Site icon Vistara News

HD Kumaraswamy : ಸ್ಟ್ರೋಕ್ ಆದರೆ ಕ್ಷಣವೂ ತಡ ಮಾಡದೆ ಆಸ್ಪತ್ರೆಗೆ ಬನ್ನಿ: ಜನತೆಗೆ ಎಚ್‌.ಡಿ. ಕುಮಾರಸ್ವಾಮಿ ಕರೆ

Hd Kumaraswamy

ಬೆಂಗಳೂರು: ನಾಡಿನ ಪ್ರತಿ ಕುಟುಂಬಕ್ಕೆ ನಾನು ಮನವಿ ಮಾಡುತ್ತೇನೆ. ಸ್ಟ್ರೋಕ್ ಅಥವಾ ಸ್ಟ್ರೋಕ್‌ ಲಕ್ಷಣ (stroke symptoms) ಕಾಣಿಸಿಕೊಂಡಾಗ ಒಂದು ಕ್ಷಣವೂ ತಡ ಮಾಡಬೇಡಿ. ತಕ್ಷಣವೇ ಸ್ಟ್ರೋಕ್ ಚಿಕಿತ್ಸೆ (Stroke treatment) ನೀಡುವ ಆಸ್ಪತ್ರೆಗೆ ದಾಖಲು ಮಾಡಿ. ವೈದ್ಯರು ಹಣಕ್ಕಾಗಿ ಸೇವೆ ಮಾಡುತ್ತಾರೆ ಎನ್ನುವ ಮಾತಿಗೆ ಯೋಚನೆ ಮಾಡಬೇಡಿ. ಇಂಜೆಕ್ಷನ್ ಕೊಟ್ಟು ಮೆದುಳಿನ ಡ್ಯಾಮೇಜ್ (Brain damage) ಕ್ಲಿಯರ್ ಮಾಡಿದಾಗ ಖರ್ಚು ಆಗುತ್ತದೆ. ಆದರೆ, ಹಣಕ್ಕಿಂತ ಜೀವ ಮುಖ್ಯ ಎಂದು ಎಚ್.ಡಿ. ಕುಮಾರಸ್ವಾಮಿ (HD Kumaraswamy) ಹೇಳಿದರು.

ಅಪೋಲೊ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಎಚ್.‌ಡಿ. ಕುಮಾರಸ್ವಾಮಿ, ರಾಜ್ಯ ರಾಜಕೀಯದ (Karnataka Politics) ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆ ಮಾಡುತ್ತೇನೆ. ನಾಡಿನ ಪ್ರತಿ ಕುಟುಂಬಕ್ಕೆ ಈ ಜೀವನ್ಮರಣದ ಪ್ರಶ್ನೆಯಿದೆ. ಸ್ಟ್ರೋಕ್ ಆದಾಗ ಬೀ ಫಾಸ್ಟ್ ಅಂತ ವೈದ್ಯರು ಹೇಳಿದ್ದಾರೆ. ಪ್ರತಿ ಕುಟುಂಬವೂ ಈ‌ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಗೋಲ್ಡನ್ ಪೀರಿಯಡ್ ಕಳೆದುಕೊಳ್ಳಬಾರದು. ತಡ ಮಾಡಿದರೆ ಜೀವನ ಪರ್ಯಂತ ಮತ್ತೊಬ್ಬರ ಮೇಲೆ ಅವಲಂಬಿತರಾಗಬೇಕು. ನನಗೆ ಇದು 3ನೇ ಘಟನೆ ಆಗಿದೆ. ಆರೋಗ್ಯಕ್ಕೆ ಸಂಬಂಧ ಪಟ್ಟಂತೆ ನನಗೆ 64 ವರ್ಷದಲ್ಲಿ ಇದು 3ನೇ ಜನ್ಮವಾಗಿದೆ. ಭಗವಂತ ಹಾಗೂ ವೈದ್ಯರ ಶ್ರಮದಿಂದ ಬದುಕಿದ್ದೇನೆ ಎಂದು ತಿಳಿಸಿದರು.

ನಾನು ನಿರ್ಲಕ್ಷ್ಯ ಮಾಡಿದ್ದರೆ ಇಷ್ಟು ಸರಾಗವಾಗಿ‌ ಮಾತನಾಡಲು ಆಗುತ್ತಿರಲಿಲ್ಲ. ಬ್ರೈನ್‌ಗೆ ಆಗಿದ್ದ ಡ್ಯಾಮೇಜ್‌ ಅನ್ನು ನುರಿತ ವೈದ್ಯರು ಸರಿಪಡಿಸಿದರು. 3 – 4 ತಿಂಗಳ ಕಾಲ‌ ಬೆಡ್ ರಿಡನ್ ಆಗಬೇಕಿತ್ತು. ಆದರೆ, ಕೇವಲ 1 ಗಂಟೆಯಲ್ಲಿ ನನ್ನನ್ನು ವಾಪಸ್ ಹಿಂದಿನಂತೆ ಮಾಡಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ಈ‌ ಬಾರಿ ಸ್ವಲ್ಪ ಹೆಚ್ಚಿನ ಡ್ಯಾಮೇಜ್

2 ಬಾರಿ ವಾಲ್ವ್ ರಿಪ್ಲೇಸ್‌ಮೆಂಟ್ (Valve Replacement) ಆಗಿದೆ. ನಾನು 2ನೇ ಬಾರಿ ಸಿಎಂ ಆದಾಗ ವಾಲ್ಮೀಕಿ ಜಯಂತಿ (Valmiki Jayanti) ಆಗಿತ್ತು. ಮಾಧ್ಯಮದಲ್ಲಿ ಕತ್ತಲೆಗೆ ರಾಜ್ಯವನ್ನು ತಳ್ಳಿದ ಕುಮಾರಣ್ಣ ಅಂತ ಕಾರ್ಯಕ್ರಮ ಬರ್ತಿತ್ತು. ಆಗ ಅದನ್ನು ನೋಡಿ ಬೇಸರ ಆಗಿತ್ತು. ಆ ಸಂದರ್ಭದಲ್ಲಿ ದೇಹದ ಎಡ‌ಭಾಗ ಸ್ವಾಧೀನ ಕಳೆದುಕೊಂಡಿತ್ತು. ಆಗಲೂ ಕೇವಲ 1 ಗಂಟೆಯಲ್ಲಿ ಸರಿಹೋಗಿದ್ದೆ. ಈ‌ ಬಾರಿ ಸ್ವಲ್ಪ ಹೆಚ್ಚಿನ ಡ್ಯಾಮೇಜ್ ಆಗಿತ್ತು. ಆದರೂ ವೈದ್ಯರು ಸರಿಪಡಿಸಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಮಾಹಿತಿ ನೀಡಿದರು.

ಕಳೆದ 5 ದಿನಗಳಿಂದ ನಮ್ಮ ಸ್ನೇಹಿತ ವರ್ಗದವರು ಆತಂಕದಲ್ಲಿದ್ದರು. ಕೆಲವರು ಅನುಕಂಪ ಹಾಗೂ ಭಯದಲ್ಲಿದ್ದರು. ನನ್ನ ಹಿತೈಷಿಗಳಿಗೆ ನನ್ನ ಆರೋಗ್ಯದ ಕುರಿತು ಮಾಹಿತಿ ನೀಡಬೇಕಿತ್ತು. ನಾನು ಕಳೆದ 5 ದಿನದಲ್ಲಿ ಹೋರಾಟ ಮಾಡಿದ್ದೇನೆ. ನನಗೆ ಪುನರ್ಜನ್ಮ ಬಂದಿದೆ. ಅಪೋಲೋ ಆಸ್ಪತ್ರೆಯ ವೈದ್ಯರಿಗೆ, ಡಾ. ಸತೀಶ್ ಅವರಿಗೆ ಧನ್ಯವಾದ ಹೇಳುತ್ತೇನೆ. ನಾನು ಬಿಡದಿಯ ತೋಟದ ಮನೆಯಲ್ಲಿದ್ದಾಗ ಅಸ್ವಸ್ಥನಾದೆ. ಕೂಡಲೇ ಡಾ. ಯತೀಶ್ ದೂರವಾಣಿ ಕರೆ ಮಾಡಿದೆ. ಅವರು ಸ್ಪಂದಿಸಿದರು. ಕೂಡಲೇ ಆಸ್ಪತ್ರೆಗೆ ಬರುವಂತೆ ಹೇಳಿದರು. ಬಿಡದಿಯ ತೋಟದಿಂದ ಕೇವಲ 20 ನಿಮಿಷಗಳಲ್ಲಿ ಆಸ್ಪತ್ರೆ ತಲುಪಿದೆ ಎಂದು ನಡೆದ ಸಂಗತಿಯನ್ನು ಎಚ್.ಡಿ. ಕುಮಾರಸ್ವಾಮಿ ವಿವರಿಸಿದರು.

ನನ್ನ ಸೇವೆಯನ್ನು ಬಳಕೆ ಮಾಡಿಕೊಳ್ಳಿ

ಇವತ್ತು ವಿಶ್ವಕ್ಕೆ ಸರಿಸಾಟಿಯಾಗಿ ಚಂದ್ರಯಾನ, ಸೂರ್ಯಯಾನ ನಡೆದಿದೆ. ಅದೇ ರೀತಿಯಲ್ಲಿ ನಮ್ಮ ರಾಜ್ಯದಲ್ಲಿ ವಿಶ್ವಕ್ಕೆ ಸರಿಸಾಟಿಯಾಗಿರುವ ವೈದ್ಯರಿದ್ದಾರೆ. ರಾಜ್ಯದ ಜನರ ಶುಭ ಹಾರೈಕೆಯಿಂದ ನಾನು ಆರಾಮಾಗಿ ಹೊರಬಂದಿದ್ದೇನೆ. ನನ್ನನ್ನು ಹಿಂದಿನಂತೆಯೇ ಬಳಕೆ ಮಾಡಿಕೊಳ್ಳಿ. ಕಡಿಮೆ ಅವಧಿಯಲ್ಲೇ ನಾನು ನಿಮ್ಮ ಸೇವೆ ಮಾಡೋದನ್ನು ಬಳಕೆ ಮಾಡಿಕೊಳ್ಳಿ ಎಂದು ಎಚ್.ಡಿ. ಕುಮಾರಸ್ವಾಮಿ ನಾಗರಿಕರಿಗೆ ಕರೆ ನೀಡಿದರು.

ಇಷ್ಟು ದಿನ 18 ಗಂಟೆ ಕೆಲಸ ಮಾಡುತ್ತಿದ್ದೆ. ಇನ್ನು ಮುಂದೆಯೂ ಅದನ್ನು ಮುಂದುವರಿಸುವ ಕೆಲಸ ಮಾಡಲು ವೈದ್ಯರು ಹೇಳಿದ್ದಾರೆ. ಅವಶ್ಯಕ ದಿನಚರಿಯಲ್ಲಿ ಬದಲಾವಣೆ ಮಾಡಿಕೊಳ್ಳಿ ಎಂದು ವೈದ್ಯರು ಸೂಚನೆ ನೀಡಿದ್ದಾರೆ. ನನ್ನ ಆರೋಗ್ಯದ ಕಳಕಳಿ ಬಗ್ಗೆ ಕಾಳಜಿ ತೋರಿದ ರಾಜ್ಯದ ಜನತೆಗೆ ಧನ್ಯವಾದಗಳು ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ನಿಮ್ಮ ಲೈಫ್‌ ಸ್ಟೈಲ್, ಹ್ಯಾಬಿಟ್ ಬದಲಾಯಿಸಿಕೊಳ್ಳಿ: ನಿಖಿಲ್‌ ಕುಮಾರಸ್ವಾಮಿ

ಈಗಾಗಲೇ ನಮ್ಮ ತಂದೆ ಎಳೆಎಳೆಯಾಗಿ ವಿವರಿಸಿದ್ದಾರೆ. ವಿಶೇಷವಾಗಿ ಡಾ. ಸತೀಶ್ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ನಮ್ಮ ತಂದೆಯವರ ತಾಯ್ತಂದೆ ಮಾಡಿರೋ ಕೆಲಸಗಳು ಕೈ ಹಿಡಿದಿದೆ. ರಾಜ್ಯದ ಅನೇಕರು ತಂದೆಯವರ ಆರೋಗ್ಯ ಪರಿಸ್ಥಿತಿ ಕೇಳಲು ಕರೆ ಮಾಡಿದ್ದರು. ಯಾರೊಂದಿಗೂ ಮಾತನಾಡಲು ಆಗಿರಲಿಲ್ಲ. ಅವರಲ್ಲಿ ನಾನು ಒಬ್ಬ ಮಗನಾಗಿ ಕೇಳಿಕೊಳ್ಳುತ್ತೇನೆ. ನೀವು ನಮ್ಮ ಮುಂದೆ ಅನೇಕ ವರ್ಷಗಳ ಕಾಲ ನಮ್ಮೊಟ್ಟಿಗೆ ಇರಬೇಕು. ನಿಮ್ಮ ಲೈಫ್ ಸ್ಟೈಲ್, ಹ್ಯಾಬಿಟ್ ಬದಲಾಯಿಸಿಕೊಳ್ಳಿ. ನೀವು ಪಬ್ಲಿಕ್ ಫಿಗರ್ ಆಗಿರುವುದರಿಂದ ಆರೋಗ್ಯದ ಕಡೆ ಗಮನ ಹರಿಸಿ ಎಂದು ನಿಖಿಲ್ ಕುಮಾರಸ್ವಾಮಿ (Nikhil Kumaraswamy) ತಮ್ಮ ತಂದೆ ಎಚ್.ಡಿ. ಕುಮಾರಸ್ವಾಮಿ ಬಳಿ ಮನವಿ ಮಾಡಿದರು.

ಎಚ್‌.ಡಿ. ಕುಮಾರಸ್ವಾಮಿ ಅವರು ನೀಡಿದ ಸಲಹೆಗಳು ಏನು? ಇಲ್ಲಿದೆ ವಿಡಿಯೊ

ಇದನ್ನೂ ಓದಿ: Vilasbabu Alamelakar : ಮಾಜಿ ಶಾಸಕ ವಿಲಾಸಬಾಬು ಆಲಮೇಲಕರ ನಿಧನ

ಗೋಲ್ಡನ್‌ ಅವರ್‌ ಒಳಗೆ ಕರೆ ತನ್ನಿ

ಸ್ಟ್ರೋಕ್ ಕುರಿತು ಎಲ್ಲರೂ ಮಹತ್ವ ನೀಡಬೇಕು. ಕೈಯಲ್ಲಿ ಸ್ವಾಧೀನ ಕಡಿಮೆಯಾದರೆ, ಮಾತುಗಳು ತೊದಲಲು ಆರಂಭಿಸಿದರೆ, ದೇಹದ ಬ್ಯಾಲೆನ್ಸ್ ತಪ್ಪಿದರೆ ಕೂಡಲೇ ಆಸ್ಪತ್ರೆಗೆ ಬರಬೇಕು. ನಾವು ಇದಕ್ಕೆ ಚಿಕಿತ್ಸೆ ಕೊಡುತ್ತೇವೆ. ಸ್ಟ್ರೋಕ್ ಆಗಿ 3 ಗಂಟೆಗಳ ಕಾಲ ಗೋಲ್ಡನ್ ಅವರ್ ಆಗಿದೆ. ಆದಷ್ಟು ಬೇಗ ಬಂದರೆ ವೈದ್ಯರಿಗೆ ಹೆಚ್ಚು ಸಮಯ ಸಿಕ್ಕಂತಾಗುತ್ತದೆ ಎಂದು ಜಯನಗರ ಅಪೋಲೋ ಆಸ್ಪತ್ರೆಯ ಡಾ. ಸತೀಶ್‌ಚಂದ್ರ ಹೇಳಿದರು.

Exit mobile version