Site icon Vistara News

HD Kumaraswamy : ಬಿಜೆಪಿ ಜತೆ ಮೈತ್ರಿ ಘೋಷಣೆಗೆ ಮುನ್ನ ದೇವರ ಮೊರೆ ಹೋದ ಎಚ್‌ಡಿ ಕುಮಾರಸ್ವಾಮಿ

HD Kumaraswamy pooje

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆ (Parliament Election 2024) ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ (BJP-JDS Alliance) ಮಾಡಿಕೊಳ್ಳುವುದು ಫೈನಲ್‌ ಆಗಿದೆ ಎಂಬ ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ (BS Yediyurappa) ಅವರ ಹೇಳಿಕೆಯಿಂದ ಹುಟ್ಟಿರುವ ಸಂಚಲನಕ್ಕೆ ಸಂಬಂಧಿಸಿ ಎಚ್.ಡಿ ಕುಮಾರಸ್ವಾಮಿ (HD Kumaraswamy) ಇನ್ನೂ ಮೌನ ಮುರಿದಿಲ್ಲ. ಆದರೆ, ಮೈತ್ರಿ ಘೋಷಣೆಗೆ ಮುನ್ನ ಅವರು ದೇವರ ಮೊರೆ (Kumaraswamy in Pooja) ಹೋಗಿದ್ದಾರೆ.

ಬೆಂಗಳೂರಿನ ಜೆಪಿ ನಗರದ ತಿರುಮಲಗಿರಿ ದೇವಾಲಯದಲ್ಲಿ ಶನಿವಾರ ಬೆಳಗ್ಗೆ ವಿಶೇಷ ಪೂಜೆ ನೆರವೇರಿಸಿದ ಅವರು ಸುಮಾರು ಎರಡು ಗಂಟೆಗಳ ಕಾಲ ಹೋಮ-ಹವನಗಳಲ್ಲಿ ಭಾಗಿಯಾದರು.

ಇದು ಮುಂದಿನ ರಾಜಕೀಯ ಭವಿಷ್ಯಕ್ಕೆ ಸಂಬಂಧಿಸಿ ಮಾಡಿರುವ ಪೂಜೆ ಎಂದು ಹೇಳಲಾಗುತ್ತಿದ್ದರೂ ಕುಮಾರಸ್ವಾಮಿ ಅವರು ಮಾತ್ರ ಇದು ಕುಟುಂಬದ ಆರೋಗ್ಯ ವೃದ್ಧಿಗೆ ಮಾಡಿಸಿರುವ ಪೂಜೆ ಎಂದಿದ್ದಾರೆ.

ಪೂಜೆ, ಹವನಗಳ ಬಳಿಕ ಮಾತನಾಡಿದ ಅವರು, ʻʻಹಿಂದೂ ಧರ್ಮದ ಸಂಪ್ರದಾಯದಂತೆ ಧಾರ್ಮಿಕ ಪೂಜೆ ನೆರವೇರಿಸಿದ್ದೇನೆ. ನಾನೀಗ ಚೇತರಿಸಿಕೊಂಡಿದ್ದೇನೆ. ನನ್ನ ಆರೋಗ್ಯ, ತಂದೆಯವರ ಆರೋಗ್ಯ ವೃದ್ಧಿ ಗಾಗಿ ಪೂಜೆ ಸಲ್ಲಿಸಿದ್ದೇನೆ. ನಮ್ಮ ಕುಟುಂಬದಲ್ಲಿ ಇತ್ತೀಚೆಗೆ ನಡೆದ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ದೇವರ ಮೊರೆ ಹೋಗಿದ್ದುʼʼ ಎಂದು ವಿವರಿಸಿದರು.

ಹೋಮದಲ್ಲಿ ನಿರತರಾದ ಎಚ್.ಡಿ ಕುಮಾರಸ್ವಾಮಿ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜತೆಗಿನ ಮೈತ್ರಿಯ ಬಗ್ಗೆ ಈಗಲೇ ಮಾತನಾಡುವುದಿಲ್ಲ. ಮೈತ್ರಿಗೆ ಇನ್ನೂ ಸಮಯ ಇದೆ ಎಂದು ಹೇಳಿದರು ಎಚ್‌.ಡಿ. ಕುಮಾರಸ್ವಾಮಿ.

ಸೆ. 10ರಂದು ಅರಮನೆ ಮೈದಾನದಲ್ಲಿ ಸಮಾವೇಶ

ಬಿಜೆಪಿ ಜತೆಗಿನ ಮೈತ್ರಿ ವಿಚಾರದಲ್ಲಿ ಪಕ್ಷದೊಳಗೆ ಈಗಾಗಲೇ ಹಲವು ಸುತ್ತಿನ ಮಾತುಕತೆಗಳು ನಡೆದು ಎಲ್ಲ ನಾಯಕರು ಇದಕ್ಕೆ ಒಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಸೆ. 6ರಂದು ಕುಮಾರಸ್ವಾಮಿ ಅವರ ನಿವಾಸದಲ್ಲಿ ದೇವೇಗೌಡರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಕ್ಷ ಬಲವರ್ಧನೆ ವಿಚಾರದ ಜತೆಗೆ ಬಿಜೆಪಿ ಜತೆಗಿನ ಮೈತ್ರಿಯ ಕುರಿತೂ ಚರ್ಚೆಯಾಗಿದೆ. ಈ ಹಿಂದೆ ಮೈತ್ರಿ ಮಾಡಿಕೊಂಡಾಗ ಅದು ನಾಯಕರದೇ ನಿರ್ಧಾರವಾಗಿದ್ದರೆ ಈ ಬಾರಿ ಬಿಜೆಪಿ ಶಾಸಕರು ಮತ್ತು ಹಿರಿಯ ನಾಯಕರಿಂದಲೇ ಈ ಅನಿವಾರ್ಯತೆಯನ್ನು ಬಿಂಬಿಸುವಂತೆ ಮಾಡಿ ಅದಕ್ಕೆ ನಾಯಕರು ಒಪ್ಪಿದ್ದಾರೆ ಎಂಬ ಸಂದೇಶವನ್ನು ದಾಟಿಸಲಾಗಿದೆ.

ಸೆ. 6ರ ಮಾತುಕತೆಯ ಸಂದರ್ಭದಲ್ಲಿ ಜೆಡಿಎಸ್‌ ಶಾಸಕರೇ ಬಿಜೆಪಿ ಜತೆ ಮೈತ್ರಿಗೆ ಒಲವು ತೋರಿದಾಗ ದೇವೇಗೌಡರು, ಇದೆಲ್ಲವನ್ನೂ ಪರಿಗಣಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿ ಪ್ರಕಟಿಸಿದ್ದರು. ಅದರ ಜತೆಗೆ ಸೆ. 10ರಂದು ಅರಮನೆ ಮೈದಾನದಲ್ಲಿ ಬೃಹತ್‌ ಸಮಾವೇಶ ನಡೆಸುವುದನ್ನು ಪ್ರಕಟಿಸಿದ್ದರು.

ಇದನ್ನೂ ಓದಿ: BJP-JDS Alliance : ಬಿಜೆಪಿ ಜತೆ ಕೈಜೋಡಿಸಲು ಜೆಡಿಎಸ್‌ ಶಾಸಕರಿಂದಲೇ ಒತ್ತಡ ಇತ್ತು ಎಂದ ದೇವೇಗೌಡ

ಈ ನಡುವೆ ಬಿಎಸ್‌ ಯಡಿಯೂರಪ್ಪ ಅವರು ತಾವೇ ಮುಂದಾಗಿ ಮೈತ್ರಿಯನ್ನು ಘೋಷಣೆ ಮಾಡಿದ್ದಾರೆ. ಹೀಗಾಗಿ ಸೆ. 10ರ ಸಮಾವೇಶದಲ್ಲಿ ಜೆಡಿಎಸ್‌ ನಾಯಕರು ಮೈತ್ರಿ ಬಗ್ಗೆ ಮಾತನಾಡುವ ಸಾಧ್ಯತೆಗಳಿವೆ.

ಈಗ ಸಿಗುತ್ತಿರುವ ಇನ್ನೊಂದು ಮಾಹಿತಿ ಪ್ರಕಾರ, ಮೈತ್ರಿ ಮತ್ತು ಸ್ಥಾನ ಹೊಂದಾಣಿಕೆಗೆ ಸಂಬಂಧಿಸಿ ಉಭಯ ಪಕ್ಷಗಳ ನಾಯಕರ ನಡುವೆ ಸೆ. 11 ಇಲ್ಲವೇ 13ರಂದು ಇನ್ನೊಂದು ಸುತ್ತಿನ ಮಾತುಕತೆ ನಡೆಯಲಿದ್ದು, ಬಳಿಕವೇ ಘೋಷಣೆಯಾಗುವ ಸಾಧ್ಯತೆಗಳಿವೆ. ಒಟ್ಟಾರೆಯಾಗಿ ಮೈತ್ರಿ ಮಾಡಿಕೊಳ್ಳುವುದು ನಿಜ. ಆದರೆ, ಅದರ ಸ್ಥಾನ ಹೊಂದಾಣಿಕೆ ಫೈನಲ್‌ ಆಗಿಲ್ಲ ಎನ್ನುವುದು ಸ್ಪಷ್ಟ.

Exit mobile version