಷ್ಮಿ ಯೋಜನೆಗೆ (Gruha Lakshmi scheme) ಉಂಟಾಗಿರುವ ಸಣ್ಣಪುಟ್ಟ ಸಮಸ್ಯೆಗಳಿಗೆ ಶೀಘ್ರವೇ ಪರಿಹಾರ ಸಿಗಲಿದ್ದು, ಇದಕ್ಕಾಗಿ ಇನ್ನೊಂದು ವಾರದಲ್ಲಿ ಗೃಹಲಕ್ಷ್ಮಿ ಅದಾಲತ್ (Gruhalakshmi Adalat) ಆರಂಭಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಹೇಳಿದರು.

ಬಾಲ ಭವನದಲ್ಲಿ ಗುರುವಾರ ನಡೆದ ಮಕ್ಕಳ ದಿನಾಚರಣೆ ಸಮಾರಂಭದ ಬಳಿಕ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಈಗಾಗಲೇ 1 ಕೋಟಿ 10 ಲಕ್ಷ ಮಹಿಳೆಯರಿಗೆ ಈ ಯೋಜನೆ ತಲುಪಿದ್ದು, ಪಿಡಿಒ, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಬಾಕಿ ಉಳಿದಿರುವ ಫಲಾನುಭವಿಗಳಿಗೆ ಆಯಾ ಪಂಚಾಯಿತಿ, ಪುರಸಭೆ, ನಗರಸಭೆ ವ್ಯಾಪ್ತಿಯಲ್ಲಿ ಸಭೆ ನಡೆಸಿ ಹಣ ಹಾಕುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: BY Vijayendra : ವಿಜಯೇಂದ್ರ ಅಧ್ಯಕ್ಷರಾಗುತ್ತಿದ್ದಂತೆ ರೇಣುಕಾಚಾರ್ಯ ಶಸ್ತ್ರತ್ಯಾಗ! ಸಾಮರಸ್ಯ ಮಂತ್ರ ಪಠಣ

ಈಗಾಗಲೇ ಮೂರು ಕಂತಿನ ದುಡ್ಡು ಬಾರದೇ ಇದ್ದವರಿಗೆ ಏಕಕಾಲಕ್ಕೆ ಆರು ಸಾವಿರ ದುಡ್ಡು ಹಾಕುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

50 ಸಾವಿರ ತೆರಿಗೆದಾರರಿಂದ ಅರ್ಜಿ!

ಗೃಹಲಕ್ಷ್ಮಿ ಯೋಜನೆಗೆ ಸುಮಾರು 50 ಸಾವಿರ ತೆರಿಗೆದಾರರು ಕೂಡ ಅರ್ಜಿ ಹಾಕಿದ್ದು, ಅರ್ಜಿಗಳನ್ನು ನಿರಾಕರಿಸಿ ಡಿಲೀಟ್ ಮಾಡಲಾಗಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ಗೃಹಲಕ್ಷ್ಮಿ ಹಣ ಸಿಕ್ಕಿಲ್ಲ ಎಂಬ ಆತಂಕ ಬೇಡ, ಎಲ್ಲ ಮೊತ್ತ ಒಟ್ಟಿಗೇ ಸಿಗಲಿದೆ

ಗೃಹಲಕ್ಷ್ಮಿ ಯೋಜನೆಯಲ್ಲಿ (Gruhalakshmi scheme) ನೋಂದಾಯಿಸಿಕೊಂಡ ಗೃಹಿಣಿಯರಲ್ಲಿ ಶೇಕಡಾ 95ರಷ್ಟು ಮನೆ ಒಡತಿಯರಿಗೆ ಈಗಾಗಲೇ ಹಣ ತಲುಪಿದೆ. ತಾಂತ್ರಿಕ ಸಮಸ್ಯೆಯಿಂದಾಗಿ (Technical Problem) ಶೇಕಡಾ 5ರಷ್ಟು ಜನರಿಗೆ ತಲುಪಿಲ್ಲ. ಈ ತಾಂತ್ರಿಕ ಸಮಸ್ಯೆಗೆ ಶೀಘ್ರವೇ ಪರಿಹಾರ ಸಿಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ನ. 8ರಂದು ಹೇಳಿದ್ದರು. ಅಷ್ಟೇ ಅಲ್ಲ, ಒಮ್ಮೆ ತಾಂತ್ರಿಕ ಸಮಸ್ಯೆ ಪರಿಹಾರವಾದ ಬಳಿಕ ಬಾಕಿ ಮೊತ್ತವನ್ನೂ ಸೇರಿಸಿಯೇ ಕೊಡಲಾಗುವುದು ಎಂದು ಭರವಸೆ ನೀಡಿದ್ದರು.

ಶೇಕಡ 95ರಷ್ಟು ಯಶಸ್ವಿ

ಗೃಹಲಕ್ಷ್ಮಿ ಯೋಜನೆ ಇದುವರೆಗೂ ಶೇಕಡ 95 ರಷ್ಟು ಯಶಸ್ವಿಯಾಗಿದ್ದು, ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಪ್ರತಿದಿನ ಮೂರು ಜಿಲ್ಲೆಗಳ ಸಿಡಿಪಿಒಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದರು.

ಪ್ರತಿ ತಿಂಗಳು ಎಷ್ಟು ಹಣ ಜಮಾವಣೆ?

ಗೃಹಲಕ್ಷ್ಮಿ ಯೋಜನೆಗೆ ಇದುವರೆಗೂ 1 ಕೋಟಿ 16 ಲಕ್ಷದ 65 ಸಾವಿರ ಮಹಿಳೆಯರು ನೋಂದಣಿ ಮಾಡಿಸಿದ್ದಾರೆ. ಈ ಪೈಕಿ ಆಗಸ್ಟ್ ನಲ್ಲಿ ಗೃಹಲಕ್ಷ್ಮಿ ಯರ ಅಕೌಂಟ್‌ಗೆ ತಲಾ ಎರಡು ಸಾವಿರ ರೂ.ಗಳಂತೆ 2,119 ಕೋಟಿ ಹಣ ಹಾಕಲಾಗಿದೆ. ಈ ಮೂಲಕ ಶೇಕಡಾ 97ರಷ್ಟು ಡಿಬಿಟಿ ಮುಖಾಂತರ ಹಣ ಹಾಕಲಾಗಿದೆ. ಆಗಸ್ಟ್ ತಿಂಗಳಲ್ಲಿ ಐದು ಲಕ್ಷ ಕುಟುಂಬಗಳಿಗೆ ತಾಂತ್ರಿಕ ದೋಷದಿಂದ ಹಣ ಹೋಗಿಲ್ಲ. ಸೆಪ್ಟೆಂಬರ್ ನಲ್ಲಿ 82% ಕುಟುಂಬಗಳಿಗೆ ಹಣ ಹಾಕಲಾಗಿದ್ದು 12 ಲಕ್ಷ ಕುಟುಂಬಗಳಿಗೆ ತಾಂತ್ರಿಕ ದೋಷದಿಂದ ಅಥವಾ ಕೆವೈಸಿ ಸಮಸ್ಯೆಯಿಂದ ಹಣ ಬ್ಯಾಂಕ್ ಅಕೌಂಟ್‌ನಲ್ಲಿ ಉಳಿದಿದೆ. ಇನ್ನು ಅಕ್ಟೋಬರ್ ನಲ್ಲಿ 2400 ಕೋಟಿ ರೂ ಬಿಡುಗಡೆಯಾಗಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದರು.

ಇದನ್ನೂ ಓದಿ: Caste Census : ಜಾತಿ ಗಣತಿ ವರದಿ ಬಗ್ಗೆ ಊಹೆ ಮಾಡ್ಬೇಡಿ, ನಾವೇಕೆ ಸಮಾಜ ಒಡೆಯುತ್ತೇವೆ? ಸಿಎಂ ಖಡಕ್‌ ಪ್ರಶ್ನೆ

ಮೂರು ತಿಂಗಳ ಹಣ ಒಟ್ಟಿಗೆ ಸಿಗಲಿದೆ

ಆಗಸ್ಟ್ 15ರೊಳಗೆ ನೋಂದಣಿ ಮಾಡಿಕೊಂಡವರಿಗೆ ಇದುವರೆಗೆ ದುಡ್ಡು ಬಾರದೇ ಇದ್ದರೆ, ಒಟ್ಟಿಗೆ ಮೂರು ತಿಂಗಳ ಹಣ ಹಾಕಲಾಗುತ್ತದೆ. ಇದುವರೆಗೆ ಹಣ ಬಾರದೇ ಇದ್ದರೂ ಪೂರ್ಣ ಬಾಕಿ ಹಣ ಹಾಕಲಾಗುವುದು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಭರವಸೆ ನೀಡಿದ್ದರು.

Exit mobile version