Site icon Vistara News

Gruha Lakshmi Scheme : ಆಗಸ್ಟ್‌ 30ಕ್ಕೆ ಗೃಹಲಕ್ಷ್ಮಿ ದುಡ್ಡು ಬರುತ್ತೆ, ನಿಮ್ಗೂ ಹಣ ಬೇಕೆಂದ್ರೆ ತಕ್ಷಣವೇ ಹೀಗೆ ಮಾಡಿ!

Gruha lakshmi scheme and women in traditional dress

ಬೆಂಗಳೂರು: ರಾಜ್ಯದ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಯಲ್ಲಿ (Congress Guarantee Scheme) ಒಂದಾಗಿರುವ ಗೃಹ ಲಕ್ಷ್ಮಿ ಯೋಜನೆ (Gruha lakshmi scheme)ಯ ನೋಂದಣಿ ಭರ್ಜರಿ ಯಶಸ್ಸು ಪಡೆಯುತ್ತಿದೆ. ಈ ಆಗಸ್ಟ್‌ 30ಕ್ಕೆ ಮೈಸೂರಿನಲ್ಲಿ ಅಧಿಕೃತ ಚಾಲನೆ ಸಿಗಲಿದ್ದು, ಗೃಹ ಲಕ್ಷ್ಮಿಯರ ಖಾತೆಗೆ ಅಂದಿನಿಂದಲೇ ಹಣ ಪಾವತಿ ಆರಂಭವಾಗಲಿದೆ. ಸರ್ಕಾರದ ಲೆಕ್ಕಾಚಾರದ ಪ್ರಕಾರ ನೋಂದಣಿಯಾಗಬೇಕಾದ ಒಟ್ಟು ಯಜಮಾನಿಯರ ಸಂಖ್ಯೆ 1.28 ಕೋಟಿ. ಕಳೆದ ಜುಲೈ 20ರಿಂದ ಈ ಯೋಜನೆಗೆ ಚಾಲನೆ ನೀಡಲಾಗಿದ್ದು, ಇದುವರೆಗೆ ಒಟ್ಟಾರೆಯಾಗಿ 1.10 ಕೋಟಿ ಮಹಿಳೆಯರಿಂದ ಅರ್ಜಿ (Application Submission) ಸಲ್ಲಿಕೆಯಾಗಿದೆ. ಇನ್ನೂ 18 ಲಕ್ಷ ಮಹಿಳೆಯರು ನೋಂದಣಿ ಮಾಡಿಸಿಕೊಂಡಿಲ್ಲ. ಕೆಲವರಿಗೆ ತಾಂತ್ರಿಕ ತೊಂದರೆ ಇರುವ ಕಾರಣ ಸಮಸ್ಯೆಯಾಗಿದೆ ಎಂದು ತಿಳಿದು ಬಂದಿದೆ. ಹಾಗಾದರೆ ನೀವಿನ್ನೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿಲ್ಲವಾದರೆ ಕೂಡಲೇ ಸಲ್ಲಿಸಿ. ಅದಕ್ಕೆ ನೀವೇನು ಮಾಡಬಹುದು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಈಗಲೂ ಸಮಯ ಇದೆ

ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಲು ಯಾವುದೇ ಕಾಲ ಮಿತಿಯನ್ನು (No Time limit) ಈವರೆಗೆ ನಿಗದಿ ಮಾಡಿಲ್ಲ. ಇದಕ್ಕೆ ಯಾವಾಗ ಬೇಕಾದರೂ ನೀವು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಆದರೆ, ನೋಂದಣಿ ವಿಳಂಬ ಆದಷ್ಟು ನಿಮಗೆ ಹಣ ಬರುವುದು ಸಹ ವಿಳಂಬವಾಗುತ್ತಾ ಹೋಗುತ್ತದೆ. ಅಲ್ಲದೆ, ಈಗ ನೋಂದಣಿ ಪ್ರಕ್ರಿಯೆಯನ್ನು ಸಹ ಸರಳಗೊಳಿಸಲಾಗಿದೆ.

ಇದನ್ನೂ ಓದಿ: Gruha lakshmi scheme : ಆಗಸ್ಟ್ 30ಕ್ಕೆ ಮೈಸೂರಿನಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ; ಲಕ್ಷ್ಮಿ ಹೆಬ್ಬಾಳ್ಕರ್ ಘೋಷಣೆ

ಎಲ್ಲಿ ನೋಂದಣಿ ಮಾಡಲಾಗುತ್ತದೆ? ಮೊಬೈಲ್‌ನಲ್ಲಿ ಮಾಡಬಹುದೇ?

ಈ ಯೋಜನೆ ಬಗ್ಗೆ ಕೆಲವರಿಗೆ ಇನ್ನೂ ಸಮರ್ಪಕ ಮಾಹಿತಿ ಸಿಕ್ಕಿಲ್ಲ. ಎಲ್ಲಿ, ಹೇಗೆ ನೋಂದಣಿ (how to registration) ಮಾಡಿಕೊಳ್ಳಬೇಕು ಎಂಬ ಬಗ್ಗೆಯೂ ತಿಳಿಯದವರು ಇದ್ದಾರೆ. ಗೃಹ ಜ್ಯೋತಿಯಂತೆ ಮೊಬೈಲ್‌ನಲ್ಲೇ ತಾವೇ ಸ್ವತಃ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ ಎಂದು ಭಾವಿಸಿದವರು ಸಹ ಇದ್ದಾರೆ. ಆದರೆ, ಖಂಡಿತವಾಗಿಯೂ ನಿಮ್ಮ ಮೊಬೈಲ್‌ನಲ್ಲಿ ನೋಂದಣಿ ಸಾಧ್ಯವಿಲ್ಲ. ಇದಕ್ಕಾಗಿ ನೀವು ಸಮೀಪದ ಗ್ರಾಮ ಒನ್‌ (Grama One Centre), ಬಾಪೂಜಿ ಕೇಂದ್ರ (Bapuji Centre), ಬೆಂಗಳೂರು ಒನ್‌ (Bangalore One), ಕರ್ನಾಟಕ ಒನ್‌ (Karnataka One) ಈ ಕೇಂದ್ರಗಳಿಗೆ ಹೋಗಬೇಕು. ಈ ಮೊದಲು ಮೊಬೈಲ್‌ ಸಂಖ್ಯೆ ಮೂಲಕ ನೋಂದಾಯಿಸಿಕೊಳ್ಳಬೇಕಿತ್ತು. ಅದರಲ್ಲಿ ಬರುವ ಸಮಯ, ದಿನಾಂಕ ಹಾಗೂ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬೇಕಿತ್ತು. ಆದರೆ, ಈಗ ಇದನ್ನು ಸರಳೀಕರಿಸಲಾಗಿದೆ. ನೇರವಾಗಿ ಸಂಬಂಧಿತ ದಾಖಲೆಗಳನ್ನು ಹಿಡಿದುಕೊಂಡು ನೋಂದಣಿ ಕೇಂದ್ರಕ್ಕೆ ಹೋದರೆ ಅಲ್ಲೇ ದಾಖಲಾತಿ ನೋಂದಣಿ ಮಾಡಿಕೊಳ್ಳಲಾಗುತ್ತದೆ.

ಏನು ದಾಖಲಾತಿ ಬೇಕು?

ಮಹಿಳೆಯರು ತಮ್ಮ ಪಡಿತರ ಚೀಟಿ, ಆಧಾರ್‌ ಕಾರ್ಡ್‌ನಲ್ಲಿ ಲಿಂಕ್‌ ಆಗಿರುವ ಮೊಬೈಲ್‌, ಆಧಾರ್‌ ಕಾರ್ಡ್‌ ಅನ್ನು ಹಿಡಿದುಕೊಂಡು ನೇರವಾಗಿ ಗ್ರಾಮ ಒನ್‌, ಬಾಪೂಜಿ ಸೇವಾ ಕೇಂದ್ರ, ಬೆಂಗಳೂರು ಒನ್‌, ಕರ್ನಾಟಕ ಒನ್‌ ಕೇಂದ್ರಗಳಿಗೆ ಹೋಗಬಹುದು. ಅಲ್ಲಿ ಯಾವುದೇ ಒತ್ತಡಕ್ಕೆ ಅವಕಾಶವಿಲ್ಲದಂತೆ ನೋಂದಣಿ ಮಾಡಿಕೊಳ್ಳಬಹುದು.

ಆಧಾರ್‌ ಕಾರ್ಡ್‌ ಮತ್ತು ಬ್ಯಾಂಕ್‌ ಅಕೌಂಟ್‌ ಲಿಂಕ್‌ ಆಗದಿದ್ದರೆ?

ಈ ಆತಂಕ ಬಹಳಷ್ಟು ಮಂದಿಗೆ ಕಾಡಿದ್ದಿದೆ. ನಮ್ಮ ಆಧಾರ್‌ ಕಾರ್ಡ್‌ ಮತ್ತು ಬ್ಯಾಂಕ್‌ ಅಕೌಂಟ್‌ ಲಿಂಕ್‌ ಆಗದೆ ಇದ್ದರೆ ಏನು ಮಾಡುವುದು ಎಂಬ ಪ್ರಶ್ನೆ ಕಾಡಿದ್ದಿದೆ. ಇನ್ನು ಬ್ಯಾಂಕ್‌ ಖಾತೆಗೆ ಆಧಾರ್‌ ಲಿಂಕ್‌ ಆಗದೇ ಇದ್ದರೆ ಹಲವು ವಿಧಾನಗಳ ಮೂಲಕ ಲಿಂಕ್‌ ಮಾಡಿಕೊಳ್ಳಬಹುದಾಗಿದೆ. ಇಂಟರ್ನೆಟ್‌ ಬ್ಯಾಂಕಿಂಗ್‌, ಮೊಬೈಲ್‌ ಆ್ಯಪ್, ಎಸ್‌ಎಂಎಸ್‌, ಮಿಸ್ಡ್‌ ಕಾಲ್ ಮೂಲಕ ಇಲ್ಲವೇ ಬ್ಯಾಂಕ್‌ ಶಾಖೆಗೆ ಭೇಟಿ ನೀಡಿ ಆಧಾರ್‌ ಕಾರ್ಡ್‌ ಲಿಂಕ್‌ ಮಾಡಿಸಬಹುದಾಗಿದೆ. ಇನ್ನು ಲಿಂಕ್‌ ಆಗಿದ್ದರೂ ಅ ಅಕೌಂಟ್‌ಗೆ ಬೇಡ ಬೇರೆ ಖಾತೆಗೆ ಹಣ ಬರಲಿ ಎಂದೇನಾದರೂ ಇದ್ದರೆ ಏನು ಮಾಡಬೇಕು? ಅದಕ್ಕೆ ಇಲಾಖೆಗೆ ಅಲೆಯಬೇಕೇ ಎಂದು ಕೇಳುವವರೂ ಇದ್ದಾರೆ. ಹೀಗಾಗಿ ಕೊನೆಗೆ ನೋಡಿಕೊಂಡರಾಯಿತು ಎಂದು ಸುಮ್ಮನಾದವರೂ ಇದ್ದಾರೆ. ಆದರೆ, ಇದಕ್ಕೆ ಹೆಚ್ಚಿಗೆ ತಲೆಕೆಡಿಸಿಕೊಳ್ಳುವುದು ಬೇಡ. ಬದಲಿ ಅಕೌಂಟ್‌ಗೆ ಸಂಬಂಧಿಸಿದ ಪಾಸ್‌ ಬುಕ್‌ ದಾಖಲೆಯನ್ನು ಹಿಡಿದುಕೊಂಡೇ ಕೇಂದ್ರಕ್ಕೆ ಹೋದರೆ ಸಾಕು. ಅಲ್ಲಿ ನಿಮ್ಮ ಖಾತೆಗೆ ಲಿಂಕ್‌ ಮಾಡಿ ನೋಂದಣಿ ಮಾಡಿ ಕೊಡಲಾಗುತ್ತದೆ.

ಪ್ರಜಾಪ್ರತಿನಿಧಿಗಳು ಸಹ ಇದ್ದಾರೆ!

ಇನ್ನು ಕೆಲವು ಮಹಿಳೆಯರು ಮೇಲೆ ಸೂಚಿಸಲಾದ ಕೇಂದ್ರಗಳಿಗೆ ನೋಂದಣಿ ಮಾಡಿಸಿಕೊಳ್ಳಲು ಹೋಗಲಾಗದ ಪರಿಸ್ಥಿತಿಯಲ್ಲಿ ಇರುತ್ತಾರೆ. ಅಂಥವರಿಗಾಗಿ ಸರ್ಕಾರ ಪ್ರಜಾಪ್ರತಿನಿಧಿಗಳನ್ನು ನೇಮಕ ಮಾಡಿದೆ. ಪ್ರತಿ ಸಾವಿರ ಜನಸಂಖ್ಯೆಗೆ ಇಬ್ಬರು ಪ್ರಜಾಪ್ರತಿನಿಧಿಗಳನ್ನು ನೇಮಕ ಮಾಡಲಾಗಿದೆ. ಇವರು ಪ್ರತಿ ಮನೆಗಳಿಗೆ ಭೇಟಿ ನೀಡಿ ಗೃಹಲಕ್ಷ್ಮಿಗೆ ನೋಂದಣಿ ಮಾಡಿಕೊಡಲಿದ್ದಾರೆ.

ಏನೇ ಸಮಸ್ಯೆ, ಗೊಂದಲವಿದ್ದರೂ 1902 ಗೆ ಕರೆ ಮಾಡಿ

ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಳ್ಳಲಾಗಿದೆ. ಯೋಜನೆ ಜಾರಿಯಾಗುತ್ತಿದ್ದಂತೆ ನಿಮಗೆ ಪರಿಚಯದವರ ಖಾತೆಗೆ ಹಣ ಜಮಾವಣೆ ಆಗಿದೆ. ಆದರೆ, ನಿಮ್ಮ ಖಾತೆಗೆ ಹಣ ಬಂದಿಲ್ಲ ಎಂದಾದರೆ ಮೊದಲು ನೋಂದಣಿ ಸರಿಯಾಗಿದೆಯೇ ಎಂಬುದನ್ನು ನೋಡಿಕೊಳ್ಳಬೇಕು. ಇಲ್ಲವೇ ನಿಮ್ಮ ಪತಿ ಜಿಎಸ್‌ಟಿ ಇಲ್ಲವೇ ಆದಾಯ ತೆರಿಗೆ ಕಟ್ಟಿದ್ದಾರೆಯೇ ಎಂದು ನೋಡಬೇಕು. ಇಲ್ಲವೇ ನೀವಿನ್ನೂ ಅರ್ಜಿಯನ್ನೇ ಸಲ್ಲಿಸಿಲ್ಲವೆಂದಾದರೆ, ಇದರ ಬಗ್ಗೆ ಸ್ವಲ್ಪವೂ ಮಾಹಿತಿ ಇಲ್ಲ ಎಂದಾದರೂ 1902 ಸಂಖ್ಯೆಗೆ ಕರೆ ಮಾಡಿ ತಿಳಿಸಬಹುದು. ಈ ಸಂಬಂಧ ಯಾವುದೇ ದೂರುಗಳಿದ್ದರೂ ಇದೇ ನಂಬರ್‌ಗೆ ಕರೆ ಮಾಡಿ ತಿಳಿಸಬಹುದು.

ಇದನ್ನೂ ಓದಿ: Chandrayaan 3: ಚಂದ್ರನಲ್ಲಿ ಸೇಫ್‌ ಲ್ಯಾಂಡಿಂಗ್‌ಗೆ ಅಂಗಳ ಹುಡುಕುತ್ತ ಹೊರಟ ವಿಕ್ರಮ್‌ ಲ್ಯಾಂಡರ್‌; ಫೋಟೊ ಹಂಚಿಕೊಂಡ ಇಸ್ರೋ

ಈ ವರ್ಷ ಸರ್ಕಾರಕ್ಕೆ ಎಷ್ಟು ಖರ್ಚು?

ಆಗಸ್ಟ್‌ನಿಂದಲೇ ಮನೆ ಯಜಮಾನಿ ಖಾತೆಗೆ ಹಣ ಹಾಕುವುದರಿಂದ ಈ ವರ್ಷ ಗೃಹಲಕ್ಷ್ಮಿ ಯೋಜನೆಯಿಂದ ಸರ್ಕಾರಕ್ಕೆ 17,500 ಕೋಟಿ ರೂಪಾಯಿ ಖರ್ಚು ಬರುತ್ತದೆ. ಮುಂದಿನ ವರ್ಷದಿಂದ ಇದು 30 ಸಾವಿರ ಕೋಟಿ ರೂಪಾಯಿ ಮೇಲ್ಪಟ್ಟು ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದೆ.

Exit mobile version