ಬೆಳಗಾವಿ: ರಾಜ್ಯದಲ್ಲಿ ಈಗಲೂ ಭ್ರೂಣ ಲಿಂಗ ಪತ್ತೆ (Gender Detection) ಮತ್ತು ಭ್ರೂಣ ಹತ್ಯೆಯ (Foeticide Case) ಬೃಹತ್ ಜಾಲ ಇರುವುದರ ಬಗ್ಗೆ ಬೆಳಗಾವಿ ವಿಧಾನ ಮಂಡಲ ಅಧಿವೇಶನದಲ್ಲಿ (Belagavi Winter Session) ಕಳವಳವನ್ನು ವ್ಯಕ್ತಪಡಿಸಲಾಗಿದೆ. ಈಗಾಗಲೇ ಸಾವಿರಕ್ಕೂ ಹೆಚ್ಚು ಭ್ರೂಣಗಳನ್ನು ಹತ್ಯೆ ಮಾಡಿರುವ ಘೋರ ಕೃತ್ಯದ ಬಗ್ಗೆ ರಾಜ್ಯ ಸರ್ಕಾರ ಕಠಿಣ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕು ಎಂಬ ಆಗ್ರಹಗಳು ಕೇಳಿಬಂದಿವೆ. ಅಲ್ಲದೆ, ಈ ಪ್ರಕರಣಗಳ ಬಗ್ಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಿ, ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ದಾಖಲಿಸಿ ಎಂಬ ಸಲಹೆಗಳೂ ಕೇಳಿಬಂದಿವೆ.
ಈ ಬಗ್ಗೆ ವಿಧಾನ ಪರಿಷತ್‌ನಲ್ಲಿ ಶೂನ್ಯ ವೇಳೆಯಲ್ಲಿ ರಾಜ್ಯದ ಹಲವು ಕಡೆ ನಡೆಯುತ್ತಿರುವ ಹೆಣ್ಣು ಭ್ರೂಣ ಹತ್ಯೆಗಳಿಗೆ ಸಂಬಂಧಪಟ್ಟ ಪ್ರಕರಣದ ಬಗ್ಗೆ ಯು.ಬಿ. ವೆಂಕಟೇಶ್ ಪ್ರಸ್ತಾಪಿಸಿದ್ದು, ಈ ಬಗ್ಗೆ ಗಂಭೀರ ಕಾಯಿದೆಗಳಿವೆ. ಆದರೂ 900ಕ್ಕೂ ಹೆಚ್ಚು ಹೆಣ್ಣು ಭ್ರೂಣವನ್ನು ಹತ್ಯೆಗೈಯಲಾಗಿದೆ. ಇದರ ಬಗ್ಗೆ ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ದಾಖಲಿಸಿ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಇದರ ಬಗ್ಗೆ ರಾಜ್ಯದಲ್ಲಿ ದೊಡ್ಡ ಸಂಚಲನ ಆಗಿದೆ. ಇದರ ಜಾಲ ವಿಶಾಲವಾಗಿ ವ್ಯಾಪಿಸಿದೆ. ಅಲ್ಲದೆ, ಆರೋಗ್ಯ ಇಲಾಖೆಯಿಂದ ಸೂಕ್ತ ಮಾಹಿತಿಯನ್ನು ತರಿಸಿಕೊಂಡಿದ್ದೇವೆ. ಗೃಹ ಇಲಾಖೆ ಜತೆ ಸಭೆ ಮಾಡಿದ್ದೇವೆ. ಇದನ್ನು ತಡೆಗಟ್ಟಲು ದಿಟ್ಟ ಹೆಜ್ಜೆ ಇಡುತ್ತೇವೆ. ಯಾರೇ ಈ ಕೃತ್ಯದಲ್ಲಿ ತೊಡಗಿದ್ದರೂ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಉತ್ತರಿಸಿದರು.
ಈಗಾಗಲೇ 10 ಜನ ಅರೆಸ್ಟ್
ಭ್ರೂಣ ಹತ್ಯೆ ಪ್ರಕರಣದಲ್ಲಿ ದಿನಕ್ಕೊಂದು ಮಹತ್ತರ ಬೆಳವಣಿಗೆ ನಡೆಯುತ್ತಿದ್ದು, ಪ್ರಮುಖ ಆರೋಪಿಯಲ್ಲೊಬ್ಬನಾಗಿರುವ ಡಾ. ಚಂದನ್ ಬಲ್ಲಾಳ್ ಬಳಿ ಕೆಲಸ ಮಾಡುತ್ತಿದ್ದ ನರ್ಸ್‌ವೊಬ್ಬಳನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದರು. ಆ ಮೂಲಕ ಈವರೆಗೆ ಆರೋಪಿಗಳ ಸಂಖ್ಯೆ ಹತ್ತಕ್ಕೆ ಏರಿಕೆ ಆಗಿದೆ. ಮಂಜುಳಾ ಎಂಬ ನರ್ಸ್‌ಳನ್ನು ಕೊನೆಗೂ ಬಂಧಿಸಲಾಗಿತ್ತು. ಈಕೆಯನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಸಾಕಷ್ಟು ವಿಚಾರಗಳು ಬೆಳಕಿಗೆ ಬರುತ್ತಿವೆ. ಆರೋಪಿ ಮಂಜುಳಾ ಮೂಲತಃ ಚಾಮರಾಜನಗರದವಳು ಎಂದು ತಿಳಿದು ಬಂದಿದೆ. ಕಳೆದ ಒಂದು ವರ್ಷದಿಂದ ಡಾ. ಬಲ್ಲಾಳ್ ಜತೆ ಮೈಸೂರಿನ ರಾಜ್ ಕುಮಾರ್ ರಸ್ತೆಯ ಆಯುರ್ವೇದ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು. ಆಸ್ಪತ್ರೆಯಲ್ಲೇ ಉಳಿದುಕೊಂಡು ಭ್ರೂಣ ಹತ್ಯೆ ದಂಧೆ ನಡೆಸುತ್ತಿದ್ದಳು.
ಭ್ರೂಣಗಳನ್ನು ಟಾಯ್ಲೆಟ್‌ನಲ್ಲಿ ಫ್ಲಶ್!
ಭ್ರೂಣ ಹತ್ಯೆ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಆಘಾತಕಾರಿ ಅಂಶಗಳು ಹೊರಬೀಳುತ್ತಿವೆ. ಚಂದನ್ ಬಲ್ಲಾಳ್ ಮಾಲೀಕತ್ವದ ಮಾತಾ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಮಂಜುಳಾ, ತಿಂಗಳಿಗೆ 70ಕ್ಕೂ ಹೆಚ್ಚು ಅಬಾರ್ಷನ್ ಮಾಡಿಸುತ್ತಿದ್ದಳು. ಅಬಾರ್ಷನ್ ಮಾಡಿಸಿದ ಭ್ರೂಣಗಳನ್ನು ನಾನಾ ರೀತಿಯಲ್ಲಿ ಎಸೆಯುತ್ತಿದ್ದಳು.
ಭ್ರೂಣಗಳನ್ನು ಪೇಪರ್‌ನಲ್ಲಿ ಸುತ್ತಿ ಲ್ಯಾಬ್ ಟೆಕ್ನಿಶಿಯನ್ ನಿಸಾರ್‌ಗೆ ಕೊಡುತ್ತಿದ್ದಳು. ಆತ ಮಗುವನ್ನು ಕಾವೇರಿ ನದಿಯಲ್ಲಿ ಎಸೆದು ಬರುತ್ತಿದ್ದ. 12 ವಾರ ಕಳೆದ ಮಕ್ಕಳನ್ನು ಮೆಡಿಕಲ್ ವೇಸ್ಟ್‌ಗೆ ಹಾಕುತ್ತಿದ್ದವು. ಒಮ್ಮೊಮ್ಮೆ ಭ್ರೂಣಗಳನ್ನು ಟಾಯ್ಲೆಟ್‌ನಲ್ಲಿ ಎಸೆದು ಫ್ಲಶ್ ಮಾಡುತ್ತಿದ್ದಾಗಿ ವಿಚಾರಣೆಯಲ್ಲಿ ಹೇಳಿದ್ದಾಳೆ. ಒಂದೆರಡು ಪ್ರಕರಣಗಳಲ್ಲಿ 6 ತಿಂಗಳ ಮಕ್ಕಳನ್ನೂ ಗರ್ಭದಿಂದ ಹೊರತೆಗೆದಿದ್ದೇನೆ. ಆರು ತಿಂಗಳ ಮಗುವಿಗೂ ಜೀವ ಇರುತ್ತಿತ್ತು, ಆದರೆ ಅವುಗಳಿಗೆ ಧ್ವನಿ ಇನ್ನೂ ಬಂದಿರುವುದಿಲ್ಲ. ಆದರೆ ಹೊರ ತೆಗೆದಾಗ ಕೆಲ ಸಮಯದ ನಂತರ ಸಾಯುತ್ತಿದ್ದವು ಎಂದು ಮಂಜುಳಾ ಹೇಳಿದ್ದಾಳೆ.
ಆಪ್ತ ಸಮಾಲೋಚಕಿಯೂ ಆಗಿದ್ದ ನರ್ಸ್ ಮಂಜುಳಾ
ಭ್ರೂಣ ಹತ್ಯೆಗೆ ನರ್ಸ್ ಮಂಜುಳಾನೇ ಆಪ್ತ ಸಮಾಲೋಚಕಿ ಆಗಿರುತ್ತಿದ್ದಳು. ಪೋಷಕರ ಮನವೊಲಿಸಿ ಪ್ರಚೋದನೆ ನೀಡುತ್ತಿದ್ದಳು. ಮೂರ್ನಾಲ್ಕು ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡಿದ್ದ ಮಂಜುಳಾ, ಅದೇ ಸಂಪರ್ಕದ ಆಧಾರದ ಮೇಲೆ ಬೇರೆ ಆಸ್ಪತ್ರೆಗೆ ಬಂದ ಗರ್ಭಿಣಿಯರ ಬಗ್ಗೆ ಮಾಹಿತಿ ಸಂಗ್ರಹ ಮಾಡುತ್ತಿದ್ದಳು. ಭ್ರೂಣ ಲಿಂಗ ಪತ್ತೆಯ ಆಫರ್ ನೀಡಿ ಮಾತಾ ಆಸ್ಪತ್ರೆಯಲ್ಲಿ ಅಬಾರ್ಷನ್ ಮಾಡಿಸುತ್ತಿದ್ದಳು. ಸದ್ಯ ಮಂಜುಳಾನ್ನು ಸಂಪರ್ಕಿಸಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರನ್ನು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ.
ಇದನ್ನೂ ಓದಿ: Belagavi Winter Session: ಕಾವೇರಿದ ಚರ್ಚೆ ನಡುವೆ ಬಿಸಿ ಬಿಸಿ ಕಾಫಿ ಮಾಡಿಕೊಂಡು ಕುಡಿದ ಕೃಷ್ಣ ಬೈರೇಗೌಡ
ಗಂಭೀರ ಕ್ರಮಕ್ಕೆ ಸದನದಲ್ಲಿ ಒತ್ತಾಯ
ಭ್ರೂಣ ಹತ್ಯೆ ಜಾಲದ ಕರಾಳ ಮುಖಗಳು ಒಂದೊಂದೇ ಬಯಲಾಗುತ್ತಿದೆ. ಈಗಾಗಲೇ ಭ್ರೂಣ ಲಿಂಗ ಪತ್ತೆ ಹಾಗೂ ಭ್ರೂಣ ಹತ್ಯೆಯನ್ನು ಕಾನೂನು ಬಾಹಿರ ಎಂದು ಘೋಷಿಸಿ, ಕಠಿಣ ಕ್ರಮಗಳ ಕಾನೂನು ಇದ್ದರೂ ಇದನ್ನು ತಡೆಯಲಾಗದಿರುವ ಬಗ್ಗೆ ಈಗ ಸಾಕಷ್ಟು ಆಕ್ರೋಶಗಳು ವ್ಯಕ್ತವಾಗುತ್ತಿವೆ. ಮತ್ತೆ ಇಂಥ ಪ್ರಕರಣಗಳು ಆಗದಂತೆ ಕಾನೂನನ್ನು ಮತ್ತಷ್ಟು ಕಠಿಣ ಮಾಡಬೇಕು ಎಂದು ಸದನದಲ್ಲಿ ಒತ್ತಾಯ ಮಾಡಲಾಗಿದೆ.
ರಾಜಕೀಯಕ್ಕೆ ಸಂಬಂಧಪಟ್ಟ ಇನ್ನಷ್ಟು ಸುದ್ದಿಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ