ಬೆಂಗಳೂರು: ರಾಜ್ಯ ಸರ್ಕಾರ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆ (Congress Guarantee) ಗೃಹ ಲಕ್ಷ್ಮಿಗೆ (Gruha lakshmi scheme) ಚಾಲನೆ ನೀಡುವ ಕಾರ್ಯಕ್ರಮಕ್ಕೆ ಬೆಳಗಾವಿಯಲ್ಲಿ ಚಾಲನೆ ನೀಡುವುದು ಎಂದು ಆರಂಭದಲ್ಲೇ ನಿರ್ಧಾರವಾಗಿದ್ದರೂ ಇದೀಗ ಕಾರಣವೇ ಇಲ್ಲದೆ ಅದನ್ನು ಮೈಸೂರಿಗೆ ಶಿಫ್ಟ್ ಮಾಡಲಾಗಿದೆ (Belagavi programme Shifted to Mysore). ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರ (CM Siddaramiah) ತೀರ್ಮಾನ ಎಂದು ಸ್ವತಃ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ಹಾಗಿದ್ದರೆ ಸಿದ್ದರಾಮಯ್ಯ ಅವರು ತಮ್ಮದೇ ಸಂಪುಟದ ಸದಸ್ಯೆಯೊಬ್ಬರ ಹೆಚ್ಚುತ್ತಿರುವ ವರ್ಚಸ್ಸಿನಿಂದ ಬೆದರಿದರೇ?
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪೈಕಿ ಶಕ್ತಿ ಮತ್ತು ಅನ್ನ ಭಾಗ್ಯ ಯೋಜನೆಯನ್ನು ಬೆಂಗಳೂರಿನಲ್ಲಿ, ಗೃಹ ಜ್ಯೋತಿ ಯೋಜನೆಯನ್ನು ಕಲಬುರಗಿಯಲ್ಲಿ ಉದ್ಘಾಟಿಸಲಾಗಿತ್ತು. ಗೃಹ ಲಕ್ಷ್ಮಿ ಯೋಜನೆಯನ್ನು ಇನ್ನೊಂದು ವಿಭಾಗ ಕೇಂದ್ರವಾದ ಬೆಳಗಾವಿಯಲ್ಲಿ ಉದ್ಘಾಟಿಸುವುದು ಎಂದು ಮೊದಲೇ ಘೊಷಿಸಲಾಗಿತ್ತು. ಇತ್ತೀಚೆಗೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಸಿಎಂ ಸಿದ್ದರಾಮಯ್ಯ ಇಬ್ಬರೂ ಜತೆಯಾಗಿ ಮೈದಾನದ ವೀಕ್ಷಣೆಯನ್ನು ಮಾಡಿದ್ದರು. ಸುಮಾರು 1.5 ಲಕ್ಷ ಜನರನ್ನು ಸೇರಿಸಿ ಅದ್ಧೂರಿ ಕಾರ್ಯಕ್ರಮ ಮಾಡಲು ಲಕ್ಷ್ಮೀ ಹೆಬ್ಬಾಳ್ಕರ್ ನಿರ್ಧರಿಸಿದ್ದರು. ಆದರೆ, ಇನ್ನೂ ಕಾರ್ಯಕ್ರಮದ ದಿನ ಫಿಕ್ಸ್ ಆಗಿರಲಿಲ್ಲ.
ಶನಿವಾರ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಆಗಸ್ಟ್ 30ರಂದು ಗೃಹ ಲಕ್ಷ್ಮಿ ಯೋಜನೆ ಉದ್ಘಾಟನೆಯಾಗಲಿದೆ. ಆದರೆ, ಕಾರ್ಯಕ್ರಮ ಈ ಹಿಂದೆ ನಿರ್ಧರಿಸಿದಂತೆ ಬೆಳಗಾವಿಯಲ್ಲಿ ಅಲ್ಲ, ಮೈಸೂರಿನಲ್ಲಿ ನಡೆಯಲಿದೆ ಎಂದು ಶನಿವಾರ ಪ್ರಕಟಿಸಿದರು.
ʻʻಬೆಳಗಾವಿಯಲ್ಲಿ ಗೃಹ ಲಕ್ಷ್ಮೀ ಯೋಜನೆಗೆ ಚಾಲನೆ ನೀಡಬೇಕು ಅಂತ ನಿರ್ಧಾರ ಆಗಿತ್ತು. ಈಗಾಗಲೇ ಅಲ್ಲಿ ತಯಾರಿ ಸಹ ಶುರು ಮಾಡಿದ್ದೆವು. 1.5 ಲಕ್ಷ ಜನರು ಸೇರಿ ಸಮಾವೇಶ ಮಾಡಬೇಕು ಎಂದು ನಿರ್ಧಾರ ಮಾಡಿ ಬೆಳಗಾವಿಯಲ್ಲಿ ತಯಾರಿ ನಡೆದಿತ್ತು. ಮೈಸೂರು ಭಾಗದಲ್ಲಿ ಒಂದು ಕಾರ್ಯಕ್ರಮ ಚಾಲನೆ ಕೊಡಬೇಕು ಅಂತ ಸಿಎಂ ಬದಲಿಸಿದ್ದಾರೆʼʼ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ʻʻರಾಹುಲ್ ಗಾಂಧಿಯವರು ಬೆಂಗಳೂರಿನಲ್ಲಿ ಮಾಡಿ ಎಂದು ಹೇಳಿದ್ದರು. ಈಗಾಗಲೇ ಇಲ್ಲಿ ಶಕ್ತಿ ಯೋಜನೆಗೆ ಚಾಲನೆ ಸಿಕ್ಕಿದೆ. ಹೀಗಾಗಿ ಮೈಸೂರಿನಲ್ಲಿ ಮಾಡಲು ತೀರ್ಮಾನ ಆಗಿದೆ. ಚಾಮುಂಡೇಶ್ವರಿ ಸನ್ನಿಧಿ ಇರುವ ಕಡೆ ಚಾಲನೆ ಸಿಕ್ತಿರುವುದು ನನಗೂ ಖುಷಿ ತಂದಿದೆʼʼ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಿಎಂ ತೀರ್ಮಾನವನ್ನು ಒಪ್ಪಿದಂತೆ ಮಾತನಾಡಿದರು.
ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮದ ಉಸ್ತುವಾಗಿಯಲ್ಲಿ ಸಚಿವ ಎಚ್.ಸಿ ಮಹದೇವಪ್ಪ ಅವರು ವಹಿಸಲಿದ್ದಾರೆ. ನಾಳೆ ಮಹಾದೇವಪ್ಪ ಮೂರು ಜಿಲ್ಲೆಯ ಅಧಿಕಾರಿಗಳ ಸಭೆ ನಡೆಯಲಿದೆ ಎಂದು ಹೇಳಿದ ಲಕ್ಷ್ಮಿ ಅವರು, ಯಾವತ್ತಿದ್ರೂ ಬೆಳಗಾವಿಯಲ್ಲಿ ಕೆಲಸ ಮಾಡಿದ್ದೇನೆ. ಸಿಎಂ ಸ್ವಂತ ಜಿಲ್ಲೆಯಲ್ಲಿ ಮಾಡ್ತಿರುವುದು ನನಗೆ ಖುಷಿ ತಂದಿದೆ ಎಂದು ಹೇಳಿಕೊಂಡರು.
ಹಾಗಿದ್ದರೆ ಸಿದ್ದರಾಮಯ್ಯ ಜಾಗ ಬದಲಿಸಿದ್ದೇಕೆ?
ಗೃಹ ಲಕ್ಷ್ಮೀ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಲು ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಿರ್ಧರಿಸಿದ್ದರು. ಬೆಳಗಾವಿಯಲ್ಲಿ ಆಗಲೇ ತಯಾರಿಗಳು ನಡೆದಿದ್ದವು.
ಆದರೆ, ಇಷ್ಟೊಂದು ದೊಡ್ಡ ಮೊತ್ತದ ಯೋಜನೆಯ ಕ್ರೆಡಿಟನ್ನು ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಡಿ.ಕೆ. ಶಿವಕುಮಾರ್ ಅವರಿಬ್ಬರೇ ಪಡೆದುಕೊಳ್ಳುತ್ತಾರೆ ಎಂಬ ಕಾರಣಕ್ಕಾಗಿ ಸಿದ್ದರಾಮಯ್ಯ ಟೀಮ್ ಕಾರ್ಯಕ್ರಮದ ಸ್ಥಳ ಬದಲಾವಣೆ ಮಾಡಿದೆ ಎಂದು ಹೇಳಲಾಗಿದೆ.
ಗೃಹ ಲಕ್ಷ್ಮಿ ಯೋಜನೆ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳಲ್ಲೇ ಅತಿ ಹೆಚ್ಚು ಹಣದ ಮೊತ್ತ ಹೊಂದಿರುವ ಯೋಜನೆಯಾಗಿದೆ. ಎಲ್ಲಾ ಯೋಜನೆಗಳಿಗೆ ಒಟ್ಟಾರೆಯಾಗಿ 60 ಸಾವಿರ ಕೋಟಿ ರೂ. ಬೇಕಾದರೆ, ಕೇವಲ ಗೃಹಲಕ್ಷ್ಮಿ ಯೋಜನೆಗೇ 35 ಸಾವಿರ ಕೋಟಿ ರೂಪಾಯಿ ಬೇಕು.
ಇದನ್ನೂ ಓದಿ: Gruha lakshmi scheme : ಆಗಸ್ಟ್ 30ಕ್ಕೆ ಮೈಸೂರಿನಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ; ಲಕ್ಷ್ಮಿ ಹೆಬ್ಬಾಳ್ಕರ್ ಘೋಷಣೆ
ಒಂದೊಮ್ಮೆ ಬೆಳಗಾವಿಯಲ್ಲೇ ಕಾರ್ಯಕ್ರಮ ಮಾಡಿದರೆ ಅದರ ಸಂಪೂರ್ಣ ಕ್ರೆಡಿಟ್ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೇ ಹೋಗುತ್ತದೆ. ಅವರ ವರ್ಚಸ್ಸು ಇನ್ನಷ್ಟು ಹೆಚ್ಚುತ್ತದೆ ಎನ್ನುವುದನ್ನು ಅರಿತು ಅದರ ಕ್ರೆಡಿಟ್‌ನ್ನು ತಾನೂ ಪಡೆದುಕೊಳ್ಳಲು ಸಿದ್ದರಾಮಯ್ಯ ಸ್ಥಳ ಬದಲಾವಣೆಯ ಪ್ಲ್ಯಾನ್ ಮಾಡಿದರು ಎಂದು ಹೇಳಲಾಗುತ್ತಿದೆ.
ಇದರೊಂದಿಗೆ ಸಮಾವೇಶವನ್ನು ಸ್ಥಳ ಮೈಸೂರಿಗೆ ಶಿಫ್ಟ್ ಮಾಡಿ ಗುರು ಡಿಕೆಶಿ, ಶಿಷ್ಯೆ ಲಕ್ಷ್ಮೀ ಹೆಬ್ಬಾಳ್ಕರ್ ಇಬ್ಬರಿಗೂ ಸಿದ್ದರಾಮಯ್ಯ ಬಣ ಚೆಕ್‌ಮೆಟ್ ಕೊಟ್ಟಿದೆ ಎಂದು ವಿಶ್ಲೇಷಿಸಲಾಗಿದೆ.
ನಿಜವೆಂದರೆ, ಗೃಹ ಲಕ್ಷ್ಮಿ ಯೋಜನೆಯ ಉದ್ಘಾಟನೆ ದಿನಾಂಕದ ಬಗ್ಗೆ ಆರಂಭದಿಂದಲೇ ಗೊಂದಲವಿತ್ತು. ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಡಿಕೆಶಿ ಒಂದು ಹೇಳಿದರೆ ಸಿದ್ದರಾಮಯ್ಯ ಇನ್ನೊಂದು ಹೇಳುತ್ತಿದ್ದರು. ಆರಂಭದಲ್ಲಿ ಇದರ ಉದ್ಘಾಟನೆ ಆಗಸ್ಟ್ 17 ಅಥವಾ 18ರಂದು ನಡೆಯಲಿದೆ ಎಂದು ಹೇಳಲಾಗಿತ್ತು. ಬಳಿಕ ಅದು ಮುಂದಕ್ಕೆ ಹೋಯಿತು. ಕಳೆದ ಸ್ವಾತಂತ್ರ್ಯೋತ್ಸವದಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಆಗಸ್ಟ್ 20 ಎಂದರೆ ಸಿದ್ದರಾಮಯ್ಯ ಆಗಸ್ಟ್ 27 ಎಂದಿದ್ದರು. ಈ ಕಾರ್ಯಕ್ರಮದ ದಿನ ಮುಂದೂಡಿಕೆಗೂ ಸ್ಥಳ ಬದಲಾವಣೆ ಚಟುವಟಿಕೆಗಳಿಗೂ ಹತ್ತಿರದ ಸಂಬಂಧವಿದೆ ಎಂದು ವಿಶ್ಲೇಷಿಸಲಾಗುತ್ತಿದೆ.