Site icon Vistara News

Gruha Lakshmi : ಗೃಹಲಕ್ಷ್ಮಿ ಅಡಿ ಹಾಕಿಕೊಂಡಿದ್ದ ಸ್ಕೀಂ ಫ್ಲಾಪ್!‌ ಡಿ.ಕೆ. ಶಿವಕುಮಾರ್‌ ಅಸಮಾಧಾನ

DCM DK Shivakumar and gruha lakshmi scheme

ಬೆಂಗಳೂರು: ಗ್ಯಾರಂಟಿ ಯೋಜನೆಗಳ (Congress Guarantee Scheme) ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಈಗಾಗಲೇ ಮೂರು ಯೋಜನೆಗಳಾದ ಗೃಹ ಜ್ಯೋತಿ, ಶಕ್ತಿ ಹಾಗೂ ಅನ್ನಭಾಗ್ಯ ಯೋಜನೆಯನ್ನು ಜಾರಿ ಮಾಡಿದೆ. ಆಗಸ್ಟ್‌ 27ರಂದು ಗೃಹಲಕ್ಷ್ಮಿ ಯೋಜನೆಗೆ (Gruha lakshmi scheme) ಚಾಲನೆ ಸಿಗಲಿದ್ದು, ಯಜಮಾನಿಯರ ಖಾತೆಗೆ 2 ಸಾವಿರ ರೂಪಾಯಿ ಬೀಳಲಿದೆ. ಆದರೆ, ಇಲ್ಲಿ ಕಾಂಗ್ರೆಸ್‌ (Karnataka Congress) ಹಾಕಿಕೊಂಡಿದ್ದ ಮಹತ್ವದ ಕಾನ್ಸೆಪ್ಟ್ ಫೇಲ್ ಆಯಿತಾ ಎಂಬ ಅನುಮಾನ ಮೂಡಿದೆ. ಲೋಕಸಭಾ ಚುನಾವಣೆಯನ್ನು (Lok Sabha Election 2024) ದೃಷ್ಟಿಯಲ್ಲಿಟ್ಟುಕೊಂಡು “ಪ್ರಜಾಪ್ರತಿನಿಧಿ”ಗಳನ್ನು ನೇಮಕ ಮಾಡಿದ್ದ ಕೈ ಲೆಕ್ಕಾಚಾರ ಉಲ್ಟಾ ಹೊಡೆದಿದೆ. ಪಕ್ಷದ ನಾಯಕರ ನಿರಾಸಕ್ತಿಯಿಂದ ಮಾಸ್ಟರ್ ಪ್ಲ್ಯಾನ್‌ವೊಂದು ಗೋತಾ ಹೊಡೆಯುವಂತೆ ಆಗಿದೆ.

ಗೃಹಲಕ್ಷ್ಮಿ ಯೋಜನೆಯು ಅರ್ಹತೆಯುಳ್ಳ ಯಾರೊಬ್ಬರಿಗೂ ಸಿಗದೇ ಇರಬಾರದು ಎಂಬ ನಿಟ್ಟಿನಲ್ಲಿ ಪ್ರಜಾಪ್ರತಿನಿಧಿಗಳನ್ನು (Prajaprathinidhi for Grihalakshmi Scheme) ನೇಮಕ ಮಾಡುತ್ತಿರುವುದಾಗಿ ಸರ್ಕಾರ ಹೇಳಿಕೊಂಡಿತ್ತು. ಹೀಗಾಗಿ ಪ್ರಜಾಪ್ರತಿನಿಧಿಗಳನ್ನು ಪ್ರತಿ ಸಾವಿರ ಜನಸಂಖ್ಯೆಗೆ ಇಬ್ಬರಂತೆ ನೇಮಕ ಮಾಡಿತ್ತು. ಆದರೆ, ಇದರ ಹಿಂದೆ ರಾಜಕೀಯ ಲೆಕ್ಕಾಚಾರವೂ (Political calculations) ಅಡಗಿತ್ತು ಎನ್ನಲಾಗಿದ್ದು, ಪಕ್ಷದ ಕಾರ್ಯಕರ್ತರನ್ನೇ ಪ್ರಜಾಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡಿಕೊಂಡು ಅವರ ಮೂಲಕ ಬೂತ್‌ ಮಟ್ಟದಲ್ಲಿ, ಹಳ್ಳಿ ಹಳ್ಳಿಯಲ್ಲಿ ಪಕ್ಷದ ಗ್ಯಾರಂಟಿ ಯೋಜನೆಗಳ ಸಹಿತ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುವ ಪ್ಲ್ಯಾನ್‌ ಅನ್ನು ಹಾಕಿಕೊಳ್ಳಲಾಗಿತ್ತು. ಈ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಲೆಕ್ಕಾಚಾರವನ್ನು ಕೈ ಪಡೆ ಹಾಕಿಕೊಂಡಿತ್ತು.

gruha lakshmi scheme and women in traditional dress

ಡಿ.ಕೆ. ಶಿವಕುಮಾರ್‌ ಅಸಮಾಧಾನ

ಪ್ರಜಾಪ್ರತಿನಿಧಿ ಕಾನ್ಸೆಪ್ಟ್‌ ಯಶ ಕಾಣದ ಬಗ್ಗೆ ಸ್ವತಃ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (Deputy CM and KPCC president DK Shivakumar) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೋಮವಾರ (ಆಗಸ್ಟ್‌ 14) ನಡೆದ ಕಾಂಗ್ರೆಸ್ ಸರ್ವ ಸದಸ್ಯರ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಪ್ರಜಾಪ್ರತಿನಿಧಿಗಳ ಬಗ್ಗೆ ಉಲ್ಲೇಖ ಮಾಡಿದ್ದಾರೆ. ನಿಮಗೆ ಪ್ರಜಾಪ್ರತಿನಿಧಿಗಳ ಬೆಲೆ ಗೊತ್ತಾಗಿಲ್ಲ. ಗೊತ್ತಾಗುವ ಹೊತ್ತಿಗೆ ಜನರೇ ಗೃಹಲಕ್ಷ್ಮಿ ಗ್ಯಾರಂಟಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಬೇಗ ಎಚ್ಚೆತ್ತುಕೊಳ್ಳಬೇಕಿತ್ತು. ಬಿಡಿ ಈಗ ಆಗಿದ್ದು ಆಗಿ ಹೋಯಿತು. ಈಗ ಬೇರೆಯ ಅವಕಾಶ ಮಾಡಿಕೊಡೋಣ ಎಂದು ಹೇಳಿದ್ದರು.

ಅಂದರೆ ಪ್ರಜಾಪ್ರತಿನಿಧಿಗಳ ಆಯ್ಕೆ ಹಿಂದಿನ ಲೆಕ್ಕಾಚಾರವನ್ನು ಸರ್ಕಾರ ಬಿಟ್ಟುಕೊಟ್ಟಿರಲಿಲ್ಲ. ಆದರೆ, ಪಕ್ಷದ ಕಾರ್ಯಕರ್ತರನ್ನೇ ಇದಕ್ಕೆ ನೇಮಕ ಮಾಡಿಕೊಂಡು ಅವರ ಮೂಲಕ ಗ್ಯಾರಂಟಿ ಅನುಷ್ಠಾನವನ್ನು ಯಶಸ್ವಿ ಮಾಡುವುದರ ಜತೆಗೆ ಕಾರ್ಯಕರ್ತರನ್ನು ಸಹ ಒಳಗೊಳ್ಳುವ ಪ್ಲ್ಯಾನ್‌ ಅನ್ನು ಹೊಂದಲಾಗಿತ್ತು. ಇದರ ಜತೆಗೆ ಪ್ರತಿ ಬೂತ್‌ನ ಮತದಾರ ಸಂಪರ್ಕ ಸಾಧ್ಯವಾಗುತ್ತದೆ. ಮತದಾರರ ತಲೆಗೆ ರಾಜ್ಯ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಪಾಸಿಟಿವ್ ಸಂದೇಶವನ್ನು ತುಂಬುವುದು ಡಿ.ಕೆ. ಶಿವಕುಮಾರ್‌ ಸೇರಿದಂತೆ ಪಕ್ಷದ ಪ್ರಮುಖರ ತಂತ್ರವಾಗಿತ್ತು. ಇದನ್ನು ಬರುವ ಲೋಕಸಭೆ ಚುನಾವಣೆಯಲ್ಲಿ ಗೆಲುವಿನ ಮೆಟ್ಟಿಲನ್ನಾಗಿ ಮಾಡಿಕೊಳ್ಳುವ ಪಕ್ಕಾ ರಾಜಕೀಯ ರಣತಂತ್ರವನ್ನು ಹೆಣೆಯಲಾಗಿತ್ತು. ಆದರೆ, ಇದರ ಹಿಂದಿನ ಉದ್ದೇಶವನ್ನು ಅರಿಯುವಲ್ಲಿಯೂ ಕಾಂಗ್ರೆಸ್‌ ನಾಯಕರು ವಿಫಲರಾಗಿದ್ದಾರೆ.

ಇದನ್ನೂ ಓದಿ: Karnataka Politics : ಕಾಂಗ್ರೆಸ್‌ ವಿರುದ್ಧ ಸಿಡಿದ ಸಂಕೇತ್‌ ಏಣಗಿ; ಯುವ ನಾಯಕರು ಕೈ ಬಿಡುವ ಎಚ್ಚರಿಕೆ!

“ಪ್ರಜಾಪ್ರತಿನಿಧಿ” ಫೇಲ್ ಆಗಲು ಕಾರಣವೇನು?

“ಪ್ರಜಾಪ್ರತಿನಿಧಿ” ಪರಿಕಲ್ಪನೆ ವಿಫಲವಾಗಲು ಹಲವು ಕಾರಣಗಳಿವೆ. ಮೊದಲನೆಯದಾಗಿ ಗೃಹಲಕ್ಷ್ಮಿ ಅನುಷ್ಠಾನಕ್ಕೆ ಆ್ಯಪ್ ಸಿದ್ಧವಾಗಲೇ ಇಲ್ಲ. ಇನ್ನು ನೋಂದಣಿ ಮಾಡಿಸಲು ಬಾಪುಜಿ ಸೇವಾ ಕೇಂದ್ರ, ಬೆಂಗಳೂರು ಒನ್ ಸೇರಿದಂತೆ ಬೇರೆ ಬೇರೆ ಕೇಂದ್ರಗಳಲ್ಲಿ ಅವಕಾಶ ಸಿಕ್ಕಿರುವುದರಿಂದ ಜನರೇ ಸ್ವತಃ ಅಲ್ಲಿಗೆ ಭೇಟಿ ನೀಡಿ ನೋಂದಣಿ ಮಾಡಿಸಿಕೊಂಡು ಬಂದಿದ್ದಾರೆ. ಹೀಗಾಗಿ ಬಹುತೇಕ ಕಡೆ ಜನಪ್ರತಿನಿಧಿಗಳ ಅವಶ್ಯಕತೆಯೇ ಬೀಳಲಿಲ್ಲ. ಈ ಎಲ್ಲದರ ಜತೆಗೆ ಕೆಲ ಸ್ಥಳೀಯ ನಾಯಕರು ಸಮರ್ಪಕವಾಗಿ ಸ್ಪಂದನೆ ನೀಡಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

Exit mobile version