ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ (Congress Guarantee Scheme) ಒಂದಾಗಿರುವ ಗೃಹ ಲಕ್ಷ್ಮಿ (Gruha Lakshmi) ಹಣವು ಇನ್ನು ಮುಂದೆ ಪ್ರತಿ ತಿಂಗಳು ನಾಡದೇವತೆ ತಾಯಿ ಚಾಮುಂಡೇಶ್ವರಿಗೂ ಸಲ್ಲಿಕೆಯಾಗುತ್ತದೆ. ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ (MLC Dinesh Gooligowda) ಅವರ ಮನವಿಯನ್ನು ಪುರಸ್ಕರಿಸಿರುವ ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar), ಈ ಬಗ್ಗೆ ಕ್ರಮ ವಹಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ (Laxmi Hebbalkar) ಸೂಚನೆ ನೀಡಿದ್ದಾರೆ.
ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಈ ಸಂಬಂಧ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದರು. ಚುನಾವಣೆ ಪೂರ್ವದಲ್ಲಿ ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಗ್ಯಾರಂಟಿ ಕಾರ್ಡ್‌ಗಳನ್ನು ಇಟ್ಟು ಮನವಿ ಮಾಡಿದ್ದೆವು. ತಾಯಿ ಆಶೀರ್ವಾದದಂತೆ ಪೂರ್ಣ ಬಹುಮತ ಬಂದಿ ಅಧಿಕಾರವನ್ನು ಹಿಡಿದಿದ್ದೇವೆ. ಈ ಹಿನ್ನೆಲೆಯಲ್ಲಿ ಗ್ಯಾರಂಟಿ ಯೋಜನೆಯಲ್ಲಿ ಪ್ರಮುಖವಾದ ಗೃಹಲಕ್ಷ್ಮಿ ಅಡಿ ತಿಂಗಳ ಮೊದಲ ಪಾವತಿ ತಾಯಿ ಚಾಮುಂಡೇಶ್ವರಿಗೆ ಆಗಬೇಕು. ಆ ಬಳಿಕ ಉಳಿದವರ ಖಾತೆಗೆ ಹಣ ಜಮೆ ಮಾಡಬೇಕು ಎಂದು ಮನವಿ ಮಾಡಿದ್ದರು.
ಇದನ್ನೂ ಓದಿ: Karnataka Live News : ಆರ್. ಅಶೋಕ್‌ಗೆ ವಿಪಕ್ಷ ನಾಯಕ ಸ್ಥಾನ ಫಿಕ್ಸ್; ಸಮಾಧಾನಗೊಂಡರೇ ಯತ್ನಾಳ್?
ಈ ಪತ್ರಕ್ಕೆ ಸ್ಪಂದಿಸಿರುವ ಡಿ.ಕೆ. ಶಿವಕುಮಾರ್, ಈ ಬಗ್ಗೆ ಕ್ರಮ ವಹಿಸುವಂತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಮನೆಯ ಯಜಮಾನಿಗೆ ಗೃಹಲಕ್ಷ್ಮಿ ಯೋಜನೆ ಅಡಿ ನೀಡುತ್ತಿರುವ 2000 ರೂ. ಹಣವು ಚಾಮುಂಡೇಶ್ವರಿಗೂ ಸಲ್ಲಿಕೆಯಾಗಲಿದೆ.
ಮನವಿ ಪತ್ರದಲ್ಲೇನಿದೆ?
“ರಾಜ್ಯ ಕಾಂಗ್ರೆಸ್ ಸರ್ಕಾರದ ಜಾರಿಗೆ ತಂದ ಗೃಹ ಲಕ್ಷ್ಮೀ ಯೋಜನೆ ಜನರಿಗೆ ಅತ್ಯಂತ ಉಪಕಾರಿಯಾಗಿದೆ. ಚುನಾವಣೆಗೂ ಪೂರ್ವ ಕಾಂಗ್ರೆಸ್ ಪಕ್ಷದ ವತಿಯಿಂದ ಮೈಸೂರಿನ ನಾಡದೇವತೆ ತಾಯಿ ಚಾಮುಂಡೇಶ್ವರಿ ಸನ್ನಿಧಿಗೆ ತೆರಳಿ ಪಕ್ಷದ ಐದು ಗ್ಯಾರಂಟಿಗಳ ಕಾರ್ಡ್ ಅನ್ನು ಇಟ್ಟು ದೇವಿಯ ಬಳಿ, ಶಕ್ತಿ ಕೊಡು ಎಂದು ಕೋರಿಕೆಯನ್ನಿಡಲಾಗಿತ್ತು. ಆ ಸಂದರ್ಭದಲ್ಲಿ ಹರಕೆಯನ್ನು ನಾಡದೇವತೆ ಬಳಿ ಮಾಡಿಕೊಳ್ಳಲಾಗಿತ್ತು. ಪಕ್ಷ ಅಧಿಕಾರಕ್ಕೆ ಬಂದರೆ, ಗ್ಯಾರಂಟಿ ಈಡೇರಿಸುವ ವಾಗ್ದಾನವನ್ನೂ ಮಾಡಲಾಗಿತ್ತು.
ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನ ಅಭೂತಪೂರ್ವ ಬೆಂಬಲವನ್ನು ವ್ಯಕ್ತಪಡಿಸಿದ್ದರು. ಪರಿಣಾಮ 135 ಸ್ಥಾನಗಳೊಂದಿಗೆ ಸಂಪೂರ್ಣ ಬಹುಮತವನ್ನು ಪಡೆದು ಈಗ ಜನಪರ ಜನಪ್ರಿಯ ಆಡಳಿತವನ್ನು ನೀಡುತ್ತಿದೆ. ಇದಕ್ಕೆ ಕಾರಣವಾಗಿರುವ, ಆಶೀರ್ವಾದ ನೀಡಿ ಹರಸಿರುವ ಜಗನ್ಮಾತೆ ಚಾಮುಂಡೇಶ್ವರಿಗೆ ಮೈಸೂರಿನಲ್ಲಿ ಪೂಜೆ ಸಲ್ಲಿಸಿ ಆಗಸ್ಟ್ 30 ರಂದು ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಈ ಮೂಲಕ ನಮ್ಮ ಸರ್ಕಾರ ನುಡಿದಂತೆ ನಡೆದಿದೆ.
ಅಂದು ಹರಕೆಯನ್ನು ತೀರಿಸಲು ಮುಖ್ಯಮಂತ್ರಿಗಳಾದ ತಾವು ಕೆಪಿಸಿಸಿ ಅಧ್ಯಕ್ಷರಾದ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಹಿಳಾ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ರವರು ಹಾಗೂ ಶಾಸಕರ ಜೊತೆ ದೇಗುಲಕ್ಕೆ ಭೇಟಿ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಮಾತ್ರವಲ್ಲ ಗೃಹ ಲಕ್ಷ್ಮಿಯರಿಗೆ ನೀಡುವ 2 ಸಾವಿರ ರೂ.ಗಳನ್ನು ದೇವಿಗೆ ಸಲ್ಲಿಸಲಾಗಿತ್ತು.
ಈಗ ಪ್ರತಿ ತಿಂಗಳು 2 ಸಾವಿರ ರೂ.ಗಳನ್ನು ರಾಜ್ಯದ 1.2 ಕೋಟಿಗೂ ಅಧಿಕ ಕುಟುಂಬಗಳಿಗೆ ಜಮಾ ಮಾಡಲಾಗುತ್ತಿದೆ. ಆ ಹಣದಿಂದ ಸಾಕಷ್ಟು ಬಡ ಕುಟುಂಬಗಳ ಜೀವನ ಮಟ್ಟ ಸುಧಾರಣೆಗೊಂಡಿದೆ. ಅಲ್ಲದೆ, ನಮ್ಮ ಸರ್ಕಾರದ ಹಾಗೂ ತಮ್ಮಗಳ ಬಗ್ಗೆ ಶುಭ ಹಾರೈಕೆಯನ್ನು ಮಾಡುತ್ತಲೇ ಇದ್ದಾರೆ.
ಈಗ ಪ್ರತಿ ತಿಂಗಳು ಮನೆಯ ಯಜಮಾನಿಯರ ಖಾತೆಗೆ ನಿಖರವಾಗಿ ತಲಾ 2 ಸಾವಿರ ರೂ. ಹಣ ಜಮಾ ಆಗುತ್ತಿರುವುದು ಖುಷಿಯ ವಿಚಾರವಾಗಿದೆ. ಅದೇ ರೀತಿ ಪ್ರತಿ ತಿಂಗಳ ಕಂತನ್ನು ಯಜಮಾನಿಯರಿಗೆ ಪಾವತಿಸುವ ಮೊದಲು ನಾಡದೇವಿ ಚಾಮುಂಡೇಶ್ವರಿಯ ಸನ್ನಧಿಗೂ ಸಲ್ಲಿಸಬೇಕು. ಆ ಮೂಲಕ ಮೊದಲ ಹಣ ನಾಡದೇವತೆಗೆ ಸಲ್ಲಿಕೆಯಾಗಿ ಬಳಿಕ ಉಳಿದವರಿಗೆ ಪಾವತಿಯಾಗುವಂತೆ ವ್ಯವಸ್ಥೆ ಮಾಡಿ” ಎಂದು ದಿನೇಶ್ ಗೂಳಿಗೌಡ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಈ ಮನವಿ ಡಿ.ಕೆ. ಶಿವಕುಮಾರ್ ಸ್ಪಂದಿಸಿದ್ದು, ಇನ್ನು ಮುಂದೆ ಪ್ರತಿ ತಿಂಗಳು ಗೃಹಲಕ್ಷ್ಮಿ ಹಣವು ಚಾಮುಂಡೇಶ್ವರಿಗೂ ಸಲ್ಲಿಕೆಯಾಗಲಿದೆ.