ಬೆಂಗಳೂರು: ಗುಜರಾತ್ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಹೊರಬರುತ್ತಿರುವ ಚುನಾವಣಾ ಫಲಿತಾಂಶಗಳು ಜಾತಿ ಮತ್ತು ಧರ್ಮ ಆಧಾರಿತ ಎಲ್ಲ ರಾಜಕೀಯ ಬುಡಮೇಲು ಮಾಡಿದೆ ಎಂದು ಮಾಜಿ ಸಿಎಂ ಹಾಗೂ ರಾಷ್ಟ್ರೀಯ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಈ ಎರಡೂ ರಾಜ್ಯಗಳ ಮತದಾರರು ಜಾತಿ ಮತ್ತು ಧರ್ಮ ಆಧಾರಿತ ರಾಜಕೀಯ ಲೆಕ್ಕಾಚಾರಗಳನ್ನು ಮೀರಿ ರಾಜ್ಯದ ಹಾಗೂ ದೇಶದ ಅಭಿವೃದ್ಧಿ ಮುಖ್ಯ ಎಂಬುದನ್ನು ಎತ್ತಿ ತೋರಿಸಿದ್ದಾರೆ. ಇದಕ್ಕಾಗಿ ನಾನು ಆ ರಾಜ್ಯಗಳ ಜನತೆಯನ್ನು ಹಾಗೂ ಮತದಾರರನ್ನು ಅಭಿನಂದಿಸುತ್ತೇನೆ. ಈ ದೇಶದ ಅಭಿವೃದ್ಧಿ ಭಾರತೀಯ ಜನತಾ ಪಕ್ಷದ ನೇತೃತ್ವದ ಸರ್ಕಾರದಿಂದ ಮಾತ್ರ ಸಾಧ್ಯ ಎಂಬುದು ಇದರಿಂದ ಸಾಬೀತಾಗಿದೆ.
ಗುಜರಾತ್ ಚುನಾವಣೆಯ ಫಲಿತಾಂಶವು ಒಂದು ಐತಿಹಾಸಿಕ ಅಭೂತಪೂರ್ವ ದಾಖಲೆಯನ್ನು ಸೃಷ್ಟಿಸಿದ್ದು, ಆ ರಾಜ್ಯದ ಇತಿಹಾಸದಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಗಳಿಸಿದ ಖ್ಯಾತಿಯನ್ನು ಭಾರತೀಯ ಜನತಾ ಪಕ್ಷಕ್ಕೆ ಲಭಿಸಿದೆ. ಯಾರು ಏನೇ ಮಾತನಾಡಿದರೂ, ರಾವಣ, ಭಸ್ಮಾಸುರ ಎಂಬೆಲ್ಲ ವಿಶ್ಲೇಷಣೆಗಳನ್ನು ಮಾಡಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವ್ಯಕ್ತಿತ್ವವನ್ನು ಹಾಳುಗೆಡವಬಹುದು ಎಂಬ ಭ್ರಮೆಯಲ್ಲಿದ್ದ ವಿರೋಧ ಪಕ್ಷಗಳಿಗೆ ದೇಶದ ಜನರು ತಕ್ಕ ಪಾಠ ಕಲಿಸಿದ್ದಾರೆ.
ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ ದೇಶವು ಸುಭದ್ರವಾಗಿದ್ದು, ಅಭಿವೃದ್ಧಿ ಹೊಂದಿದ ದೇಶವಾಗಿ ಹೊರಹೊಮ್ಮುತ್ತಿದ್ದು, ವಿಶ್ವಗುರುವಾಗುವತ್ತ ದಾಪುಗಾಲಿಡುತ್ತಿದೆ. ಕರ್ನಾಟಕ ರಾಜ್ಯದಲ್ಲಿಯೂ ಸಹ ಭಾರತೀಯ ಜನತಾ ಪಕ್ಷವು ಮುಂದಿನ ಚುನಾವಣೆಯಲ್ಲಿ 140ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಲಿದೆ. ವಿರೋಧ ಪಕ್ಷಗಳು ಇನ್ನಾದರೂ ಅಧಿಕಾರದ ಹಗಲು ಕನಸು ಕಾಣುವುದನ್ನು ಬಿಟ್ಟು ಹಾಗೂ ಮಾನ್ಯ ಪ್ರಧಾನಿಗಳ ಬಗ್ಗೆ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಿ ದೇಶದ ಅಭಿವೃದ್ಧಿ ಬಗ್ಗೆ ಹೆಚ್ಚು ಗಮನ ನೀಡಲು ಸಲಹೆ ನೀಡುತ್ತೇನೆ ಎಂದಿದ್ದಾರೆ.
ಶೋಭಾ ಕರಂದ್ಲಾಜೆ
ನವದೆಹಲಿ: ಗುಜರಾತಿನ ಚುನಾವಣೆ ದೇಶದಲ್ಲಿ ಒಂದು ದಾಖಲೆ ನಿರ್ಮಾಣ ಮಾಡುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿದ್ದಾರೆ.
ಮೊದಲ ಬಾರಿಗೆ ಗುಜರಾತ್ ನಲ್ಲಿ 150ಕ್ಕೂ ಹೆಚ್ಚು ಸ್ಥಾನ ಗೆದ್ದಿದ್ದೇವೆ. ಗುಜರಾತ್‌ನಲ್ಲಿ ಎಲ್ಲಿಯೇ ಹೋದರೂ ಕೇಳಿಬರೋದು ಒಂದೇ ಹೆಸರು ಅದು ಮೋದಿಜಿ ಅವರ ಹೆಸರು. ಬಿಜೆಪಿ ಮಾಡಿರುವ ಅಭಿವೃದ್ಧಿ ಕೆಲಸ, ಡಬಲ್ ಇಂಜಿನ್ ಸರ್ಕಾರದ ಕೆಲಸ ಈ ವಿಜಯಕ್ಕೆ ಕಾರಣ. ಈ ದಾಖಲೆಯ ಗೆಲವು ಭಾರತಕ್ಕೆ ಒಂದು ರೀತಿಯ ಮಾದರಿ.
ಈ ಹಿಂದೆ ಒಂದಿಷ್ಟು ಸಮುದಾಯದ ಸಮಸ್ಯೆ ಗುಜರಾತ್ ನಲ್ಲಿ ಇತ್ತು. ಆದರೆ ಈಗ ಅವೆಲ್ಲ ಸರಿಯಾಗಿ ಈ ರೀತಿಯಾದಂತಹ ಉತ್ತಮ ರಿಸಲ್ಟ್ ಬರೋಕೆ ಸಾಧ್ಯ ಆಗುತ್ತಾ ಇದೆ. ನಾನು ಗುಜರಾತ್ ಪ್ರವಾಸದಲ್ಲಿದ್ದಾಗ ನೋಡಿದ್ದೇನೆ, ಜನರು ಎಷ್ಟರ ಮಟ್ಟಿಗೆ ಬಿಜೆಪಿ ಮೇಲೆ ಪ್ರೀತಿ ಇಟ್ಟಿದೆ ಅಂತ. ಗುಜರಾತ್ ನಲ್ಲಿ ಆಮ್ ಆದ್ಮಿ ಪಾರ್ಟಿ ಎಂದರೇನೇ ಗೊತ್ತಿಲ್ಲ ಆಮ್ ಆದ್ಮಿ ಎಂದರೆ ಡೆಲ್ಲಿ ಪಕ್ಷ ಅಂತ ಎಂದುಕೊಂಡಿದ್ದಾರೆ.
ಗುಜರಾತ್ ನಲ್ಲಿ ಎಎಪಿ ಇಂದ ಗೆದ್ದೋರು, ಅವರ ಪ್ರಭಾವದಿಂದ ಗೆದ್ದಿದ್ದಾರೆ. ಎಎಪಿ ಅಂತ ಅಲ್ಲಿ ಯಾವುದೇ ಪಾರ್ಟಿ ಮೇಲೆ ಗೆದ್ದಿಲ್ಲ. ಕಾಂಗ್ರೆಸ್ ಸೋಲಿಗೆ ಅವರ ಹಿರಿಯ ನಾಯಕರೇ ಕಾರಣ. ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡಿದರು. ಭಾರತ್ ಜೋಡೋ ಯಾತ್ರೆ ಕಂಪ್ಲೀಟ್ ವಿಫಲವಾಗಿದೆ. ಗುಜರಾತ್ ನಲ್ಲಿ ನಾಯಕತ್ವದ ಕೊರತೆಯಿಂದಲೇ ಕಾಂಗ್ರೆಸ್ ಸೋತಿದೆ.ನಮ್ಮ ಮೋದಿ ಹೇಳಿದ್ದನ್ನು ಮಾಡಿದ್ದಾರೆ ಅಂತ ಅಲ್ಲಿ ಜನ ಹೇಳುತ್ತಾರೆ.
ಚುನಾವಣೆಗೆ ಮುನ್ನ ಏನು ವಿಶ್ವಾಸವನ್ನು ಕೊಟ್ಟಿದ್ದರೋ ಆ ರೀತಿ ನಡೆದುಕೊಂಡಿದ್ದಾರೆ. ಮೋದಿ ಅಂತ ಯಾಕೆ ಗುಜರಾತ್‌ನವರು ಬೆಲೆ ಕೊಡುತ್ತಾರೆ ಎಂದು ಅಲ್ಲಿ ಹೋಗಿ ನೋಡಿದರೆ ಗೊತ್ತಾಗುತ್ತದೆ ಎಂದಿದ್ದಾರೆ.
ಪ್ರಲ್ಹಾದ ಜೋಶಿ
ನವದೆಹಲಿ: ಗುಜರಾತ್ ಮತ್ತು ಪ್ರಧಾನಿ ಮೋದಿಯವರ ಕಾರ್ಯವನ್ನು ಜನ ಬೆಂಬಲಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ. ಗುಜರಾತ್ ಮಾಡೆಲ್ ಅನ್ನು ದೇಶದ ಮುಂದೆ ಇಟ್ಟಿದ್ದೇವೆ, ಅದನ್ನು ಜನ ಒಪ್ಪಿದ್ದಾರೆ. ದಾಖಲೆಯ ಫಲಿತಾಂಶವನ್ನು ಬಿಜೆಪಿ ಪಡೆದಿದೆ ಎಂದಿದ್ದಾರೆ.
ಡಿ.ವಿ. ಸದಾನಂದಗೌಡ
ಬೆಂಗಳೂರು: ರಾಜ್ಯದ ಆಡಳಿತ ಸೂತ್ರ ಹಾಗೂ ಅಭಿವೃದ್ಧಿ ಮಂತ್ರ ಈ ಗೆಲುವಿಗೆ ಸಹಕಾರಿಯಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.
ಗುಜರಾತ್ ನಲ್ಲಿ ಪೊಲಿಟಿಕಲ್ ಮ್ಯಾನೇಜ್ಮೆಂಟ್ ತುಂಬಾ ಸುಸೂತ್ರವಾಗಿ ಆಗಿದೆ. ಈ ಹಿಂದೆ ಬಿಜೆಪಿಯನ್ನು ಧ್ವೇಶಿಸಿದವರು ಸಹ ನಮ್ಮೊಂದಿಗೆ ಇವತ್ತು ಬಂದಿದ್ದಾರೆ. ಗುಜರಾತ್‌ನಲ್ಲಿ ಎಷ್ಟರ ಮಟ್ಟಿಗೆ ಎಫೆಕ್ಟ್ ಬೀರಿದೆ ಎಂದರೆ, ಕಾಂಗ್ರೆಸ್‌ನವರು ಅಲ್ಲಿ ಪ್ರಚಾರಕ್ಕೆ ಬರುವುದಕ್ಕೂ ಭಯ ಪಡುತ್ತಿದ್ದರು. ಬಿಜೆಪಿ ವಿರುದ್ಧ ಪ್ರಚಾರ ಮಾಡುವುದಕ್ಕೂ ಕಾಂಗ್ರೆಸ್ ಮುಂದೆ ಬಂದಿಲ್ಲ. ಆಗಲೇ ಅವರಿಗೆ ಸೋಲು ಖಾತ್ರಿಯಾಗಿತ್ತು ಎಂದರು.
ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗೆ ಹಿನ್ನಡೆ ವಿಚಾರದಲ್ಲಿ ಪ್ರತಿಕ್ರಿಯಿಸಿ, ಈ ವಿಚಾರ ನಾನು ಒಪ್ಪಿಕೊಳ್ಳುತ್ತೇನೆ. ದೊಡ್ಡ ರಾಜ್ಯಕ್ಕೂ ಸಣ್ಣ ರಾಜ್ಯಕ್ಕೂ ಹೋಲಿಕೆ ಮಾಡುವುದಕ್ಕೆ ಆಗುವುದಿಲ್ಲ. ಹಿಮಾಚಲ ಪ್ರದೇಶಕ್ಕೂ, ಗುಜರಾತ್‌ಗೂ ಸಾಕಷ್ಟು ವ್ಯತ್ಯಾಸ ಇದೆ ಎಂದರು.
ಕರ್ನಾಟಕದಲ್ಲೂ ಹಿರಿಯರಿಗೆ ಟಿಕೆಟ್ ನಿರಾಕರಣೆ ವಿಚಾರದಲ್ಲಿ ಪ್ರತಿಕ್ರಿಯಿಸಿ, ಈ ಕುರಿತು ಹೈಕಮಾಂಡ್ ತಿರ್ಮಾನ ತೆಗೆದುಕೊಳ್ಳುತ್ತದೆ. ಆಡಳಿತ ವಿರೋಧಿ ಅಲೆ ಸರಿಪಡಿಸಲು ಪ್ರಯತ್ನ ಮಾಡಿದೆ. ಅಲೆ ಪಕ್ಷದ ವಿರುದ್ಧ ಅಲ್ಲ, ವ್ಯಕ್ತಿಯ ವಿರುದ್ಧ ಇರುತ್ತದೆ. ಹೀಗಾಗಿ ಆ ನಾಯಕರಿಗೆ ಟಿಕೆಟ್ ನಿರಾಕರಿಸಲಾಗಿದೆ. ಗುಜರಾತ್ ಮಾದರಿಯನ್ನು ಕರ್ನಾಟಕದಲ್ಲಿ ಜಾರಿ ಮಾಡಬಹುದು. ಕರ್ನಾಟಕ ಚುನಾವಣೆ ಬಗ್ಗೆ ಹೈ ಕಮಾಂಡ್ ತೀರ್ಮಾನ ಮಾಡಲಿದೆ. ಪ್ರತಿ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ರಾಜ್ಯ ಚುನಾವಣೆ ಬೇರೆ, ರಾಷ್ಟ್ರ ಚುನಾವಣೆ ಬೇರೆ. ಆ ರಾಜ್ಯಗಳ ಎಲ್ಲವನ್ನೂ ಕರ್ನಾಟಕಕ್ಕೆ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದರು.
ಇದನ್ನೂ ಓದಿ | Gujarat election results | ಆಪ್ ಸಿಎಂ ಅಭ್ಯರ್ಥಿ ಈಶುದಾನ್ ಗಡ್ವಿಗೆ ಹಿನ್ನಡೆ, ಮೇವಾನಿಗೂ ಕಷ್ಟ: ಜಡೇಜಾ ಪತ್ನಿ ಇನಿಂಗ್ಸ್ ಜಯದತ್ತ!