ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಪಪ್ಪು ಎಂದು ಬಿಜೆಪಿಯವರೊ, ಬಿಜೆಪಿ ಬೆಂಬಲಿಗರೊ ಹೇಳುವುದು ಕೇಳಿರುತ್ತದೆ. ಆದರೆ ಇದೀಗ ಕಾಂಗ್ರೆಸ್‌ನಿಂದಲೇ ರಾಹುಲ್ ಗಾಂಧೀಯವರನ್ನು ಪಪ್ಪು ಎಂದು ಕರೆದು ಪೇಚಿಗೆ ಸಿಲುಕಿಕೊಂಡಿದೆ.
ನ್ಯಾಷನಲ್ ಹೆರಾಲ್ಡ್ ಕೇಸ್ ಸಂಬಂಧ ವಿಚಾರಣೆ ಎದುರಿಸಲು ಸೋಮವಾರ ( ಜೂ.13) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಇ.ಡಿ ಕಚೇರಿಗೆ ತೆರಳಿದರು. ಚುನಾವಣಾ ಪ್ರಚಾರದ ಹೊತ್ತಲ್ಲಿ ಮೆರವಣಿಗೆ ಹೋಗುವಂತೆ ರಾಹುಲ್ ಗಾಂಧಿ ಇ.ಡಿ ಕಚೇರಿಗೆ ಕಾಲ್ನಡಿಗೆಯಲ್ಲೇ ತೆರಳಿದರು. ಇದೇ ಹೋರಾಟದ ಭಾಗವಾಗಿ ಕರ್ನಾಟಕ ಸೇರಿ ಎಲ್ಲ ರಾಜ್ಯಗಳಲ್ಲೂ ಪ್ರತಿಭಟನೆ ನಡೆಯುತ್ತಿದೆ.
ಇದನ್ನೂ ಓದಿ | ಇನ್ನೂ ಮುಗಿದಿಲ್ಲ ರಾಹುಲ್ ಗಾಂಧಿ ವಿಚಾರಣೆ; ಮಧ್ಯೆ ತಾಯಿಯನ್ನು ಭೇಟಿಯಾದ ಕೈ ನಾಯಕ
ತಮ್ಮ ನಾಯಕರ ಫೋಟೊ, ವಿಡಿಯೋಗಳನ್ನು ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣ ವಿಭಾಗಗಳು ಹಂಚಿಕೊಳ್ಳುತ್ತಿವೆ. ಜತೆಗೆ ಬಿಜೆಪಿ ವಿರುದ್ಧ ಹಾಗೂ ಇಡಿ ದುರ್ಬಳಕೆ ವಿರುದ್ಧವೂ ಪೋಸ್ಟ್ ಹಂಚಿಕೊಳ್ಳಲಾಗುತ್ತಿದೆ. ಈ ನಡುವೆ ಗುಜರಾತ್ ಕಾಂಗ್ರೆಸ್ ಯುವ ಘಟಕ ಎಡವಟ್ಟು ಮಾಡಿಕೊಂಡಿದೆ. ತಮ್ಮ ನಾಯಕನನ್ನೇ ಪಪ್ಪು ಎಂದು ಕರೆದಿದೆ.
ಯಾವುದೋ ಒಂದು ಸ್ಥಳದಲ್ಲಿರುವ ಪೋಸ್ಟರ್‌ನಲ್ಲಿ “I Am Not Savarkar, I Am Rahul Gandhi” ಎಂಬ ಫೋಟೊವನ್ನು ಹಂಚಿಕೊಂಡಿರುವ ಗುಜರಾತ್ ಯುವ ಕಾಂಗ್ರೆಸ್ ಅಧಿಕೃತ ಟ್ವಿಟ್ಟರ್ ಖಾತೆ, ಜತೆಗೆ ಒಂದು ಕಮೆಂಟ್ ಹಾಕಿದೆ. “ಆಕ್ಚುವಲಿ ರಾಹುಲ್ ಗಾಂಧಿ ಎಂದಿಗೂ ಸಾವರ್ಕರ್ ಆಗಲು ಸಾಧ್ಯವಿಲ್ಲ. ಸಾವರ್ಕರ್‌ಜಿ ಎಲ್ಲಿ, ಕಾಮಿಡಿ ಕಿಂಗ್ ಪಪ್ಪು ಎಲ್ಲಿ..” ಎಂದು ಟ್ವೀಟ್ ಮಾಡಿದೆ. ಈ ಟ್ವೀಟ್ ಮಾಡಿದ್ದು ಕೆಲ ಸೆಕೆಂಡ್ ಯಾರಿಗೂ ತಿಳಿದಿಲ್ಲ. ಸುಮಾರು 50-60 ಸೆಕೆಂಡ್ ಹೀಗೆಯೇ ಇತ್ತು. ತಕ್ಷಣವೇ ಎಚ್ಚೆತ್ತುಕೊಂಡ ತಂಡ ಕೂಡಲೆ ಈ ಪೋಸ್ಟ್ ಡಿಲೀಟ್ ಮಾಡಿದೆ. ಆದರೆ ಡಿಲೀಟ್ ಮಾಡುವ ಮುನ್ನ ತೆಗೆಯಲಾದ ಸ್ಕ್ರೀನ್‌ಶಾಟ್ ಇಲ್ಲಿದೆ.
ಒಮ್ಮೆ ಯಡವಟ್ಟು ಪೋಸ್ಟ್ ಡಿಲೀಟ್ ಮಾಡಿದ ನಂತರ ಈಗ ಹೊಸ ಪೋಸ್ಟ್ ಮಾಡಿದೆ. ಅದೇ “I Am Not Savarkar, I Am Rahul Gandhi” ಫೋಟೊ ಜತೆಗೆ ʼನನ್ನ ಧೈರ್ಯವನ್ನು ತಿಳಿಸಲು ಇದು ಸಾಕು. ನನ್ನ ಹೆಸರು ಸಾವರ್ಕರ್ ಅಲ್ಲ, ರಾಹುಲ್ ಗಾಂಧಿ. IndiaWithRahulGandhi” ಎಂದು ಹೊಸ ಟ್ವೀಟ್ ಮಾಡಿದ್ದಾರೆ.
ಆದರೆ ಈ ಯಡವಟ್ಟು ಪೋಸ್ಟ್ ಮಾಡಿದ ಸೋಷಿಯಲ್ ಮೀಡಿಯಾ ತಂಡದ ಭೂಪತಿ ಯಾರು ಎನ್ನುವುದು ಮಾತ್ರ ಇನ್ನೂ ತಿಳಿದಿಲ್ಲ.