ಬೆಂಗಳೂರು: ಲೋಕಾಯುಕ್ತಕ್ಕೆ ಪರ್ಯಾಯವಾಗಿ ರಚಿಸಲಾಗಿದ್ದ ಎಸಿಬಿ ವ್ಯವಸ್ಥೆಯನ್ನು ರದ್ದುಗೊಳಿಸಿ ಹೈಕೋರ್ಟ್ ನೀಡಿರುವ ಆದೇಶವನ್ನು ಗೌರವಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು 2016ರ ಮಾರ್ಚ್ 14ರಂದು ಎಸಿಬಿ ರಚಿಸಿ ಆದೇಶ ಹೊರಡಿಸಿತ್ತು.
“ಸ್ವತಂತ್ರ ತನಿಖಾ ಸಂಸ್ಥೆಯಾದ ಎಸಿಬಿ ದೇಶದ ಅನೇಕ ರಾಜ್ಯಗಳಲ್ಲೂ ಇತ್ತು, ಅದರಂತೆ ನಮ್ಮ ರಾಜ್ಯದಲ್ಲೂ ಸ್ಥಾಪಿಸಲಾಗಿತ್ತು. ಇಂದು ಕರ್ನಾಟಕ ಉಚ್ಚ ನ್ಯಾಯಾಲಯವು ಎಸಿಬಿಯನ್ನು ರದ್ದುಪಡಿಸಿ ಆದೇಶ ನೀಡಿದೆ, ನ್ಯಾಯಾಲಯದ ಈ ಆದೇಶವನ್ನು ನಾನು ಗೌರವಿಸುತ್ತೇನೆʼʼ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸುವ ಸಲುವಾಗಿಯೇ ಎಸಿಬಿಯನ್ನು ರಚನೆ ಮಾಡಲಾಗಿತ್ತು ಎಂಬ ಆರೋಪವಿತ್ತು. ಆದರೆ ತಮ್ಮ ನಿರ್ಧಾರವನ್ನು ಸಿದ್ದರಾಮಯ್ಯ ಇದುವರೆಗೂ ಸಮರ್ಥಿಸಿಕೊಂಡೇ ಬಂದಿದ್ದರು.
ಹೈಕೋಟ್‌ನ ಈ ತೀರ್ಪಿನ ಕುರಿತು ಪ್ರತಿಕ್ರಿಯೆ ನೀಡಿರುವ ರಾಜ್ಯ ಬಿಜೆಪಿಯು , 2016ರಲ್ಲಿ ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದ ಎಸಿಬಿಯನ್ನು ರದ್ದುಗೊಳಿಸಿ, ಲೋಕಾಯುಕ್ತವನ್ನು ಮರುಸ್ಥಾಪಿಸಲು ಹೈಕೋರ್ಟ್ ನೀಡಿದ ಆದೇಶ ಸ್ವಾಗತಾರ್ಹ. ಎಸಿಬಿಯ ಈವರೆಗಿನ ಎಲ್ಲಾ ತನಿಖೆ & ವಿಚಾರಣೆಗಳನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡುವಂತೆ ಆದೇಶ ನೀಡಿದ್ದು, ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದ ಸರ್ಕಾರದ ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಬಲ ತುಂಬಿದೆ ಎಂದು ಹೇಳಿದೆ.
ಇದನ್ನೂ ಓದಿ| ಎಸಿಬಿ ರದ್ದುಗೊಳಿಸಿ ಹೈಕೋರ್ಟ್ ಮಹತ್ವದ ತೀರ್ಪು; ಎಲ್ಲ ಕೇಸ್ ಲೋಕಾಯುಕ್ತಕ್ಕೆ ಶಿಫ್ಟ್