ಬೆಂಗಳೂರು: ರಾಜ್ಯ ಸರ್ಕಾರದ ಆಡಳಿತ ವೈಫಲ್ಯವನ್ನು ಮರೆಮಾಚಿ ಜನರ ದಾರಿ ತಪ್ಪಿಸಲು, ರಾಜಕೀಯ ಲಾಭಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತೆ ಹಿಜಾಬ್ ವಿಷಯ (Hijab Row) ಪ್ರಸ್ತಾಪ ಮಾಡಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraja Bommai) ಆರೋಪಿಸಿದ್ದಾರೆ. ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎಲ್ಲೆಡೆ ಹಿಜಾಬ್ ನಿಷೇಧ (Hijab Ban) ಆಗಿಯೇ ಇಲ್ಲ. ಎಲ್ಲಿ ಡ್ರೆಸ್ ಕೋಡ್ ಇದೆ (Dress Code) ಅಲ್ಲಿ ಮಾತ್ರ ನಿಷೇಧ ಇದೆ. ಮಹಿಳೆಯರು ಬೇರೆಡೆ ಎಲ್ಲಿ ಬೇಕು ಅಲ್ಲಿ ಹಾಕಿಕೊಳ್ಳಲು ಅವಕಾಶ ಇದೆ. ಹಿಜಾಬ್ ನಿಷೇಧ ಆಗಿಯೇ ಇಲ್ಲ. ಅದನ್ನು ವಾಪಸ್ ಪಡೆಯುವ ಪ್ರಶ್ನೆ ಎಲ್ಲಿ ಬಂತು ಎಂದು ಪ್ರಶ್ನಿಸಿದರು.
1984 ರಲ್ಲಿ ಸಮಗ್ರ ಶಿಕ್ಷಣ ಕಾಯ್ದೆ ಅನ್ವಯ ಶಾಲಾ ಸಮವಸ್ತ್ರ (School Uniform) ಜಾರಿಗೆ ತರಲಾಗಿತ್ತು, ಅದನ್ನು ನಮ್ಮ ಅವಧಿಯಲ್ಲಿ ಜಾರಿಗೆ ತರಲಾಗಿತ್ತು. ಮುಖ್ಯಮಂತ್ರಿಗಳು ಅದನ್ನು ಹಿಂದೆ ಪಡೆಯುವ ಮಾನಾಡಿದ್ದಾರೆ. ಹಿಜಾಬ್ ಪ್ರಕರಣ ಈಗಾಗಲೇ ಕೊರ್ಟ್ ನಲ್ಲಿ ಇದೆ. ರಾಜಕೀಯ ಕಾರಣಕ್ಕೆ ಹಿಜಾಬ್ ಪ್ರಸ್ತಾಪ ಮಾಡಿದ್ದಾರೆ. ಇದನ್ನು ಖಂಡಿಸುತ್ತೇನೆ ಎಂದರು.
ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವಾಗ ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿಗಳು ಅಲ್ಪ ಸಂಖ್ಯಾತರಿಗೆ 10 ಸಾವಿರ ಕೋಟಿ ಕೊಡುವುದಾಗಿ ಘೋಷಣೆ ಮಾಡಿದರು. ಅಭಿವೃದ್ಧಿಗೆ ಇವರ ಬಳಿ ಹಣ ಇಲ್ಲ. ಅವರ ಪಕ್ಷದ ಶಾಸಕರೆ ಬಹಿರಂಗವಾಗಿ ಹೇಳಿದ್ದಾರೆ. ಪತ್ರ ಕೂಡ ಬರೆದಿದ್ದಾರೆ. ರಾಜ್ಯದಲ್ಲಿ ಬರ ಇದೆ. ಮಹಿಳೆಯರಿಗೆ ರಕ್ಷಣೆ ಇಲ್ಲ. ಮಕ್ಕಳಿಂದ ಶೌಚಾಲಯ ತೊಳೆಸುವ ಮಟ್ಟಕ್ಕೆ ಈ ಸರ್ಕಾರ ದಿವಾಳಿಯಾಗಿದೆ. ಎಲ್ಲ ಸಮಸ್ಯೆಗಳ ಮರೆತು ರಾಜ್ಯದ ಜನರ ದಾರಿ ತಪ್ಪಿಸಲು ಈ ರೀತಿಯ ಹೇಳಿಕೆ ಕೊಡುತ್ತಿದ್ದಾರೆ ಎಂದು ಹೇಳಿದರು.
ಶಾಲಾ ಮಕ್ಕಳಲ್ಲಿ ಒಡಕುಂಟು ಮಾಡುವ ಉದ್ದೇಶ ಇದರಲ್ಲಿ ಇದೆ. ಭವಿಷ್ಯದಲ್ಲಿ ಇದು ದೊಡ್ಡ ಮಟ್ಟದ ಪರಿಣಾಮ ಬೀರುತ್ತದೆ. ಮಕ್ಕಳಲ್ಲಿ ತಾವು ಯಾವ ಧರ್ಮಕ್ಕೆ ಸೇರಿದ್ದೇವೆ ಎಂದು ವಿಷ ಬೀಜ ಬಿತ್ತುವ ಪ್ರಯತ್ನ ನಡೆಸುತ್ತಿದೆ. ರಾಜಕೀಯ ಉದ್ದೇಶಕ್ಕೆ ಮಾಡುತ್ತಿರುವ ಈ ಪ್ರಯತ್ನಕ್ಕೆ ಜನ ತಕ್ಕ ಉತ್ತರ ನೀಡುತ್ತಾರೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಹಿಜಾಬ್ ವಿಚಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇರಾಕ್, ಇರಾನ್ ನಲ್ಲಿ ಮಹಿಳೆಯರು ಹಿಜಾಬ್ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಸುಪ್ರಿಂ ಕೋರ್ಟ್ ನಲ್ಲಿ ಪ್ರಕರಣ ಇದ್ದಾಗ ಮುಖ್ಯಮಂತ್ರಿಗಳು ಈ ಬಗ್ಗೆ ಹೇಳಿಕೆ ನೀಡುವ ಅಗತ್ಯ ಏನಿತ್ತು. ಕೋರ್ಟ್ ಈ ಬಗ್ಗೆ ಗಮನ ಹರಿಸುತ್ತದೆ ಎನ್ನುವ ವಿಶ್ವಾಸ ಇದೆ ಎಂದು ಹೇಳಿದರು.
ಇದೇ ವೇಳೆ ಬರಗಾಲದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರು ಐಷಾರಾಮಿ ಜೆಟ್ ವಿಮಾನದಲ್ಲಿ ಪ್ರಯಾಣ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಹಾಗೂ ಸಚಿವರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಬೊಮ್ಮಾಯಿ ಹೇಳಿದರು.
ರಾಜ್ಯ ಸರ್ಕಾರ ಮಾಡಿಸಿದ್ದು ಅಧಿಕೃತ ಜಾತಿಗಣತಿಯಲ್ಲ
ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಅಧಿಕೃತ ಜಾತಿಗಣತಿ ಮಾಡಿಸಿಲ್ಲ. ಹೀಗಾಗಿ ಈಗ ಬಿಡುಗಡೆ ಮಾಡುವುದು ಜಾತಿಗಣತಿಯಲ್ಲ. ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಸಭೆ ಪ್ರತಿ ವರ್ಷ ಸಮಾಜವನ್ನು ಒಗ್ಗೂಡಿಸುವ ಸಲುವಾಗಿ ಸಮ್ಮೇಳನ ನಡೆಯುತ್ತದೆ. ಈ ವರ್ಷ ದಾವಣಗೆರೆಯಲ್ಲಿ ನಡೆಸಲಾಗುತ್ತಿದೆ ಎಂದರು.
ಈ ಸಮಾವೇಶದಲ್ಲಿ ಜಾತಿಗಣತಿ ವಿರೋಧಿಸುವ ನಿರ್ಧಾರ ಕೈಗೊಳ್ಳಲಾಗುತ್ತದೆಯೇ ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದುಳಿದ ವರ್ಗದ ಆಯೋಗ ಮಾಡಿರುವುದು ಜಾತಿ ಗಣತಿಯೇ ಅಲ್ಲ. ಎಲ್ಲ ಸಮುದಾಯಗಳ ಶೈಕ್ಷಣಿಕ ಮತ್ತು ಆರ್ಥಿಕ ಪರಿಸ್ಥಿತಿ ಹೇಗಿದೆ ಅಂತ ಅಧ್ಯಯನ ಮಾಡಿದೆ. ರಾಜ್ಯ ಸರ್ಕಾರಕ್ಕೆ ಜಾತಿ ಗಣತಿ ಮಾಡುವ ಅಧಿಕಾರ ಇಲ್ಲ. ಬೇರೆ ರಾಜ್ಯಗಳ ಜಾತಿಗಣತಿಗಳ ಬಗ್ಗೆಯೂ ಸುಪ್ರೀಂ ಕೋರ್ಟ್ ನಲ್ಲಿ ಚರ್ಚೆ ನಡೆಯುತ್ತಿದೆ ಎಂದು ನುಡಿದರು.
ಈಗಿರುವ ಹಿಂದುಳಿದ ವರ್ಗದ ಅಧ್ಯಕ್ಷರು ಈಗಾಗಲೇ ಸಿದ್ಧವಾಗಿರುವ ವರದಿಯನ್ನು ಏಕೆ ಇಟ್ಟುಕೊಂಡಿದ್ದಾರೆ. ನಾವೂ ಸಾಮಾಜಿಕ ನ್ಯಾಯದ ಪರವಾಗಿದ್ದೇವೆ. ಸಾಮಾಜಿಕ ನ್ಯಾಯ ಯಾವುದೇ ಒಂದು ಪಕ್ಷದ ಸ್ವತ್ತಲ್ಲ. ಅವರಿಗೆ ಎಲ್ಲರಿಗೂ ನ್ಯಾಯ ಕೊಡಿಸಬೇಕೆಂದು ಇದ್ದರೆ ಅಧಿಕೃತ ಜಾತಿ ಗಣತಿ ಮಾಡಲಿ. ನಾವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹಿಂದುಳಿದ ವರ್ಗಗಳ ಅನೇಕ ಸಮುದಾಯಗಳಿಗೆ ನ್ಯಾಯ ಕೊಡಿಸಲು ಪ್ರಯತ್ನ ಮಾಡಿದ್ದೇವೆ. ಈ ವರದಿ ವೈಜ್ಞಾನಿಕ ವಾಗಿಲ್ಲ ಎನ್ನುವ ಮಾತಿದೆ. ಈ ವರದಿ ಬರಲಿ ಏನು ಲೋಪ ಇದೆ ನೊಡೋಣ ಎಂದು ಪ್ರತಿಕ್ರಿಯಿಸಿದರು.