Site icon Vistara News

HD Kumaraswamy: ಬಿಜೆಪಿ ಮಂತ್ರಾಕ್ಷತೆ ಅಕ್ಕಿಯನ್ನು ಡಿಕೆಶಿ ತಮ್ಮ ದೊಡ್ಡ ಆಲದಹಳ್ಳಿಯ ತೋಟದಲ್ಲಿ ಬೆಳೆದಿದ್ದೇ?

HD Kumaraswamy and DK Shivakumar

ಬೆಂಗಳೂರು: ರಾಮಜನ್ಮಭೂಮಿ (Ram Janmabhoomi) ಅಯೋಧ್ಯೆಯಲ್ಲಿ ಜನವರಿ 22ರಂದು ನಡೆಯುವ ಶ್ರೀರಾಮ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ಸಂಬಂಧ ಈಗ ಹಂಚಲಾಗುತ್ತಿರುವ ಮಂತ್ರಾಕ್ಷತೆಯ ಅಕ್ಕಿಯನ್ನು ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರ ದೊಡ್ಡ ಆಲದಹಳ್ಳಿಯ ಅವರ ತೋಟದಲ್ಲಿ ಬೆಳೆದಿರುವುದಾ? ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಪ್ರಶ್ನೆ ಮಾಡಿದರು. ಈ ಮೂಲಕ ʼನಮ್ಮ ಅಕ್ಕಿ ಬಳಸಿಕೊಂಡು ಜನತೆಗೆ ಬಿಜೆಪಿ ಮಂತ್ರಾಕ್ಷತೆ ಹಂಚುತ್ತಿದ್ದಾರೆʼ ಎಂಬ ಡಿ.ಕೆ. ಶಿವಕುಮಾರ್ (DK Shivakumar) ಹೇಳಿಕೆಗೆ ತಿರುಗೇಟು ನೀಡಿದರು.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ರಾಜಕೀಯ ಮಾಡುತ್ತಿರುವುದು ಯಾರು? ಇವರು ಅಕ್ಕಿಯನ್ನು ತಮ್ಮ ಸ್ವಗ್ರಾಮ ದೊಡ್ಡ ಆಲದಹಳ್ಳಿಯಲ್ಲಿ ಬೆಳೆದು ಕಳಿಸಿ ಕೊಟ್ಟಿದ್ದಾರೆಯೇ? ಎಂದು ವಾಗ್ದಾಳಿ ನಡೆಸಿದರು.

ರಾಮಮಂದಿರಕ್ಕೆ ಹೋಗಲು ಪರ್ಮಿಷನ್‌ ಬೇಕಾ?

ರಾಮ ಮಂದಿರಕ್ಕೆ ನಮಗೆ ಆಹ್ವಾನ ನೀಡಿಲ್ಲ ಎಂದು ದೂರಿರುವ ಡಿಕೆ ಶಿವಕುಮಾರ್ ಆರೋಪದ ಬಗ್ಗೆ ಪ್ರತ್ಯುತ್ತರ ನೀಡಿದ ಎಚ್.ಡಿ. ಕುಮಾರಸ್ವಾಮಿ‌, ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಕರೆಯಬೇಕಾ? ಪ್ರಧಾನಿಗಳು ಈಗಾಗಲೇ ಹೇಳಿದ್ದಾರೆ. ಉದ್ಘಾಟನೆ ದಿನ ಗೊಂದಲ ಆಗುವುದು ಬೇಡ. ಮುಂದೆ ದೇವಾಲಯವನ್ನು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸಿದಾಗ ಎಲ್ಲರೂ ಶ್ರೀರಾಮ ದೇವರ ದರ್ಶನ ಪಡೆಯಬಹುದು. ಆಗ ಯಾರು ಬೇಕಾದರೂ ಹೋಗಬಹುದು. ಅದಕ್ಕೇನು ಪರ್ಮಿಷನ್ ಬೇಕಾ? ಎಂದು ಚಾಟಿ ಬೀಸಿದರು.

ಉದ್ಘಾಟನೆ ಕಾರ್ಯಕ್ರಮದಲ್ಲಿ ಜಾಸ್ತಿ ಜನ ಇರುತ್ತಾರೆ. ಸಮಸ್ಯೆ ಆಗಬಾರದು ಎಂದು ಪ್ರಧಾನಿಗಳೇ ಮನವಿ ಮಾಡಿಕೊಂಡಿದ್ದಾರೆ. ರಾಮನ ಬಗ್ಗೆ ಭಕ್ತಿ ಇರುವವರು, ದೇವರ ಬಗ್ಗೆ ನಂಬಿಕೆ ಇರುವವರು ಅಲ್ಲಿಗೆ ಹೋಗಬಹುದು. ಡಿ.ಕೆ. ಶಿವಕುಮಾರ್ ಮನೆಯಲ್ಲಿ ಬರೀ ದೇವರ ಫೋಟೊಗಳು ಇವೆ. ದೇವರ ರಕ್ಷಣೆ ಇಲ್ಲದೆ ಹೋದರೆ ಅವರು ಉಳಿಯಬೇಕಲ್ಲವಾ? ಅದಕ್ಕೆ ಫೋಟೊಗಳನ್ನು ಹಾಕಿಕೊಂಡಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಅವರು ಡಿಕೆಶಿಗೆ ತಿರುಗೇಟು ನೀಡಿದರು.

ಸುಮಲತಾ ಅವರು ನನಗೇನು ಶತ್ರು ಅಲ್ಲ

ಅಗತ್ಯಬಿದ್ದರೆ ಸಂಸದೆ ಸುಮಲತಾ ಅವರನ್ನು ಭೇಟಿ ಮಾಡುತ್ತೇನೆ ಎಂದು ತಾವು ನೀಡಿರುವ ಹೇಳಿಕೆಯ ಬಗ್ಗೆ ಮತ್ತೆ ಸಮರ್ಥನೆ ಮಾಡಿಕೊಂಡ ಎಚ್.ಡಿ. ಕುಮಾರಸ್ವಾಮಿ, ಸುಮಲತಾ ಅವರು ನನಗೇನು ಶತ್ರು ಅಲ್ಲ. ಅವರು ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿದ್ದಾರೆ. ಅವರನ್ನು ಭೇಟಿ ಮಾಡುವುದರಲ್ಲಿ ತಪ್ಪೇನು? ಆ ಹಿನ್ನೆಲೆಯಲ್ಲಿ ಈ ಹೇಳಿಕೆ ಅಷ್ಟೇ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಅಯೋಧ್ಯೆಗೆ ದೇವೇಗೌಡರು ಹೋಗುತ್ತಾರಾ?

ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಹೋಗುವ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಎಚ್.ಡಿ. ಕುಮಾರಸ್ವಾಮಿ, ಮಾಜಿ ಪ್ರಧಾನಿಗಳ ಆರೋಗ್ಯದ ಪರಿಸ್ಥಿತಿಗಳ ಆಧಾರದ ಮೇಲೆ ಹೋಗುವ ಬಗ್ಗೆ ಮುಂದೆ ನಿರ್ಧಾರ ಮಾಡುತ್ತೇವೆ. ದೇವೇಗೌಡರು ಪ್ರಯಾಣ ಮಾಡುವುದಕ್ಕೆ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಸಲಹೆ ಏನಿದೆ? ಅದರ ಮೇಲೆ ಹೋಗಬೇಕಾ? ಬೇಡವಾ ಅಂತ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ: Lakshmi Hebbalkar: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಸಿಎಂ ಕರೆದು ಬುದ್ಧಿ ಹೇಳಲಿ: ಎಚ್.ಡಿ. ಕುಮಾರಸ್ವಾಮಿ ತರಾಟೆ

ಮಾಜಿ ಸಚಿವ ಬಂಡೆಪ್ಪ ಕಾಶೇಂಪೂರ್, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್. ಎಂ. ರಮೇಶ್ ಗೌಡ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.

Exit mobile version