ಬೆಳಗಾವಿ: ಜಾತಿ ಗಣತಿ ವರದಿ ಬಿಡುಗಡೆ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಈ ಸಂಬಂಧ ಡಿ.ಕೆ. ಶಿವಕುಮಾರ್ ಸ್ಪಷ್ಟೀಕರಣ ನೀಡಿದ್ದು, “ನಾನು ಜಾತಿ ಗಣತಿಗೆ (Caste Census) ಎಲ್ಲಿಯೂ ವಿರೋಧ ವ್ಯಕ್ತಪಡಿಸಿಲ್ಲ. ಜಾತಿ ಗಣತಿಯ ಸಮೀಕ್ಷೆ ವೈಜ್ಞಾನಿಕವಾಗಿ (Scientific Survey) ಹಾಗೂ ವ್ಯವಸ್ಥಿತವಾಗಿ ನಡೆಯಬೇಕು ಎಂಬುದಷ್ಟೇ ನಮ್ಮ ಅಭಿಮತ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (Deputy CM DK Shivakumar) ಸ್ಪಷ್ಟನೆ ನೀಡಿದರು. ಆ ಮೂಲಕ ವರದಿಯು ವೈಜ್ಞಾನಿಕವಾಗಿಲ್ಲ ಎಂಬದನ್ನು ಪರೋಕ್ಷವಾಗಿ ಡಿಕೆಶಿ ಒಪ್ಪಿಕೊಂಡಿದ್ದಾರೆ.
ಬೆಳಗಾವಿಯ ಸುವರ್ಣಸೌಧದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡರು. ರಾಜ್ಯಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಕರ್ನಾಟಕದಲ್ಲಿ ಜಾತಿ ಗಣತಿ ಜಾರಿ ವಿಚಾರವಾಗಿ ಡಿ.ಕೆ. ಶಿವಕುಮಾರ್ ಹಾಗೂ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಹೇಳಿರುವ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ವೈಜ್ಞಾನಿಕ ಸಮೀಕ್ಷೆ ಬಗ್ಗೆ ಉತ್ತರಿಸಿದರು.
ಇದನ್ನೂ ಓದಿ: Belagavi Winter Session: ಕರ್ನಾಟಕ ಮೋಟಾರು ವಾಹನ ತೆರಿಗೆ ವಿಧೇಯಕ ಮಂಡನೆ; ಏರಲಿದೆಯೇ ದರ?
ಜಾತಿ ಗಣತಿ ಸಮೀಕ್ಷೆ ಸರಿಯಾಗಿ ನಡೆದಿಲ್ಲ ಎಂದು ನಮ್ಮ ಅನೇಕ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮನೆ, ಮನೆಗೆ ತೆರಳಿ ಸಮೀಕ್ಷೆ ನಡೆಸಿಲ್ಲ ಎಂದು ದೂರುಗಳು ಬಂದಿವೆ. ಎಲ್ಲ ಸಮುದಾಯಗಳು ಅವರ ಜನಸಂಖ್ಯೆಗೆ ಅನುಗುಣವಾಗಿ ತಮ್ಮ ಹಕ್ಕನ್ನು ಪಡೆಯಬೇಕು. ಅಲ್ಪಸಂಖ್ಯಾತರು, ಪರಿಶಿಷ್ಟರು ಸೇರಿದಂತೆ ಎಲ್ಲರೂ ತಮ್ಮ ಜನಸಂಖ್ಯೆ ಅನುಗುಣವಾಗಿ ಹಕ್ಕು ಹಾಗೂ ಅನುದಾನ ಕೇಳುತ್ತಾರೆ. ಈ ಜಾತಿ ಗಣತಿಯನ್ನು ವೈಜ್ಞಾನಿಕವಾಗಿ ಮಾಡಲಾಗಿದೆಯೇ ಎಂಬ ವಿಚಾರವಾಗಿ ನಾವು ಸ್ಪಷ್ಟೀಕರಣ ಕೇಳಿದ್ದೇವೆ. ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಮೇಲೆ ನಾವು ನಂಬಿಕೆ ಇಟ್ಟಿದ್ದೇವೆ. ಸಮಾಜದ ಎಲ್ಲ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸಿಕೊಡುವ ಕಾಂಗ್ರೆಸ್ ಪಕ್ಷದ ಬದ್ಧತೆಗೆ ನಾನು ಬೆಂಬಲವಾಗಿ ನಿಲ್ಲುತ್ತೇನೆ. ಕೇಂದ್ರ ಸರ್ಕಾರದ ವರ್ಗೀಕರಣದ ಅನ್ವಯ ನಾನು ಕೂಡ ಇತರೆ ಹಿಂದುಳಿದ ವರ್ಗದ ಸಮುದಾಯದ ನಾಯಕ. ಪಕ್ಷದ ಅಧ್ಯಕ್ಷನಾಗಿ ನಾನು ಎಲ್ಲ ವರ್ಗದ ಜನರನ್ನು ಸಮಾನವಾಗಿ ನೋಡಬೇಕು ಎಂದು ತಿಳಿಸಿದರು.
ಜಾತಿ ಗಣತಿಯ ಕೆಲವು ದಾಖಲೆಗಳು ಕಾಣೆಯಾಗಿರುವ ಬಗ್ಗೆ ವರದಿಗಳಿವೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ಈ ವಿಚಾರ ನನಗೆ ಗೊತ್ತಿಲ್ಲ. ನಾನು ಈ ಬಗ್ಗೆ ಜಯಪ್ರಕಾಶ್ ಹೆಗ್ಡೆ ಅವರೊಂದಿಗೆ ಮಾತನಾಡಿದ್ದು, ಈ ವರದಿಗೆ ಕಾರ್ಯದರ್ಶಿಗಳ ಸಹಿ ಇಲ್ಲವೆಂಬ ಮಾಹಿತಿ ಪಡೆದಿದ್ದೇನೆ. ಕಾರ್ಯದರ್ಶಿಗಳ ಸಹಿ ಇಲ್ಲದೇ ಅದು ಹೇಗೆ ಸಿಂಧುವಾಗುತ್ತದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದು ತಿಳಿಸಿದರು.
ಬೇರೆ ಪಕ್ಷಕ್ಕೆ ಹೋಗಲು ನಾನು ಹುಚ್ಚನಲ್ಲ
ಲೋಕಸಭೆ ಚುನಾವಣೆ ನಂತರ ಪ್ರಭಾವಿ ಸಚಿವರು 50-60 ಶಾಸಕರ ಸಮೇತ ಬಿಜೆಪಿ ಸೇರುತ್ತಾರೆ ಎಂಬ ಕುಮಾರಸ್ವಾಮಿ ಹೇಳಿಕೆ ನಿಮ್ಮನ್ನೇ ಗುರಿ ಮಾಡಿರುವಂತಿದೆ ಎಂದು ಕೇಳಿದಾಗ, “ನಾನು ಹುಟ್ಟುತ್ತಲೇ ಕಾಂಗ್ರೆಸ್ಸಿಗ. ಬೇರೆ ಪಕ್ಷಕ್ಕೆ ಹೋಗಲು ನಾನು ಹುಚ್ಚನಲ್ಲ. ನನಗೆ ನನ್ನದೇ ಆದ ಮೂಲ ಆದರ್ಶಗಳಿವೆ. ನನಗೆ ಗಾಂಧಿ ಕುಟುಂಬ ಹಾಗೂ ಕಾಂಗ್ರೆಸ್ ಪಕ್ಷದ ಮೇಲೆ ಅಪಾರವಾದ ನಂಬಿಕೆ ಇದೆ” ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಇದನ್ನೂ ಓದಿ: ಆ ಕಾಂಗ್ರೆಸ್ ನಾಯಕ ಟೀಮ್ ಕಟ್ಟಿಕೊಂಡು ನಿಮ್ಮ ಜತೆ ಬರ್ತಾನೆ: ಅಶೋಕ್, ವಿಜಯೇಂದ್ರಗೆ ಎಚ್‌ಡಿಕೆ ಪಿಸು ಮಾತು
ಅವರು ಮಾತನಾಡಿದ್ದಕ್ಕೆಲ್ಲ ನಾನು ಬಾಧ್ಯಸ್ಥನಲ್ಲ. ಅವರು ಏನಾದರೂ ಹೇಳಿಕೊಂಡು ತಿರುಗಲಿ, ಆ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.