ಬೆಂಗಳೂರು: ಮುಂಬರುವ ಲೋಕಸಭೆ (Lok Sabha Election 2024), ಜಿಲ್ಲಾ, ತಾಲೂಕು ಪಂಚಾಯಿತಿ, ಬಿಬಿಎಂಪಿ ಚುನಾವಣೆ ಹಾಗೂ ಪಕ್ಷ ಸಂಘಟನೆಗೆ ಸಂಬಂಧಿಸಿದಂತೆ ಸೆ.10ರಂದು ಬೆಂಗಳೂರು ಅರಮನೆ ಮೈದಾನದಲ್ಲಿ (Bangalore Palace Ground) ಬೃಹತ್ ಜೆಡಿಎಸ್ ಸಮಾವೇಶವನ್ನು (JDS convention) ಆಯೋಜಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ತಿಳಿಸಿದ್ದಾರೆ.
ಅರಮನೆ ಮೈದಾನದ ನಲಪಾಡ್ ಪೆವಿಲಿಯನ್‌ನಲ್ಲಿ ಭಾನುವಾರ ಬೆಳಗ್ಗೆ 10.30ಕ್ಕೆ ಸಭೆ ಆರಂಭವಾಗಲಿದೆ. ಮಾಜಿ ಪ್ರಧಾನಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ (Former Prime Minister HD Deve Gowda), ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಸೇರಿದಂತೆ ಪಕ್ಷದ ಎಲ್ಲ ಶಾಸಕರು, ಮಾಜಿ ಶಾಸಕರು, ಹಿರಿಯ ಮುಖಂಡರು, ಸಾವಿರಾರು ಕಾರ್ಯಕರ್ತರು ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ
ಕರ್ನಾಟಕ ಸಂಕಷ್ಟದಲ್ಲಿದೆ. ತೀವ್ರ ಬರ-ನೆರೆ, ಅನಧಿಕೃತ ಲೋಡ್ ಶೆಡ್ಡಿಂಗ್, ಕಾವೇರಿ ಬಿಕ್ಕಟ್ಟಿನಿಂದ ತತ್ತರಿಸುತ್ತಿದೆ. ಅನ್ನ ಕೊಡುವ ರೈತರನ್ನು, ತೆರಿಗೆ ಕಟ್ಟುವ ನಾಗರಿಕರನ್ನು ಕಾಲ ಕಸದಂತೆ ಕಡೆಗಣಿಸಲಾಗಿದೆ. ಇಂಥ ಸಂದಿಗ್ಧ ಸಮಯದಲ್ಲಿ ನಾವು ಜನರ ಜತೆ ಬದ್ಧತೆಯಿಂದ ನಿಲ್ಲಬೇಕು. ಜನಪರ ನಿಲುವು, ಹೋರಾಟ ನಮ್ಮೆಲ್ಲರ ಹೊಣೆ, ನೈತಿಕ ಜವಾಬ್ದಾರಿಯಾಗಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಮುಕ್ತ ಚರ್ಚೆಗೆ ಆಹ್ವಾನ
ಸೋತಿದ್ದೇವೆ, ನಿಜ. ಸೋಲೇ ಕೊನೆಯಲ್ಲ. ಹೋರಾಟದ ಹಾದಿಯಲ್ಲಿ ನಾವೆಲ್ಲರೂ ಸ್ಥೈರ್ಯ, ಅರ್ಪಣಾ ಭಾವದಿಂದ ಹೆಜ್ಜೆ ಹಾಕಲೇಬೇಕು. ಈ ಹಿನ್ನೆಲೆಯಲ್ಲಿ ಎಚ್.ಡಿ.ದೇವೆಗೌಡರ ಮುಂದಾಳತ್ವದಲ್ಲಿ ಸಭೆ ನಡೆಸಲಾಗುತ್ತಿದೆ. ನಾನೂ ಸೇರಿ ಪ್ರತಿಯೊಬ್ಬರೂ ಪಕ್ಷದ ಕಟ್ಟಾಳುಗಳೇ ಎನ್ನುವುದನ್ನು ಯಾರೂ ಮರೆಯುವಂತಿಲ್ಲ. ಪಕ್ಷದ ಉಳಿವು, ಗೆಲುವಿಗಾಗಿ ಅವಿರತವಾಗಿ ಶ್ರಮಿಸೋಣ. ತಪ್ಪದೇ ಸಭೆಗೆ ಬನ್ನಿ, ಮುಕ್ತವಾಗಿ ಮಾತನಾಡೋಣ. ಮುಂದಿನ ಹೆಜ್ಜೆಗಳನ್ನು ದೃಢವಾಗಿ ಇಡೋಣ. “ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ..” ಎಂದು ಎಚ್.ಡಿ. ಕುಮಾರಸ್ವಾಮಿ ಕರೆ ನೀಡಿದ್ದಾರೆ.
ಪಕ್ಷವನ್ನು ಮರಳಿ ಕಟ್ಟಲು ಕರೆ
ನಿಮ್ಮೆಲ್ಲರ ಪ್ರೀತಿ, ಹಾರೈಕೆ, ದೈವದ ಕರುಣೆ, ತಂದೆ ತಾಯಿಯವರ ಆಶೀರ್ವಾದದಿಂದ ನನ್ನ ಆರೋಗ್ಯ ಅತ್ಯುತ್ತಮವಾಗಿ ಸುಧಾರಿಸಿದೆ. ಜೆಡಿಎಸ್ ಪಕ್ಷದ ಚಟುವಟಿಕೆಗಳಲ್ಲಿ ಮತ್ತೆ ಸಕ್ರಿಯವಾಗಿ ಭಾಗಿಯಾಗುತ್ತಿದ್ದೇನೆ. ನಾವೆಲ್ಲರೂ ಪಣತೊಟ್ಟು ಹೊರಡೋಣ, ಪಕ್ಷವನ್ನು ಚೈತನ್ಯಶೀಲವಾಗಿ ಮರಳಿ ಕಟ್ಟೋಣ ಎಂದು ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಇದನ್ನೂ ಓದಿ: BS Yediyurappa : ಕೊನೆಗೂ ಬಿಜೆಪಿ ರೈತ ಹೋರಾಟಕ್ಕೆ ಅನಿವಾರ್ಯವಾದ ಬಿಎಸ್‌ವೈ; ಬಿ.ಎಲ್. ಸಂತೋಷ್ ಪ್ಲ್ಯಾನ್ ಉಲ್ಟಾ!
ಮೈತ್ರಿ ಬಗ್ಗೆ ಪ್ರಸ್ತಾಪ?
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಿದೆ. ಜೆಡಿಎಸ್‌ಗೆ ನಾಲ್ಕು ಕ್ಷೇತ್ರವನ್ನು ಬಿಟ್ಟುಕೊಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಒಪ್ಪಿದ್ದಾರೆ ಎಂದು ಶುಕ್ರವಾರ (ಸೆಪ್ಟೆಂಬರ್ 08) ಬೆಳಗ್ಗೆಯಷ್ಟೇ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷದ ಪ್ರಮುಖ ಮುಖಂಡರೊಂದಿಗೆ ಚರ್ಚೆ ಮಾಡಿ ಅಭಿಪ್ರಾಯ ಸಂಗ್ರಹಿಸುವ ಚಿಂತನೆಯಲ್ಲಿ ಜೆಡಿಎಸ್ ಇದೆ ಎಂದು ಹೇಳಲಾಗುತ್ತಿದೆ.