Site icon Vistara News

HD Kumaraswamy: ಛದ್ಮವೇಷಧಾರಿ ಸಿದ್ದರಾಮಯ್ಯ, ನೀವು ಯಾವ ಸೀಮೆ ಜಾತ್ಯತೀತ?: HDK ಫುಲ್‌ ಗರಂ

Siddaramaiah HD Kumaraswamy

ಬೆಂಗಳೂರು : ಬಿಜೆಪಿ-ಜೆಡಿಎಸ್‌ ಮೈತ್ರಿ (BJP-JDS Alliance) ಮಾಡಿಕೊಂಡ ಬೆನ್ನಿಗೇ ತಮ್ಮ ಜಾತ್ಯತೀತತೆಯನ್ನು (Secular ethos) ಪ್ರಶ್ನೆ ಮಾಡಿದ ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಖಡಕ್ಕಾಗಿ ಉತ್ತರ ಕೊಟ್ಟಿದ್ದಾರೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ನಾಯಕ ಎಚ್‌.ಡಿ ಕುಮಾರಸ್ವಾಮಿ (HD Kumaraswamy). ಛದ್ಮವೇಷಧಾರಿ ಎಂಬ ಹ್ಯಾಷ್‌ ಟ್ಯಾಗ್‌ ಬಳಸಿ ಮಾಡಿರುವ ಟ್ವೀಟ್‌ಗಳಲ್ಲಿ ಸಿದ್ದರಾಮಯ್ಯ ಅವರನ್ನು ಬಗೆ ಬಗೆಯಾಗಿ ಬಗೆದು ಹಾಕಿದ್ದಾರೆ.

ಸಿದ್ದರಾಮಯ್ಯ ಅವರು ಮಾತನಾಡುವುದೆಲ್ಲ ಸುಳ್ಳು, ಧರ್ಮಕ್ಕೊಂದು, ಜಾತಿಗೊಂದು ಸಮಾವೇಶ ಮಾಡುವ ಸಿದ್ದರಾರಮಯ್ಯ ಅದೆಂಥ ಜಾತ್ಯತೀತ ಎಂದು ಕೇಳಿದ್ದಾರೆ ಕುಮಾರಸ್ವಾಮಿ. ಜೆಡಿಎಸ್‌ನ್ನು ಬಿ ಟೀಮ್‌ ಎಂದು ಕರೆದಿದ್ದನ್ನು, ಅದೇ ಪಕ್ಷದ ನಾಯಕರ ಮನೆ ಮುಂದೆ ಹೋಗಿ ಅಂಗಲಾಚಿದ್ದನ್ನು ನೆನಪಿಸಿಕೊಂಡು ತಿರುಗೇಟು ನೀಡಿದ್ದಾರೆ.

ಅವರ ಟ್ವೀಟರ್‌ಗಳ ಸುರಿಮಳೆಯ ಖಡಕ್‌ ಮಾತುಗಳು ಇಲ್ಲಿವೆ.

1. ಅವರ ಬೆನ್ನು ಅವರಿಗೆ ಕಾಣುವುದಿಲ್ಲ. ನಾಲಿಗೆಗೂ ಮೂಳೆ ಇರುವುದಿಲ್ಲ. ಸಿಎಂ ಸೀಟಿನಲ್ಲಿ ಕೂತರೂ ‘ಸಿದ್ದಸುಳ್ಳು’ಗಳಿಗೆ ಕೊರತೆಯೇನೂ ಇಲ್ಲ.

2. ‘ ಜಾತ್ಯತೀತ ‘ ಎನ್ನುವ ಟ್ಯಾಗ್ ಲೈನ್ ಇಟ್ಟುಕೊಂಡು ಜಾತಿ ಸಭೆಗಳನ್ನು ಮಾಡಿ ಕುಕ್ಕರ್, ಇಸ್ತ್ರೀ ಪೆಟ್ಟಿಗೆ ಹಂಚುವುದು ಜಾತ್ಯತೀತವೇ? ಅಹಿಂದ ಎಂದು ಹೇಳಿಕೊಂಡು ಧರ್ಮಕ್ಕೊಂದು ಸಮಾವೇಶ, ಜಾತಿಗೊಂದು ಸಭೆ ನಡೆಸುವುದು ಜಾತ್ಯತೀತವೇ? ಸ್ವಲ್ಪ ಹೇಳುವಿರಾ ಸಿದ್ದರಾಮಯ್ಯನವರೇ?

HDK-Siddaramaiah

ಸಿದ್ದರಾಮಯ್ಯ ಒಬ್ಬ ಢೋಂಗಿ ಸಮಾಜವಾದಿ

3. ಕೋಮುವಾದಿ ಎಂದು ಬಿಜೆಪಿಯನ್ನು ಹೀಗಳೆಯುತ್ತಾ ಆ ಪದದಿಂದಲೇ ರಾಜಕೀಯ ಲಾಭ ಗಿಟ್ಟಿಸಿಕೊಳ್ಳುವ ಡೋಂಗಿ ಸಮಾಜವಾದಿ ನೀವು. ನಿಮ್ಮ ಅಡ್ಜಸ್ಟ್’ಮೆಂಟ್ ರಾಜಕಾರಣ ಜಗತ್ಪ್ರಸಿದ್ಧಿ. I.N.D.I.A ಎಂಬ ಮೈತ್ರಿಕೂಟದಲ್ಲಿ ಅದೇ ಬಿಜೆಪಿಯ ಬಿ ಟೀಂಗಳನ್ನು ಇಟ್ಟುಕೊಂಡು, ಅವುಗಳ ಬಾಲಂಗೋಚಿ ಆಗಿರುವ ಕಾಂಗ್ರೆಸ್‌ ಪಕ್ಷ ಜಾತ್ಯತೀತವೇ? ಉತ್ತರಿಸಿ ಮುಖ್ಯಮಂತ್ರಿಗಳೇ?

ನಿಮ್ಮ ಇಂಡಿಯಾ ಕೂಟದವರು ಬಿಜೆಪಿ ಮನೆಯಲ್ಲಿ ಉಂಡಿಲ್ಲವೇ?

4. ಸ್ಟಾಲಿನ್, ಮಮತಾ ಬ್ಯಾನರ್ಜಿ, ಫಾರೂಕ್ ಅಬ್ದುಲ್ಲಾ, ನಿತೀಶ್ ಕುಮಾರ್, ಹೇಮಂತ್ ಸೊರೇನ್, ವೈಕೋ, ಮೆಹಬೂಬಾ ಮುಫ್ತಿ, ಅಖೈರಿಗೆ ಶಿವಸೇನೆಯ ಉದ್ಧವ್ ಠಾಕ್ರೆ.. ಇವರೆಲ್ಲರೂ ಬಿಜೆಪಿ ಪಡಸಾಲೆಯಲ್ಲಿ ಪೊಗದಸ್ತಾಗಿ ಅಧಿಕಾರದ ಭೋಜನ ಉಂಡವರಲ್ಲವೇ? ಅವರ ಪಕ್ಕ ಕುರ್ಚಿ ಹಾಕಿಕೊಂಡು ಕೂರಲು ನಿಮಗೆ ನಾಚಿಕೆ ಆಗುವುದಿಲ್ಲವೇ?

ನಮ್ಮ ಮನೆ ಬಾಗಿಲು ಕಾದಿದ್ದು ನೆನಪಿಲ್ಲವೇ ಸಿದ್ದರಾಮಯ್ಯ?

5. 2006ರಲ್ಲಿ ಬಿಜೆಪಿ ಜತೆ ಸರಕಾರ ರಚಿಸಿದ ಏಕೈಕ ಕಾರಣಕ್ಕೆ ಬಿಜೆಪಿ ಬಿ ಟೀಂ ಎಂದು ಜಾತ್ಯತೀರ ಜನತಾದಳಕ್ಕೆ ಮುದ್ರೆ ಹಾಕಿದಿರಿ. 2018ರಲ್ಲಿ ಅದೇ ಬಿ ಟೀಂ ಜತೆ ಸರಕಾರ ರಚಿಸಲು ಮಾನ್ಯ ದೇವೇಗೌಡರ ಮನೆಗೆ ಬಂದು ಸಾಲಾಗಿ ಕೈಕಟ್ಟಿ ನಿಂತುಕೊಂಡಿರಿ!! ಮರೆತಿರಾ ಛದ್ಮವೇಷಧಾರಿ??

6. ಪಾಪ.. ನಿಮಗೆ ಕೋಮುವಾದ, ಜಾತ್ಯತೀತ ಸಿದ್ಧಾಂತದ ಕನಸು ಈಗ ಬಿದ್ದಿದೆ. ನಿಮ್ಮ ರಾಜಕೀಯ ಬದುಕಿಗಾಗಿ ಜಾತಿಜಾತಿಗಳನ್ನು ಒಡೆದು ಬೆಂಕಿ ಇಟ್ಟು ಆ ಕೆನ್ನಾಲಗೆಯಲ್ಲೇ ಚಳಿ ಕಾಯಿಸಿಕೊಳ್ಳುವುದಷ್ಟೇ ನಿಮಗೆ ಗೊತ್ತು.

7. ಜಾತ್ಯತೀತ ಎನ್ನುವುದು ನಾಲಿಗೆ ಮೇಲಿನ ಮಾತಲ್ಲ, ಹೃದಯದ ಆಳದಲ್ಲಿರುವ ನಿಷ್ಠೆ. ಸ್ವಾರ್ಥ ರಾಜಕಾರಣವನ್ನೇ ಹಾಸಿಹೊದ್ದು, ಅಧಿಕಾರ ದಾಹವೇ ಹಾಸುಹೊಕ್ಕಾಗಿರುವ ನಿಮಗೆ ಜಾತ್ಯತೀತತೆ ಕೇವಲ ಭಾಷಣದ ಸರಕಷ್ಟೇ.

8. ಜಾತ್ಯತೀತತೆ ಕುರಿತು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್‌.ಡಿ. ದೇವೇಗೌಡ ಅವರು ಹಾಗೂ ನಾನು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇವೆ, ಅದೂ ಜನರಿಗೆ? ನಮ್ಮ ಬದ್ಧತೆ, ಅಚಲತೆ, ಜಾತ್ಯತೀತತೆಯನ್ನು ಪ್ರಶ್ನಿಸುವ ಯೋಗ್ಯತೆ ನಿಮಗೆ ಖಂಡಿತಾ ಇಲ್ಲ. ಈ ಗುಣಗಳು ನಿಮಗೆ ಅನ್ವಯ ಆಗುವುದೂ ಇಲ್ಲ. ಏನಂತೀರಿ?

Exit mobile version