Site icon Vistara News

Ram Mandir: ಫ್ಯಾಮಿಲಿ ಜತೆ ಅಯೋಧ್ಯೆಯತ್ತ ಎಚ್‌.ಡಿ ದೇವೇಗೌಡ; ಐತಿಹಾಸಿಕ ಕಾರ್ಯಕ್ರಮವೆಂದ ಮಾಜಿ ಪ್ರಧಾನಿ

HD Deve Gowda and family tour to ayodhya

ಬೆಂಗಳೂರು: ಅಯೋಧ್ಯೆ ರಾಮಜನ್ಮಭೂಮಿಯ (Ram Janmabhoomi) ರಾಮ ಮಂದಿರದಲ್ಲಿ (Ram Mandir) ಜನವರಿ 22ರಂದು ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ (HD Devegowda) ಅವರು ಕುಟುಂಬ ಸಮೇತ ತೆರಳಿದ್ದಾರೆ.

ಎಚ್.ಡಿ. ದೇವೇಗೌಡರು ಅವರ ಪತ್ನಿ ಚನ್ನಮ್ಮ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಭಾನುವಾರ ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ವಿಶೇಷ ವಿಮಾನದಲ್ಲಿ ಅಯೋಧ್ಯೆಗೆ ಪ್ರಯಾಣ ಬೆಳೆಸಿದರು.

ಇದೊಂದು ಐತಿಹಾಸಿಕ ಕಾರ್ಯಕ್ರಮ: ಎಚ್.ಡಿ. ದೇವೇಗೌಡ

ನಾನು ನನ್ನ ಪತ್ನಿ, ಪುತ್ರ ಕುಮಾರಸ್ವಾಮಿ, ಮೊಮ್ಮಗ ನಿಖಿಲ್ ಎಲ್ಲರೂ ಅಯೋಧ್ಯೆಗೆ ಹೋಗುತ್ತಿದ್ದೇವೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ ಎಂದು ಎಚ್.ಡಿ. ದೇವೇಗೌಡ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ನರೇಂದ್ರ ಮೋದಿ ಅವರು ಈ ಕಾರ್ಯಕ್ರಮವನ್ನು ನೆರವೇರಿಸುತ್ತಿದ್ದಾರೆ. ಇದು ಅವರ ಪೂರ್ವ ಜನ್ಮದ ಪುಣ್ಯವಾಗಿದೆ. ಈ ಸೇವೆ ಮಾಡುವ ಶಕ್ತಿ ಅವರಿಗೆ ಸಿಕ್ಕಿದೆ. ಅಟಲ್‌ ಬಿಹಾರಿ ವಾಜಪೇಯಿ ಕೂಡ 6 ವರ್ಷ ಪ್ರಧಾನಿ ಆಗಿದ್ದರು. ಆದರೆ, ರಾಮ ಮಂದಿರದ ಮೊದಲ ಕಲ್ಲು ಸ್ವೀಕಾರ ಮಾಡುವುದಕ್ಕೂ ಅಂದು ವಾಜಪೇಯಿ ಅವರಿಗೆ ಕಷ್ಟ ಆಗಿತ್ತು. ಈಗ ಮೋದಿ ಅವರಿಗೆ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಮಾಡುವ ಯೋಗ ಬಂದಿದೆ. ಇದು ಮೋದಿ ಅವರ ಪೂರ್ವ ಜನ್ಮದ ಪುಣ್ಯವಾಗಿದೆ ಎಂದು ಎಚ್.ಡಿ. ದೇವೇಗೌಡ ಹೇಳಿದರು.

ಮೋದಿಯಂತೆ ವ್ರತ ಮಾಡಲು ಆಗದು

ಪ್ರಧಾನಿ ನರೇಂದ್ರ ಮೋದಿ ಅವರು ಶಿವ, ವಿಷ್ಣುವಿಗೆ ಪ್ರಾರ್ಥನೆ ಮಾಡಿದ್ದಾರೆ. ಅವರಿಗೆ ಶಿವ, ವಿಷ್ಣು ನಡುವೆ ಯಾವುದೇ ವ್ಯತ್ಯಾಸ ಇಲ್ಲ. ಹಿಂದಿನ ಜನ್ಮದಲ್ಲಿ ದೊಡ್ಡ ದೈವ ಭಕ್ತರಾಗಿ ಜನ್ಮ ತಾಳಿದ್ದರು ಎಂದೆನಿಸುತ್ತದೆ. ಈ ಸಂದರ್ಭದಲ್ಲಿ ಆ ಯೋಗ ಮೋದಿ ಅವರಿಗೆ ಬಂದಿದೆ. ಅವರು ತಮ್ಮ ನಿತ್ಯದ ಕೆಲಸದ ನಡುವೆಯೂ 11 ದಿನದ ವ್ರತ ಮಾಡಿದ್ದಾರೆ. ಪುಣ್ಯ ಕ್ಷೇತ್ರಗಳ ಸ್ನಾನ ಮಾಡುತ್ತಿದ್ದಾರೆ. ಇದು ತುಂಬಾ ವಿಶೇಷ. ನಾನು ಸಹ ದೈವಭಕ್ತನಾಗಿದ್ದೇನೆ. ನಾನು ಒಂದು ದಿನ ವ್ರತ ಮಾಡಬಹುದು. ಆದರೆ, ಈಗ ಅವರಂತೆ ಮಾಡಲು ಆಗುವುದಿಲ್ಲ. ಈ ಕಾರ್ಯಕ್ರಮವು ವಿಶ್ವದಲ್ಲಿ ದಾಖಲೆಯಾಗಿದೆ ಎಂದು ಎಚ್.ಡಿ. ದೇವೇಗೌಡ ಹೇಳಿದರು.

ನಾನು ರಾಜಕೀಯ ಮಾತನಾಡಲ್ಲ: ದೇವೇಗೌಡ

ನಾನು ರಾಜಕೀಯವಾಗಿ ಮಾತನಾಡುವುದಿಲ್ಲ. ನಾನು ಮತಕ್ಕಾಗಿ ಪ್ರಚಾರ ಮಾಡೋಕೆ ಬಂದಿಲ್ಲ. ಪವಿತ್ರ ಕಾರ್ಯಕ್ರಮದಲ್ಲಿ ನಾವೆಲ್ಲ ಭಾಗವಹಿಸಬೇಕು. ನಮ್ಮಲ್ಲಿ ಶೃಂಗೇರಿ, ಪೇಜಾವರ ಮಠ ಸೇರಿ ನೂರಾರು ಮಠಗಳು ಇವೆ. ಆಧ್ಯಾತ್ಮಿಕ ಜಗತ್ತಿನಲ್ಲಿ ಎಲ್ಲ ದೇವರನ್ನು ನಾವು ನಂಬಿದ್ದೇವೆ. ಜನರು ವ್ಯತ್ಯಾಸ ತೋರಿಸುವುದಿಲ್ಲ. ಆಧ್ಯಾತ್ಮಿಕವಾಗಿ ಇದನ್ನು ನಂಬಿದ್ದಾರೆ. ನಡೆದುಕೊಂಡು ಬಂದಿದ್ದಾರೆ. ಜನರಿಗೆ ನಾನು ತಲೆ ಭಾಗಿ ನಮಸ್ಕಾರ ಮಾಡುತ್ತೇನೆ ಎಂದು ಎಚ್.ಡಿ. ದೇವೇಗೌಡ ಹೇಳಿದರು.

ಇದನ್ನೂ ಓದಿ: Ram Mandir: ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ನಾಳೆ ಸರ್ಕಾರಿ ರಜೆ ಇಲ್ಲ: ಸಿಎಂ ಸಿದ್ದರಾಮಯ್ಯ

ರಾಜಕೀಯ ಲಾಭ – ನಷ್ಟ ನೋಡಬಾರದು

ರಾಜಕೀಯದಲ್ಲಿ ನಾವು ಲಾಭ – ನಷ್ಟದ ಬಗ್ಗೆ ಯೋಚನೆ ಮಾಡಬಾರದು. ದ್ವೇಷ, ಅಸೂಯೆ ಮಾಡಬಾರದು. ಭಾರತದಲ್ಲಿ ನಾಳೆ ನಡೆಯುವ ಕಾರ್ಯಕ್ರಮಕ್ಕೆ ಕಾಶ್ಮೀರದಿಂದ ಹೂವು ಕಳಿಸಿದ್ದಾರೆ. ಪಶ್ಚಿಮ ಬಂಗಾಳದಿಂದ ಜನ ಹೂವಿನ ಮಾಲೆ ಕಟ್ಟಿ ಕಳಿಸಿದ್ದಾರೆ. ಅನೇಕ ರಾಜ್ಯಗಳಿಂದ ವಿಶೇಷವಾಗಿರುವುದನ್ನು ಕಳಿಸುತ್ತಿದ್ದಾರೆ. ಅಯೋಧ್ಯೆಯಲ್ಲಿ ಹಿಂದುಗಳು ಮಾಡೋದು ಬಿಡಿ. ಮುಸ್ಲಿಮರು ಹೂವಿನ ಮಳೆ ಸುರಿಸುತ್ತಿದ್ದಾರೆ. ಯಾರೂ ಪ್ರೇರಣೆ ಮಾಡಿ ಇದನ್ನು ಮಾಡಿ ಅಂತ ಮುಸ್ಲಿಮರಿಗೆ ಹೇಳಿಲ್ಲ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಎಚ್‌.ಡಿ. ದೇವೇಗೌಡ, ರಾಜ್ಯ ಸರ್ಕಾರದ ವಿರುದ್ಧ ಪರೋಕ್ಷ ಅಸಮಾಧಾನವನ್ನು ಹೊರಹಾಕಿದರು.

Exit mobile version