Site icon Vistara News

HD Kumaraswamy : ನೀವೇನು ಮಾಡಿದೀರಿ? ರೈತ ಸಾಂತ್ವನ ಯಾತ್ರೆ ಲೇವಡಿ ಮಾಡಿದ ಸಿಎಂಗೆ HDK ತಿರುಗೇಟು

HD Kumaraswamy CM Siddaramaiah drought

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ (HD Kumaraswamy) ನಡುವಿನ ವಾಕ್ಸಮರ ಜೋರಾಗಿದೆ. ರೈತರ ಸಮಸ್ಯೆಗಳಿಗೆ ಸಾಂತ್ವನ ಹೇಳಲು ರೈತ ಸಾಂತ್ವನ ಯಾತ್ರೆ (Raitha Santvana yatre) ಕೈಗೊಳ್ಳುವುದಾಗಿ ಹೇಳಿದ ಕುಮಾರಸ್ವಾಮಿ ಮಾತನ್ನು ಸಿದ್ದರಾಮಯ್ಯ ʻಸ್ವಾಗತಿಸುತ್ತೇನೆʼ ಎಂದು ಹೇಳುವ ಮೂಲಕ ಲೇವಡಿ ಮಾಡಿದ್ದರು. ಅದಕ್ಕೆ ಈಗ ಕುಮಾರಸ್ವಾಮಿ ಪ್ರತಿ ದಾಳಿ ನಡೆಸಿ, ನೀವು ಅಧಿಕಾರದಲ್ಲಿದ್ದು ಏನು ಮಾಡಿದ್ದೀರಿ ಎಂದು ಕೇಳಿದ್ದಾರೆ.

ʻʻಪ್ರತಿಪಕ್ಷಗಳ ಕೆಲಸ ಗುರುತಿಸುವ ನಿಮ್ಮ ʼಹೃದಯ ವೈಶಾಲ್ಯತೆʼಗೆ ನಾನು ಆಭಾರಿ. ‘ರೈತ ಸಾಂತ್ವನ ಯಾತ್ರೆ’ಯನ್ನು ಸ್ವಾಗತ ಮಾಡಿರುವ ನಿಮ್ಮ ʼದೊಡ್ಡʼ ಗುಣವನ್ನು ಮನಸಾರೆ ಕೊಂಡಾಡುತ್ತೇನೆ. ಆದರೆ, ರಾಜ್ಯದ ಮುಖ್ಯಮಂತ್ರಿಯಾಗಿ ನೀವೇನು ಮಾಡಿದ್ದೀರಿʼʼ ಎಂದು ಪ್ರಶ್ನಿಸಿದ್ದಾರೆ.

ನಿಮ್ಮ ದೊಡ್ಡ ಗುಣವನ್ನು ಕೊಂಡಾಡುತ್ತೇನೆ

ಪ್ರತಿಪಕ್ಷಗಳ ಕೆಲಸ ಗುರುತಿಸುವ ನಿಮ್ಮ ʼಹೃದಯ ವೈಶಾಲ್ಯತೆʼಗೆ ನಾನು ಆಭಾರಿ. ರೈತಸಾಂತ್ವನಯಾತ್ರೆ ಯನ್ನು ಸ್ವಾಗತ ಮಾಡಿರುವ ನಿಮ್ಮ ʼದೊಡ್ಡʼ ಗುಣವನ್ನು ಮನಸಾರೆ ಕೊಂಡಾಡುತ್ತೇನೆ. ಜೆಡಿಎಸ್‌ ಸಲ್ಲಿಸಲಿರುವ ಬರ ಅಧ್ಯಯನ ವರದಿಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿದ್ದೀರಿ, ಬಹಳ ಸಂತೋಷ ಎಂದಿದ್ದಾರೆ ಎಚ್‌.ಡಿ ಕುಮಾರಸ್ವಾಮಿ.

ನಿಮ್ಮ ಅಪರಿಮಿತ ಅಸಡ್ಡೆಗಳನ್ನು ನೋಡಿದ್ದೇನೆ

‘ರೈತ ಸಾಂತ್ವನ ಯಾತ್ರೆ’ಯ ಅನುಭವವನ್ನು ಕೇಂದ್ರದ ಜತೆಗೂ ಹಂಚಿಕೊಳ್ಳುತ್ತೇವೆ. ನಿಮಗೆ ಸಂಶಯ ಬೇಡ. ರಾಜ್ಯದ ಅಗತ್ಯಗಳಿಗೆ ಕೇಂದ್ರ ಸರಕಾರ ಹೇಗೆ ಸ್ಪಂದಿಸುತ್ತಿದೆ? ಅದಕ್ಕೆ ನಿಮ್ಮ ನೇತೃತ್ವದ ಸರಕಾರ ಎಷ್ಟು ʼಗಂಭೀರ(!?)ʼ ಪ್ರಯತ್ನ ಮಾಡಿದೆ, ಮಾಡುತ್ತಿದೆ ಎನ್ನುವುದು ನನಗೂ ತಿಳಿದಿದೆ. ಬರದ ಜತೆಗೆ, ವಿದ್ಯುತ್‌ ಬಿಕ್ಕಟ್ಟು, ಕಾವೇರಿ ಸಂಕಷ್ಟದ ವಿಷಯದಲ್ಲಿ ನಿಮ್ಮ ಸರಕಾರದ ʼಅಪರಿಮಿತ ಅಸಡ್ಡೆʼಯನ್ನು ಅರಿಯದಷ್ಟು ಮುಗ್ಧನೇ ನಾನು? ಎಂದು ಎಚ್‌.ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಜನರ ಕಷ್ಟಕ್ಕಿಂತ ನಿಮಗೆ ಮೈತ್ರಿಯೇ ದೊಡ್ಡ ಸಂಕಷ್ಟ

ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರ ಜತೆ ಎಚ್.ಡಿ.ದೇವೇಗೌಡರು ಮತ್ತವರ ಕುಟುಂಬಕ್ಕೆ ಆತ್ಮೀಯತೆ ಇದೆ ಎಂಬುದರಲ್ಲಿ ಎರಡು ಮಾತಿಲ್ಲ. ಬಿಜೆಪಿ-ಜೆಡಿಎಸ್‌ ನಡುವೆ ಮೈತ್ರಿ ಏರ್ಪಟ್ಟಿದೆ ಎನ್ನುವುದೂ ನಿಜ. ರಾಜ್ಯದ ಹಿತಕ್ಕಾಗಿ ನಾವು ಪ್ರಧಾನಿಯವರ ಮುಂದೆಯೂ ದನಿ ಎತ್ತುತ್ತೇವೆ, ಅದು ನಮ್ಮ ಬದ್ಧತೆ. ಆದರೆ, ನಿಮಗೆ ರಾಜ್ಯದ ಬರ ಮತ್ತಿತರೆ ಸಂಕಷ್ಟಗಳಿಗಿಂತ ಈ ಮೈತ್ರಿಯೇ ಬಹುದೊಡ್ಡ ಸಂಕಷ್ಟವಾಗಿ ಪರಿಣಮಿಸಿದಂತೆ ತೋರುತ್ತಿದೆ! ಅಲ್ಲವೇ? ಎಂದಿದ್ದಾರೆ ಕುಮಾರಸ್ವಾಮಿ.

ಸರ್ಕಾರವಾಗಿ ನಿಮ್ಮ ಸಾಧನೆ ಏನು ಸ್ವಾಮಿ?

ಪ್ರತಿಪಕ್ಷಗಳಾಗಿ ನಮ್ಮ ಪ್ರಯತ್ನ ನಾವು ಮಾಡುತ್ತೇವೆ, ಸರಕಾರವಾಗಿ ನಿಮ್ಮ ಸಾಧನೆ ಏನು? ಎಷ್ಟು ರೈತರಿಗೆ ಬೆಳೆ ವಿಮೆ ಕೊಡಿಸಿದ್ದೀರಿ? ಸರಕಾರದ ವತಿಯಿಂದ ಎಷ್ಟು ಪರಿಹಾರ ನೀಡಿದ್ದೀರಿ? ಅದನ್ನು ಹೇಳಬೇಕೆ ಹೊರತು, ಮಿತ್ರರ ನಡುವೆ ಹುಳಿ ಹಿಂಡುವ ಉಡಾಳತನ ತಮಗ್ಯಾಕೆ? ಎನ್ನುವುದು ನನ್ನ ವಿನಮ್ರ ಪ್ರಶ್ನೆ.

ಬಿಡುಗಡೆ ಮಾಡಿದ ಹಣ ಯಾರಿಗೆ ಕೊಟ್ಟಿದ್ದೀರಿ?

236 ತಾಲೂಕುಗಳಲ್ಲಿ 216 ಬರಪೀಡಿತ ಎಂದು ಲೆಕ್ಕ ಕೊಟ್ಟಿದ್ದೀರಿ. 33,710 ಕೋಟಿ ರೂ. ಮೌಲ್ಯದ ಬೆಳೆಹಾನಿ ಆಗಿದ್ದು, ಕೇಂದ್ರಕ್ಕೆ 17,901 ಕೋಟಿ ರೂ. ಪರಿಹಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದ್ದೀರಿ, ಸರಿ. ಜತೆಗೆ; 343 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ ಎಂದೂ ತಿಳಿಸಿದ್ದೀರಿ. ಅದನ್ನು ಯಾರಿಗೆ ಹಂಚಿದ್ದೀರಿ?

ವಿಶ್ವವಿಖ್ಯಾತ ಬಜೆಟ್‌ ತಜ್ಞರಿಗೆ ಕನಿಷ್ಠ ಜ್ಞಾನವೂ ಇಲ್ಲವೇ?

ಈ ರಾಜ್ಯದಲ್ಲಿ ಅತಿ ಹೆಚ್ಚು ಬಜೆಟ್‌ ಮಂಡಿಸಿ ʼವಿಶ್ವವಿಖ್ಯಾತ ವಿತ್ತತಜ್ಞʼರಾಗಿ ಮೆರೆಯುತ್ತಿರುವವರು ನೀವು. ಅಧಿಕಾರಕ್ಕೆ ಬಂದೊಡನೆ ವಿಶೇಷವಾಗಿ ವಿತ್ತಖಾತೆಯನ್ನು ತಮ್ಮಲ್ಲಿಯೇ ‘ ಜೋಪಾನ ‘ ಮಾಡಿಕೊಳ್ಳುವ ನಿಮಗೆ, ಕೇಂದ್ರ ಸರಕಾರವು ಬರಕ್ಕೆ, ಪ್ರವಾಹಕ್ಕೆ ಯಾವ ರೀತಿ ಪರಿಹಾರ ಕೊಡುತ್ತದೆ ಎನ್ನುವ ಸಾಮಾನ್ಯ ತಿಳಿವಳಿಕೆಯೂ ಇಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ ಎಚ್.ಡಿ ಕುಮಾರಸ್ವಾಮಿ.

ಪ್ರಧಾನಿ ಜತೆ ಮಾತನಾಡಲು ನಿಮಗೆಲ್ಲಿದೆ ಪುರುಸೊತ್ತು?


ಹೋಗಲಿ, ನೀವು ಈ ರಾಜ್ಯದ ಮುಖ್ಯಮಂತ್ರಿ… ದೆಹಲಿಗೆ ಹೋಗಿ ಪ್ರಧಾನಿಗಳಿಗೆ ವಸ್ತುಸ್ಥಿತಿ ಮನವರಿಕೆ ಮಾಡಿಕೊಡಬೇಕಿತ್ತು. ಅದನ್ನೂ ಮಾಡಲಿಲ್ಲ, ಪ್ರತಿಷ್ಠೆ ನಿಮಗೆ. ಪ್ರಧಾನಿಗಳನ್ನು ಸದಾ ನಿಂದಿಸುತ್ತಾ ಕುಳಿತರೆ ಲಾಭವೇನು? ಇಲ್ಲಿ ವರ್ಗಾವಣೆ ದಂಧೆ, ಕಮೀಷನ್ ವಸೂಲಿ, ಆಪರೇಷನ್‌ ಹಸ್ತ, ಡಿನ್ನರ್‌-ಬ್ರೇಕ್‌ ಫಾಸ್ಟ್‌ ಮೀಟಿಂಗುಗಳಲ್ಲಿಯೇ ʼಭಾರೀʼ ಬ್ಯುಸಿ‌ ಆಗಿರುವ ನಿಮಗೆ ದೆಹಲಿಗೆ ಜನರ ಅಹವಾಲು ತೆಗೆದುಕೊಂಡು ಹೋಗಲು ಸಮಯವಾದರೂ ಎಲ್ಲಿದೆ?

ದೇವೇಗೌಡರಷ್ಟಾದರೂ ಹೋರಾಟ ಮಾಡಿದ್ದೀರಾ?

ನೀವು ಕರೆದೊಯ್ಯುವ ಸರ್ವಪಕ್ಷ ನಿಯೋಗದಲ್ಲಿ ಜೆಡಿಎಸ್ ಪಕ್ಷವೂ ಇರುತ್ತದೆ, ನಮ್ಮ ಮಿತ್ರಪಕ್ಷ ಬಿಜೆಪಿ ಕೂಡಾ ಇರುತ್ತದೆ. ಇನ್ನೊಬ್ಬರ ಧೈರ್ಯದ ಬಗ್ಗೆ ಮಾತನಾಡುವ ನೀವು, ನಿಮ್ಮ ಸ್ಥೈರ್ಯದ ಬಗ್ಗೆಯೂ ಕೊಂಚ ಹೇಳಬೇಕಲ್ಲವೇ? ಮುಖ್ಯಮಂತ್ರಿಯಾಗಿ ನೀವು ರಾಜ್ಯಕ್ಕೆ ಸಂಬಂಧಿಸಿ ಪ್ರಧಾನಿಗಳನ್ನು,‌ ಸಂಬಂಧಿಸಿದ ಕೇಂದ್ರ ಸಚಿವರನ್ನು ಎಷ್ಟು ಸಲ ಭೇಟಿ ಆಗಿದ್ದೀರಿ? ಎಷ್ಟು ಅರ್ಜಿ ಕೊಟ್ಟಿದ್ದೀರಿ? ರಾಜ್ಯದ ನೆಲ-ಜಲ, ಇನ್ನಿತರೆ ಸಂಕಷ್ಟದ ವೇಳೆ ಈ ಇಳಿವಯಸ್ಸಿನಲ್ಲಿಯೂ ಮಾನ್ಯ ದೇವೇಗೌಡರು ನಡೆಸುತ್ತಿರುವ ಹೋರಾಟ ನಿಮಗೆ ಕಾಣಿಸಿಲ್ಲವೇ? ಕಾವೇರಿ ಬಗ್ಗೆ ಅವರು ಸಂಸತ್ತಿನಲ್ಲಿ ಸಿಡಿದೆದ್ದಾಗ ನಿಮ್ಮ ಪಕ್ಷದ ಸದಸ್ಯರೆಲ್ಲರೂ ಎಲ್ಲಿ ಅವಿತು ಕುಳಿತಿದ್ದರು? ಎಂದು ಕೇಳಿದ್ದಾರೆ.

ಆಪರೇಷನ್‌ಗಾಗಿ ಹೊಂಚು ಹಾಕುವ ಗುಳ್ಳೆನರಿಗಳು!

ಡಿನ್ನರ್‌-ಬ್ರೇಕ್‌ ಫಾಸ್ಟ್ ಮೀಟಿಂಗ್‌‌ ಮಾಡಿಕೊಂಡು ಆಪರೇಷನ್‌ ಹಸ್ತದ ಬಗ್ಗೆಯೇ ನಿಮ್ಮ ಸಚಿವರ ಬಳಿ ಅಲವತ್ತುಕೊಳ್ಳುತ್ತಿದ್ದೀರಿ. ಪಂಚರಾಜ್ಯಗಳಿಗೆ ಹಣ ಹೊಂಚಲು ರಾಜ್ಯವನ್ನು ದೋಚುವುದು ಹೇಗೆಂದು ಗುಟ್ಟು ಗುಟ್ಟಾಗಿ ಪಾಠ ಮಾಡುತ್ತಿದ್ದೀರಿ. ಜೆಡಿಎಸ್‌, ಬಿಜೆಪಿ ಶಾಸಕರು ಹಾಗೂ ಸೋತ ಅಭ್ಯರ್ಥಿಗಳನ್ನು ಆಪರೇಷನ್‌ ಮಾಡಲು ಗುಳ್ಳೆನರಿಗಳಂತೆ ಅವರ ಮನೆಗಳ ಮುಂದೆ ಕತ್ತಲಾದ ಮೇಲೆ ಹೊಂಚು ಹಾಕಿ ಕೂರುತ್ತಿದ್ದೀರಿ ಎಂದು ಲೇವಡಿ ಮಾಡಿದ್ದಾರೆ ಕುಮಾರಸ್ವಾಮಿ.

ಇದನ್ನೂ ಓದಿ: Karnataka Politics : ಜೆಡಿಎಸ್‌ ಬರ ಅಧ್ಯಯನಕ್ಕೆ ಸಿಎಂ ಸ್ವಾಗತ; ಕೇಂದ್ರಕ್ಕೂ ಅನುಭವ ಹೇಳುವಂತೆ ವ್ಯಂಗ್ಯ

ನಿಮ್ಮ ಸರ್ಕಾರಕ್ಕೇ ಗ್ಯಾರಂಟಿ ಇಲ್ಲ, ಇನ್ನೆಂಥ ಗ್ಯಾರಂಟಿ ಸರ್ಕಾರ!

ಕುತ್ತಿಗೆಗೆ ಗ್ಯಾರಂಟಿ ಬೋರ್ಡ್‌ ತಕಲಾಕ್ಕೊಂಡು ಹಾದಿಬೀದಿಯಲ್ಲಿ ಓಡಾಡುತ್ತಿದ್ದೀರಿ. ಐದು ತಿಂಗಳಿಗೇ ಭದ್ರತೆಯ ಗ್ಯಾರಂಟಿ ಇಲ್ಲದೆ ಬಾಲಗ್ರಹಪೀಡಿತ ನಿಮ್ಮ ಸರಕಾರ ಭಿನ್ನಮತಪೀಡಿತವಾಗಿದೆ. ಕುರ್ಚಿ ಉಳಿಸಿಕೊಳ್ಳಲು ನೀವೂ ಹೆಣಗಾಡುತ್ತಿದ್ದೀರಿ. ಹೌದಲ್ಲವೇ? ಆನ್ಸರ್ ಮಾಡಿ ಸನ್ಮಾನ್ಯ ಸಿದ್ದರಾಮಯ್ಯನವರೇ? ಎಂದು ರೈತಸಾಂತ್ವನಯಾತ್ರೆ ಎಂದು ಹ್ಯಾಷ್‌ ಟ್ಯಾಗ್‌ನಡಿ ಟ್ವೀಟ್‌ ಮಾಡಲಾಗಿದೆ.

Exit mobile version