Site icon Vistara News

Gruha Lakshmi Scheme : ಸೆಪ್ಟೆಂಬರ್‌ನಲ್ಲಿ ಗೃಹಲಕ್ಷ್ಮಿಯರ ಖಾತೆಗೆ ಹಣ? 2500 ಕೋಟಿ ಉಳಿಸಲು ಪ್ಲ್ಯಾನ್!

Gruha laksmi scheme from congress Government

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಮುಖ ಐದು ಗ್ಯಾರಂಟಿ ಯೋಜನೆಯಲ್ಲಿ (Congress Guarantee Scheme) ಒಂದಾಗಿರುವ ಗೃಹಲಕ್ಷ್ಮಿ (Gruha Lakshmi Scheme) ಜಾರಿ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಫಲಾನುಭವಿಗಳ ಅಕೌಂಟ್‌ಗೆ ಹಣ ಹಾಕುವ ದಿನಾಂಕ ದಿನದಿಂದ ದಿನಕ್ಕೆ ಮುಂದಕ್ಕೆ ಹೋಗುತ್ತಲೇ ಇದೆ. ಹೀಗಾಗಿ ಈಗ ಸೆಪ್ಟೆಂಬರ್‌ ಮೊದಲ ವಾರದಲ್ಲಿ (First week of September) ಉದ್ಘಾಟನೆ ಆಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಈ ಮೂಲಕ ಒಂದು ತಿಂಗಳು ಹಣವನ್ನು ಹಾಕುವುದನ್ನು ತಪ್ಪಿಸಿ ಬೊಕ್ಕಸಕ್ಕೆ ಉಳಿತಾಯ ಮಾಡುವ ಪ್ಲ್ಯಾನ್‌ ಅನ್ನು ಸರ್ಕಾರ ಹಾಕಿಕೊಂಡಿದೆ ಎನ್ನಲಾಗಿದೆ. ಅಂದರೆ ಈ ಮೂಲಕ ಸರಿಸುಮಾರು 2,500 ಕೋಟಿ ರೂಪಾಯಿಯನ್ನು ಸರ್ಕಾರ ಉಳಿಸಲಿದೆ.

ಆಗಸ್ಟ್‌ 15ರಿಂದ ಫಲಾನುಭವಿಗಳ ಅಕೌಂಟ್‌ಗೆ ಹಣ ಹಾಕುತ್ತೇವೆ ಎಂದು ಸರ್ಕಾರ ಈ ಮೊದಲು ಹೇಳಿತ್ತು. ಈಗಾಗಲೇ 1.10 ಕೋಟಿ ಮಹಿಳೆಯರು ನೋಂದಣಿ ಮಾಡಿಕೊಂಡಿದ್ದಾರೆ. ಇವರೆಲ್ಲರ ಖಾತೆಗೆ ಆಗಸ್ಟ್ 27ಕ್ಕೆ ಹಣ ಹಾಕುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ (CM SIddaramaiah), ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ಹೇಳಿಕೆ ನೀಡಿದ್ದರು. ಅಲ್ಲದೆ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ (Minister Laxmi Hebbalkar) ಕೂಡಾ ಆಗಸ್ಟ್‌ 27ಕ್ಕೆ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಆಗುತ್ತದೆ ಎಂದು ಹೇಳಿದ್ದರು. ಆದರೆ, ವಿಸ್ತಾರ ನ್ಯೂಸ್‌ಗೆ ಲಭ್ಯವಾದ ಮಾಹಿತಿ ಪ್ರಕಾರ ಈಗ ಆಗಸ್ಟ್‌ 27ಕ್ಕೂ ಕಾರ್ಯಕ್ರಮಕ್ಕೆ ಚಾಲನೆ ಸಿಗುವುದಿಲ್ಲ.

ಇದನ್ನೂ ಓದಿ: Karnataka Politics : ದುಬಾರಿ ಗ್ಯಾರಂಟಿಯಲ್ಲಿ ಈ ಬಾರಿ ಶಾಸಕರ ನಿಧಿ 50 ಲಕ್ಷ ರೂ.ಗೆ ಸೀಮಿತ? 1.5 ಕೋಟಿ ಖೋತಾ!

ಸೆಪ್ಟೆಂಬರ್ ಮೊದಲ ವಾರದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ಸಿಗಬಹುದು ಎಂದು ಹೇಳಲಾಗುತ್ತಿದೆ. ಅಲ್ಲಿಯವರೆಗೆ ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸಿದ ಮಹಿಳೆಯರು ಕಾಯಲೇಬೇಕಿದೆ. ಈ ರೀತಿ ವಿಳಂಬ ಆಗುತ್ತಿರಲು ಹಲವು ಕಾರಣಗಳು ಇವೆಯಾದರೂ, ರಾಜಕೀಯ ಲೆಕ್ಕಾಚಾರಗಳು ಅಡಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಲೋಕಸಭಾ ಚುನಾವಣೆ ಲೆಕ್ಕಾಚಾರ

ಬೆಂಗಳೂರು ಬಿಟ್ಟು ಗೃಹಲಕ್ಷ್ಮಿ ಕಾರ್ಯಕ್ರಮವನ್ನು ಹೊರಗಡೆ ಜಿಲ್ಲೆಯಲ್ಲಿ ಲಾಂಚ್ ಮಾಡಲಾಗುತ್ತಿದೆ. ಒಂದೊಂದು ಗ್ಯಾರಂಟಿಯನ್ನು ಒಂದು ವಲಯದಲ್ಲಿ ಉದ್ಘಾಟನೆ ಮಾಡಲಾಗುತ್ತಿದೆ. ಈ ಮೂಲಕ ಆ ಎಲ್ಲ ಕಡೆಯಲ್ಲಿಯೂ ತಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ಸರಿಯಾಗಿ ಮನದಟ್ಟು ಮಾಡುವ ಉದ್ದೇಶವನ್ನು ಕಾಂಗ್ರೆಸ್‌ ಸರ್ಕಾರ ಹೊಂದಿದೆ. ಲೋಕಸಭಾ ಚುನಾವಣೆ (Lok Sabha Election 2024) ಮುಂದಿನ ವರ್ಷ ಇರುವುದರಿಂದ ಯೋಜನೆ ಅನುಷ್ಠಾನಕ್ಕೆ ಪೂರ್ವ ತಯಾರಿಯನ್ನು ಕಾಂಗ್ರೆಸ್‌ ಸರ್ಕಾರ ಮಾಡಿಕೊಳ್ಳುತ್ತಿದೆ.

ಕೇಂದ್ರ ನಾಯಕರಿಗೆ ಕಾಯುತ್ತಿರುವ ಕೈಪಡೆ!

ಗೃಹ ಲಕ್ಷ್ಮಿ ಯೋಜನೆಯನ್ನು ಕೇಂದ್ರ ಕಾಂಗ್ರೆಸ್‌ ನಾಯಕರ ಕೈಯಿಂದ ಲೋಕಾರ್ಪಣೆ ಮಾಡಿಸಬೇಕು ಎಂಬುದು ರಾಜ್ಯ ಸರ್ಕಾರದ ಚಿಂತನೆಯಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಿಎಂ ಸಿದ್ದರಾಮಯ್ಯ‌ ಅವರು ಈಗಾಗಲೇ ರಾಹುಲ್ ಗಾಂಧಿ (Rahul Gandhi) ಮತ್ತು ಸೋನಿಯಾ ಗಾಂಧಿ (Sonia Gandhi) ಅವರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ. ಸೋನಿಯಾ ಗಾಂಧಿ ಡೇಟ್ ಇನ್ನೂ ಪಕ್ಕಾ ಆಗಿಲ್ಲ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.

ಸೆಪ್ಟೆಂಬರ್ ಮೊದಲ ವಾರದಲ್ಲಿ ಯಾಕೆ ದಿನಾಂಕ ನಿಗದಿ?

ಇನ್ನು ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗೆ ಈ ತಿಂಗಳು ಹಣ ಹಾಕದಿರಲು ಸರ್ಕಾರ ಪ್ಲ್ಯಾನ್‌ ಮಾಡಿಕೊಂಡಿದೆ. ಸೆಪ್ಟೆಂಬರ್ ತಿಂಗಳಿಂದಲೇ ಖಾತೆಗೆ ಹಣ ಹಾಕಲಾಗುವುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಹೀಗಾಗಿ ಆಗಸ್ಟ್‌ ತಿಂಗಳ ಹಣ ಫಲಾನುಭವಿಗಳ ಅಕೌಂಟ್‌ಗೆ ಬರುವುದು ಡೌಟ್ ಎನ್ನಲಾಗಿದೆ. ವಿಳಂಬ ಮಾಡಿದಷ್ಟು ಸರ್ಕಾರದ ಬೊಕ್ಕಸಕ್ಕೆ ಅನುಕೂಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

2500 ಕೋಟಿ ರೂ. ಉಳಿಸುವ ಪ್ಲ್ಯಾನ್‌ ಏಕೆ?

ಗೃಹ ಲಕ್ಷ್ಮಿ ಯೋಜನೆಗೆ ಪ್ರತಿ ತಿಂಗಳು ಸರಾಸರಿ 2500 ಕೋಟಿ ರೂಪಾಯಿ ಬೇಕು. ಆಗಸ್ಟ್‌ 27ರಂದು ಯೋಜನೆಗೆ ಚಾಲನೆ ನೀಡಬೇಕೆಂದು ಈ ಹಿಂದೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಚಿಂತಿಸಿದ್ದರು. ಆದರೆ, ಇದು ತಿಂಗಳ ಕೊನೇ ದಿನವಾಗಿದೆ. ಇನ್ನು ಮೂರ್ನಾಲ್ಕು ದಿನ ಕಳೆದರೆ ಹೊಸ ತಿಂಗಳು ಬರುತ್ತದೆ. ನಾಲ್ಕು ದಿನ ವಿಳಂಬ ಮಾಡಿದರೆ ಸರ್ಕಾರಕ್ಕೆ 2500 ಕೋಟಿ ರೂಪಾಯಿ ಉಳಿತಾಯ ಆಗಲಿದೆ ಎಂಬ ಲೆಕ್ಕಾಚಾರವೂ ಇದರ ಹಿಂದಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Agriculture APP : ರೈತರಿಗಾಗಿ AI ಆಧಾರಿತ ಆ್ಯಪ್ ಶೀಘ್ರ; ಕೃಷಿ ಇಲಾಖೆಯಿಂದ ಮಹತ್ವದ ಹೆಜ್ಜೆ

ಒಂದು ವೇಳೆ ಕೊಟ್ಟ ಮಾತಿನಂತೆ ನಡೆಯಲೇಬೇಕು ಎಂದು ಸಿಎಂ ಹಾಗೂ ಡಿಸಿಎಂ ತೀರ್ಮಾನ ಮಾಡಿದರೆ ಸೆಪ್ಟೆಂಬರ್ ತಿಂಗಳು ಯೋಜನೆಗೆ ಚಾಲನೆ ಸಿಕ್ಕರೂ ಎರಡು ತಿಂಗಳದ್ದು ಸೇರಿಸಿ ಹಾಕಬಹುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

Exit mobile version