Site icon Vistara News

Gruha lakshmi scheme : ಆಗಸ್ಟ್ 30ಕ್ಕೆ ಮೈಸೂರಿನಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ; ಲಕ್ಷ್ಮಿ ಹೆಬ್ಬಾಳ್ಕರ್ ಘೋಷಣೆ

Gruhalakshmi Inauguration

ಬೆಂಗಳೂರು: ಕರ್ನಾಟಕ ಸರ್ಕಾರದ (Karnataka Government) ಬಹು ನಿರೀಕ್ಷಿತ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಗೆ (Gruha lakshmi Scheme) ಯಾವಾಗ ಚಾಲನೆ ಸಿಗಲಿದೆ ಎನ್ನುವುದು ಫೈನಲ್‌ ಆಗಿದೆ. ಆಗಸ್ಟ್ 30ರಂದು ಮೈಸೂರಿನಲ್ಲಿ ಚಾಲನೆ (Gruha lakshmi scheme will start on August 30) ಸಿಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಹೇಳಿದ್ದಾರೆ.

ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2000 ರೂ. ನೀಡುವ ಈ ಯೋಜನೆಗೆ ಆಗಸ್ಟ್‌ 17 ಆಥವಾ 18ರಂದು ಚಾಲನೆ ಸಿಗಲಿದೆ ಎಂದು ಹಿಂದಿನಿಂದಲೂ ಹೇಳಿಕೊಂಡು ಬರಲಾಗಿತ್ತು. ಬಳಿಕ ಅದು ಆಗಸ್ಟ್‌ 20ಕ್ಕೆ, ಮುಂದೆ ಆಗಸ್ಟ್‌ 27 ಎಂದು ಬದಲಾಯಿತು. ಕೊನೆಗೆ ಈ ಯೋಜನೆಗೆ ಸದ್ಯ ಚಾಲನೆ ಸಿಗುವ ಸಾಧ್ಯತೆ ಇಲ್ಲ. ಏನಿದ್ದರೂ ಸೆಪ್ಟೆಂಬರ್‌ ಮೊದಲ ವಾರದಲ್ಲೇ ಚಾಲನೆ ಸಿಗುವುದು. ರಾಜ್ಯ ಸರ್ಕಾರ ಈ ಯೋಜನೆಯ ಚಾಲನೆಯನ್ನು ಸೆಪ್ಟೆಂಬರ್‌ಗೆ ಮುಂದೂಡಿ ಆಗಸ್ಟ್‌ ತಿಂಗಳಲ್ಲಿ ಕೊಡಬೇಕಾಗಿರುವ 2500 ಕೋಟಿ ರೂ.ಗಳನ್ನು ಉಳಿಸುವ ಪ್ಲ್ಯಾನ್‌ ಮಾಡಿದೆ ಎಂಬೆಲ್ಲ ಸುದ್ದಿಗಳು ಹರಿದಾಡಿದ್ದವು. ಆದರೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಈ ಎಲ್ಲ ಊಹಾಪೋಹಗಳಿಗೆ ಬ್ರೇಕ್‌ ಹಾಕಿದ್ದು, ಆಗಸ್ಟ್‌ 30ರಂದೇ ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ ನೀಡುವುದಾಗಿ ತಿಳಿಸಿದ್ದಾರೆ.

ಶನಿವಾರ ಬೆಂಗಳೂರಿನ ಅರಮನೆ ಮೈದಾನದ ವೃಕ್ಷ ಸಾಂಪ್ರದಾಯಿಕ ಕಲಾ ಮಂಟಪದಲ್ಲಿ ನಡೆದ ‘ನಮ್ಮೂರ ನಾಗಪಂಚಮಿ-2022’ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಚಾಮುಂಡೇಶ್ವರಿ ತಾಯಿಯ ಕ್ಷೇತ್ರದಲ್ಲಿ ಈ ಯೋಜನೆಗೆ ಚಾಲನೆ ಸಿಗುತ್ತಿರುವುದು ನನ್ನ ಅದೃಷ್ಟ ಎಂದರು.

ಚಾಲನೆ ನೀಡಲಿದ್ದಾರೆ ಹುಲ್‌ ಗಾಂಧಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಈ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್‌ ತಿಳಿಸಿದರು. ನಿಜವೆಂದರೆ ಈ ಕಾರ್ಯಕ್ರಮದ ದಿನಾಂಕ ಘೋಷಣೆಯಲ್ಲಿ ಗೊಂದಲ ಆಗುವುದಕ್ಕೆ ರಾಹುಲ್‌ ಗಾಂಧಿ ಅವರ ಡೇಟ್‌ ಫೈನಲ್‌ ಆಗದೆ ಇರುವುದು ಕೂಡಾ ಒಂದು ಕಾರಣವಾಗಿತ್ತು. ರಾಹುಲ್‌ ಗಾಂಧಿ ಅವರ ಡೇಟ್‌ ಫೈನಲ್‌ ಆದ ಕೂಡಲೇ ಚಾಲನೆ ದಿನಾಂಕ ಫೈನಲ್‌ ಆಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಅವರೂ ಈ ಹಿಂದೆ ಹೇಳಿದ್ದರು.

ರಾಹುಲ್ ಗಾಂಧಿ ಅವರ ದಿನಾಂಕ ಹೊಂದಾಣಿಕೆ ದೃಷ್ಟಿಯಿಂದ ಮೈಸೂರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು. ಮೂಲತಃ ಈ ಕಾರ್ಯಕ್ರಮವನ್ನು ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಊರಾದ ಬೆಳಗಾವಿಯಲ್ಲೇ ನಡೆಸಲು ನಿರ್ಧರಿಸಲಾಗಿತ್ತು. ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳನ್ನು ಒಂದೊಂದು ವಿಭಾಗ ಕೇಂದ್ರಗಳಲ್ಲಿ ಉದ್ಘಾಟಿಸುವ ಯೋಚನೆ ಸರ್ಕಾರದ್ದಾಗಿದ್ದು, ಗೃಹಲಕ್ಷ್ಮಿ ಯೋಜನೆಯ ಉದ್ಘಾಟನೆ ಬೆಳಗಾವಿಯಲ್ಲಿ ಎಂದು ನಿಗದಿಯಾಗಿತ್ತು. ಅಲ್ಲಿ ಮೈದಾನ ವೀಕ್ಷಣೆಯೂ ಆಗಿತ್ತು. ಆದರೆ, ರಾಹುಲ್‌ ಗಾಂಧಿ ಅವರಿಗೆ ಹೊಂದಿಕೆಯಾಗುವಂತೆ ಮೈಸೂರಿನಲ್ಲಿ ಮಾಡಲಾಗುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ತಿಳಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆಯಡಿ 1.28 ಕೋಟಿ ಫಲಾನುಭವಿಗಳು ಇದ್ದಾರೆ. ಇವರ ಪೈಕಿ 1.10 ಕೋಟಿ ಜನರು ಈಗಾಗಲೇ ನೊಂದಣಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Gruha Lakshmi Scheme : ಸೆಪ್ಟೆಂಬರ್‌ನಲ್ಲಿ ಗೃಹಲಕ್ಷ್ಮಿಯರ ಖಾತೆಗೆ ಹಣ? 2500 ಕೋಟಿ ಉಳಿಸಲು ಪ್ಲ್ಯಾನ್!

ಸಿದ್ಧತೆ ವೀಕ್ಷಣೆಗೆ ತೆರಳಿದ ಲಕ್ಷ್ಮೀ ಹೆಬ್ಬಾಳ್ಕರ್

‌ಮೈಸೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದ ಸಿದ್ಧತೆ ಕುರಿತು ವೀಕ್ಷಿಸಲು ಶನಿವಾರವೇ ಮೈಸೂರಿಗೆ ತೆರಳುತ್ತಿರುವುದಾಗಿ ಲಕ್ಷ್ಮೀ ಹೆಬ್ಬಾಳ್ಕರ್‌ ತಿಳಿಸಿದರು. ಮೈಸೂರು, ಮಂಡ್ಯ ಹಾಗೂ ಹಾಸನ ಜಿಲ್ಲೆಯ ಸಚಿವರು, ಶಾಸಕರೊಂದಿಗೆ ಸಭೆ ನಡೆಸುವುದಾಗಿ ತಿಳಿಸಿದರು.

ಅದ್ದೂರಿಯಾಗಿ ಕಾರ್ಯಕ್ರಮ ನಡೆಯಲಿದ್ದು, ಈಗಾಗಲೇ ಸಿದ್ಧತೆ ಕೈಗೊಳ್ಳಲಾಗಿದೆ ಎಂದರು.. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಿ ಕಾರ್ಯಕ್ರಮವನ್ನು ಮೈಸೂರಿನಲ್ಲಿ ನಿಗದಿ ಪಡಿಸಲಾಗಿದೆ ಎಂದು ಸಚಿವರು ಹೇಳಿದರು.

Exit mobile version