ಬೆಂಗಳೂರು: ಕುವೆಂಪು ಹಾಗೂ ಅವರು ಬರೆದ ನಾಡಗೀತೆಗೆ ಪಠ್ಯಪುಸ್ತಕದ ಹೆಸರಿನಲ್ಲಿ ನಡೆಯುತ್ತಿರುವ ಅಪಮಾನದ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ದಿನಗಳಿಂದ ಪಠ್ಯಪುಸ್ತಕ ವಿಚಾರದಲ್ಲಿ ಗೊಂದಲ ಇದೆ. ನಾಡಗೀತೆ ವಿಚಾರದಲ್ಲಿ ಹಲವು ರೀತಿ ಕೆಟ್ಟ ಬೆಳೆವಣಿಗೆಗಳು ಆಗುತ್ತಿವೆ. ನಾಡಗೀತೆಗೆ ಅವಮಾನ ಮಾಡಲಾಗುತ್ತಿದೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.
ಹಿಂದೆ ಸಾಮಾಜಿಕ ಜಾಲತಾಣದಲ್ಲಿ ನಾಡಗೀತೆ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ ವ್ಯಕ್ತಿಯನ್ನು ಸಮಿತಿ ಅಧ್ಯಕ್ಷನನ್ನಾಗಿ ಮಾಡಿರುವುದೇ ತಪ್ಪು. ಕುವೆಂಪು ಮತ್ತು ನಾಡಗೀತೆಗೆ ಅಪಮಾನ ಮಾಡಿದರೆ ಸುಮ್ಮನಿರುವುದಿಲ್ಲ ಎಂದು ಪರೋಕ್ಷವಾಗಿ ರೋಹಿತ್ ಚಕ್ರತೀರ್ಥ ಅವರಿಗೆ ಎಚ್ಚರಿಕೆ ನೀಡಿದರು.
ಯಾವುದೋ ಒಂದು ವಿಷಯಕ್ಕೆ ಟ್ವೀಟ್ ಮಾಡುವವರನ್ನು ಜೈಲಿಗೆ ಹಾಕ್ತೀರ. ಆದರೆ, ಕುವೆಂಪು ಅಂತಹ ಮಹಾನ್ ಕವಿಯ ಬಗ್ಗೆ ಅವಹೇಳನ ಮಾಡಿದವನನ್ನು ಸುಮ್ಮನೆ ಬಿಟ್ಟಿದ್ದೀರಿ. ಪಠ್ಯದಲ್ಲಿ ಕುವೆಂಪು ಬಗ್ಗೆ ಆಗಿರುವ ಅಪಮಾನವನ್ನು ಕೂಡಲೇ ಸರಿಪಡಿಸಬೇಕು. ಇಲ್ಲವಾದರೆ, ಕನ್ನಡಿಗರ ಶಕ್ತಿ ಏನೆಂಬುದನ್ನು ಸರ್ಕಾರ ನೋಡಬೇಕಾಗುತ್ತದೆ ಎಂದು ಕುಮಾರಸ್ವಾಮಿ ಎಚ್ಚರಿಕೆ ಕೊಟ್ಟರು.
ಇದನ್ನೂ ಓದಿ: ಪಠ್ಯ ಪರಿಷ್ಕರಣೆ ನಿರ್ಧರಿಸುವ ಅಧಿಕಾರ ಸರ್ಕಾರದ್ದು: ಸಚಿವ ಪೂಜಾರಿ