ಬೆಂಗಳೂರು: ಕರ್ನಾಟಕದಲ್ಲಿ ಬ್ರಾಹ್ಮಣರನ್ನು ಸಿಎಂ ಮಾಡಲು ಆರ್‌ಎಸ್‌ಎಸ್ ಸಂಚು ರೂಪಿಸುತ್ತಿದೆ ಎಂಬ ಹೇಳಿಕೆಯಿಂದ ಆರಂಭವಾದ ವಿಚಾರವನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮತ್ತೊಂದು ಹಂತಕ್ಕೆ ಒಯ್ದಿದ್ದು, ರಾಷ್ಟ್ರೀಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿಚಾರವನ್ನೂ ಪ್ರಸ್ತಾಪಿಸಿದ್ದಾರೆ.
ರಾಜ್ಯ ಜೆಡಿಎಸ್ ಕಚೇರಿ ಜೆ.ಪಿ. ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ಪ್ರಲ್ಹಾದ್ ಜೋಷಿಯವರು ಸಿಎಂ ಆಗಬಾರದು ಎಂದಿಲ್ಲ. ಆದ್ರೆ ಅವರ ಡಿಎನ್‌ಎ ಹಿನ್ನೆಲೆ ಏನು ಅಂತ ನಾನು ಹೇಳ್ತಿದ್ದೇನೆ. ಜಗದೀಶ್ ಶೆಟ್ಟರ್ ರನ್ನ ಮೋದಿ ಕಾರ್ಯಕ್ರಮದ ವೇದಿಕೆ ಮೇಲೆ ಕೂರಿಸಿಲ್ಲ ಎಂದರು.
ಯಡಿಯೂರಪ್ಪ ಮೈತ್ರಿ ಸರ್ಕಾರವನ್ನು ತೆಗೆದು ಸಿಎಂ ಆದವರು. ಕಷ್ಟ ಪಟ್ಟು ಸಿಎಂ ಆದ ಬಿಎಸ್‌ವೈರನ್ನ ಯಾವ ರೀತಿ ನಡೆಸಿಕೊಂಡ್ರಿ. ಅವರನ್ನು ದೆಹಲಿ ಹೈಕಮಾಂಡ್, ಆರ್‌ಎಸ್‌ಎಸ್ ಯಾವ ರೀತಿ ನಡೆಸಿಕೊಂಡಿದ್ದಾರೆ ಗೊತ್ತಿದೆ ಎಂದರು.
ಬಿಎಸ್‌ವೈ ಸಹ ಏನೂ ಮಾತಾಡೋಕೆ ಆಗಲ್ಲ ಎಂದ ಎಚ್.ಡಿ. ಕುಮಾರಸ್ವಾಮಿ, ಇಡಿ, ಐಟಿ ಇಟ್ಕೊಂಡಿದ್ದಾರಲ್ಲ ಅದಕ್ಕೆ ಅವ್ರಿಗೂ ಮಾತನಾಡೋಕೆ ಆಗ್ತಿಲ್ಲ ಎಂದರು. ಬಿಎಸ್‌ವೈಗೂ ಇಡಿ ಕಾಟ ಇದ್ಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಅವ್ರು ಯಾರನ್ನ ಬಿಟ್ಟಿಲ್ಲ? ಲಿಂಗಾಯತ ಸಮಾಜ ಈ ಬಾರಿ ಬಿಜೆಪಿಯನ್ನು ನೆಲಕಚ್ಚಿಸುತ್ತಾರೆ. 2006 ರಲ್ಲಿ ಇದ್ದ ಬಿಜೆಪಿ ಬೇರೆ, ಈಗ ಇರುವ ಬಿಜೆಪಿ ಬೇರೆ. ಇವರನ್ನು ಯಾರೂ ಕೇಳಲ್ಲ, ಎಲ್ಲರೂ ಹೈಕಮಾಂಡ್ ಕೇಳಬೇಕು. ಇಲ್ಲಿ ಎಲ್ಲವನ್ನೂ ನಡೆಸುತ್ತಿರುವುದು ಸಂತೋಷಕರವಾಗಿ ಓಡಾಡುತ್ತಿದ್ದಾರಲ್ಲ ಅವ್ರು ಎಂದು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಟೀಕಿಸಿದರು.
ಪ್ರಲ್ಹಾದ ಜೋಶಿ ಕುರಿತ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹಾಗೂ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಿರುದ್ಧವೂ ಹರಿಹಾಯ್ದರು. ಬಿಎಂಎಸ್ ಟ್ರಸ್ಟ್ ಹಾಗೂ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ್ ವಿಚಾರ ಪ್ರಸ್ತಾಪಿಸಿದ ಎಚ್.ಡಿ. ಕುಮಾರಸ್ವಾಮಿ, ಬಿಎಂಎಸ್ ಟ್ರಸ್ಟಿ ಜೊತೆಗೆ ಸಚಿವ ಅಶ್ವಥ್ ನಾರಾಯಣ ಊಟ ಮಾಡುತ್ತಿರುವ ಫೋಟೊ ಬಿಡುಗಡೆ ಮಾಡಿದರು. ಸಾರ್ವಜನಿಕರ ಟ್ರಸ್ಟ್ ಅನ್ನು ಬೇಕಾದವರಿಗೆ ಕೊಟ್ಟಿದ್ದಾರೆ. ಇದಕ್ಕಿಂತ ಹೇಳಬೇಕಾ? ಮಹಾನುಭಾವ ಎಲ್ಲಿ ಕೂತು ಆಸ್ತಿ ಬರೆದುಕೊಟ್ಡಿದ್ದಾನೆ ನೋಡ್ಕೊಳಿ.
ಇದನ್ನೂ ಓದಿ: Brahmin CM: ಪ್ರಲ್ಹಾದ ಜೋಶಿ ಸಿಎಂ ಸ್ಥಾನಕ್ಕೆ ಅರ್ಹ ಅಭ್ಯರ್ಥಿ: ಜಾತಿ ಆಧಾರದಲ್ಲಿ ಟೀಕೆ ಸರಿಯಲ್ಲ ಎಂದ ಬ್ರಾಹ್ಮಣ ಮಹಾಸಭಾ
ಒಟ್ಟಿಗೆ ಕೂತು ಊಟ ಮಾಡಿದ್ರೆ ತಪ್ಪಿಲ್ಲ. ಯಾವ ಸಂದರ್ಭದಲ್ಲಿ ಮಾಡಿದ್ದಾರೆ ಅನ್ನೋದು ಮುಖ್ಯ.ಬಿಎಂಎಸ್ ಟ್ರಸ್ಟ್ ಅಪ್ರೂವಲ್‌ಗೆ ನನ್ನ ಬಳಿ ಬಂದಿದ್ರು. ಏನು ಆಫರ್ ಕೊಟ್ಟಿದ್ರೂ ಅನ್ನೋದು ಗೊತ್ತಿದೆ. ಬಡವರು ಓದುವ ಟ್ರಸ್ಟ್ ಅನ್ನು ಕೋಟ್ಯಾಂತರ ರೂಪಾಯಿಗೆ ಕೊಟ್ಟು ಲಾಭ ಮಾಡಿಕೊಂಡಿದ್ದಾರೆ ಎಂದರು. ಸಿ.ಟಿ. ರವಿ ಏನು ಪತಿವ್ರತೆನಾ? ಎಲ್ಲವನ್ನೂ ನೋಡಿದ್ದೇನೆ. ನನ್ನ ಬಗ್ಗೆ ಹೇಳಿಕೆ ಕೊಡುವಾಗ ಎಚ್ಚರಿಕೆ ಇರಲಿ ಎಂದರು.
ಈ ಬಾರಿ ಜನತಾದಳಕ್ಕೆ ಜನರು ಸಂಪೂರ್ಣ ಬಹುಮತ ನೀಡಲಿದ್ದಾರೆ ಎಂದ ಕುಮಾರಸ್ವಾಮಿ, ಬಸವಕಲ್ಯಾಣಕ್ಕೆ ಭಗವಂತ ಖೂಬಾ ಜೆಡಿಎಸ್‌ಗೆ ವಾಪಸ್ ಆಗುವ ವಿಚಾರದಲ್ಲಿ ಇನ್ನೂ ಚರ್ಚೆಯಾಗಿಲ್ಲ ಎಂದರು. ಹಾಸನದಲ್ಲಿ ಯಾವುದೇ ಗೊಂದಲವಿಲ್ಲ, ಎಲ್ಲವೂ ಸುಗಮವಾಗಿದೆ.
ಏಪ್ರಿಲ್‌ನಲ್ಲಿ ಚುನಾವಣೆ ಎಂಬ ಬಿಎಸ್‌ವೈ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾವ ಅರ್ಥದಲ್ಲಿ ಹೇಳಿದ್ರೋ ಗೊತ್ತಿಲ್ಲ. ಏಪ್ರಿಲ್‌ನಲ್ಲಿ ಪರೀಕ್ಷೆ ನಡೆಯುತ್ತಿರುತ್ತದೆ. ಮೇನಲ್ಲಿ ಚುನಾವಣೆ ಆಗುತ್ತೆ ಎಂದು ಹೇಳಿದರು.