Site icon Vistara News

Power Point with HPK : ಈ ರಾಜ್ಯ ಸರ್ಕಾರ ಎಷ್ಟು ದಿನ ಇರುತ್ತೋ ಗೊತ್ತಿಲ್ಲ; ಕೆ.ಎಸ್.‌ ಈಶ್ವರಪ್ಪ

KS Eshwarappa in Power Point with HPK

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ (Assembly election) 135 ಕ್ಷೇತ್ರವನ್ನು ಗೆಲ್ಲುತ್ತೇವೆಂದು ಕಾಂಗ್ರೆಸ್‌ನವರೇ ನಿರೀಕ್ಷೆ ಮಾಡಿರಲಿಲ್ಲ. ಜನರಿಗೆ ಗ್ಯಾರಂಟಿ ಯೋಜನೆಗಳ (Congress Guarantee Scheme) ಮಂಕು ಬೂದಿ ಎರಚಿ ಅಧಿಕಾರಕ್ಕೆ ಬಂದರು. ಈ ರಾಜ್ಯ ಸರ್ಕಾರ ಎಷ್ಟು ದಿನ ಇರತ್ತೋ ಗೊತ್ತಿಲ್ಲ. ಅಲ್ಲಿಯವರೆಗೆ ಎಷ್ಟು ಸಾಧ್ಯವೋ ಅಷ್ಟು ಬಳಿದುಕೊಂಡು ಬಿಡಲು ಶಾಸಕರು, ವಿಧಾನ ಪರಿಷತ್‌ ಸದಸ್ಯರಿಂದ ಹಿಡಿದು ಎಲ್ಲರೂ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ ಎಂದು ಮಾಜಿ ಡಿಸಿಎಂ, ಬಿಜೆಪಿ ಹಿರಿಯ ನಾಯಕ ಕೆ.ಎಸ್.‌ ಈಶ್ವರಪ್ಪ (Former Deputy CM and senior BJP leader KS Eshwarappa) ಅವರು ಪವರ್‌ ಪಾಯಿಂಟ್‌ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಹೇಳಿದರು.

ವಿಸ್ತಾರ ನ್ಯೂಸ್‌ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ “ಪವರ್‌ ಪಾಯಿಂಟ್‌ ವಿತ್‌ ಎಚ್‌ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ‌ ಕೆ.ಎಸ್.‌ ಈಶ್ವರಪ್ಪ, ಕಾಂಗ್ರೆಸ್‌ ಭ್ರಷ್ಟಾಚಾರದ ಬಗ್ಗೆ ನಾವು ಹೇಳುತ್ತಿಲ್ಲ. ಕಾಂಗ್ರೆಸ್‌ ಶಾಸಕರೇ ಪತ್ರ ಬರೆದು ಹೇಳಿದ್ದಾರೆ. ಇದು ದೇಶದ ಇತಿಹಾಸದಲ್ಲೇ ಮೊದಲು. ವರ್ಗಾವಣೆ ದಂಧೆ ಮಿತಿಮೀರಿದೆ. ಅದು ಎಷ್ಟರ ಮಟ್ಟಿಗೆ ಹೋಗಿದೆ ಎಂದರೆ ವರ್ಗಾವಣೆಯನ್ನು ಬೇರೆ ಯಾರೂ ಮಾಡಬಾರದು ಮುಖ್ಯಮಂತ್ರಿಯೇ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಅಧಿಕಾರವನ್ನು ಕೊಟ್ಟಿದ್ದಾರೆ. ಇದು ಕಳ್ಳನ ಕೈಗೆ ಕೀ ಕೊಟ್ಟಂತೆ ಆಗಿದೆ ಎಂದು ಕೆ.ಎಸ್.‌ ಈಶ್ವರಪ್ಪ ಕಿಡಿಕಾರಿದರು.

ಈ ವರ್ಗಾವಣೆ ದಂಧೆ ಸಂಬಂಧ ಮುಖ್ಯಮಂತ್ರಿ ಕಚೇರಿಯಲ್ಲಿ ವರ್ಗಾವಣೆ ದಂಧೆಗೆ ಎಷ್ಟು ಸಾವಿರ ಕೋಟಿ ರೂಪಾಯಿ ಭ್ರಷ್ಟಾಚಾರ ಆಗಿದೆ ಎಂಬುದು ದೇವರಿಗೆ ಮಾತ್ರವೇ ಗೊತ್ತು. ರಾಜ್ಯದ ಇತಿಹಾಸದಲ್ಲಿ ಇಷ್ಟೊಂದು ಭ್ರಷ್ಟಾಚಾರವನ್ನು ನಾನು ಎಲ್ಲಿಯೂ ನೋಡಿಲ್ಲ. ವರ್ಗಾವಣೆ ಭ್ರಷ್ಟಾಚಾರವನ್ನು ನಿಲ್ಲಿಸಿಯೇ ಬಿಡಿ ಎಂದು ಹೇಳುವುದಕ್ಕಿಂತ ಅದಕ್ಕೊಂದು ವ್ಯವಸ್ಥೆಯನ್ನು ತರಬಹುದಿತ್ತು. ಈ ಸರ್ಕಾರ ಯಾವಾಗ ಹೋಗುತ್ತದೆ ಎಂಬ ಬಗ್ಗೆ ಅಧಿಕಾರಿಗಳೇ ಹೇಳುತ್ತಾರೆ ಎಂದು ಕೆ.ಎಸ್.‌ ಈಶ್ವರಪ್ಪ ಆರೋಪಿಸಿದರು.

ವಿದ್ಯುತ್‌ ಇಲ್ಲದೆ ಮುಚ್ಚುತ್ತಿರುವ ಉದ್ಯಮಗಳು

ಈ ಸರ್ಕಾರದವರು ಹೇಳಿದ್ದೆಲ್ಲವೂ ಸುಳ್ಳು. ವಿದ್ಯುತ್‌ ಅನ್ನು ಉಚಿತವಾಗಿ ಕೊಡುತ್ತೇವೆ ಎಂದು ಹೇಳಿದರು. ಈಗ ವಿದ್ಯುತ್ತನ್ನೇ ಸರಿಯಾಗಿ ಕೊಡುತ್ತಿಲ್ಲ. ಸಮರ್ಪಕ ವಿದ್ಯುತ್‌ ಇಲ್ಲದೆ ಇಂದು ಎಷ್ಟೋ ಉದ್ಯಮಗಳು ಮುಚ್ಚುತ್ತಿವೆ. ಬೇರೆ ರಾಜ್ಯಗಳಿಂದ ವಿದ್ಯುತ್‌ ಖರೀದಿ ಮಾಡಿ ಕೊಡಬಹುದಿತ್ತು. ಆದರೆ, ಆ ಕೆಲಸವನ್ನು ಮಾಡಿಲ್ಲ ಎಂದು ಕೆ.ಎಸ್.‌ ಈಶ್ವರಪ್ಪ ಕಿಡಿಕಾರಿದರು.

ಇದನ್ನೂ ಓದಿ: Power Point with HPK : ಕಾಂಗ್ರೆಸ್‌ ಸರ್ಕಾರಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ ಏನೆಂಬುದೇ ಗೊತ್ತಿಲ್ಲ!

ರೈತರ ಸಮಸ್ಯೆಯನ್ನೇ ಆಲಿಸದ ಸರ್ಕಾರ

ರಾಜ್ಯದಲ್ಲಿ ಇಂತಹ ಬರ ಪರಿಸ್ಥಿತಿ ಇತ್ತೀಚಿನ ವರ್ಷಗಳಲ್ಲಿ ಬಂದಿರಲಿಲ್ಲ. ಕೆಲವು ಕಡೆ ಅತಿವೃಷ್ಟಿ ಹಾಗೂ ಅನಾವೃಷ್ಟಿ ಆಗಿದೆ. ಈಗ ರೈತ ತುಂಬಾ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆದರೆ, ಈ ಸರ್ಕಾರದ ಯಾವುದೇ ಒಬ್ಬ ಮಂತ್ರಿ ಜನರ ಬಳಿಗೆ ಹೋಗಿ ನಿಮ್ಮ ಪರವಾಗಿ ನಾವಿದ್ದೇವೆ ಎಂದು ಕೇಳಿದ್ದಾರಾ? ಉಸ್ತುವಾರಿ ಸಚಿವರು ಭೇಟಿ ನೀಡಿದ್ದಾರಾ? ಈ ಎಲ್ಲದನ್ನೂ ಬಿಟ್ಟು ಇವರು ಕೊಡುವ ಹೇಳಿಕೆ ಎಂಥದ್ದು ನೋಡಿ! ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಬೆಳೆ ನಷ್ಟದಿಂದ ಅಲ್ಲ, ದುಡ್ಡು ಸಿಗುತ್ತದೆ ಎಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರೆ ಇವರನ್ನು ಸರ್ಕಾರ ಎಂದು ಕರೆಯಬೇಕೇ? 139 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಸರ್ಕಾರವೇ ಕೊಟ್ಟ ಅಂಕಿಅಂಶವಾಗಿದ್ದರೂ ಹೀಗೆ ಹೇಳುತ್ತಾರೆಂದರೆ ಎಷ್ಟು ಸರಿ? ಎಂದು ಕೆ.ಎಸ್.‌ ಈಶ್ವರಪ್ಪ ಕಿಡಿಕಾರಿದರು.

Exit mobile version