ಬೆಂಗಳೂರು: ಶೂನ್ಯ ಸಾಧನೆ ಭಯಕ್ಕೆ ಬಿಜೆಪಿ ಜತೆ ಜೆಡಿಎಸ್ ಮೈತ್ರಿ (BJP JDS Alliance) ಮಾಡಿಕೊಂಡಿದೆ ಎಂದು ಹೇಳಿಕೆ ನೀಡಿರುವ ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಹರಿಹಾಯ್ದ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ (HD Devegowda), ಮುಂದಿನ ಚುನಾವಣೆಯಲ್ಲಿ ಅವರಿಗೆ ಉತ್ತರ ಸಿಗುತ್ತದೆ ಎಂದು ಗುಡುಗಿದರು. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಬಗ್ಗೆ ಮಾತನಾಡಲು ಸಿದ್ದರಾಮಯ್ಯ ಯಾರು? ಎಂದು ಪ್ರಶ್ನೆ ಮಾಡಿದ್ದಾರೆ.
ಪಕ್ಷದ ರಾಜ್ಯ ಕಾವೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್.ಡಿ. ದೇವೇಗೌಡ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.
“ಮುಂದಿನ ಜನ್ಮವಿದ್ದರೆ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದು ದೇವೇಗೌಡರು ಹೇಳಿದ್ದರು. ಈಗ ಬಿಜೆಪಿ ಜತೆ ಸೇರಿಕೊಂಡಿದ್ದಾರೆ” ಎಂದು ಸಿಎಂ ಸಿದ್ದರಾಮಯ್ಯ ಅವರು ಈಚೆಗೆ ಮಂಡ್ಯದ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ಅವರ ಸರ್ಕಾರವನ್ನು ತೆಗೆದಿದ್ದು ಯಾರು? ಯಾವ ಕಾರಣಕ್ಕೆ ತೆಗೆದಿರಿ? ಎಂದು ಪ್ರಶ್ನೆ ಮಾಡಿದರು.
ಬಿಜೆಪಿ ಜತೆ ಜೆಡಿಎಸ್ ವಿಲೀನ ಅಂತ ಸಿದ್ದರಾಮಯ್ಯನವರೇ ತೀರ್ಮಾನ ಮಾಡಿಬಿಟ್ಟರು. ನರೇಂದ್ರ ಮೋದಿಗೆ ಪೈಪೋಟಿ ನೀಡುವ ಸಮರ್ಥ ನಾಯಕ ಸಿದ್ದರಾಮಯ್ಯ ಎಂದು ಮಂಡ್ಯದ ನಾಯಕರೊಬ್ಬರು ಹೇಳಿದ್ದರು. ಜಾತ್ಯತೀತ ಎಂಬ ಪದ ಬಳಕೆ ಮಾಡುವ ನೈತಿಕತೆ ಜೆಡಿಎಸ್‌ಗೆ ಇಲ್ಲ ಎಂದು ಕಾಂಗ್ರೆಸ್‌ನವರು ಹೇಳಿದ್ದರು. ಹಾಗಾದರೆ, ಮುಸ್ಲಿಮರಿಗೆ ನಾನು ಕೊಟ್ಟಿದ್ದ 4% ಮೀಸಲಾತಿಯನ್ನು ಇವರು ಮತ್ತೆ ಕೊಡಲಿ ನೋಡೋಣ ಎಂದು ಎಚ್.ಡಿ. ದೇವೇಗೌಡ ಸವಾಲು ಹಾಕಿದರು.
ಬಿಜೆಪಿ ಜತೆ ಎಚ್.ಡಿ. ಕುಮಾರಸ್ವಾಮಿ ಸರ್ಕಾರ ಮಾಡಿದಾಗ ಈ ಮಂಡ್ಯದ ನಾಯಕ ಸಾರಿಗೆ ಮಂತ್ರಿ ಆಗಿದ್ದರು. ಅದು ಮರೆತು ಹೋಯ್ತಾ ಇವರಿಗೆ? ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಕೆಂಡಾಮಂಡಲರಾದರು.
ಸಿದ್ದರಾಮಯ್ಯ ಆಡಳಿತ ವೈಖರಿಗೆ ಕಿಡಿ
ಸಿದ್ದರಾಮಯ್ಯ ಅವರೇ ನನ್ನ ಜತೆ ಹಣಕಾಸು ಮಂತ್ರಿ ಅಗಿದ್ದರು. ಒಂದೂವರೆ ವರ್ಷದಲ್ಲಿ ಒಂದು ನಿಗಮ ಮಂಡಳಿಗೂ ನಾನು ಅಧ್ಯಕ್ಷರನ್ನು ನೇಮಕ ಮಾಡಲಿಲ್ಲ. ಆಗ ನಮಗೆ 113 ಸ್ಥಾನ ಇತ್ತು. ಈಗ ನಿಮಗೆ 136 ಸ್ಥಾನ ಕೊಟ್ಟು ಜನ ತೀರ್ಪು ನೀಡಿದ್ದಾರೆ. 5 ಗ್ಯಾರಂಟಿ ಜನರಿಗೆ ತಲುಪಿದೆಯಾ ಇಲ್ಲವೇ ಎಂದು ನೋಡುವುದಕ್ಕೆ 5 ಮಾಜಿ ಮಂತ್ರಿಗಳನ್ನು ನೇಮಕ ಮಾಡಿದ್ದೀರಿ. ಜಿಲ್ಲಾ ಮಟ್ಟದಲ್ಲೂ ಸಮಿತಿ ನೇಮಕ ಮಾಡುತ್ತಿದ್ದೀರಿ. 136 ಶಾಸಕರು, 20-25 ಎಂಎಲ್ಸಿಗಳು, 95 ಜನ ಬೋರ್ಡ್ ಅಧ್ಯಕ್ಷರು, ಅವರಿಗೆ ಸಂಪುಟ ದರ್ಜೆ, ಸಲಹೆಗಾರರಿಗೂ ಸಂಪುಟ ದರ್ಜೆ. ಈಗ ಪಕ್ಷದ ಕಾರ್ಯಕರ್ತರು, ಮುಖಂಡರ ನೇಮಕ ಆಗಿದೆ. ಇದು ಇವರ ಆಡಳಿತದ ವೈಖರಿ ಎಂದು ನೇರವಾಗಿ ಸಿದ್ದರಾಮಯ್ಯ ಅವರನ್ನು ಎಚ್.ಡಿ. ದೇವೇಗೌಡರು ತರಾಟೆಗೆ ತೆಗೆದುಕೊಂಡರು.
ಕೇಂದ್ರದಿಂದ ನಮಗೆ ಹಣ ಬಂದಿಲ್ಲ ಅಂತಾರೆ ಇವರು. ಈ ದೇವೇಗೌಡ ಸಿಎಂ ಆಗಿದ್ದಾಗ ಕೇಂದ್ರದವರು ರೈತರ ಸಾಲಮನ್ನಾವನ್ನು ನಾವೇ ಮಾಡುತ್ತೇವೆ ಅಂದರು. ಕೊನೇ ಪಕ್ಷ ನಾವು ಬಡ್ಡಿ ಮನ್ನಾ ಮಾಡುತ್ತೇವೆ, ಒಪ್ಪಿಗೆ ಕೊಡಿ ಎಂದರೂ ಅವರು ಒಪ್ಪಿಗೆ ಕೊಡಲಿಲ್ಲ. ಅವತ್ತು ಸಿದ್ದರಾಮಯ್ಯ ನನ್ನ ಸಂಪುಟದಲ್ಲಿ ಹಣಕಾಸು ಮಂತ್ರಿ ಆಗಿದ್ದರು. ನಿಮಗೆ ಪ್ರಾಮಾಣಿಕತೆ ಇದ್ದರೆ ಅವತ್ತು ಏನ್ ನಡೀತು ಎಂಬುದನ್ನು ಹೇಳಿ. ಈಗ ಯಾಕೆ ಮೋದಿ ಬಗ್ಗೆ ಮಾತನಾಡುತ್ತೀರಿ? ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಸಿದ್ದರಾಮಯ್ಯ ಅವರನ್ನು ಖಾರವಾಗಿ ಪ್ರಶ್ನಿಸಿದರು.
ಮೋದಿ ಬಗ್ಗೆ ಮಾತನಾಡಲು ನೀವು ಯಾರು?
ಬೆಳಗ್ಗೆ ಎದ್ದರೆ ಮೋದಿ ಮೋದಿ ಅಂತಾರೆ. ಹಿಂದೆ ಮನಮೋಹನ್ ಸಿಂಗ್ ಅವರು ಏನು ಕೊಟ್ಟಿದ್ದರು? ಅದನ್ನು ಇವರು ಹೇಳಬೇಕು. ಅದಕ್ಕೂ ಮೊದಲು ವಾಜಪೇಯಿ ಅವರು ಏನು ಕೊಟ್ಡಿದ್ದಾರೆ ಎಂಬುದನ್ನು ಹೇಳಿ. ಸಿದ್ದರಾಮಯ್ಯನವರೇ ಈ ಬಗ್ಗೆ ಸತ್ಯ ಹೇಳಿ. ನರೇಂದ್ರ ಮೋದಿ ಅವರು ಈ ದೇಶದಲ್ಲಿರುವ ಸಮರ್ಥ ನಾಯಕ ಅನ್ನುವುದನ್ನು ಇಲ್ಲ ಎನ್ನುವುದಕ್ಕೆ ಇವರು ಯಾರು? WHO IS HE? ಮೋದಿ ಅವರನ್ನು ಇಡೀ ವಿಶ್ವ ಒಪ್ಪಿದೆ. ಮಾತಾಡೋಕೂ ಇತಿಮಿತಿ ಇರಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಕಿಡಿಕಾರಿದರು.
ಕಿರಿಯ ಅಧಿಕಾರಿ ನೇಮಕ ಪ್ರಸ್ತಾಪಿಸಿದ ಮಾಜಿ ಪ್ರಧಾನಿ
ನಾನು ಯಾವುದೇ ಕಾಮಗಾರಿಯ ಎಲ್‌ಒಸಿ ನೀಡಬೇಕಾದರೆ ಐದು ಪೈಸೆ ಪಡೆದಿದ್ದೇನೆ ಎಂದು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 5 ಪೈಸೆ ಪಡೆಯುವು ಎಲ್ಲಾದರೂ ಉಂಟೆ? ಅದು ಮುಖ್ಯಮಂತ್ರಿ ಸ್ಥಾನಕ್ಕೆ ಗೌರವ ತರುತ್ತಾ? ಅವರು ಒಬ್ಬರು ನೀರಾವರಿ ಕಾರ್ಯದರ್ಶಿಯನ್ನು ನೇಮಕ ಮಾಡಿದ್ದಾರೆ. ನಾನು ಫೊನ್ ಮಾಡಿದೆ ಫೋನ್ ರಿಸೀವ್ ಮಾಡಿಲ್ಲ. ನಾನು ಒಂದು ದೇಶದ ಸಣ್ಣ ರಾಜಕಾರಣಿ. ಪಾಪ ಅವರ ಕಾರ್ಯದರ್ಶಿ ಫೋನ್ ತೆಗೆದುಕೊಂಡಿಲ್ಲ. ಅವರು ಯಾರು ಅಂತ ಕೇಳಿದರೆ ಸಿದ್ದರಾಮಯ್ಯ ಅವರ ಸಂಬಂಧಿ ಅಂತ ಹೇಳೋದಿಲ್ಲ, ಅವರು ಸಿದ್ದರಾಮಯ್ಯ ಅವರ ಸಮಾಜದವರು. ಆ ಹಿರಿಯ ಹುದ್ದೆಗೆ ಅತ್ಯಂತ ಕಿರಿಯ ಅಧಿಕಾರಿಯನ್ನು ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ. ಏಕೆ? ಎಂದು ಎಚ್.ಡಿ. ದೇವೇಗೌಡ ಪ್ರಶ್ನೆ ಮಾಡಿದರು.
ಜನಪರ ಕಳಕಳಿಯ ಸರ್ಕಾರ ನನ್ನದು ಅಂತಾರೆ ಸಿದ್ದರಾಮಯ್ಯ. ಎಚ್.ಡಿ. ಕುಮಾರಸ್ವಾಮಿ ಅವರ ಪಂಚರತ್ನ, ಜಲಧಾರೆ ಕಾರ್ಯಕ್ರಮ ಮಾಡಿದ್ದರಲ್ಲವೇ? ಅವರಿಗೆ ಜನಪರ ಕಳಕಳಿ ಇರಲಿಲ್ಲವಾ? ಅವರ ಸರ್ಕಾರ ತೆಗೆದಿದ್ದು ಯಾರು ಹಾಗಾದರೆ? ನೀವು ಮಾಡಿದ ಎಲ್ಲ ಕಾರ್ಯಕ್ರಮ ಅನುಷ್ಠಾನ ಮಾಡಿದ್ದು ಕುಮಾರಸ್ವಾಮಿ. ಇಂಥ ನೀವು ಜೆಡಿಎಸ್ ಪಕ್ಷ ಉಳಿಯಲ್ಲ ಅಂತೀರಾ? ಎಂದು ಎಚ್.ಡಿ. ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ಈ ಮುದುಕಪ್ಪನಿಗೆ ಸ್ವಾಭಿಮಾನ ಇದೆ
ಮಂಡ್ಯದ ನಾಯಕರೊಬ್ಬರು ತುಂಬಾ ಎತ್ತರಕ್ಕೆ ಬೆಳೆದಿದ್ದಾರೆ. ತುಂಬಾ ತುಂಬಾ ಎತ್ತರಕ್ಕೆ ಬೆಳೆದಿದ್ದಾರೆ. ಆ ಮುದುಕಪ್ಪನನ್ನ ಕಟ್ಟಿಕೊಂಡು ಏನೇನೋ ಮಾಡೋಕೆ ಹೋಗ್ತಿದ್ದಾರೆ ಅಂತಾರೆ. ಈ ಮುದುಕಪ್ಪನಿಗೆ ಸ್ವಾಭಿಮಾನ ಇದೆ. ಈ ಪಕ್ಷ ಉಳಿಸೋದು ಕಾವೇರಿ ನೀರಿಗಾಗಿ, ನಿಮಗೆ ಮಾತಾಡೋ ಯೋಗ್ಯತೆ ಇಲ್ಲ. ಹೇಮಾವತಿ ಕಟ್ಟಿದವನು, ಹಾರಂಗಿ ಕಟ್ಟಿರೋನು ನಿಮ್ಮ ಮುಂದೆ ಇದ್ದೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಸಚಿವ ಚೆಲುವರಾಯಸ್ವಾಮಿ ವಿರುದ್ಧ ಗುಡುಗಿದರು.
ಇದನ್ನೂ ಓದಿ: Death Threat to Modi: ತಲ್ವಾರ್ ಹಿಡಿದು ಪ್ರಧಾನಿ ಮೋದಿ, ಯುಪಿ ಸಿಎಂ ಯೋಗಿಗೆ ಜೀವ ಬೆದರಿಕೆ ಒಡ್ಡಿದ್ದ ನಾಸಿರ್ ಸೆರೆ
ಈ ಸಂದರ್ಭದಲ್ಲಿ ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ, ಬೆಂಗಳೂರು ನಗರ ಘಟಕದ ಅಧ್ಯಕ್ಷರಾದ ಎಚ್.ಎಂ. ರಮೇಶ್ ಗೌಡ, ಮಾಜಿ ಶಾಸಕ ಡಾ.ಕೆ.ಅನ್ನದಾನಿ ಅವರು ಹಾಜರಿದ್ದರು.