ಬೆಂಗಳೂರು/ನವ ದೆಹಲಿ: ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ (Hanuman Flag) ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದಿದ್ದ ಪ್ರತಿಭಟನೆ ವೇಳೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಕೇಸರಿ ಶಾಲು (saffron shawl) ಧರಿಸಬಾರದಿತ್ತು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ (HD Devegowda) ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನವದೆಹಲಿಯಲ್ಲಿ ಈ ಕುರಿತು ಮಾತನಾಡಿದ ಮಾಜಿ ಪ್ರಧಾನಿ ಎಚ್ಡಿಡಿ ಕೇಸರಿ ಬದಲು ನಮ್ಮ ಪಕ್ಷದ ಶಾಲನ್ನು ಧರಿಸಬಹುದಿತ್ತು ನಾನು ಮಾತ್ರ ಎಲ್ಲೇ ಹೋದರೂ ನಮ್ಮ ಪಕ್ಷದ ಶಾಲನ್ನು ಧರಿಸುತ್ತೇನೆ ಎಂದು ಹೇಳಿದ್ದಾರೆ.
ಯಾರೋ ಬಂದು ಕೇಸರಿ ಶಾಲನ್ನು ಹಾಕಿರುತ್ತಾರೆ
ಕುಮಾರಸ್ವಾಮಿ ಕೇಸರಿ ಶಾಲು ಧರಿಸಬಾರದಿತ್ತು. ಕೇಸರಿ ಬದಲು ನಮ್ಮ ಪಕ್ಷದ ಶಾಲು ಧರಿಸಬಹುದಿತ್ತು. ನಾಳೆ ನಾನು ಪ್ರಧಾನಿ ನರೇಂದ್ರ ಮೋದಿ ಜತೆಗೆ ಹೋದಾಗಲೂ ನನ್ನ ಪಕ್ಷದ ಶಾಲು ಹಾಕುತ್ತೇನೆ. ಖಂಡಿತವಾಗಿ ಕೇಸರಿ ಶಾಲು ಹಾಕುವುದಿಲ್ಲ. ಪ್ರತಿಭಟನೆಯ ವೇಳೆ ಯಾರೋ ಬಂದು ಕೇಸರಿ ಶಾಲನ್ನು ಹಾಕಿರುತ್ತಾರೆ. ಆಯಾ ಸಂದರ್ಭಕ್ಕೆ ಹಾಕಿರುತ್ತಾರೆ, ದೊಡ್ಡ ವ್ಯಾಖ್ಯಾನ ಮಾಡುವ ಅಗತ್ಯವಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ಡಿಕೆಸು ಹೇಳಿಕೆ ಬಗ್ಗೆ ಏನೂ ಹೇಳಲ್ಲ
ಸಂಸದ ಡಿ.ಕೆ ಸುರೇಶ್ ಅವರ ʻಪ್ರತ್ಯೇಕ ರಾಷ್ಟ್ರʼದ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಎಚ್.ಡಿ. ದೇವೇಗೌಡ, ಡಿ.ಕೆ. ಸುರೇಶ್ ಅವರು ಪ್ರತ್ಯೇಕ ರಾಷ್ಟ್ರ ಮಾಡುವ ಬಗ್ಗೆ ಮಾತನಾಡಿದ್ದಾರೆ. ಯಾವ ಉದ್ದೇಶದಲ್ಲಿ ಮಾತನಾಡಿದ್ದಾರೋ ಗೊತ್ತಿಲ್ಲ. ಈ ವಿಷಯದ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಅವರು ವೈಯಕ್ತಿಕವಾಗಿ ಹೇಳಿರಬಹುದು. ಅದು ಪಕ್ಷದ ನಿರ್ಣಯ ಆಗಿರುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.
ದೇವೇಗೌಡರ ಸ್ಥಿತಿ ನೋಡಿದರೆ ನನಗೂ ಭಯವಾಗುತ್ತದೆ: ಡಿ.ಕೆ. ಶಿವಕುಮಾರ್
ಎಚ್.ಡಿ. ಕುಮಾರಸ್ವಾಮಿ ಕೇಸರಿ ಶಾಲು ಹಾಕಿಕೊಳ್ಳಬಾರದಿತ್ತು, ಅವರು ಪಕ್ಷದ ಶಾಲು ಹಾಕಿಕೊಳ್ಳಬೇಕಿತ್ತು. ನಾನು ಕೇಸರಿ ಶಾಲು ಹಾಕುವುದಿಲ್ಲ ಎಂಬ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಕುಮಾರಸ್ವಾಮಿ ಅವರು ಬಿಜೆಪಿ ವಕ್ತಾರರಾಗಿದ್ದಾರೆ. ದೇವೇಗೌಡರಿಗೆ ಇಷ್ಟು ನೋವು ತರುತ್ತಾರೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ದೇವೇಗೌಡರ ಸಿದ್ಧಾಂತವನ್ನು ನಾನು ಕಂಡಿದ್ದೇನೆ. ಮಕ್ಕಳಿಗಾಗಿ ಅವರು ಏನೆಲ್ಲ ಮಾಡಬೇಕು. ನನಗೆ ವಯಸ್ಸಾದ ಮೇಲೆ ನಮ್ಮ ಮನೆಗಳಲ್ಲಿ ಯಾವೆಲ್ಲ ಸಮಸ್ಯೆಗಳು ಬರುತ್ತವೆಯೋ ಗೊತ್ತಿಲ್ಲ. ಇದನ್ನೆಲ್ಲಾ ನೋಡಿದರೆ ನನಗೂ ಭಯವಾಗುತ್ತದೆ. ಪರಿಸ್ಥಿತಿ ನಾವು ನಂಬಿದ ಸಿದ್ಧಾಂತಕ್ಕೆ ವಿರುದ್ಧವಾಗಿ ಹೋಗಬೇಕಾಗುವಂತೆ ಮಾಡುತ್ತದೆ. ಮರಕ್ಕೆ ಬೇರು ಎಷ್ಟು ಮುಖ್ಯವೋ ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ ಎಂದು ತಿಳಿಸಿದರು.
ಇದನ್ನೂ ಓದಿ: Budget 2024: ಕೇಂದ್ರ ಬಜೆಟ್‌ನಲ್ಲಿ ಅನ್ಯಾಯ; ದೆಹಲಿಯಲ್ಲಿ ಫೆ.7ಕ್ಕೆ ರಾಜ್ಯ ಸರ್ಕಾರದ ಪ್ರತಿಭಟನೆ ಎಂದ ಡಿಕೆಶಿ!
ಕುಮಾರಸ್ವಾಮಿ ಕುಟುಂಬದವರು ಕಲ್ಲು ಹೊಡೆದಿರುವ ಪಟ್ಟಿ ನೀಡಲೇ?
ಕನಕಪುರದಲ್ಲಿ ಕಲ್ಲು ಹೊಡೆಯುವವರನ್ನು ಶಾಸಕರು, ಸಂಸದರನ್ನಾಗಿ ಮಾಡಿದರೆ ದೇಶ ಒಡೆಯುತ್ತಾರೆ ಎಂಬ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ಈ ಬಗ್ಗೆ ಕನಕಪುರದ ಜನರನ್ನು ಕೇಳಿ. ಅವರು ಅವರ ಮನೆಯವರೂ ಕಲ್ಲು ಹೊಡೆಯುತ್ತಿದ್ದರಲ್ಲ. ಅದರ ಪಟ್ಟಿ ನೀಡಲಾ? ಎಲ್ಲ ಪಟ್ಟಿ ನೀಡಲು ಕಳೆದ ಅಧಿವೇಶನದಲ್ಲಿ ಕಾದು ಕುಳಿತಿದ್ದೆ ಎಂದು ತಿಳಿಸಿದರು.