ಬೆಂಗಳೂರು: ಗುಜರಾತ್‌ನಲ್ಲಿ ಬಿಜೆಪಿ ನಿರೀಕ್ಷೆಯನ್ನೂ ಮೀರಿ ಜಯಗಳಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯಲ್ಲೂ ಸಂಭ್ರಮ ಮನೆ ಮಾಡಿದೆ.
ರಾಜ್ಯ ಬಿಜೆಪಿ ಕಚೇರಿ ಬಳಸಿ ಕಾರ್ಯಕರ್ತರು ಸಂಭ್ರಮಿಸಿದರೆ, ಗುಜರಾತ್ ಚುನಾವಣೆ ಫಲಿತಾಂಶದ ಪ್ರಭಾವವು ಕರ್ನಾಟಕದ ಮೇಲೆ ಉಂಟಾಗುತ್ತದೆ ಎಂದು ಬಿಜೆಪಿ ಭಾವಿಸಿದೆ.
ಈ ಕುರಿತು ಕಚೇರಿ ಬಳಸಿ ಪ್ರತಿಕ್ರಿಯೆ ನೀಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಸಾಧಿಸಿದೆ. ಹಿಮಾಚಲ ಪ್ರದೇಶದಲ್ಲಿ ಕೂಡ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಗುಜರಾತ್ ಮಾದರಿಯಲ್ಲಿ ಕರ್ನಾಟಕದಲ್ಲಿ ಕೂಡ ಅಧಿಕಾರಕ್ಕೆ ತರುತ್ತೇವೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಗೆಲುವಿಗೆ ಕಾರಣರಾದ ಮತದಾರರಿಗೆ ಧನ್ಯವಾದಗಳು. ಗುಜರಾತಿನ ಶ್ರಮದ ಸಾರ್ಥಕತೆ ಇಲ್ಲಿ ಕೂಡ ಮಾಡುತ್ತೇವೆ ಎಂದರು.
ಕರ್ನಾಟಕದಲ್ಲಿ ಹಿರಿಯರಿಗೆ ಟಿಕೆಟ್ ಕೈ ತಪ್ಪುವ ವಿಚಾರದಲ್ಲಿ ಪ್ರತಿಕ್ರಿಯಿಸಿ, ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ಕೊಡಬೇಕು ಎಂದು ಪಕ್ಷ ನಿರ್ಧಾರ ಮಾಡಲಿದೆ. ರಾಜ್ಯದಲ್ಲಿ ಗೆಲ್ಲುವ ವಾತವಾರಣವಿದೆ. ನಾವು ಗೆದ್ದೆ ಗೆಲ್ಲುತ್ತೇವೆ ಎಂದರು.
ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿ, ಗುಜರಾತ್‌ನಲ್ಲಿ ನಮಗೆ ನಿರೀಕ್ಷಿತ ಯಶಸ್ಸು ಕಾಣಿಸುತ್ತಿಲ್ಲ. ಬಿಜೆಪಿ ಕೇಂದ್ರದಲ್ಲಿದೆ, ಅವರ ಪ್ರಭಾವ ಹೆಚ್ಚಿದೆ. ಓಟ್ ವಿಭಜನೆ ಆಗುತ್ತಿರುವುದರಿಂದ ನಮಗೆ ಹಿನ್ನಡೆ ಆಗುತ್ತಿದೆ. ಆಮ್ ಆದ್ಮಿ ಬಿಜೆಪಿಗೆ ಸಹಾಯ ಮಾಡುವ ರೀತಿಯಲ್ಲೇ ಕೆಲಸ ಮಾಡುತ್ತಿದೆ. ಅವಶ್ಯಕವಾದ ಪ್ರಚಾರಗಳಿಂದಾಗಿ ಕಾಂಗ್ರೆಸ್ ಓಟ್ ಕೀಳುತ್ತಿದೆ. ಅದರಿಂದಾಗಿ ಕಷ್ಟವಾಗುತ್ತಿದೆ ಎಂದರು.
ಗುಜರಾತ್, ಹಿಮಾಚಲ ಪ್ರದೇಶ ಫಲಿತಾಂಶ ರಾಜ್ಯದಲ್ಲಿ ಪ್ರಭಾವ ಬೀರುವುದಿಲ್ಲ ಎಂದ ಗುಂಡೂರಾವ್, 2013ರಲ್ಲಿ ಗುಜರಾತ್‌ನಲ್ಲಿ ಬಿಜೆಪಿ ಗೆದ್ದಿತ್ತು. ಆಗ ನಾವು ರಾಜ್ಯದಲ್ಲಿ ಗೆಲುವು ಸಾಧಿಸಿರಲಿಲ್ಲವೇ? ಆದ್ದರಿಂದ ಇಲ್ಲಿ ಪ್ರಭಾವ ಬೀರುವುದಿಲ್ಲ. ಅಲ್ಲಿಯ ಚುನಾವಣೆಯೇ ಬೇರೆ ಇಲ್ಲಿಯ ಚುನಾವಣೆಯೇ ಬೇರೆ.
ಆಮ್ ಆದ್ಮಿ ಪಕ್ಷ ನಮಗೆ ತೊಂದರೆಯಾಗುತ್ತಿದೆ. ಅವರು ಬಿಜೆಪಿಗೆ ಅನುಕೂಲ ಆಗುವ ರೀತಿಯಲ್ಲಿ ಪ್ರಚಾರ ಮಾಡುತ್ತಾರೆ. ಗೋವಾ ಸೇರಿ ಕೆಲವು ಕಡೆ ನಾವು ಅದನ್ನು ನೋಡಿದ್ದೇವೆ. ಗುಜರಾತ್‌ನಲ್ಲಿ ಕಾಂಗ್ರೆಸ್ ನಿರೀಕ್ಷೆ ಮಾಡಿದಷ್ಟು ಸೀಟ್ ಬರಲಿಲ್ಲ. ಗುಜರಾತ್ ಫಲಿತಾಂಶ ದೇಶದ ರಾಜಕಾರಣಕ್ಕೆ ದಿಕ್ಸೂಚಿ ಅಲ್ಲ ಎಂದರು.
ಇದನ್ನೂ ಓದಿ | Gujarat Election results | ಹೀನಾಯ ಸೋಲು: ಕಾಂಗ್ರೆಸ್‌ಗೆ ಅಧಿಕೃತ ವಿರೋಧ ಪಕ್ಷ ಸ್ಥಾನವೂ ಕೈತಪ್ಪುವ ಆತಂಕ