Site icon Vistara News

HD Kumaraswamy : ಬಿಜೆಪಿ-ಜೆಡಿಎಸ್‌ ಮೈತ್ರಿ ನಾಳೆ ಘೋಷಣೆ?; ಕ್ಷೇತ್ರ ಹಂಚಿಕೆ ನಡೆದಿಲ್ಲ ಎಂದ ಕುಮಾರಸ್ವಾಮಿ

HD Kumaraswamy

ಬೆಂಗಳೂರು: ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯ (BJP-JDS Alliance) ಬಗ್ಗೆ ಮೊದಲ ಬಾರಿಗೆ ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು ಎಲ್ಲಾ ವಿಚಾರಗಳು ಪ್ರಾರಂಭಿಕ ಹಂತದಲ್ಲಿ ಇದ್ದು, ಈವರೆಗೂ ಕ್ಷೇತ್ರ ಹಂಚಿಕೆ ಬಗ್ಗೆ ಚರ್ಚೆ ನಡೆದಿಲ್ಲ, ಮುಂದೆ ಈ ಬಗ್ಗೆ ಹೇಳುತ್ತೇನೆ ಎಂದಿದ್ದಾರೆ. ಈ ನಡುವೆ ಭಾನುವಾರ ಬೆಂಗಳೂರಿನಲ್ಲಿ ನಡೆಯುವ ಜೆಡಿಎಸ್‌ ಸಭೆಯಲ್ಲಿ ಮೈತ್ರಿ ಘೋಷಣೆ ಸಾಧ್ಯತೆ ಕಂಡುಬಂದಿದೆ.

ಬೆಂಗಳೂರಿನಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮಗಳ ಜತೆ ಮಾತನಾಡಿದ ಅವರು, ʻʻಕೆಲವರು ಸಿದ್ದಾಂತಗಳ ಬಗ್ಗೆ ಮಾತನಾಡುತ್ತಾರೆ. ಅದರ ಬಗ್ಗೆ ಮುಂದೆ ಮಾತಾಡೋಣ. ಇನ್ನು ಮೈತ್ರಿ ವಿಷಯಕ್ಕೆ ಬಂದರೆ, ಅದಕ್ಕೆ ಇನ್ನೂ ಸಮಯ ಇದೆ. ಇನ್ನು ಹಲವಾರು ವಿಚಾರಗಳ ಬಗ್ಗೆ ಚರ್ಚೆ ಆಗಬೇಕಿದೆ. ಇಲ್ಲಿ ಪರಸ್ಪರ ಕೊಟ್ಟು ತೆಗೆದುಕೊಳ್ಳುವುದಲ್ಲ.. ವಿಶ್ವಾಸ, ಗೌರವ ಮುಖ್ಯʼʼ ಎಂದು ಅವರು ಹೇಳಿದರು.

ʻʻಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರು ಮೈತ್ರಿ ಬಗ್ಗೆ ಮಾತನಾಡಿದ್ದಾರೆ. ಅವರಿಗೆ ನಾನು ಅಭಾರಿ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಮೈತ್ರಿಕೂಟದ ಬಗ್ಗೆ ಅವರು ಹೇಳಿದ್ದಾರೆ. ರಾಜ್ಯದ ಜನರನ್ನು ಲೂಟಿ ಮಾಡುತ್ತಿರುವವರಿಗೆ ಕಡಿವಾಣ ಹಾಕಬೇಕಿದೆ. 2006ರಲ್ಲಿಯೂ ನಾನು ಬಿಜೆಪಿ ಜತೆ ಸೇರಿ ಸರಕಾರ ಮಾಡಿದ್ದೆʼʼ ಎಂದು ಕುಮಾರಸ್ವಾಮಿ ನೆನಪಿಸಿದರು.

ಮೂರೇ ತಿಂಗಳಿಗೆ ಜನ ರೋಸಿ ಹೋಗಿದ್ದಾರೆ ಎಂದ ಎಚ್‌ಡಿಕೆ

ʻʻರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ವಿರುದ್ಧ ಮೂರೇ ತಿಂಗಳಿಗೆ ಜನರು ರೋಸಿ ಹೋಗಿದ್ದಾರೆ. ಯಾವುದೇ ಸರಕಾರಕ್ಕೆ ನಾಲ್ಕು ವರ್ಷ ಕಳೆದ ಮೇಲೆ ಆಡಳಿತ ವಿರೋಧಿ ಅಲೆ ಎದುರಾಗುತ್ತದೆ. ಆದರೆ, ಈ ಸರಕಾರ ಮೂರೇ ತಿಂಗಳಿಗೆ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ. ಇಂಥ ಸರಕಾರದ ವಿರುದ್ಧ ಸಂಘಟಿತವಾಗಿ ಹೋರಾಟ ನಡೆಸಬೇಕಿದೆʼʼ ಎಂದರು ಕುಮಾರಸ್ವಾಮಿ ಅವರು.

ಭಾನುವಾರ ಸಮಾವೇಶಕ್ಕೆ 10,000 ಕಾರ್ಯಕರ್ತರು

ʻʻಈ ಎಲ್ಲಾ ಬೆಳವಣಿಗೆಗಳ ನಡುವೆ ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ಕೊಟ್ಟಿದ್ದೇವೆ. ಈಗಾಗಲೇ ಮುಖಂಡರ ಸಭೆ ನಡೆಸಿದ್ದೇವೆ. ಭಾನುವಾರ ಕೂಡ ಮಹತ್ವದ ಸಭೆ ಕರೆಯಲಾಗಿದೆ. ಲೋಕಸಭೆ ಚುನಾವಣೆಗೆ ಮುನ್ನ ಇಂತಹ ಸಭೆ ನಡೆಯಬೇಕು ಎಂದು ದೇವೇಗೌಡರು ಬಯಸಿದ್ದರು. ಅದರಂತೆ ಸಭೆ ನಡೆಯುತ್ತಿದೆ. 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗುತ್ತಾರೆ. ಆ ಸಭೆಯಲ್ಲಿ ಮುಕ್ತವಾಗಿ ಚರ್ಚೆ ನಡೆಸುತ್ತೇವೆ. ಬಳಿಕ ತೀರ್ಮಾನ ಕೈಗೊಳ್ಳುತ್ತೇವೆʼʼ ಎಂದು ಅವರು ಮಾಹಿತಿ ನೀಡಿದರು.

ಇದನ್ನೂ ಓದಿ: HD Kumaraswamy : ಬಿಜೆಪಿ ಜತೆ ಮೈತ್ರಿ ಘೋಷಣೆಗೆ ಮುನ್ನ ದೇವರ ಮೊರೆ ಹೋದ ಎಚ್‌ಡಿ ಕುಮಾರಸ್ವಾಮಿ

ಕಾಂಗ್ರೆಸ್ ಈಗ ಕಂಪ್ಲೀಟ್‌ ಡೆಸ್ಪರೇಟ್‌ ಆಗಿದೆ

ʻʻರಾಜಕಾರಣದಲ್ಲಿ ನಿರಾಶೆ, ಹತಾಶೆ ಎನ್ನುವುದು ಬರಲ್ಲ. ಡೆಸ್ಪರೇಟ್‌ ಅನ್ನುವ ಪದ ರಾಜಕಾರಣದಲ್ಲಿ ಬರಲ್ಲ. ರಾಜಕಾರಣದ ಡಿಕ್ಷನರಿಯಲ್ಲೇ ಆ ಪದ ಇಲ್ಲ. ಈಗ ಕಾಂಗ್ರೆಸ್ ಪಕ್ಷಕ್ಕೆ ಡೆಸ್ಪರೇಟ್‌ ಆಗುತ್ತದೆ. ಹೊರನೋಟಕ್ಕೆ ಅವರು ಏನು ಬೇಕಾದರೂ ಹೇಳಬಹುದು. ಆದರೆ ಒಳಗಡೆ ಏನಿದೆ ಅನ್ನುವುದು ನನಗೂ ಗೊತ್ತಿದೆ. ಅವರ ಶಕ್ತಿ ಏನಿದೆ ಅನ್ನುವುದು ನನಗೂ ಗೊತ್ತಿದೆ. ರಾಜಕಾರಣದಲ್ಲಿ ಸದಾಕಾಲ ಒಂದೇ ರೀತಿ ಇರಲ್ಲ. ರಾಜಕಾರಣದ ಚಕ್ರ ಉರುಳುತ್ತಿರುತ್ತದೆ. ಅವರು ಏನು ಸಾಧನೆ ಮಾಡಿದ್ದಾರೆ ಅಂತ ಜನ ಸೀಟು ಕೊಡುತ್ತಾರೆ. ಲೂಟಿ ಮಾಡಿದ್ದಾರೆ, ಆ ಹಣದಲ್ಲಿ ಜನರನ್ನು ಕೊಂಡುಕೊಳ್ಳಬಹುದು ಅಂದುಕೊಂಡಿದ್ದಾರೆ, ಅದು ಸಾಧ್ಯ ಆಗಲ್ಲ ಎಂದರು ಅವರು.

Exit mobile version