Site icon Vistara News

Nice Road Project : ರೈತರ ಭೂಮಿ ವಾಪಸ್ ಕೊಡದಿದ್ದರೆ ಸಿಂಗೂರು ಮಾದರಿ ಹೋರಾಟ: ಎಚ್‌ಡಿಕೆ ವಾರ್ನಿಂಗ್

HD kumaraswamy in nice road meeting with farmers

ಬೆಂಗಳೂರು: ನೈಸ್ ಯೋಜನೆ (Nice Road Project) ಹೆಸರಿನಲ್ಲಿ ಅಕ್ರಮವಾಗಿ ಕಬಳಿಸಿರುವ 11,000 ಸಾವಿರ ಎಕರೆ ಭೂಮಿಯನ್ನು ರಾಜ್ಯ ಸರ್ಕಾರ ವಾಪಸ್ ಪಡೆದು ರೈತರಿಗೆ ಕೊಡಬೇಕು. ಇಲ್ಲವಾದರೆ ಪಶ್ಚಿಮ ಬಂಗಾಳದಲ್ಲಿ ನಡೆದ ಸಿಂಗೂರು ಮಾದರಿ ಹೋರಾಟವನ್ನು (Singur model of Protest) ಕೈಗೆತ್ತಿಕೊಳ್ಳಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (Former Chief Minister HD Kumaraswamy) ಎಚ್ಚರಿಕೆ ನೀಡಿದರು.

ಶಾಸಕರ ಭವನದಲ್ಲಿ ಬುಧವಾರ (ಸೆಪ್ಟೆಂಬರ್‌ 27) ನಡೆದ ನೈಸ್ ಸಂತ್ರಸ್ತ ರೈತರ ಹೋರಾಟ ಸಮಿತಿ ಮತ್ತು ಕರ್ನಾಟಕ ಪ್ರಾಂತ್ಯ ರೈತರ ಸಂಘ ಹಮ್ಮಿಕೊಂಡಿದ್ದ ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ನೈಸ್ ಭೂಮಿ ಕಳೆದುಕೊಂಡಿರುವ ರೈತರು ನಡೆಸುತ್ತಿರುವ ಈ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಈ ಹೋರಾಟ ಪಕ್ಷಾತೀತ, ರಾಜಕೀಯಕ್ಕೆ ಅತೀತವಾಗಿ ನಡೆಯಬೇಕು. ಸರ್ಕಾರ ಭೂಮಿಯನ್ನು ವಾಪಸ್ ಕೊಡದಿದ್ದರೆ ಸಿಂಗೂರು ಮಾದರಿ ಹೋರಾಟ ಆರಂಭ ಮಾಡೋಣ. ಯೋಜನೆಯನ್ನು ಕೈಗೆತ್ತಿಕೊಳ್ಳದಿದ್ದರೆ ಭೂಮಿಯನ್ನು ರೈತರಿಗೆ ವಾಪಸ್ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಆ ನಿಟ್ಟಿನಲ್ಲಿ ಪಶ್ಚಿಮ ಬಂಗಾಳ ಸರ್ಕಾರ 5000 ಎಕರೆ ಭೂಮಿಯನ್ನು ರೈತರಿಗೆ ವಾಪಸ್ ಮಾಡಿದೆ ಎಂದು ಹೇಳಿದರು.‌

ಇದನ್ನೂ ಓದಿ: Cauvery water dispute : ಕರ್ನಾಟಕ ಬಂದ್‌ಗೆ ಬಿಜೆಪಿ-ಜೆಡಿಎಸ್‌ ಜಂಟಿ ಬೆಂಬಲ; ಕಾವೇರಲಿದೆಯೇ ಹೋರಾಟ?

ಹೆಚ್ಚುವರಿ ಭೂಮಿ ಪಡೆಯಲು ಕಾನೂನು ತೊಡಕಿಲ್ಲ

ನೈಸ್ ವಶದಲ್ಲಿರುವ ಹೆಚ್ಚುವರಿ ಭೂಮಿಯನ್ನು ವಾಪಸ್ ಪಡೆಯಲು ಕಾನೂನಿನ ತೊಡಕಿಲ್ಲ. ಸರ್ಕಾರ ಇಡೀ ಯೋಜನೆಯನ್ನು ವಾಪಸ್ ಪಡೆಯುವುದಕ್ಕೆ ನ್ಯಾಯಾಲಯದ ಕಡೆಯಿಂದ ಯಾವುದೇ ಸಮಸ್ಯೆ ಇಲ್ಲ. ನೈಸ್ ಕಂಪನಿ ಸರಕಾರ ವಿರುದ್ಧ ಹಾಕಿದ್ದ ಎಲ್ಲ ನಿಂದನಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಆ ಕಂಪನಿ ಮಾಡಿರುವ ಅಕ್ರಮಗಳು ಏನು ಎಂಬುದು ಎಲ್ಲರಿಗೂ ಗೊತ್ತಾಗಿದೆ. ಹೀಗಾಗಿ ಸದನ ಸಮಿತಿ ವರದಿ ಹಿನ್ನೆಲೆಯಲ್ಲಿ ಯೋಜನೆಯನ್ನು ಸರ್ಕಾರ ವಾಪಸ್ ಪಡೆಯಬೇಕು ಎಂದು ಅವರು ಒತ್ತಾಯ ಮಾಡಿದರು.

2006ರಲ್ಲಿಯೇ ನಾನು ನೈಸ್ ಯೋಜನೆಯನ್ನು ರದ್ದು ಮಾಡಿ ಸರ್ಕಾರದ ವಶಕ್ಕೆ ಪಡೆಯಲು ಹೊರಟಿದ್ದೆ. ಆಗ ಆಗಲಿಲ್ಲ, ಮತ್ತೆ ಸಿಎಂ ಆದಾಗಲೂ ಯೋಜನೆಯನ್ನು ಸರ್ಕಾರದ ವಶಕ್ಕೆ ಪಡೆಯಲು ಸದನದಲ್ಲಿ ವಿಧೇಯಕ ತರಲು ಹೊರಟೆ. ಎರಡು ಬಾರಿಯೂ ನಾನು ಯಶಸ್ವಿ ಆಗಲಿಲ್ಲ. ಮೈತ್ರಿ ಸರ್ಕಾರ ಇದ್ದ ಕಾರಣ ಆಗಲಿಲ್ಲ. 2018ರಲ್ಲಿ ಕಾಂಗ್ರೆಸ್‌ನವರು ನನ್ನನ್ನು ಮುಖ್ಯಮಂತ್ರಿ ಎಂದು ಇಟ್ಟುಕೊಂಡಿರಲಿಲ್ಲ. ಒಬ್ಬ ಗುಮಾಸ್ತನಂತೆ ನಡೆಸಿಕೊಂಡರು. ಹೀಗಾಗಿ ವಿಫಲವಾದೆ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ನೈಸ್‌ ದೇವೇಗೌಡರ ಪಾಪದ ಕೂಸಲ್ಲ

ನೈಸ್ ಯೋಜನೆ ದೇವೇಗೌಡರ ಪಾಪದ ಕೂಸಲ್ಲ. ಅವರು ಸಹಿ ಹಾಕಿದ್ದು ರಸ್ತೆ ನಿರ್ಮಾಣ ಮಾಡಲಿಕ್ಕೆ. ಆಮೇಲೆ ಅವರು ಪ್ರಧಾನಿ ಆಗಿ ದಿಲ್ಲಿಗೆ ಹೋದ ಮೇಲೆ ಯೋಜನೆಯನ್ನು ಹಳ್ಳ ಹಿಡಿಸಿದರು. ಆಮೇಲೆ ಫ್ರೇಮ್ ವರ್ಕ್ ಅಗ್ರಿಮೆಂಟ್ ಎಂದು ಮಾಡಿಕೊಂಡು ಮೂಲ ಒಪ್ಪಂದವನ್ನು ಸಂಪೂರ್ಣವಾಗಿ ತಿರುಚಲಾಗುತ್ತದೆ. ಅಧಿಕಾರಿಗಳು, ರಾಜಕಾರಣಿಗಳನ್ನು ಬುಕ್ ಮಾಡಿಕೊಂಡು ಇಡೀ ಯೋಜನೆಯನ್ನು ಹಾಳು ಮಾಡಿದರು. ಒಪ್ಪಂದ ಹಾಗೂ ಹೈಕೋರ್ಟ್ ಆದೇಶಗಳನ್ನು ನೈಸ್ ಕಂಪನಿ ಉಲ್ಲಂಘನೆ ಮಾಡಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಮಾಹಿತಿ ನೀಡಿದರು.

ದಂಡಕ್ಕೆ ಗುರಿಯಾದ ನಾಯಕರು

ನೈಸ್ ಕಂಪನಿಯ ವ್ಯಕ್ತಿ ನನ್ನನ್ನು ಬುಕ್ ಮಾಡಲು 2006ರಲ್ಲಿ ಸಿಂಗಾಪುರಕ್ಕೆ ಬಂದಿದ್ದ. ಅಲ್ಲಿ ನನ್ನ ರೂಮಿನ ಒಳಕ್ಕೂ ಬಿಡಲಿಲ್ಲ. ಏನಾದರೂ ಹೇಳುವುದಿದ್ದರೆ ವಿಧಾನಸೌಧಕ್ಕೆ ಬಾ ಎಂದು ಹೊರಗಟ್ಟಿದ್ದೆ. ಜಿ.ವಿ.ಶ್ರೀರಾಮರೆಡ್ಡಿ ಹಾಗೂ ಜೆ.ಸಿ.ಮಾಧುಸ್ವಾಮಿ ಅವರು ದೇವೇಗೌಡರ ಹೋರಾಟಕ್ಕೆ ನೆರವು ನೀಡಿದರು. ಜನರ ಪರ ಹೋರಾಟ ಮಾಡಿದ ತಪ್ಪಿಗೆ ಆವರೆಲ್ಲರೂ ನ್ಯಾಯಾಲಯದಿಂದ ದಂಡಕ್ಕೆ ಗುರಿಯಾದರು. ದೇವೇಗೌಡರಿಗೆ ಕೋಟ್ಯಂತರ ರೂಪಾಯಿ ದಂಡ ವಿಧಿಸಿ ನೈಸ್ ಬಗ್ಗೆ ಮಾತನಾಡಲೇಬಾರದು ಎಂದು ಆದೇಶ ನೀಡುವಂಥ ವ್ಯವಸ್ಥೆ ಈ ದೇಶದಲ್ಲಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಕಂಪನಿಗೆ ಭೂಮಿಯನ್ನು ಏಕೆ ಕೊಡಬೇಕು?

ಟಿ.ಬಿ.ಜಯಚಂದ್ರ ನೇತೃತ್ವದ ಸದನ ಸಮಿತಿ ವರದಿಯನ್ನು ಉಲ್ಲೇಖ ಮಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಬೆಂಗಳೂರು – ಮೈಸೂರು ನಡುವೆ ಈಗಾಗಲೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಎಕ್ಸ್‌ಪ್ರೆಸ್‌ ಹೆದ್ದಾರಿಯನ್ನು ನಿರ್ಮಾಣ ಮಾಡಿವೆ. ನೈಸ್ ಕಂಪನಿ ನಿರ್ಮಾಣ ಮಾಡಿರುವುದು ಪೆರಿಫೆರಲ್ ರಸ್ತೆ, ಲಿಂಕ್ ರಸ್ತೆ ಬಿಟ್ಟರೆ ಬೇರೆ ಮಾಡಿಲ್ಲ. ಹೀಗಾಗಿ ನಮಗೆ ಈ ಯೋಜನೆ ಬೇಕಿಲ್ಲ. ಯೋಜನೆಯನ್ನು ಕಾರ್ಯಗತ ಮಾಡದ ಮೇಲೆ ಆ ಕಂಪನಿಗೆ ಭೂಮಿ ಯಾಕೆ ಕೊಡಬೇಕು? ಭೂಮಿ ಇಟ್ಟುಕೊಂಡು ಆ ಕಂಪನಿ ರಿಯಲ್ ಎಸ್ಟೇಟ್ ದಂಧೆ ಮಾಡುತ್ತದೆ ಅಷ್ಟೇ ಎಂದು ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.

ಕಾವೇರಿ ಬಿಸಿ ತಣ್ಣಗಾದ ನಂತರ ಈ ಹೋರಾಟಕ್ಕೆ ಧುಮುಕುತ್ತೇನೆ. ನೈಸ್‌ ಯೋಜನೆಗೆ ಸಂಬಂಧಪಟ್ಟ ರೈತರ ಭೂಮಿಯನ್ನು ಜೀವ ತೆತ್ತಾದರೂ ಉಳಿಸುತ್ತೇನೆ ಎಂದು ದೇವೇಗೌಡರು ಹೇಳಿದ್ದರು. ಈ ಮಾತಿಗೆ ನಾನು ಬದ್ಧ ಇದ್ದೇನೆ. 11,000 ಎಕರೆ ರೈತರ ಭೂಮಿಯನ್ನು ಉಳಿಸಿಕೊಡುತ್ತೇನೆ. ಬೇನಾಮಿ ಹೆಸರಿನಲ್ಲಿ ಭೂ ವ್ಯವಹಾರ ನಡೆದಿದೆ. ಪ್ರಾಥಮಿಕ ಅಧಿಸೂಚನೆ ಆಗಿರುವ ಭೂಮಿಯನ್ನು ಕಬಳಿಸಲಾಗಿದೆ. ಅಧಿಕಾರಿಗಳನ್ನು ಒಳಕ್ಕೆ ಹಾಕಿಕೊಂಡು ರೈತರಿಗೆ ವಂಚಿಸಲಾಗಿದೆ. ಅಂದು ಅತಿ ಕಡಿಮೆ ಬೆಲೆಗೆ ಭೂಮಿ ಕಬಳಿಸಿದ್ದರು. ಈಗ ಅದಕ್ಕೆ ಕೋಟಿ ಕೋಟಿ ಬೆಲೆ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಹೇಳಿದರು.

ಪಕ್ಷಭೇದ ಮರೆತು ಕೆಲಸ ಮಾಡಿ, ಸಂಘಟಿಸಿ. ಯಾರೇ ಪಕ್ಷದವರು ಹೋರಾಟಕ್ಕೆ ಬಂದರೂ ಸೇರಿಸಿಕೊಳ್ಳಿ ಎಂದು ಅವರು ಕರೆ ನೀಡಿದರು. ಈ ಸಂದರ್ಭದಲ್ಲಿ ನೂರಾರು ಸಂಖ್ಯೆಯಲ್ಲಿ ಬಂದಿದ್ದ ನೈಸ್ ಸಂತ್ರಸ್ತ ರೈತರ ಅಹವಾಲುಗಳನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಲಿಸಿದರು.

ಇದನ್ನೂ ಓದಿ: Cauvery water dispute : ಕನ್ನಡಿಗರಿಗೆ ನೀರಿಲ್ಲ, ತಮಿಳುನಾಡಿಗೆ ನೀರು ಬಿಡಲು ಡಿಸಿಎಂಗೆ ಸಂತೋಷವಾಗುತ್ತಿದೆ!

ಕರ್ನಾಟಕ ಪ್ರಾಂತ್ಯ ರೈತ ಸಂಘದ ಅಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ, ದಲಿತ ಸಂಘರ್ಷ ಸಮಿತಿಯ ವಿ.ನಾಗರಾಜ್, ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಕರ್ನಾಟಕ ಪ್ರಾಂತ್ಯ ರೈತ ಸಂಘದ ಉಪಾಧ್ಯಕ್ಷ ಬಸವರಾಜು, ಕರ್ನಾಟಕ ಪ್ರಾಂತ್ಯ ಕೂಲಿಕಾರರ ಸಂಘದ ಅಧ್ಯಕ್ಷ ಪುಟ್ಟಮಾದು, ಜನವಾದಿ ಮಹಿಳಾ ಸಂಘಟನೆ ಪ್ರಧಾನ ಕಾರ್ಯದರ್ಶಿ ದೇವಿ, ಟ್ರೇಡ್ ಯೂನಿಯನ್ ಅಧ್ಯಕ್ಷ ಮೀನಾಕ್ಷಿ ಸುಂದರಂ, ನೈಸ್ ಸಂತ್ರಸ್ತ ಹೋರಾಟ ಸಮಿತಿ ಅಧ್ಯಕ್ಷ ವೆಂಕಟಾಚಲಯ್ಯ ಸೇರಿ ಅನೇಕ ಮುಖಂಡರು ಹಾಜರಿದ್ದರು.

Exit mobile version