ತುಮಕೂರು: ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ (SR Srinivas) ಅವರಿಗೆ ಹಲ್ಲೆ ಪ್ರಕರಣವೊಂದರಲ್ಲಿ ಈಗ ಬಂಧನ ಭೀತಿ ಎದುರಾಗಿದೆ. ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ, ಜಾಗತಿಕ ಲಿಂಗಾಯತ ವೇದಿಕೆ ರಾಜ್ಯ ಸಂಚಾಲಕ ರಾಯಸಂದ್ರ ರವಿಕುಮಾರ್ (Rayasandra Ravikumar) ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಘಟನೆ ನಡೆದು 48 ಗಂಟೆಗಳ ಬಳಿಕ ಎಫ್‌ಐಆರ್ ದಾಖಲಾಗಿತ್ತು. ಆದರೆ, ಈಗ ಈ ಪ್ರಕರಣದಲ್ಲಿ ಬೇಲ್ ಸಿಗಲು ವಿಳಂಬ ಆಗುತ್ತಿರುವ ಹಿನ್ನೆಲೆಯಲ್ಲಿ ಶಾಸಕರಿಗೆ ಬಂಧನ ಭೀತಿ ಎದುರಾಗಿದೆ.
ಪ್ರತಿಭಟನಾ ನಿರತ ಕಾಂಗ್ರೆಸ್ ನಾಯಕನ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು. ಇದರಲ್ಲಿ ಈಘ ಬಂಧನ ಭೀತಿ ಎದುರಾಗಿದೆ. ಐಪಿಸಿ ಸೆಕ್ಷನ್ 511, 506, 504, 143, 149, 323, 363 ಅಡಿಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ಇದರಲ್ಲಿ ಗುಂಪು ಗಲಭೆಯಲ್ಲಿ ಭಾಗಿಯಾಗಿರುವುದು, ತೀವ್ರ ಗಾಯ ಮಾಡಿರುವುದು ಹಾಗೂ ಅಪಹರಣ ಆರೋಪದ ಮೇಲೆ ಪ್ರಕರಣವನ್ನು ದಾಖಲು ಮಾಡಲಾಗಿದೆ.
ರಾಯಸಂದ್ರ ರವಿಕುಮಾರ್ ನೀಡಿದ ದೂರಿನ ಆಧಾರದ ಮೇಲೆ ಕಾಂಗ್ರೆಸ್ ಶಾಸಕ ಎಸ್ ಆರ್ ಶ್ರೀನಿವಾಸ್ ವಿರುದ್ಧ ಎಫ್ಐಆರ್ ಅನ್ನು ಪೊಲೀಸರು ದಾಖಲು ಮಾಡಲಾಗಿತ್ತು. ಈ ಸಂಬಂಧ ಎಸ್.ಆರ್. ಶ್ರೀನಿವಾಸ್ ಅವರು ಜನಪ್ರತಿನಿಧಿಗಳ ಕೋರ್ಟ್‌ನಿಂದ ಬೇಲ್ ಪಡೆಯಬೇಕಿತ್ತು. ಆದರೆ, ಇಂದು ಭಾನುವಾರ ಆಗಿರುವ ಹಿನ್ನೆಲೆ ಬೇಲ್ ಸಿಗುವುದು ವಿಳಂಬವಾಗುತ್ತಿದೆ. ಬೇಲ್‌ಗಾಗಿ ಇನ್ನೂ ಕನಿಷ್ಠ 2 ದಿನ ಕಾಯಬೇಕಿರುವುದರಿಂದ ಎಸ್.ಆರ್. ಶ್ರೀನಿವಾಸ್‌ಗೆ ಈಗ ಬಂಧನ ಭೀತಿ ಎದುರಾಗಿದೆ.
ಟೆಂಡರ್ ಗಲಾಟೆಯೇ ಕಾರಣ
ತುಮಕೂರು ಜಿಲ್ಲೆಯ ಗುಬ್ಬಿ, ತಿಪಟೂರು ತಾಲೂಕುಗಳ ಗಣಿಬಾಧಿತ ಪ್ರದೇಶಗಳಿಗೆ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ 2023ರ ಸೆಪ್ಟೆಂಬರ್‌ನಲ್ಲಿ ಟೆಂಡರ್ ಕರೆಯಲಾಗಿತ್ತು. ರಾಯಸಂದ್ರ ರವಿಕುಮಾರ್ ಅವರಿಗೆ ಟೆಂಡರ್ ಆಗಿತ್ತು. ಕೊನೆಯ ಕ್ಷಣದಲ್ಲಿ ದಾಖಲೆ ಸಹಿತ ಟೆಂಡರ್ ಕರಾರು ಮಾಡಿಕೊಳ್ಳಲು ಹೋದಾಗ ನಿಮ್ಮ ಟೆಂಡರ್ ರದ್ದಾಗಿದೆ ಎಂದು ರಾಯಸಂದ್ರ ರವಿಕುಮಾರ್ ಅವರಿಗೆ ಹೇಳಲಾಗಿದೆ ಎಂಬುದು ಆಕ್ರೋಶಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕೆ ಅವರು ಕಾರ್ಯಪಾಲಕ ಎಂಜಿನಿಯರ್ ತಿಮ್ಮರಾಯಪ್ಪ ವಿರುದ್ಧ ತಡರಾತ್ರಿಯಲ್ಲಿ ಪಿಡಬ್ಲ್ಯುಡಿ ಇಲಾಖೆ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆಯನ್ನು ನಡೆಸಲಾಗಿತ್ತು.
ಈ ವೇಳೆ ಗಲಾಟೆ ನಡೆದಿದ್ದರಿಂದ ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ, ಜಾಗತಿಕ ಲಿಂಗಾಯತ ವೇದಿಕೆ ರಾಜ್ಯ ಸಂಚಾಲಕ ರಾಯಸಂದ್ರ ರವಿಕುಮಾರ್ ಮೇಲೆ ಕೆಎಸ್ಸಾರ್ಟಿಸಿ ನಿಗಮದ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಯಿತು. ಈ ಗಲಾಟೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರವಿಕುಮಾರ್ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಹೀಗಾಗಿ ಗುರುವಾರ ರಾತ್ರಿ ಜಿಲ್ಲಾಸ್ಪತ್ರೆಯಲ್ಲೇ ಪೊಲೀಸರು ರಾಯಸಂದ್ರ ರವಿಕುಮಾರ್ ಅವರ ಹೇಳಿಕೆ ದಾಖಲಿಸಿಕೊಂಡಿದ್ದರು. ಆದರೆ, ಶ್ರೀನಿವಾಸ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿರಲಿಲ್ಲ ಎನ್ನಲಾಗಿದೆ. ಇದರ ಜತೆಗೆ ರವಿಕುಮಾರ್ ಅವರ ಅಪಹರಣ ಯತ್ನವನ್ನೂ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈಗ ಈ ಕೇಸ್‌ನಲ್ಲಿ ಶ್ರೀನಿವಾಸ್‌ಗೆ ಬಂಧನ ಭೀತಿ ಎದುರಾಗಿದೆ.