ಬೆಂಗಳೂರು: ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಅವರ ಬಗ್ಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಏಕವಚನ ಪ್ರಯೋಗ ಮಾಡಿರುವುದಕ್ಕೆ ರಾಜ್ಯಾದ್ಯಂತ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಅಲ್ಲದೆ, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಸಹ ಕ್ಷಮೆಯಾಚನೆ ಮಾಡಿದ್ದಾರೆ. ಆದರೆ, ಸಿಎಂ ಸಮರ್ಥನೆ ಮಾಡಿಕೊಂಡಿರುವ ರೀತಿ ಬಗ್ಗೆ ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ (HD Kumarswamy) ಕಿಡಿಕಾರಿದ್ದಾರೆ. ಶಿಷ್ಟಾಚಾರಗೆಟ್ಟ ಮುಖ್ಯಮಂತ್ರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಮ್ಮ ನಾಯಕರಾದ ಶ್ರೀಮತಿ ಸೋನಿಯಾ ಗಾಂಧಿ, ಶ್ರೀ ರಾಹುಲ್ ಗಾಂಧಿ ಅವರಿಗೆ ಏಕವಚನ ಪ್ರಯೋಗಿಸುವಿರಾ? ದೇಶದ ಅತ್ಯುನ್ನತ ಸ್ಥಾನದಲ್ಲಿರುವ ಗೌರವಾನ್ವಿತ ರಾಷ್ಟ್ರಪತಿಗಳ ಬಗ್ಗೆ, ಅದರಲ್ಲೂ ಮಹಿಳೆಯ ಬಗ್ಗೆ ಏಕವಚನ ಪ್ರಯೋಗಿಸುವಾಗ ಭಾವುಕತೆಯಲ್ಲಿ ನಿಮ್ಮ ವಿವೇಕ ಸತ್ತು ಹೋಗಿತ್ತಾ? ಎಂದು ಸಹ ಎಚ್.ಡಿ. ಕುಮಾರಸ್ವಾಮಿ ಅವರು ಆಕ್ರೋಶವನ್ನು ಹೊರಹಾಕಿದ್ದಾರೆ.
ಇದನ್ನೂ ಓದಿ: Pralhad Joshi : ಸಿದ್ದರಾಮಯ್ಯನವರೇ ಮಹಿಳಾ ರಾಷ್ಟ್ರಪತಿಗೆ ಕೊಡುವ ಗೌರವ ಇದೇನಾ?: ಜೋಶಿ ಪ್ರಶ್ನೆ
ಎಚ್.ಡಿ. ಕುಮಾರಸ್ವಾಮಿ ಟ್ವೀಟ್‌ನಲ್ಲೇನಿದೆ?
“ಅಂಕೆ ಮೀರಿದ ಭಂಡತನಕ್ಕೆ ಮುಖ್ಯಮಂತ್ರಿ ನೀವೇ ಅತ್ಯುತ್ತಮ ಉದಾಹರಣೆ @siddaramaiah ನವರೇ. ಭಾವುಕನಾಗಿ ಮಾತನಾಡುವ ಭರದಲ್ಲಿ ಗೌರವಾನ್ವಿತ ರಾಷ್ಟ್ರಪತಿಗಳನ್ನು ಏಕವಚನದಲ್ಲಿ ಸಂಬೋಧಿಸಿದೆ ಎಂದು ನೀವು ಕೊಟ್ಟಿರುವ ಸಮಜಾಯಿಷಿ ಮೊಸಳೆಯನ್ನೂ ನಾಚಿಸುವಂತಿದೆ.
“ಗ್ರಾಮೀಣ ಸೊಗಡಿನ ವ್ಯಕ್ತಿತ್ವ ನನ್ನದು. ನಾನು ಮಾತನಾಡುವುದೇ ಹಾಗೆ..” ಎಂದು ನೀವು ಸಮರ್ಥಿಸಿಕೊಳ್ಳುತ್ತೀರಿ. ಸಮರ್ಥನೆಗೂ ಒಂದು ಅಳತೆ, ಗೌರವ ಇರುತ್ತದೆ. ಅದಾವುದನ್ನೂ ನೀವು ಲೆಕ್ಕಕ್ಕೇ ಇಟ್ಟಿಲ್ಲ. ಹೌದಲ್ಲವೇ?
2ನೇ ಸಲ ಸಿಎಂ ಆಗಿ ಎಲ್ಲ ರೀತಿಯ ಶಿಷ್ಟಾಚಾರದ ಸುಖ ಅನುಭವಿಸುತ್ತಿದ್ದೀರಿ ಮತ್ತು ಪಾಲಿಸುತ್ತಿದ್ದೀರಿ, ಸರಿ. ಆದರೆ, ಭಾಷೆ ವಿಚಾರದಲ್ಲಿ ನೀವು ಯಾಕೆ ಶಿಷ್ಟಾಚಾರ ಕಲಿತಿಲ್ಲ, ಪಾಲಿಸುತ್ತಿಲ್ಲ? ನಿಮ್ಮ ನಾಯಕರಾದ ಶ್ರೀಮತಿ ಸೋನಿಯಾ ಗಾಂಧಿ, ಶ್ರೀ ರಾಹುಲ್ ಗಾಂಧಿ ಅವರಿಗೆ ಏಕವಚನ ಪ್ರಯೋಗಿಸುವಿರಾ? ಈ ಸೋಗಲಾಡಿತನವನ್ನು ಅರ್ಥ ಮಾಡಿಕೊಳ್ಳದಷ್ಟು ಮುಗ್ಧರೇ ನಮ್ಮ ಜನರು?
ಸಿದ್ದರಾಮಯ್ಯನವರೇ, ನಿನ್ನೆ ದಿನ ಶೋಷಿತರ ಜಾಗೃತಿ ಸಮಾವೇಶದಲ್ಲಿ ನಿಮ್ಮ ಭಾಷಣದಲ್ಲಿ ಭಾವುಕತೆ, ಮುಗ್ಧತೆ ಇತ್ತೇ? ಸುಳ್ಳು ಹೇಳುವುದಕ್ಕೂ ಸಂಕೋಚ ಬೇಡವೇ? ನಿಮ್ಮ ಭಾಷಣ ದುರಾಹಂಕಾರದ ಪರಮಾವಧಿ ಮತ್ತು ಆ ಸಮಾವೇಶದ ಕರ್ತೃ, ಕರ್ಮ, ಕ್ರಿಯೆ ಎಲ್ಲವೂ ನೀವೇ. ಹೌದೋ ಅಲ್ಲವೋ? ದೇಶದ ಅತ್ಯುನ್ನತ ಸ್ಥಾನದಲ್ಲಿರುವ ಗೌರವಾನ್ವಿತ ರಾಷ್ಟ್ರಪತಿಗಳ ಬಗ್ಗೆ, ಅದರಲ್ಲೂ ಮಹಿಳೆಯ ಬಗ್ಗೆ ಏಕವಚನ ಪ್ರಯೋಗಿಸುವಾಗ ಭಾವುಕತೆಯಲ್ಲಿ ನಿಮ್ಮ ವಿವೇಕ ಸತ್ತು ಹೋಗಿತ್ತಾ?
ಎರಡು ಬಾರಿ ಸಿಎಂ ಆದವರು, ಡಿಸಿಎಂ, ಹಣಕಾಸು ಸಚಿವರೂ ಆಗಿದ್ದವರು.. ವಕೀಲರೂ, ಸ್ವಯಂಘೋಷಿತ ಸಂವಿಧಾನ ತಜ್ಞರೂ ಆಗಿರುವ ನಿಮ್ಮಂತಹ ಪಂಡಿತರೇ ಭಾವುಕತೆಯಿಂದ ಬಾಯಿ ತಪ್ಪಿದರೆ ಹೇಗೆ?
ಇನ್ನು ಆ ನಿಮ್ಮ ಭಾಷಣ! ಅದನ್ನು ಭಾಷಣ ಎನ್ನಲು ಸಾಧ್ಯವೇ?
ನಿಮ್ಮ ಭಾಷಣ ನಿಮ್ಮ ಹೃದಯದಲ್ಲಿ ತುಂಬಿದ್ದ ಅಸಹನೆಯ ನಂಜು. ಅನ್ಯಜಾತಿಗಳ ಮೇಲೆ ಮಡುಗಟ್ಟಿದ ದ್ವೇಷ. ಜಾತಿ-ಧರ್ಮಗಳ ನಡುವೆ ಬೆಂಕಿ ಇಡಲು ನೀವು ಕಕ್ಕಿದ ಕಾರ್ಕೋಟಕ ವಿಷಜ್ವಾಲೆ. ಜಾತಿ ವ್ಯವಸ್ಥೆ ಇರುವರೆಗೆ ಇಂಥ ಸಮಾವೇಶಗಳು ನಡೆಯಬೇಕು ಎನ್ನುತ್ತೀರಿ! ಅಂದರೆ ಕಾರ್ಕೋಟಕ ವಿಷಜ್ವಾಲೆ ನಿರಂತರ ಎಂದಾಯಿತು! ನಿರಂತರವಾಗಿ ಅಧಿಕಾರದಲ್ಲಿ ಸುಖಿಸಿದ ನೀವು ಶೋಷಿತ ವರ್ಗಕ್ಕೆ ಮಾಡಿದ್ದೇನು?
ಅಪರ ವಿತ್ತವಿಶಾರದರಾದ ತಮಗೆ ಮರೆವೇ?
ಮೀಸಲಾತಿ ಬಗ್ಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದೇನು? ಅವರ ನಿಲುವು ಏನಾಗಿತ್ತು? ಸಂವಿಧಾನವೇ ನನ್ನ ಧರ್ಮಗ್ರಂಥ ಎನ್ನುವ ನೀವು, ಇಷ್ಟು ಬೇಗ ಸಂವಿಧಾನ ಬರೆದವರ ಮಾತನ್ನೇ ಮರೆತರೆ ಹೇಗೆ? 14 ಬಜೆಟ್ ಮಂಡಿಸಿದ ಅಪರ ವಿತ್ತವಿಶಾರದರಾದ ತಮಗೆ ಮರೆವೇ? ಇನ್ನೆಷ್ಟು ವರ್ಷ ಸುಳ್ಳುಗಳನ್ನೇ ಹೇಳಿ ಸತ್ಯವನ್ನು ಸಾಗ ಹಾಕುತ್ತೀರಿ?
ಇದನ್ನೂ ಓದಿ: Hanuman Flag: ಹನುಮಧ್ವಜ ವಿವಾದ; ಬಿಜೆಪಿಯವರು ಪಾಕಿಸ್ತಾನಕ್ಕೆ ಹೋಗಲಿ ಎಂದ ಪ್ರಿಯಾಂಕ್ ಖರ್ಗೆ
ನನ್ನಂತೆಯೇ ಶೋಷಿತ ಸಮಾಜದಿಂದ ಬಂದವರು, ಅವರ ಬಗ್ಗೆ ಅಪಾರ ಗೌರವವಿದೆ. ಅವರನ್ನು ಏಕವಚನದಲ್ಲಿ ಸಂಬೋಧಿಸಬಾರದಿತ್ತು. ಅಚಾತುರ್ಯದಿಂದ ಆಗಿರುವ ಈ ಪ್ರಮಾದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದೀರಿ. ವಿಷಾದ ವ್ಯಕ್ತಪಡಿಸುವ ಸೌಜನ್ಯ ತೋರಿಸಿದ್ದೀರಿ, ಸಂತೋಷ. ಆದರೆ; ನಿಮ್ಮ ನಂಜಿನ ವಿಷ ರಾಜ್ಯವನ್ನೆಲ್ಲ, ದೇಶವನ್ನೆಲ್ಲ ವ್ಯಾಪಿಸುತ್ತಿದೆ. ಇದಕ್ಕೆ ಏನಂತೀರಿ?” ಎಂದು ಎಚ್.ಡಿ. ಕುಮಾರಸ್ವಾಮಿ ಖಾರವಾಗಿ ಪ್ರಶ್ನೆ ಮಾಡಿದ್ದಾರೆ.
ಏನಿದು ವಿವಾದ?
ಚಿತ್ರದುರ್ಗದಲ್ಲಿ ಭಾನುವಾರ ನಡೆದ ಶೋಷಿತರ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕನ್ನು ಟೀಕಿಸುತ್ತಾ, ರಾಷ್ಟ್ರಪತಿ ದ್ರೌಪದಿ ಮುರ್ಮು… ಶೋಷಿತ ಸಮುದಾಯಕ್ಕೆ ಸೇರಿದವಳು… ಅವರು ಸಂವಿಧಾನದ ರಕ್ಷಕರು(custodian of constitution), ಅವಳನ್ನು ನೂತನ ಸಂಸತ್ ಭವನ ಉದ್ಘಾಟನೆ ಹಾಗೂ ರಾಮಮಂದಿರ ಉದ್ಘಾಟನೆಗೆ ಕರೆಯಲಿಲ್ಲ. ಇವರ ಯೋಗ್ಯತೆಗೆ ನನ್ನ ವಿರುದ್ಧ ಮಾತನಾಡುತ್ತಾರೆ ಎಂದು ಕಿಡಿಕಾರಿದ್ದರು.