ಬೆಂಗಳೂರು: ಮಂಗಳವಾರ (ಫೆ. 27) ರಾಜ್ಯಸಭಾ ಚುನಾವಣೆ (Rajya Sabha Election) ನಡೆಯುತ್ತಿದೆ. ಮೂರೂ ರಾಜಕೀಯ ಪಕ್ಷಗಳೂ ಚುನಾವಣೆಗೆ ಸಜ್ಜಾಗಿವೆ. ಈಗಾಗಲೇ ರಾಜಕೀಯ ಲೆಕ್ಕಾಚಾರಗಳನ್ನು ಹಾಕಲಾಗಿದೆ. ಅಲ್ಲದೆ, ಆಯಾ ಪಕ್ಷಗಳ ಶಾಸಕರಿಗೆ ವಿಪ್ ಜಾರಿ (Whip issue) ಮಾಡಲಾಗಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 4 ವರೆಗೆ ಮತದಾನ ನಡೆಯಲಿದೆ. ಇನ್ನು ಈ ಚುನಾವಣೆಯಲ್ಲಿ ಮತಗಳನ್ನು ಹೇಗೆ ದಾಖಲಿಸಬೇಕು? ಯಾವ ಮಾದರಿಯನ್ನು ಅನುಸರಿಸಬೇಕು? ಮತ ಚಲಾವಣೆಗೆ ಮೊದಲು ಯಾರಿಗೆ ಮತ ಹಾಕಿದ್ದೇವೆ ಎಂದು ಯಾರಿಗೆ ತೋರಿಸಬೇಕು? ಹೇಗೆ ಮತ ಹಾಕಿದರೆ ಅಸಿಂಧು ಆಗುತ್ತದೆ? ಎಂಬಿತ್ಯಾದಿ ಅಂಶಗಳ ಬಗ್ಗೆ ಚುನಾವಣಾಧಿಕಾರಿ ಎಂ.ಕೆ. ವಿಶಾಲಾಕ್ಷಿ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ನೀಡಲಾಗಿದ್ದು, ಮತದಾನ ಮಾಡುವವರಿಗೆ ಸ್ಪಷ್ಟ ನಿರ್ದೇಶನವನ್ನು ನೀಡಲಾಗಿದೆ. ಆದರೆ, ಪಕ್ಷೇತರ ಶಾಸಕರು ಯಾವ ರೀತಿ ಮತ ಚಲಾವಣೆ ಮಾಡಬೇಕು ಎಂಬ ಬಗ್ಗೆಯೂ ಸ್ಪಷ್ಟ ನಿರ್ದೇಶನವನ್ನು ನೀಡಲಾಗಿದೆ.
ಮತದಾನ ಮಾಡುವ ವಿಧಾನ
- ಮತ ನೀಡುವ ಉದ್ದೇಶಕ್ಕಾಗಿ, ಚುನಾವಣಾ ಅಧಿಕಾರಿಯು ಸರಬರಾಜು ಮಾಡಿರುವ ನೇರಳೆ ಸ್ಕೆಚ್ ಪೆನ್ನನ್ನು ಮಾತ್ರ ಬಳಸಬೇಕು. ಆ ಪೆನ್ನನ್ನು ಮತಪತ್ರದ ಜತೆಗೆ ನೀಡಲಾಗುತ್ತದೆ. ಇತರೆ ಯಾವುದೇ ಪೆನ್ನು, ಪೆನ್ಸಿಲು, ಬಾಲ್ಪಾಯಿಂಟ್ ಪೆನ್ನು ಅಥವಾ ಇತರೆ ಯಾವುದೇ ಗುರುತು ಮಾಡುವ ಸಾಧನವನ್ನು ಬಳಸಬಾರದು. ಏಕೆಂದರೆ ಅದು ಮತಪತ್ರವನ್ನು ಅಸಿಂಧುವನ್ನಾಗಿ ಮಾಡುತ್ತದೆ.
- ಪ್ರಥಮ ಪ್ರಾಶಸ್ತ್ಯವಾಗಿ ಆಯ್ಕೆ ಮಾಡುವ ಅಭ್ಯರ್ಥಿಯ ಹೆಸರಿನ ಎದುರು ಒದಗಿಸಿರುವ ‘ಪ್ರಾಶಸ್ತ್ಯ ಕ್ರಮ’ದ ಕಾಲಂನಲ್ಲಿ ‘1’ ಎಂಬ ಅಂಕಿಯನ್ನು ಬರೆಯುವ ಮೂಲಕ ಮತ ನೀಡಬೇಕು. ಈ ” 1 ‘ ಎಂಬ ಅಂಕಿಯನ್ನು ಕೇವಲ ಒಬ್ಬ ಅಭ್ಯರ್ಥಿಯ ಹೆಸರಿನ ಮುಂದೆ ಮಾತ್ರವೇ ಬರೆಯಬೇಕು.
- ಚುನಾಯಿಸಬೇಕಾದ ಅಭ್ಯರ್ಥಿಗಳ ಸಂಖ್ಯೆ ಒಂದಕ್ಕಿಂತ ಹೆಚ್ಚಾಗಿದ್ದರೂ “1” ಎಂಬ ಅಂಕಿಯನ್ನು ಕೇವಲ ಒಬ್ಬ ಅಭ್ಯರ್ಥಿಯ ಹೆಸರಿನ ಮುಂದೆ ಮಾತ್ರ ಬರೆಯತಕ್ಕದ್ದು.
- ಚುನಾಯಿಸಬೇಕಾದ ಅಭ್ಯರ್ಥಿಗಳ ಸಂಖ್ಯೆ ಎಷ್ಟೇ ಇದ್ದರೂ, ಸ್ಪರ್ಧಿಸುವ ಅಭ್ಯರ್ಥಿಗಳ ಸಂಖ್ಯೆಯಷ್ಟು ಪ್ರಾಶಸ್ತ್ಯಗಳು ಇರುತ್ತದೆ. ಉದಾಹರಣೆಗೆ ಆರು ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರೆ ಆ ಪೈಕಿ ನಾಲ್ವರನ್ನು ಮಾತ್ರವೇ ಚುನಾಯಿಸಬೇಕಿದ್ದರೂ ಮತದಾನ ಮಾಡುವವರು ತಮ್ಮ ಪ್ರಾಶಸ್ತ್ಯಕ್ಕನುಸಾರವಾಗಿ ಇಚ್ಛೆಯ ಅಭ್ಯರ್ಥಿಗಳ ಹೆಸರಿನ ಮುಂದೆ 1 ರಿಂದ 6 ರವರೆಗೆ ಪ್ರಾಶಸ್ತ್ಯವನ್ನು ನಮೂದಿಸಬಹುದು.
- ಉಳಿದ ಅಭ್ಯರ್ಥಿಗಳಿಗೆ ಅಂತಹ ಅಭ್ಯರ್ಥಿಗಳ ಹೆಸರುಗಳ ಮುಂದೆ ಒದಗಿಸಿರುವ ಪ್ರಾಶಸ್ತ್ಯದ ಕ್ರಮ ಕಾಲಂನಲ್ಲಿ ಮತದಾರ ಶಾಸಕರ ಪ್ರಾಶಸ್ತ್ಯಕ್ಕನುಸಾರವಾಗಿ 2, 3, 4 ಮುಂತಾಗಿ ತರುವಾಯದ ಅಂಕಿಗಳನ್ನು ನಮೂದಿಸುವ ಮೂಲಕ ಮುಂದಿನ ಪ್ರಾಶಸ್ತ್ರಗಳನ್ನು ಸೂಚಿಸಬೇಕು.
- ಯಾವುದೇ ಅಭ್ಯರ್ಥಿಯ ಹೆಸರಿನ ಮುಂದೆ ಕೇವಲ ಒಂದು ಅಂಕಿಯನ್ನು ಮಾತ್ರ ಬರೆದಿರುವುದನ್ನು ಖಾತರಿ ಮಾಡಿಕೊಳ್ಳಬೇಕು ಹಾಗೂ ಒಂದೇ ಅಂಕಿಯನ್ನು ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳ ಹೆಸರುಗಳ ಮುಂದೆ ಬರೆದಿಲ್ಲವೆಂಬುದನ್ನೂ ಖಾತರಿ ಮಾಡಿಕೊಳ್ಳಬೇಕು.
- ಪ್ರಾಶಸ್ತ್ಯಗಳನ್ನು ಅಂಕಿಗಳಲ್ಲಿ ಎಂದರೆ, 1, 2, 3 ಮುಂತಾಗಿ ಮಾತ್ರ ನಮೂದಿಸತಕ್ಕದ್ದು ಮತ್ತು ಒಂದು, ಎರಡು, ಮೂರು ಇತ್ಯಾದಿಯಾಗಿ ಪದಗಳಲ್ಲಿ ನಮೂದಿಸಬಾರದು.
- 1, 2, 3 ಮುಂತಾಗಿ ಅಂತಾರಾಷ್ಟ್ರೀಯ ರೂಪದ ಭಾರತೀಯ ಅಂಕಿಗಳನ್ನು ಅಥವಾ I, II, III ಮುಂತಾಗಿ ರೋಮನ್ ಅಂಕಿಗಳನ್ನು 1, 2, 3 ಎಂದು ದೇವನಾಗರಿ ಅಂಕಿಗಳನ್ನು ಅಥವಾ ಸಂವಿಧಾನದ ಅನುಸೂಚಿ VIII ರಲ್ಲಿ ಮನ್ನಣೆ ಪಡೆದಿರುವ ಯಾವುದೇ ಭಾರತೀಯ ಭಾಷೆಯಲ್ಲಿ ಬಳಕೆಯಲ್ಲಿರುವ ಅಂಕಿಗಳನ್ನು ನಮೂದಿಸಬಹುದು.
- ಮತಪತ್ರದಲ್ಲಿ ಮತದಾರ ಶಾಸಕರ ಹೆಸರನ್ನು ಬರೆಯಬಾರದು ಅಥವಾ ಯಾವುದೇ ಪದಗಳನ್ನು ಬರೆಯಬಾರದು ಅಥವಾ ಸಹಿ ಅಥವಾ ಕಿರು ಸಹಿಯನ್ನು ಸಹ ಹಾಕಬಾರದು. ಹಾಗೆಯೇ ಹೆಬ್ಬೆಟ್ಟಿನ ಗುರುತನ್ನು ಹಾಕಬಾರದು. ಹಾಗೆ ಮಾಡಿದರೆ ಆ ಮತ ಪತ್ರವು ಅಸಿಂಧುವಾಗುತ್ತದೆ.
- ಮತದಾರರು ಪ್ರಾಶಸ್ತ್ಯವನ್ನು ಸೂಚಿಸುವಾಗ ಇಚ್ಛೆಯ ಅಭ್ಯರ್ಥಿಗಳ ಹೆಸರುಗಳ ಮುಂದೆ ”✔” ಅಥವಾ ‘X’ ಗುರುತನ್ನು ಹಾಕಿದರೆ ಸಾಕಾಗದು. ಅಂತಹ ಮತಪತ್ರಗಳನ್ನು ತಿರಸ್ಕರಿಸಲಾಗುತ್ತದೆ. ಪ್ರಾಶಸ್ತ್ಯಗಳನ್ನು ಮೇಲೆ ವಿವರಿಸಿದಂತೆ 1, 2, 3 ಮುಂತಾಗಿ ಅಂಕಿಗಳಲ್ಲಿ ಮಾತ್ರ ನಮೂದಿಸತಕ್ಕದ್ದು.
- ಮತಪತ್ರವು ಕ್ರಮಬದ್ಧವಾದ ಮತಪತ್ರ ಎಂದಾಗಬೇಕಾದರೆ ಅಭ್ಯರ್ಥಿಗಳಲ್ಲಿ ಒಬ್ಬರ ಹೆಸರಿನ ಮುಂದೆ ‘1’ ಎಂಬ ಅಂಕಿಯನ್ನು ನಮೂದಿಸುವ ಮೂಲಕ ಪ್ರಥಮ ಪ್ರಾಶಸ್ತ್ಯವನ್ನು ಸೂಚಿಸುವುದು ಅಗತ್ಯ. ಉಳಿದ ಪ್ರಾಶಸ್ತ್ಯಗಳನ್ನು ನಮೂದಿಸುವುದು ಮತದಾರರಿಗೆ ಬಿಟ್ಟಿದ್ದು. ಅಂದರೆ ಎರಡನೆಯ ಮತ್ತು ಆನಂತರದ ಪ್ರಾಶಸ್ತ್ಯಗಳನ್ನು ನಮೂದಿಸಬಹುದು ಅಥವಾ ನಮೂದಿಸಲೇ ಇರಬಹುದು.
- ರಾಜ್ಯಸಭಾ ಚುನಾವಣೆಯಲ್ಲಿ ಮುಕ್ತ ಮತದಾನ (OPEN BALLOT SYSTEM) ಅಳವಡಿಸಿರುವುದರಿಂದ ರಾಜಕೀಯ ಪಕ್ಷಗಳಿಗೆ ಸೇರಿದ ಮತದಾರರು ತಮ್ಮ ಪ್ರಾಶಸ್ತ್ಯದ ಮತವನ್ನು ಚಲಾಯಿಸಿದ ನಂತರ ಅಂತಹ ಮತಪತ್ರವನ್ನು ಆಯಾ ರಾಜಕೀಯ ಪಕ್ಷಗಳ ಅಧಿಕೃತ ಏಜೆಂಟ್ರಿಗೆ ಮಾತ್ರ ತೋರಿಸತಕ್ಕದ್ದು, ನಂತರ ಮತಪತ್ರವನ್ನು ಮತಪೆಟ್ಟಿಗೆಯಲ್ಲಿ ಹಾಕತಕ್ಕದ್ದು.
- ಪಕ್ಷೇತರ ಮತದಾರರು ಯಾವುದೇ ರಾಜಕೀಯ ಪಕ್ಷಗಳಿಗೆ ಸೇರದೆ ಇರುವುದರಿಂದ ಅವರು ತಮ್ಮ ಪ್ರಾಶಸ್ತ್ಯದ ಮತವನ್ನು ಚಲಾಯಿಸಿದ ನಂತರ ಮತಪತ್ರವನ್ನು ಯಾರಿಗೂ ತೋರಿಸದೆ ನೇರವಾಗಿ ಮತಪೆಟ್ಟಿಗೆಯಲ್ಲಿ ಹಾಕತಕ್ಕದ್ದು
ಇದನ್ನೂ ಓದಿ: KAS Recruitment 2024: ಕೆಎಎಸ್ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್; 384 ಹುದ್ದೆಗಳಿಗೆ ಅರ್ಜಿ ಆಹ್ವಾನ!
ಹೀಗೆ ಮಾಡಿದಲ್ಲಿ ಅಸಿಂಧು ಮತ ಪತ್ರಗಳೆಂದು ಪರಿಗಣನೆ
- “1” ಎಂದು ನಮೂದಿಸದಿರುವುದು
- “1” ಎಂಬ ಅಂಕಿಯನ್ನು ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳ ಹೆಸರಿನ ಮುಂದೆ ಹಾಕುವುದು
- “1” ಎಂಬ ಅಂಕಿಯನ್ನು ಯಾವ ಅಭ್ಯರ್ಥಿಗೆ ಹಾಕಲಾಗಿದೆ ಎಂಬುದು ಸಂದೇಹಕ್ಕೆ ಆಸ್ಪದವಾಗುವಂತೆ ಹಾಕಿರುವುದು
- “1” ಎಂಬ ಅಂಕಿಯನ್ನು ಮತ್ತು 2, 3 ಮುಂತಾಗಿ ಇತರ ಕೆಲವು ಅಂಕಿಗಳನ್ನು ಕೂಡ ಒಂದೇ ಅಭ್ಯರ್ಥಿಯ ಹೆಸರಿನ ಮುಂದೆ ನಮೂದಿಸಿರುವುದು
- ಪ್ರಾಶಸ್ತ್ಯಗಳನ್ನು ಅಂಕಿಗಳಿಗೆ ಬದಲಾಗಿ ಪದಗಳಲ್ಲಿ ನಮೂದಿಸಿರುವುದು
- ಮತದಾರನನ್ನು ಗುರುತು ಹಿಡಿಯಬಹುದಾದ ರೀತಿಯಲ್ಲಿ ಯಾವುದೇ ಗುರುತು ಅಥವಾ ಬರವಣಿಗೆ ಇರುವುದು
- ಅಂಕಿಗಳನ್ನು ಗುರುತು ಮಾಡುವ ಉದ್ದೇಶಕ್ಕಾಗಿ ಚುನಾವಣಾ ಅಧಿಕಾರಿಯು ಸರಬರಾಜು ಮಾಡಿರುವ ನೇರಳೆ ಸ್ಕೆಚ್ ಪೆನ್ನಿನ ಬದಲು ಬೇರೆ ಸಾಧನದಲ್ಲಿ ಗುರುತು ಮಾಡಲಾದ ಯಾವುದೇ ಅಂಕಿ ಇರುವ ಮತಪತ್ರವು ಅಸಿಂಧುವಾಗಲಿದೆ.