ಬೆಂಗಳೂರು: ಒಬ್ಬ ಮುಖ್ಯಮಂತ್ರಿ ತನ್ನ ಕ್ಷೇತ್ರದ ಜವಾಬ್ದಾರಿಯನ್ನು ತನ್ನ ಮಗನಿಗೆ ಹೊರಗುತ್ತಿಗೆ (Outsourcing) ನೀಡಿದ ಇತಿಹಾಸ ಎಲ್ಲಾದರೂ ಇದೆಯಾ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ (HD Kumaraswamy) ಪ್ರಶ್ನೆ ಮಾಡಿದ್ದಾರೆ. ಯತೀಂದ್ರ ಸಿದ್ದರಾಮಯ್ಯ (Yatindra Siddaramaiah) ಅವರು ಜನತಾ ದರ್ಶನ ಕಾರ್ಯಕ್ರಮದಲ್ಲಿ ಇರುವಾಗ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಜತೆ ಮಾತನಾಡಿದ ʻಪಟ್ಟಿ ವಿವಾದʼದ ವಿಡಿಯೊಗೆ ಸಂಬಂಧಿಸಿ ಕಾಂಗ್ರೆಸ್ ಹಾಗೂ ಕುಮಾರಸ್ವಾಮಿ ನಡುವೆ ದೊಡ್ಡ ಮಟ್ಟದ ಜಗಳ ನಡೆಯುತ್ತಿದೆ. ಟ್ವೀಟ್ ವಾರ್, ಟಾಕ್‌ವಾರ್‌ಗಳು ಎಗ್ಗಿಲ್ಲದೆ ಸಾಗಿವೆ (HDK Vs Siddaramaiah).
ಶನಿವಾರವೂ ಎಚ್.ಡಿ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿದ್ದರು. ಯತೀಂದ್ರ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳ ಜತೆ ಮಾತನಾಡುವಾಗ ಉಲ್ಲೇಖಿಸಿದ ವಿವೇಕಾನಂದ ಎಂಬ ಹೆಸರು ಸರ್ಕಾರವೇ ಬಿಡುಗಡೆ ಮಾಡಿದ ವರ್ಗಾವಣೆ ಪಟ್ಟಿಯಲ್ಲಿ ಕಾಣಿಸಿಕೊಂಡ ಬಳಿಕ ಕುಮಾರಸ್ವಾಮಿ ಇದನ್ನು ಗಟ್ಟಿಯಾಗಿ ಉಲ್ಲೇಖ ಮಾಡಿದರು. ಅದಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿ ʻಕುಮಾರಸ್ವಾಮಿ ಅವರಿಗೆ ಮಾನಸಿಕ ಅಸ್ವಾಸ್ಥ್ಯʼ ಎಂದಿದ್ದರು. ಇದೀಗ ಎಚ್.ಡಿ ಕುಮಾರಸ್ವಾಮಿ ಮತ್ತೊಂದು ಸುತ್ತಿನ ಟ್ವೀಟ್ ದಾಳಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರನ್ನು ನೀವು ಸಿಎಮ್ಮಾ, ಟೆಲಿಫೋನ್ ಆಪರೇಟರಾ ಎಂದು ಕೇಳಿದ್ದಾರೆ!
ಅದರಲ್ಲಿ ವರುಣಾ ಕ್ಷೇತ್ರವನ್ನು ಯತೀಂದ್ರ ಅವರಿಗೆ ಹೊರಗುತ್ತಿಗೆ ನೀಡಿದ್ದನ್ನು ಪ್ರಶ್ನೆ ಮಾಡಿದ್ದಾರೆ. CSR Fund ಎಂದರೆ Corrupt Son Of Siddaramaiah ಎಂದು ಕಾಲೆಳೆದಿದ್ದಾರೆ.
ಅವರ ಟ್ವೀಟ್ ದಾಳಿ ಹೀಗಿದೆ..
ಅವರು ಸಚಿವರೋ ನಿಮ್ಮ ಗಸ್ತಿಗೆ ನಿಂತ ಬೌನ್ಸರ್‌ಗಳೋ?
ಸನ್ಮಾನ್ಯ ಮುಖ್ಯಮಂತ್ರಿಗಳೇ, ವಿಡಿಯೋ ವಿಷಯ ವಿಷಯಾಂತರ ಮಾಡಬೇಡಿ. ನಾನು ಕೇಳಿದ್ದೇನು? ನೀವು ಹೇಳುತ್ತಿರುವುದೇನು? ತಿರುಚುವ, ವಕ್ರೀಕರಿಸುವ ಚಾಳಿ ಬಿಡಿ. ನೀವು ಈ ರಾಜ್ಯದ ಆರೂವರೆ ಕೋಟಿ ಕನ್ನಡಿಗರ ಪ್ರತಿನಿಧಿ ಮತ್ತು ಉತ್ತರದಾಯಿ. ಉತ್ತರ ಕೊಡಿ ಸಿದ್ದರಾಮಯ್ಯನವರೇ?
ಒಂದು ವಿಡಿಯೋ ಬಗ್ಗೆ ಪ್ರಶ್ನಿಸಿದ್ದಕ್ಕೆ ನಿಮಗೆ, ನಿಮ್ಮ ಸಂಪುಟಕ್ಕೆ ನಿದ್ದೆಯೇ ಹಾರಿ ಹೋಗಿದೆ. ಕೆಲಸ ಬಿಟ್ಟು ನಿಮಗೆ ಸುವ್ವಿಸುವ್ವಾಲೆ ಹಾಡುತ್ತಿದೆ. ಅವರು ಸಚಿವರೋ, ನಿಮ್ಮ ಗಸ್ತಿಗೆ ನಿಂತ ಬೌನ್ಸರುಗಳೋ?? ಸಚಿವರನ್ನು ಗುಂಪು ಗುಂಪಾಗಿ ಛೂ ಬಿಟ್ಟರೆ ಕುಮಾರಸ್ವಾಮಿ ಹೆದರಿ ಓಡುತ್ತಾರೆಂದು ಭಾವಿಸಿದರೆ ಅದು ನಿಮ್ಮ ಪೆದ್ದುತನ.
ನಾನು ನನ್ನ ಕ್ಷೇತ್ರವನ್ನು ನನ್ನ ಮಗನಿಗೆ Out source ಕೊಟ್ಟಿರಲಿಲ್ಲ!
ವರುಣಾದ ಜನ ನಿಮ್ಮನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನೀವೇ ಅವರ ಕೆಲಸ ಮಾಡಬೇಕು. ನಿಮ್ಮ ಪುತ್ರನಿಗೆ ಕ್ಷೇತ್ರದ ‘ಹೊರಗುತ್ತಿಗೆ’ (Out source) ಯಾಕೆ? ಸಿಎಂ ಆಗಿದ್ದಾಗ ನಾನು ನನ್ನ ಮಗನಿಗೆ ಕ್ಷೇತ್ರದ ಹೊರಗುತ್ತಿಗೆ ನೀಡಿದ್ದಿಲ್ಲ. ನೀವು ಮಗನಿಗೆ ವರುಣಾದ ಹೊರಗುತ್ತಿಗೆ ನೀಡಿದ್ದೀರಿ.
ಅಷ್ಟೇ ಅಲ್ಲ, ನಿಮ್ಮ ಪುತ್ರ ಮಹಾಶಯರನ್ನು ಆಶ್ರಯ ಸಮಿತಿ ಅಧ್ಯಕ್ಷರನ್ನಾಗಿ ಮಾಡಿ, ಅವರ ನೇತೃತ್ವದಲ್ಲಿ ಕೆ.ಡಿ.ಪಿ ಸಭೆ ನಡೆಸಲು ಹಾಗೂ ಸರಕಾರಿ ಅಧಿಕಾರಿಗಳ ಸಭೆ ನಡೆಸಿ ದರ್ಬಾರ್ ಮಾಡಲು ಅನುವು ಮಾಡಿಕೊಟ್ಟಿದ್ದೀರಿ. ಇದಕ್ಕೆ ಕಾನೂನಿನಲ್ಲಿ ಅವಕಾಶ ಇದೆಯಾ? ಇದ್ದರೆ ತಿಳಿಸಿ.
CSR ಅಂದರೆ Corrupt Son Of Siddaramaiah
ನನಗೆ ತಿಳಿದಮಟ್ಟಿಗೆ ಈವರೆಗೆ ಯಾವ ಸಿಎಂ ಕೂಡ ಸ್ವಕ್ಷೇತ್ರದ ಹೊರಗುತ್ತಿಗೆ ಮಕ್ಕಳಿಗೆ ಕೊಟ್ಟಿದ್ದಿಲ್ಲ. ನೀವು ಕೊಟ್ಟು ಮೇಲ್ಪಂಕ್ತಿ ಹಾಕಿದ್ದೀರಿ. ಹಿಂಬಾಗಿಲಿನಿಂದ ಮಗನಿಗೆ ಅಧಿಕಾರ ಕೊಡಲು ಕೆ.ಡಿ.ಪಿ ಪಟ್ಟ ಕಟ್ಟಿದ್ದೀರಿ! ಸಂವಿಧಾನದಲ್ಲಿ ಇದಕ್ಕೆ ಅವಕಾಶವಿರುವ ಯಾವುದಾದರೂ ವಿಧಿ-ವಿಧಾನ ಇದೆಯಾ? ಇದ್ದರೆ ತಿಳಿಸಿ.
ನನಗೆ ತಿಳಿದಂತೆ CSR ಎಂದರೆ, Corporate social responsibility. ಈಗ ಅದು Corrupt Son Of Siddaramaiah ಆಗಿದೆ! ರಾಜ್ಯದಲ್ಲಿ CSR ಕಲೆಕ್ಷನ್ ಮಾಡಲು ನಿಮ್ಮ ಸುಪುತ್ರನಿಗೆ ಹೊರಗುತ್ತಿಗೆಯನ್ನು ನೀವೇ ಕೊಟ್ಟಿದ್ದೀರಾ, ಹೇಗೆ? 224 ಕ್ಷೇತ್ರಗಳ CSR ಉಸ್ತುವಾರಿ ಅವರದ್ದೇನಾ? 2% CSR ಮೇಲೂ ನಿಮ್ಮ ಕಾಕದೃಷ್ಟಿ ಬಿದ್ದಂತಿದೆ.
ಯತೀಂದ್ರ ಮಹದೇವು ಅವರ ಜತೆ ಚರ್ಚೆ ಮಾಡಿದ್ದು ಯಾಕೆ?
ನಿಮ್ಮ ಸಚಿವಾಲಯದ ಅಧಿಕಾರಿಗಳ ಕರ್ತವ್ಯ ಹಂಚಿಕೆ ಪಟ್ಟಿ ಪ್ರಕಾರ; ವಿಶೇಷ ಕರ್ತವ್ಯಾಧಿಕಾರಿ ಆರ್.ಮಹದೇವುಗೆ ಶಿಕ್ಷಣ ಇಲಾಖೆ ಹೊಣೆ ಇಲ್ಲ. ಜಂಟಿ ಕಾರ್ಯದರ್ಶಿ ಎಂ.ರಾಮಯ್ಯಗೆ ಆ ಹೊಣೆ ಇದೆ. ವರುಣಾ ಹೊಣೆ ಇನ್ನೊಬ್ಬ ವಿಶೇಷ ಕರ್ತವ್ಯಾಧಿಕಾರಿ ಕೆ.ಎನ್.ವಿಜಯ್ ರದ್ದು. ಇದು ಸತ್ಯಸ್ಥಿತಿ. ಅಪರ ಸತ್ಯಹರಿಶ್ಚಂದ್ರರಾದ ನೀವೇ ಸುಳ್ಳು ಹೇಳೋದೇ?
ಯತೀಂದ್ರರು ಶಿಕ್ಷಣದ ಕುರಿತು ಎಂ.ರಾಮಯ್ಯ ಜತೆ, ವರುಣಾ ಬಗ್ಗೆ ಕೆ.ಎನ್.ವಿಜಯ್ ಜತೆ ಚರ್ಚಿಸದೆ, ಇವೆರಡಕ್ಕೂ ಸಂಬಂಧವಿಲ್ಲದವೇ ‘ಸಿಆಸು’ ಸಚಿವರ ಆಪ್ತಶಾಖೆ, ವರ್ಗಾವಣೆ -ಸೇವಾ ಹೊಣೆಯ ಮಹದೇವು ಜತೆ ಫೋನ್ ಚರ್ಚೆ ನಡೆಸಿದ್ದೇಕೆ? CSRಗೂ ಅವರಿಗೂ ಸಂಬಂಧವೇನು?CSR ಶಿಕ್ಷಣ ಇಲಾಖೆಗೆ ಸಂಬಂಧಿಸಿದ್ದಲ್ಲ ಎಂದು ಮಧು ಬಂಗಾರಪ್ಪ ಕೂಡ ಹೇಳಿದ್ದಾರೆ!
ಇದನ್ನೂ ಓದಿ : Yathindra Siddaramaiah : ತ್ಯಾಗಮಯಿ ಯತೀಂದ್ರರನ್ನು ನೈತಿಕವಾಗಿ ಕುಗ್ಗಿಸುವ ಕೆಲಸವೆಂದ ಸಿಎಂ ಸಿದ್ದರಾಮಯ್ಯ!
ನೀವು ಸಿಎಮ್ಮಾ? ಟೆಲಿಫೋನ್ ಆಪರೇಟರಾ?
ಜನಹಿತಕ್ಕಾಗಿ ದನಿಯೆತ್ತಿದ ನನ್ನನ್ನು; ತಂದೆ, ಅಣ್ಣ, ಮಗನನ್ನು ಎಳೆತಂದು ಕಟ್ಟಿ ಹಾಕಲು ಸಾಧ್ಯವಿಲ್ಲ ಸಿದ್ದರಾಮಯ್ಯನವರೇ? ಕಷ್ಟದಲ್ಲಿರುವ ಜನ ‘ಎಲ್ಲಿದ್ದೀಯಪ್ಪ ಕುಮಾರಣ್ಣ?’ ಎಂದರೆ ಓಡಿ ಹೋಗುತ್ತೇನೆ. ಸತ್ಯಕ್ಕೆ ಸಮಾಧಿ ಕಟ್ಟಲು ನೀವು ಸೃಷ್ಟಿಸುತ್ತಿರುವ ಸುಳ್ಳಿನಸೌಧದ ಅಡಿಪಾಯವೇ ಈಗ ಕುಸಿಯುತ್ತಿದೆ.
ಮಾಡದ ತಪ್ಪಿಗೆ ವಿದ್ಯುತ್ ಪ್ರಕರಣದಲ್ಲಿ ದಂಡ ತೆತ್ತಿದ್ದೇನೆ, ವಿಷಾದಿಸಿದ್ದೇನೆ. ಈಗ ನಿಮ್ಮ ಪ್ರತಿಷ್ಠೆ ಮೂರಾಬಟ್ಟೆಯಾಗಿದ್ದು ಇರಲಿ, ರಾಜ್ಯದ ಮುಖ್ಯಮಂತ್ರಿಯನ್ನೇ ‘ಟೆಲಿಫೋನ್ ಆಪರೇಟರ್’ ಮಾಡಿದ ನಿಮ್ಮ ಪುತ್ರನನ್ನು ಇನ್ನೂ ಸಮರ್ಥನೆ ಮಾಡುತ್ತಿದ್ದೀರಲ್ಲಾ? ಛೀ..!
(ವಿ.ಸೂ: ಟೆಲಿಫೋನ್ ಆಪರೇಟರ್ ಗಳ ಬಗ್ಗೆ ನನಗೆ ಗೌರವವಿದೆ).
ಪೆನ್ ಡ್ರೈವ್ ತೋರಿಸಿದಾಗ ಓಡಿ ಬಂದ ಸಚಿವರ ಹೆಸರು ಹೇಳಲೇ?
ನಿಮ್ಮ, ನಿಮ್ಮ ಪುತ್ರನಿಂದ ಇಡೀ ಕರ್ನಾಟಕ ತಲೆ ತಗ್ಗಿಸುವಂತೆ ಆಗಿದೆ. ಕಾಸಿಗಾಗಿ ಹುದ್ದೆ ದಂಧೆಯಿಂದ ಕರುನಾಡನ್ನು ಕುಖ್ಯಾತಗೊಳಿಸಿದ್ದೀರಿ. ಹೋದ ಮಾನ ವಾಪಸ್ ಪಡೆಯಲಿಕ್ಕೇನು ಮಾಡುತ್ತೀರಿ? ವಿಧಾನಸೌಧದ ಮುಂದೆ ತಲೆತಗ್ಗಿಸಿ ನಿಂತು ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತೀರಾ? ಅಷ್ಟು ನೈತಿಕ ಧೈರ್ಯ ನಿಮಗೆ ಉಂಟೇ?
ಇದನ್ನೂ ಓದಿ: Yathindra Siddaramaih : ಯತೀಂದ್ರ ವರ್ಗಾವಣೆ ದಂಧೆಗೆ ಸಾಕ್ಷಿ; ಸಿಎಂ ರಾಜೀನಾಮೆಗೆ HDK ಆಗ್ರಹ
ಸಿಂಹ ಸಿಂಗಲ್ಲಾಗಿ ಬೇಟೆಯಾಡುತ್ತದೆ.. —– ಗುಂಪಾಗಿ ಬರುತ್ತದೆ!
ಪೆನ್’ಡ್ರೈವ್ ಇದೆ, ಕಳೆದಿಲ್ಲ. ಅದನ್ನು ತೋರಿಸಿದೊಡನೆ ನನ್ನಲ್ಲಿಗೆ ಓಡಿ ಬಂದವರ ಪಟ್ಟಿ ಕೊಡಲೇ?
ಸಿಎಂ ಸಾಹೇಬರೇ, ‘ಸಿಂಹ ಸಿಂಗಲ್ಲಾಗಿ ಬೇಟೆಯಾಡುತ್ತದೆ, —— ಗುಂಪಾಗಿ ಬರುತ್ತವೆ.’ ಬಿಟ್ಟಸ್ಥಳ ಭರ್ತಿ ಮಾಡಿಸುವ ಕೆಲಸ ನನ್ನಿಂದ ನೀವು ಮಾಡಿಸುವುದಿಲ್ಲ ಎಂದು ನಂಬಿದ್ದೇನೆ.
ತುರ್ತು ಚಿಕಿತ್ಸೆಯ ಅಗತ್ಯವಿರುವುದು ನಿಮ್ಮ ಅಧಿಕಾರದ ಅಂಟು ರೋಗಕ್ಕೆ
ನನ್ನ ಮಾನಸಿಕ ಸ್ವಾಸ್ಥ್ಯ ಇರಲಿ. ನಿಮ್ಮ ಅಧಿಕಾರದ ಅಂಟುರೋಗಕ್ಕೆ ಮದ್ದೇನು? ನಿಮಗಿರುವ ಧನದಾಹ ಜಾಡ್ಯಕ್ಕೆ ಚಿಕಿತ್ಸೆ ಪಡೆಯಬಾರದೇ? ಮಾನಸಿಕ ಅಸ್ವಾಸ್ಥ್ಯಕ್ಕಿಂತ ಇದು ಮಾರಕ ಮನೋರೋಗವಲ್ಲವೇ? ಮುಖ್ಯಮಂತ್ರಿಯೇ ಇಂಥ ವಿನಾಶಕಾರಿ ಕಾಯಿಲೆಗೆ ತುತ್ತಾದರೆ ನಾಡಿನ ಪಾಡೇನು? ತುರ್ತುಚಿಕಿತ್ಸೆ ನಿಮಗೆ ಅಗತ್ಯವಿದೆ.