Site icon Vistara News

HD Kumaraswamy: ಸಿದ್ದರಾಮಯ್ಯನವರೇ ನೀವೇ ನಮ್ಮ ನೀರೋ! ರಾಜ್ಯದ ಪಾಲಿನ ಝೀರೋ; ಎಚ್‌ಡಿಕೆ ವ್ಯಂಗ್ಯ

HD Kumaraswamy slams CM Siddaramaiah regarding congress guarantee scheme programme

ಬೆಂಗಳೂರು: ರೋಮ್ ಹೊತ್ತಿ ಉರಿಯುತ್ತಿದ್ದರೆ ಅಲ್ಲಿನ ದೊರೆ ನೀರೋ ಪಿಟೀಲು ಬಾರಿಸುತ್ತಿದ್ದ. ಕರ್ನಾಟಕದಲ್ಲಿ ಜನರು ಬರದಿಂದ ಕಂಗೆಟ್ಟಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನೀರೋನಂತೆ ವರ್ತಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಕಟುವಾಗಿ ಟೀಕಿಸಿದ್ದಾರೆ.

ರಾಜ್ಯದ ಬರ ಪರಿಸ್ಥಿತಿಯನ್ನು ಹಾಗೂ ಜನರ ಸಂಕಷ್ಟವನ್ನು ಅಣಕಿಸುವಂತೆ ಸಿದ್ದರಾಮಯ್ಯ ಅವರ ಸರ್ಕಾರ ವರ್ತಿಸುತ್ತಿದೆ. ಜನರ ತೆರಿಗೆ ಹಣದಲ್ಲಿ ಗ್ಯಾರಂಟಿ ಸಮಾವೇಶಗಳನ್ನು ಮಾಡುತ್ತಾ ಪ್ರಚಾರದ ಜಾತ್ರೆಯಲ್ಲಿ ಮುಳುಗಿದೆ ಎಂದು ಅವರು ಆರೋಪಿಸಿದ್ದಾರೆ.

ರಾಜ್ಯ ಇತಿಹಾಸದಲ್ಲಿ ಕಂಡೂ ಕೇಳರಿಯದ ಬರವಿದೆ. ಜಲಕ್ಷಾಮ ಬಿಗಡಾಯಿಸಿದೆ. ಹನಿ ನೀರಿಗೂ ತತ್ವಾರ, ಜನ ಜಾನುವಾರುಗಳ ಹಾಹಾಕಾರ. ಪರಿಸ್ಥಿತಿ ಹೀಗಿದ್ದರೂ ಕಾಂಗ್ರೆಸ್ ಸರ್ಕಾರ ಕೋಟಿ ಕೋಟಿ ರೂ. ಜನರ ತೆರಿಗೆ ಹಣ ಸುರಿದು ಗ್ಯಾರಂಟಿ ಸಮಾವೇಶಗಳನ್ನು ಮಾಡುತ್ತಿದೆ. ಇದು ಲಜ್ಜೆಗೇಡು!! ಎಂದು ಸಿಎಂ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರದ ವಿರುದ್ಧ ಎಚ್‌.ಡಿ. ಕುಮಾರಸ್ವಾಮಿ ಆಕ್ರೋಶವನ್ನು ಹೊರಹಾಕಿದ್ದಾರೆ.

ಚುನಾವಣೆ ಚಿಂತೆಯೇ ನಿಮಗೆ ಚಿತೆ

‘ರೋಮ್ ಹೊತ್ತಿ ಉರಿಯುತ್ತಿದ್ದರೆ ನೀರೋ ಪಿಟೀಲು ಬಾರಿಸುತ್ತಿದ್ದ!’ ಸಿದ್ದರಾಮಯ್ಯನವರೇ ನೀವೇ ನಮ್ಮ ನೀರೋ!! ರಾಜ್ಯದ ಪಾಲಿನ ಝೀರೋ!! ನಿಮಗೆ ಜನರ ಚಿಂತೆ ಇಲ್ಲ, ಚುನಾವಣೆ ಚಿಂತೆಯಷ್ಟೇ.. ಆ ಚಿಂತೆಯೇ ನಿಮ್ಮ ಪಕ್ಷ, ಸರ್ಕಾರಕ್ಕೆ ಚಿತೆಯಾಗಲಿದೆ. ಇದು ಜನರೇ ನುಡಿಯುತ್ತಿರುವ ಭವಿಷ್ಯ. ಪ್ರಜೆಗಳ ಮಾತು, ಆ ಪರಮೇಶ್ವರನ ಮಾತು ಒಂದೇ! ಸುಳ್ಳಾಗದು ಎಂದು ಎಚ್‌.ಡಿ. ಕುಮಾರಸ್ವಾಮಿ‌ ಹೇಳಿದ್ದಾರೆ.‌

ಇದೆಂಥಾ ಸಿದ್ದನಾಮಿಕ್ಸ್?

ಬರಪೀಡಿತ ರೈತರಿಗೆ ಕೊಡಲು ಈ ನಿಮ್ಮ ಸರ್ಕಾರಕ್ಕೆ ₹2000 ಗತಿ ಇಲ್ಲ. ಆದರೆ, ಗ್ಯಾರಂಟಿ ಸಮಾವೇಶಗಳಿಗೆ ಬೇಕಾದಷ್ಟು ಹಣವಿದೆ. ತುರ್ತು ಉದ್ದೇಶಕ್ಕೆ ಇರಿಸಿರುವ ಜಿಲ್ಲಾಧಿಕಾರಿ,‌ ತಹಸೀಲ್ದಾರ್‌ಗಳ ಪಿಡಿ ಖಾತೆಗೆ ನಿಮ್ಮ ಸರ್ಕಾರ ಕನ್ನ ಹಾಕಿದೆ. ಜನರ ಹಾಹಾಕಾರವೇ ನಿಮಗೆ ಭರ್ಜರಿ ಆಹಾರ!! ಹೌದಲ್ಲವೇ? ಇದೆಂಥಾ ಸಿದ್ದನಾಮಿಕ್ಸ್ ಸಿದ್ದರಾಮಯ್ಯನವರೇ? ಎಂದು ಮಾಜಿ ಮುಖ್ಯಮಂತ್ರಿಗಳು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ಈ ಗ್ಯಾರಂಟಿ ಸಮಾವೇಶಗಳಿಗೆ, ಜಾಹೀರಾತು ಜಾತ್ರೆಗಳಿಗೆ ವರ್ಷದಿಂದ ಎಷ್ಟು ಸಾವಿರ ಕೋಟಿ ಸುರಿದಿದ್ದಿರಿ ಸಿದ್ದರಾಮಯ್ಯನವರೇ? ಜನರ ಮುಂದೆ ಲೆಕ್ಕ ಇಡಿ. ಬೇಕಾದರೆ ‘ಗ್ಯಾರಂಟಿ ಪ್ರಚಾರ ಸಮಾವೇಶ ಖರ್ಚು ಬಾಬತ್ತಿನ ಶ್ವೇತಪತ್ರ’ ಹೊರಡಿಸಿ. ನಿಮ್ಮ ಸರ್ಕಾರದ ಅಸಲಿ ಬಣ್ಣ ಏನೆಂಬುದು ಜನರಿಗೆ ಗೊತ್ತಾಗಲಿ ಎಂದು ಒತ್ತಾಯ ಮಾಡಿದ್ದಾರೆ.‌

ಇದನ್ನೂ ಓದಿ: Lok Sabha Election 2024: ಕಾಂತೇಶ್‌ಗೆ ಹಾವೇರಿ ಟಿಕೆಟ್‌; ಈಶ್ವರಪ್ಪನವರೇ ದೆಹಲಿಗೆ ಬನ್ನಿ ಎಂದು ಬಿಎಸ್‌ವೈ ಆಹ್ವಾನ

ನಾಚಿಕೆ ಆಗುವುದಿಲ್ಲವೇ?

ಒಂದು ವರ್ಷದಿಂದ ನಿಮ್ಮ ಇಡೀ ಸರ್ಕಾರದ ಬದುಕು ಜಾಹೀರಾತು ಮೇಳದಲ್ಲೇ ಮುಗಿದು ಹೋಗಿದೆ. ನಿಮ್ಮ ಹಿಂದೆ ಮುಂದೆ ಸುತ್ತುವ ಪಟಾಲಂಗಳ ಏಜೆನ್ಸಿಗಳ ಮೂಲಕ ‘ಜಾಹೀರಾತು ಜಾತ್ರೆ’ಯನ್ನು ಎಗ್ಗಿಲ್ಲದೆ ಮಾಡುತ್ತಿದ್ದೀರಿ. ಬರದಲ್ಲಿ ಬೆಂದು ಕಣ್ಣೀರು ಹಾಕುತ್ತಿರುವ ಜನರ ಹಣವನ್ನು ಹೀಗೆ ಪ್ರಚಾರದ ತೆವಲಿಗೆ ಸುರಿಯುತ್ತಿರುವ ನಿಮಗೆ ನಾಚಿಕೆ ಆಗುವುದಿಲವೇ? ಎಂದು ಅವರು ಕೇಳಿದ್ದಾರೆ.

Exit mobile version