ಬೆಂಗಳೂರು: ಹೌದು, ನಾನು ಸಿದ್ದರಾಮಯ್ಯಗೆ (CM Siddaramaiah) ರಾಜಕೀಯವಾಗಿ ವಿಲನ್. ಇಲ್ಲ ಎಂದವರು ಯಾರು? ಅವರಿಗೆ ನಾನು ವಿಲನ್ ಆಗದೇ ಸ್ನೇಹಿತ ಆಗಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (Former CM HD Kumaraswamy) ಅವರು ನೇರ ಮಾತುಗಳಲ್ಲಿ ಹೇಳಿದರು.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ತಾಜ್ ವೆಸ್ಟ್ಎಂಡ್ನಲ್ಲಿ ಇದ್ದೆ ಅಂತ ಪದೇ ಪದೆ ಹೇಳುತ್ತಾರೆ. ತಾಜ್ನಲ್ಲಿ ನಾನು ಮೋಜು ಮಸ್ತಿ ಮಾಡುತ್ತಿರಲಿಲ್ಲ. ಅಭಿವೃದ್ಧಿ ಕೆಲಸದ ಚರ್ಚೆ ಮಾಡುತ್ತಿದ್ದೆ. ನನ್ನ ಬಳಿ ಎಲ್ಲ ದಾಖಲಾತಿ ಇದೆ ಎಂದು ಹೇಳಿದರು.
ನನ್ನನ್ನು ಕಾಂಗ್ರೆಸ್ ನಾಯಕರು ಸಿಎಂ ಎನ್ನುವ ಗೌರವ ಇಲ್ಲದೆ ಪಪೆಟ್ ರೀತಿಯಲ್ಲಿ ನಡೆಸಿಕೊಂಡು ಅಪಮಾನ ಮಾಡಿದರು. ನಾನು ಸಿಎಂ ಆದಾಗ ಕಾಂಗ್ರೆಸ್ ಶಾಸಕರು ಇಸ್ಪೀಟ್ ಎಲೆ ಎಸೆದ ಹಾಗೆ ಅವರ ಅಹವಾಲುಗಳನ್ನು ನನ್ನ ಟೇಬಲ್ ಮೇಲೆ ಎಸೆಯುತ್ತಿದ್ದರು. ಅಂತಹವರು ನನ್ನ ಬಗ್ಗೆ ವಿಲನ್ ಎಂದು ಹೇಳುತ್ತಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದರು.
ಸರ್ಕಾರ ಬೀಳಿಸಿದ್ದ ಸಿದ್ದರಾಮಯ್ಯ
ನನ್ನ ನೇತೃತ್ವದ ಸಮ್ಮಿಶ್ರ ಸರ್ಕಾರ ಬೀಳಿಸಿದ್ದು ಸಿದ್ದರಾಮಯ್ಯ ಅವರೇ. ಇದರಲ್ಲಿ ಎರಡು ಮಾತಿಲ್ಲ. ಬಿಜೆಪಿಯವರು ಸರ್ಕಾರ ಬೀಳಿಸಿದ್ದರು ಅಂತ ಹೇಳಿದ್ದೆ. ಆದರೆ, ಅದಕ್ಕೆ ಬಿತ್ತನೆ ಹಾಕಿದ್ದು ಇದೇ ಸಿದ್ದರಾಮಯ್ಯ. ರಮೇಶ್ ಜಾರಕಿಹೊಳಿ ಯಾರು? ಅವರಿಗೂ ನನಗೂ ಶತ್ರುತ್ವ ಇತ್ತಾ? ಬೆಳಗಾವಿ ರಾಜಕೀಯ ಸರಿ ಮಾಡಿ ಎಂದು ನಾನು ಇವರಿಗೆ ಹೇಳಿದೆ. ಇವರು ಸರ್ಕಾರ ಬಿದ್ದು ಹೋಗಲಿ ಎಂದು ಸುಮ್ಮನಿದ್ದರು. ಆಗ ಬಿಜೆಪಿ ಜತೆ ಕೈ ಜೋಡಿಸಿದ್ದು ಸಿದ್ದರಾಮಯ್ಯ. ಅದಕ್ಕೆ ಸಮ್ಮಿಶ್ರ ಸರ್ಕಾರ ಬಿದ್ದು ಹೋಯಿತು ಎಂದು ಎಚ್.ಡಿ. ಕುಮಾರಸ್ವಾಮಿ ನೇರ ಆರೋಪ ಮಾಡಿದರು.
ಬಿ.ಸಿ. ಪಾಟೀಲ್ರನ್ನು ಮಂತ್ರಿ ಮಾಡಲು ಹೇಳಿದ್ದೆ
ಇಬ್ಬರು ಪಕ್ಷೇತರ ಶಾಸಕರನ್ನು ಮಂತ್ರಿ ಮಾಡಿಸಿದ್ದು ಸಿದ್ದರಾಮಯ್ಯ. ಬಿ.ಸಿ. ಪಾಟೀಲ್ ಅವರನ್ನು ಮಂತ್ರಿ ಮಾಡಲು ಹೇಳಿದ್ದೆ. ಆದರೆ, ಸಿದ್ದರಾಮಯ್ಯ ಮಾಡಲಿಲ್ಲ. ನನ್ನ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಶ್ರೀಮಂತ ಪಾಟೀಲ್, ಆರ್. ಶಂಕರ್ ಅವರನ್ನು ರೆಸಾರ್ಟ್ನಿಂದ ಕಳಿಸಿದ್ದು ಇದೇ ಸಿದ್ದರಾಮಯ್ಯ. ಅಪ್ಪಾ ನಿಮಗೊಂದು ನಮಸ್ಕಾರ. 14 ತಿಂಗಳು ನನ್ನನ್ನು ಅಧಿಕಾರದಲ್ಲಿ ಇಟ್ಟಿದ್ದಕ್ಕೆ, ಜನರ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ನಮೋ ನಮಃ. ಎಂದು ಸಿದ್ದರಾಮಯ್ಯ ಅವರಿಗೆ ಎಚ್.ಡಿ. ಕುಮಾರಸ್ವಾಮಿ ಟಾಂಗ್ ನೀಡಿದರು.
ಇದನ್ನೂ ಓದಿ: Karnataka Rajyotsava : ಸಾಮಾಜಿಕ, ಪ್ರಾದೇಶಿಕ ನ್ಯಾಯ, ಅರ್ಹತೆ, ಪ್ರತಿಭೆ ಮೇಲೆ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಸಿಎಂ ಸೂಚನೆ
ಗ್ಯಾರಂಟಿಗಳಿಗೆ ಉಗಿಯುವ ಕಾಲ ಬರುತ್ತಿದೆ
ಗೃಹಲಕ್ಷ್ಮಿ ಯೋಜನೆಯಡಿ ರಾಜಸ್ಥಾನದಲ್ಲಿ ಯಾಕೆ 10 ಸಾವಿರ ಕೊಡ್ತಿದ್ದೀರಾ? ಎಲ್ಲ ಕಡೆ ಗ್ಯಾರಂಟಿಗಳನ್ನು ಕೊಡುತ್ತಿದೆ ಕಾಂಗ್ರೆಸ್. ಈ ಕಾರಣಕ್ಕೆ ಎಲ್ಲ ಯೋಜನೆಗಳು ಹಳ್ಳ ಹಿಡಿದು ಹೋಗಿವೆ. ನಿಮ್ಮ ಗ್ಯಾರಂಟಿಗಳ ಬಗ್ಗೆ ಜನ ಛೀ ಥೂ ಎಂದು ಉಗಿಯೋ ಕಾಲ ಬರುತ್ತದೆ ಎಂದು ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.