ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ (Telangana assembly election 2023) ಕಾಂಗ್ರೆಸ್ ಪರ ಪ್ರಚಾರಕ್ಕೆ ತೆರಳಿರುವ ರಾಜ್ಯದ ವಸತಿ ಸಚಿವ ಜಮೀರ್ ಅಹಮದ್ ಖಾನ್ (Zameer Ahmed Khan) ಅವರು ತಂಗಿದ್ದ ಹೈದರಾಬಾದ್‌ನ ಹೋಟೆಲ್‌ಗೆ (Park Hyatt Hotel Hyderabad) ಪೊಲೀಸರು ಬುಧವಾರ ರಾತ್ರಿ ದಾಳಿ ಮಾಡಿದ್ದಾರೆ. ಹಣ ಸಂಗ್ರಹ ಮಾಡಿ ಇಟ್ಟಿರಬಹುದು ಎಂಬ ಸಂಶಯದಲ್ಲಿ ಈ ದಾಳಿ ನಡೆದಿದೆ. ಆದರೆ, ದಾಳಿಯ ವೇಳೆ ಏನೂ ಸಿಕ್ಕಿಲ್ಲ ಎಂದು ಜಮೀರ್ ಖಾನ್ ಹೇಳಿದ್ದಾರೆ.
ಜಮೀರ್ ಖಾನ್ ಅವರು ಪಂಚ ರಾಜ್ಯ ಚುನಾವಣೆಯಲ್ಲಿ ಮುಸ್ಲಿಂ ಬಾಹುಳ್ಯ ಇರುವ ಪ್ರದೇಶಗಳಲ್ಲಿ ಕಾಂಗ್ರೆಸ್ ಪಾಲಿಗೆ ಸ್ಟಾರ್ ಕ್ಯಾಂಪೇನರ್ ಆಗಿದ್ದಾರೆ. ರಾಜಸ್ಥಾನ ಮತ್ತು ತೆಲಂಗಾಣ ಚುನಾವಣೆಗೆ ಸಂಬಂಧಿಸಿದ ಪ್ರಚಾರದಲ್ಲಿ ಸಕ್ರಿಯರಾಗಿದ್ದಾರೆ. ಅವರ ಉರ್ದು ಮತ್ತು ಹಿಂದಿ ಭಾಷಣಗಳ ಮೇಲಿನ ಹಿಡಿತ ಗಮನ ಸೆಳೆದಿದೆ. ಜತೆಗೆ ಮುಸ್ಲಿಂ ಮುಖಂಡರ ಜತೆಗೆ ಸ್ನೇಹವನ್ನೂ ಹೊಂದಿದ್ದಾರೆ.
ಹೀಗೆ ತೆಲಂಗಾಣ ಚುನಾವಣೆಯಲ್ಲಿ ಮತ್ತೊಂದು ಸುತ್ತಿನ ಪ್ರಚಾರಕ್ಕಾಗಿ ಜಮೀರ್ ಖಾನ್ ಅವರು ನವೆಂಬರ್ 22ರಂದು ಹೈದರಾಬಾದ್‌ಗೆ ಭೇಟಿ ನೀಡಿದ್ದರು. ಅವರು ವಿಮಾನ ನಿಲ್ದಾಣದಿಂದ ನೇರವಾಗಿ ಹೈದರಾಬಾದ್ ನಗರದ ಪಾರ್ಕ್ ಹಯಾತ್ ಹೋಟೆಲ್‌ಗೆ ಹೋಗಿ ವಿಶ್ರಾಂತಿ ಪಡೆದಿದ್ದರು.
ನವೆಂಬರ್ 22ರ ರಾತ್ರಿ ಈ ಹೋಟೆಲ್‌ಗೆ ಪೊಲೀಸರು ದಾಳಿ ಮಾಡಿದ್ದಾರೆ. ಚುನಾವಣೆ ವೇಳೆ ಹಂಚಲು ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆಯೇ, ಹಣ ಸಂಗ್ರಹ ಮಾಡಲಾಗಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಲು ಆಗಮಿಸಿದ್ದರು.
ಇದನ್ನೂ ಓದಿ : BY Vijayendra : ಜಮೀರ್ ಖಾನ್ ಅಧಿವೇಶನಕ್ಕೆ ಬರ್ಲಿ ನೋಡ್ಕೊಳ್ತೇವೆ ಎಂದ ವಿಜಯೇಂದ್ರ
ಜಮೀರ್ ಖಾನ್ ಹೇಳುವುದೇನು?
ತಾವು ತಂಗಿದ್ದ ಹೋಟೆಲ್‌ಗೆ ಪೊಲೀಸರು ದಾಳಿ ಮಾಡಿದ ಬಗ್ಗೆ ಜಮೀರ್ ಅಹಮ್ಮದ್ ಖಾನ್ ಸಾಮಾಜಿಕ ಜಾಲತಾಣಗಳಲ್ಲಿ ಸ್ಪಷ್ಟನೆ ನೀಡಿದ್ದಾರೆ.
ನಾನು ಉಳಿದುಕೊಂಡಿರುವ ಹೈದರಾಬಾದ್ ನಗರದ ಪಾರ್ಕ್ ಹಯಾತ್ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಆದರೆ ಅವರಿಗೆ ಏನೂ ಸಿಕ್ಕಿಲ್ಲ. ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಬಿಜೆಪಿ ಮತ್ತು ರಾಜ್ಯದ ಬಿಆರ್‌ಎಸ್ ಸರ್ಕಾರ ಹತಾಶೆಗೊಂಡಿದ್ದು, ಜಂಟಿ ರಾಜಕೀಯ ದಾಳಿ ನಡೆಸಿವೆ. ಇದು ನಮ್ಮನ್ನು ಹೆದರಿಸಿ ಹಿಂದಕ್ಕೆ ಕಳುಹಿಸುವ ತಂತ್ರವಾಗಿದೆ. ಆದರೆ ನಾವು ಇದಕ್ಕೆ ಹೆದರುವುದಿಲ್ಲ ಎಂದು ಅವರು ಹೇಳಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ ನಾಯಕ ಎನ್.ಎಚ್. ಶಿವಶಂಕರ್ ರೆಡ್ಡಿ ವಾಸ್ತವ್ಯ ಇದ್ದ ಗೌರಿಬಿದನೂರಿನ ಹೋಟೆಲ್ ಮೇಲೆ ಸಹ ಚುನಾವಣಾಧಿಕಾರಿಗಳು ದಾಳಿ ಮಾಡಿದ್ದರು.