ಬೆಂಗಳೂರು: ಪ್ರಸಕ್ತ ವಿಧಾನಸಭೆಯ ಕೊನೆಯ ಕಲಾಪದಲ್ಲಿ ಭಾಗವಹಿಸಬೇಕು ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನೀಡಿದ ಸಲಹೆಗೆ ಕೊನೆಗೂ ಒಪ್ಪಿಗೆ ನೀಡಿರುವ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ, ಭಾಗವಹಿಸುವುದಾಗಿ ತಿಳಿಸಿದ್ದಾರೆ.
ಈ ಬಾರಿಯ ಅಧಿವೇಶನದಲ್ಲಿ ಅನೇಕ ಶಾಸಕರು ಗೈರಾಗುತ್ತಿದ್ದಾರೆ. ಅಷ್ಟೆ ಅಲ್ಲದೆ ಸ್ವತಃ ಎಚ್.ಡಿ. ಕುಮಾರಸ್ವಾಮಿ, ಚುನಾವಣೆ ಕಾರಣಕ್ಕೆ ಆಗಮಿಸುತ್ತಿಲ್ಲ. ಪಂಚರತ್ನ ಯಾತ್ರೆಯಲ್ಲಿ ಭಾಗವಹಿಸುವ ಸಲುವಾಗಿ ಸದನಕ್ಕೆ ಆಗಮಿಸುವುದಿಲ್ಲ ಎಂದು ತಿಳಿಸಿದ್ದರು.
ಆದರೆ ಈ ಕುರಿತು ಮನವಿ ಮಾಡಿದ್ದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಇದು ಕೊನೆಯ ಅಧೀವೇಶನ. ಎಲ್ಲರೂ ಆಗಮಿಸಬೇಕು ಎಂದು ಮನವಿ ಮಾಡಿದ್ದರು. ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಕುಮಾರಸ್ವಾಮಿ, ಖುದ್ದು ಸಭಾಧ್ಯಕ್ಷರೇ ಕಲಾಪದಲ್ಲಿ ಭಾಗಿಯಾಗಬೇಕು ಎಂದು ಸಲಹೆ ನೀಡಿದ್ದಾರೆ. ಹೀಗಾಗಿ ಗುರುವಾರದಿಂದ ಕಲಾಪದಲ್ಲಿ ಭಾಗವಹಿಸುತ್ತೇನೆ ಎಂದು ತಿಳಿಸಿದ್ದಾರೆ.
ಫೆಬ್ರವರಿ 20ಕ್ಕೆ ಬರುತ್ತೀನಿ ಎಂದ ಸಿದ್ದರಾಮಯ್ಯ
ಚುನಾವಣೆ ತಯಾರಿಯಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಸಹ ಅಧಿವೇಶನಕ್ಕೆ ನಿರಂತರವಾಗಿ ಆಗಮಿಸುವುದು ಕಷ್ಟ ಎಂದು ತಿಳಿಸಿದ್ದಾರೆ. ಸದನದಲ್ಲಿ ಈ ಬಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮನವಿ ಮಾಡಿದರು. 21 ರಂದು 15 ನೇ ವಿಧಾನಸಭೆಯ ಎಲ್ಲ ಸದಸ್ಯರ ಸಾಮೂಹಿಕ ಭಾವಚಿತ್ರ ಕಾರ್ಯಕ್ರಮ ನಡೆಸಲಾಗುತ್ತದೆ, ಆಗಮಿಸಿ ಎಂದರು. ನಾನು 20 ರಂದು ಒಂದೇ ದಿನ ಬರುತ್ತೇನೆ, ಅವತ್ತೇ ಇಟ್ಟುಕೊಳ್ಳಿ ಎಂದು ಸಿದ್ದರಾಮಯ್ಯ ಆಗ್ರಹಿಸಿದರು. ನಾನು 20 ರಂದು ಮಾತ್ರ ಬರುತ್ತೇನೆ, ನಂತರ ನೀವು ಅನುಮತಿ ಕೊಟ್ಟರೆ ಕೊಡಿ, ಇಲ್ಲದಿದ್ದರೆ ನಿಮ್ಮ ಮರ್ಜಿ ಎಂದು ಸ್ಪೀಕರ್ ಗೆ ಹೇಳಿದರು. 20 ರಂದು ಅಮವಾಸ್ಯೆ ಇದೆ, ಅಂದು ಭಾವಚಿತ್ರ ಬೇಡ ಎಂದು ವಿಪಕ್ಷ ಸದಸ್ಯರು ಹೇಳಿದರು. ರೇವಣ್ಣ ಸಹವಾಸ ಜಾಸ್ತಿ ಮಾಡಿದರೆ ಹೀಗೆಯೇ ಆಗೋದು ಎಂದು ಸ್ಪೀಕರ್ ಹೇಳಿದರು.