ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ (HD Kumaraswamy) ಅವರು ಮತ್ತೆ ವಿದೇಶಕ್ಕೆ ಹಾರಿದ್ದಾರೆ. ಕಳೆದ ಬಾರಿ ಅನಿತಾ ಕುಮಾರಸ್ವಾಮಿ (Anita Kumaraswamy), ನಿಖಿಲ್ ಕುಮಾರಸ್ವಾಮಿ ಸೇರಿದಂತೆ ತಮ್ಮ ಕುಟುಂಬದ ಜತೆಗೆ ಯುರೋಪ್ ಪ್ರವಾಸಕ್ಕೆ (Europe tour) ಹೋಗಿದ್ದ ಕುಮಾರಸ್ವಾಮಿ ಅವರು ಈಗ ಬೇರೊಂದು ಫ್ಯಾಮಿಲಿ ಜತೆಗೆ ಹೊರಟಿದ್ದಾರೆ. ಅದು ರಾಜಕೀಯ ಕುಟುಂಬ.
ಆಗಸ್ಟ್ 7ರ ಸೋಮವಾರ ರಾತ್ರಿ ಅವರು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (Bangalore international airport) ತಮ್ಮ ಆಪ್ತರ ಜತೆ ವಿದೇಶಕ್ಕೆ ಹಾರಿದ್ದಾರೆ. ಈ ಬಾರಿ ಅವರು ಹೋಗಿರುವುದು ಮಲೇಶಿಯಾದ ಕೌಲಾಲಂಪುರಕ್ಕೆ ಎಂದು ಹೇಳಲಾಗಿದೆ. ಈ ಬಾರಿ ಕುಮಾರಸ್ವಾಮಿ ಅವರ ರಾಜಕೀಯ ಪರಿವಾರ ವಿದೇಶಕ್ಕೆ ಹಾರಿದೆ. ಅವರ ಜತೆಗೆ ಮಾಜಿ ಸಚಿವ ಸಾರಾ ಮಹೇಶ್, ವಿಧಾನ ಪರಿಷತ್ ಸದಸ್ಯ ರಮೇಶ್ ಗೌಡ ಸೇರಿದಂತೆ ಒಂಬತ್ತು ಮಂದಿ ಇದ್ದರು. ಈ ಒಂಬತ್ತು ಮಂದಿ ಜತೆಗಿರುವ ಚಿತ್ರವೊಂದು ವೈರಲ್ ಆಗಿದೆ.
ಅವರು ಸೇರಿದಂತೆ ಒಂಬತ್ತು ಮಂದಿ ಸೋಮವಾರ ರಾತ್ರಿ 12 ಗಂಟೆಯ ವಿಮಾನದಲ್ಲಿ ಮಲೇಶಿಯಾದ ಕೌಲಾಲಂಪುರಕ್ಕೆ ತೆರಳಿರುವುದು ತಿಳಿದುಬಂದಿದೆ.
ಕೆಲವು ದಿನಗಳ ಹಿಂದಷ್ಟೇ ಕುಮಾರಸ್ವಾಮಿ ಅವರು ಯುರೋಪ್‌ಗೆ ಪ್ರವಾಸ ತೆರಳಿದ್ದರು. ಅವರು ಅತ್ತ ಹೋಗುತ್ತಿದ್ದಂತೆಯೇ ಡಿ.ಕೆ. ಶಿವಕುಮಾರ್ ಅವರು ಕುಮಾರಸ್ವಾಮಿ ಅವರ ಮೇಲೆ ಹರಿಹಾಯ್ದಿದ್ದರು. ಕುಮಾರಸ್ವಾಮಿ ಅವರು ಸಿಂಗಪುರಕ್ಕೆ ಹೋಗಿ ಅಲ್ಲಿಂದಲೇ ಸರ್ಕಾರ ಉರುಳಿಸಲು ಹುನ್ನಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಆದರೆ, ಕುಮಾರಸ್ವಾಮಿ ಕಳೆದ ಬಾರಿ ಹೋಗಿ ಯುರೋಪ್‌ಗೆ ಆಗಿತ್ತು.
ಕುಮಾರಸ್ವಾಮಿ ಅವರು ಕಳೆದ ಶುಕ್ರವಾರ ಮರಳಿಬಂದಿದ್ದು, ಬೆಂಗಳೂರು ವಿಮಾನ ನಿಲ್ದಾಣದಲ್ಲೇ ಒಂದು ಗಂಟೆ ಕಾಲ ಮಾಧ್ಯಮಗಳ ಜತೆ ಮಾತನಾಡಿದ್ದರು. ಪ್ರತಿಯೊಬ್ಬರು ಆಡಿರುವ ಮಾತಿಗೆ ಪ್ರತಿಕ್ರಿಯೆ ನೀಡಿದ್ದರು. ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಮೇಲೆ ಭಾರಿ ಟೀಕಾಪ್ರಹಾರ ಮಾಡಿದ್ದರು. ಇದಕ್ಕೆ ಇತರ ರಾಜಕಾರಣಿಗಳು ಪ್ರತಿಕ್ರಿಯೆ ಕೊಟ್ಟಾಗ ಮತ್ತೊಂದು ಸುತ್ತಿನ ಪತ್ರಿಕಾಗೋಷ್ಠಿ ನಡೆಸಿ ಇನ್ನೊಂದು ಸುತ್ತಿನ ದಾಳಿ ನಡೆಸಿದರು.
ಇಷ್ಟೆಲ್ಲ ಆದ ಬಳಿಕ ಒಮ್ಮಿಂದೊಮ್ಮೆಗೇ ಇದೀಗ ಮತ್ತೊಮ್ಮೆ ಅವರು ವಿದೇಶಕ್ಕೆ ಹಾರಿರುವುದು ಕುತೂಹಲ ಮೂಡಿಸಿದೆ. ಈ ಭೇಟಿಯ ಕಾರಣದ ಬಗ್ಗೆ ಅವರೇ ಬಿಡಿಸಿ ಹೇಳಬೇಕಾಗಿದೆ.
ಇದನ್ನೂ ಓದಿ: HD Kumaraswamy : ಎಲ್ಲರನ್ನೂ Brother ಅನ್ನುವ ಕುಮಾರಸ್ವಾಮಿಗೆ ಡಿಕೆಶಿಯಂಥ ತಮ್ಮ ಯಾವ ಜನ್ಮದಲ್ಲೂ ಬೇಡವಂತೆ!
ಸಿದ್ದರಾಮಯ್ಯ ಅವರ ಮೇಲೆ ಎಚ್.ಡಿ.ಕೆ. ವಾಗ್ದಾಳಿ
ವಿದೇಶಕ್ಕೆ ಹಾರಿದ ನಡುವೆಯೇ ಎಚ್.ಡಿ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರ ಮೇಲೆ ವಾಗ್ದಾಳಿ ಮುಂದುವರಿಸಿದ್ದಾರೆ. ಕೃಷಿ ಸಚಿವ ಚಲುವರಾಯ ಸ್ವಾಮಿ ಅವರ ವಿರುದ್ಧ ಕೃಷಿ ಅಧಿಕಾರಿಗಳು ರಾಜ್ಯಪಾಲರಿಗೆ ದೂರು ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು ಈ ಪತ್ರವೇ ನಕಲಿ ಎಂದು ಹೇಳಿದ್ದರು. ಇದಕ್ಕೆ ಆಕ್ರೋಶದಿಂದ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಮಾನಗೇಡಿ ಕೃತ್ಯಗಳನ್ನು ಸಮರ್ಥಿಸುವ ಲಜ್ಜೆಗೇಡಿ ಮುಖ್ಯಮಂತ್ರಿ ಎಂದಿದ್ದಾರೆ.
- ಮಂತ್ರಿಗಳ ಮಾನಗೇಡಿ ಕೃತ್ಯಗಳನ್ನೂ ಸಮರ್ಥನೆ ಮಾಡಿಕೊಳ್ಳುವ ಲಜ್ಜೆಗೇಡಿ ಮುಖ್ಯಮಂತ್ರಿ ಈ ರಾಜ್ಯಕ್ಕೆ ವಕ್ಕರಿಸಿದ್ದಾರೆ!! ಸಚಿವರ ಸುಲಿಗೆಯನ್ನೇ ಸಿಗ್ಗಿಲ್ಲದೆ ಸಮರ್ಥನೆ ಮಾಡಿಕೊಳ್ಳುವ ‘ಸಿದ್ದಕಲೆ’ ಅಸಹ್ಯ ಮತ್ತು ವಾಕರಿಕೆ ತರಿಸುತ್ತಿದೆ.
- ನಕಲಿ ಪತ್ರ ಎಂದಾದರೆ ರಾಜ್ಯಪಾಲರ ಕಾರ್ಯಾಲಯ ನಕಲಿ (!?) ಪತ್ರದ ಮೇರೆಗೆ ಕ್ರಮ ಜರುಗಿಸಿ ಎಂದು ಷರಾ ಬರೆದಿದೆಯೇ? ಸುಳ್ಳಿನ ಪತ್ರಕ್ಕೆ ಮಾನ್ಯ ರಾಜ್ಯಪಾಲರು ಸ್ಪಂದಿಸಿದ್ದಾರೆಯೇ? ರಾಜಧರ್ಮದ ಪ್ರವಚನಕಾರರೇ ರಾಜಭವನದ ಪಾವಿತ್ರ್ಯವನ್ನೇ ಶಂಕಿಸುವುದು ತರವೇ? ಸ್ವಯಂ ಘೋಷಿತ ನಕಲಿ ಸಂವಿಧಾನ ತಜ್ಞನಿಗೆ ಇದು ಭೂಷಣವಲ್ಲ.
- ಕಂಡೋರ ಭುಜದ ಮೇಲೆ ಬಂದೂಕಿಟ್ಟು ಇನ್ನೊಬ್ಬರ ರಾಜಕೀಯ ಜೀವನ ಎತ್ತಿಬಿಡುವ ನಿಮ್ಮಂಥ ‘ಎತ್ತುವಳಿ ಗಿರಾಕಿ’ಗೆ ನಕಲಿಪತ್ರಗಳ ಸೃಷ್ಟಿ ಬೆಣ್ಣೆ ಕಡಿದಷ್ಟೇ ಸಲೀಸು. ಮತ್ತೊಬ್ಬರ ಶ್ರಮದ ಬೆವರೇ ನಿಮ್ಮ ಸ್ವಾರ್ಥ ರಾಜಕಾರಣಕ್ಕೆ ಹವಿಸ್ಸು.
- ನಿಮ್ಮ ಸಚಿವರ ವಿರುದ್ಧ ನಿಮ್ಮ@INCKarnataka ಶಾಸಕರೇ ಬರೆದ ಪತ್ರವನ್ನೇ ನಕಲಿ ಎಂದು ಬಿಂಬಿಸಿದ ‘ನಕಲಿರಾಮ’ನ ಉಪ್ಪುಹುಳಿ ಖಾರದ ಬಗ್ಗೆ ನನಗೆ ಗೊತ್ತಿಲ್ಲದ್ದೇನಲ್ಲ. ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಉಗಿದು ಉಪ್ಪಾಕಿದ ಮೇಲೆ ಆ ನಕಲಿ ಪತ್ರ ‘ಅಸಲಿ’ಯಾದ ಕಥೆಯ ಹಕೀಕತ್ತು ಏನಿರಬಹುದು ಸಿಎಂ ಸಾಹೇಬರೇ?
- ನಿಮ್ಮ ರಾಜಕೀಯ ಬದುಕಿಗೆ ಬ್ಲ್ಯಾಕ್’ಮೇಲೇ ಬಂಡವಾಳ. ಗೃಹ ಸಚಿವರು, ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ‘ಅಪ್ಪಯ್ಯ ಮತ್ತು ಅತೀಂದ್ರನ ಆಟಾಟೋಪ’ ಕಂಡು ಹೌಹಾರಿದವರು ಯಾರು? ವರ್ಗಾವಣೆ ಪಟ್ಟಿಗೆ ಅಲ್ಲಿ ಬಿದ್ದ ಟಿಕ್ಕುಗಳ ಲೆಕ್ಕ ಹೇಳಬೇಕಾ ಟಿಕ್ ಟಿಕ್ ಸಿದ್ದರಾಮಯ್ಯ??