Site icon Vistara News

TN Seetharam: ನನ್ನ ರಾಜಕೀಯ ಪ್ರವೇಶಕ್ಕೆ ಪ್ರೊ. ನಂಜುಂಡಸ್ವಾಮಿ ಕಾರಣ: ಸಿಎಂ ಸಿದ್ದರಾಮಯ್ಯ

TN Seetharam Book release function

ಬೆಂಗಳೂರು: ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಂ (TN Seetharam) ಅವರೊಂದಿಗೆ ನನಗೆ 40 ವರ್ಷಗಳ ಒಡನಾಟವಿದ್ದು, ಇವರು ಬದುಕಿನ ವಿವಿಧ ಸ್ತರಗಳ ಅನುಭವವಿರುವ ಕ್ರಿಯಾಶೀಲ ವ್ಯಕ್ತಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು. ಅಲ್ಲದೆ, ಇದೇ ವೇಳೆ ತಮ್ಮ ರಾಜಕೀಯ ಜೀವನವನ್ನು (Political Life) ಮೆಲುಕು ಹಾಕಿದ ಸಿಎಂ, ಪ್ರೊ. ನಂಜುಂಡಸ್ವಾಮಿ (Prof Nanjundaswamy) ಅವರಿಂದಲೇ ತಾವು ರಾಜಕೀಯವನ್ನು ಪ್ರವೇಶ ಮಾಡಿದ್ದಾಗಿ ವಿವರಿಸಿದರು.

ಸಾವಣ್ಣ ಪ್ರಕಾಶನದಿಂದ ಹೊರತರಲಾದ ಖ್ಯಾತ ನಿರ್ದೇಶಕ, ಲೇಖಕ ಟಿ.ಎನ್.ಸೀತಾರಾಂ ಅವರ “ನೆನಪಿನ ಪುಟಗಳು” ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಟಿ.ಎನ್.ಸೀತಾರಾಂ ಸುಮಾರು 40 ವರ್ಷಗಳ ಒಡನಾಟವಿರುವ ಆಪ್ತ ಸ್ನೇಹಿತ. ನಾನು ಲಂಕೇಶ್ ಪತ್ರಿಕಾಲಯಕ್ಕೆ ಭೇಟಿ ನೀಡುತ್ತಿದ್ದೆ. ಕಾನೂನು ವಿದ್ಯಾರ್ಥಿಯಾಗಿದ್ದಾಗ ಪ್ರೊ. ನಂಜುಂಡಸ್ವಾಮಿಯವರು ಕಾನೂನು ಕಾಲೇಜಿನ ಪ್ರಾಧ್ಯಾಪಕರಾಗಿದ್ದರು. ಆಗ ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿಯಿದ್ದ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸುತ್ತಿದ್ದರು. ಸಮಾಜವಾದಿ ಯುವಜನಸಭಾದಲ್ಲಿ ನಾನು ಸದಸ್ಯನಾಗಲು ನೆರವಾದರು. 1971ರಲ್ಲಿ ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾಗಿದ್ದಾಗ, ಸರ್ಕಾರದ ವಿರುದ್ಧ ನಡೆದ ಚಳವಳಿಯಲ್ಲಿ ನಾನು ಭಾಗಿಯಾಗಿದ್ದೆ. ನನ್ನ ರಾಜಕೀಯ ಜೀವನ ಪ್ರಾರಂಭವಾಗಲು ಪ್ರೊ. ನಂಜುಂಡಸ್ವಾಮಿಯವರೇ ಕಾರಣ ಎಂದರು.

ಸ್ಕೂಟರ್‌ನಲ್ಲಿ ಓಡಾಡುತ್ತಿದ್ದ ನೆನಪು

ಜನತಾಪಾರ್ಟಿಯಲ್ಲಿ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸಿ, ಪಕ್ಷದ ನಾಯಕರು ನನಗೆ ಪ್ರೋತ್ಸಾಹ ನೀಡಿದರು. ನಂತರ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆ ಗೆದ್ದ ನಂತರ ರಾಮಕೃಷ್ಣ ಹೆಗಡೆಯವರಿಗೆ ಬೆಂಬಲ ಸೂಚಿಸಿದೆ. ಬಳಿಕ ಕಾವಲು ಸಮಿತಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದೆ. 1984ರಲ್ಲಿ ರೇಷ್ಮೆ ಸಚಿವನಾಗಿ ಕೆಲಸ ಮಾಡಿದೆ. 1985ರಲ್ಲಿ ಜನತಾದಳದ ಪರವಾಗಿ ನಿಂತು ಜಯ ಸಾಧಿಸಿದ ನಂತರ ಪಶುಸಂಗೋಪನೆ ಸಚಿವನಾಗಿ ಕೆಲಸ ನಿರ್ವಹಿಸಿದೆ. ಆ ಸಂದರ್ಭದಲ್ಲಿ ಕಾರಣಾಂತರಗಳಿಂದ ಸಚಿವ ಸ್ಥಾನ ಕಳೆದುಕೊಳ್ಳಬೇಕಾಯಿತು. ಆ ಸಂದರ್ಭದಲ್ಲಿ ತನ್ನ ಬಳಿಯಿದ್ದ ಸ್ಕೂಟರ್‌ನಲ್ಲಿ ಓಡಾಡುತ್ತಿದ್ದ ನೆನಪುಗಳನ್ನು ಮುಖ್ಯಮಂತ್ರಿಯವರು ಸ್ಮರಿಸಿಕೊಂಡರು.

ಬಹುಮುಖ ಪ್ರತಿಭೆ

ಟಿ.ಎನ್. ಸೀತಾರಾಂ ಅವರು ಬದುಕಿನ ಎಲ್ಲ ಸ್ತರಗಳ ಅನುಭವ ಇರುವವರು. ಅವರ ವಿದ್ಯಾರ್ಥಿ ದೆಸೆ, ಸ್ನೇಹಿತರ ಒಡನಾಟ, ರಾಜಕೀಯ, ಕಲಾ ಸೇವೆಯಲ್ಲಿ ತೊಡಗಿರುವ ಸೀತಾರಾಂ ಅವರು ಬಹುಮುಖ ಪ್ರತಿಭೆ. ರಾಮಕೃಷ್ಣ ಹೆಗಡೆಯವರ ಆಪ್ತರಾಗಿರುವವರು. ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಿದ್ದರೆ, ಶಾಸಕರಾಗುವ ಸಾಧ್ಯತೆಯೂ ಇತ್ತು. ರಾಮಕೃಷ್ಣ ಹೆಗಡೆಯವರಿಗೆ ಬಹಳ ಜನಪ್ರಿಯತೆ ಇದ್ದ ಕಾರಣ, ಜನತಾ ಪಾರ್ಟಿ ಪರವಾದ ಅಲೆ ಇತ್ತು. ಆದರೆ, ಅವರು ಚುನಾವಣಾ ರಾಜಕಾರಣದಲ್ಲಿ ಯಶಸ್ವಿಯಾಗಲಿಲ್ಲ. ಒಂದು ವೇಳೆ ಅವರು ಗೆದ್ದಿದ್ದರೆ, ನಮಗೆಲ್ಲ ರಾಜಕಾರಣದಲ್ಲಿ ಮುಂದೆ ಬರಲು ಅವಕಾಶ ಸಿಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಈಗ ಅವರು ನೆನಪಿನ ಪುಟಗಳ ಪುಸ್ತಕವನ್ನು ಉತ್ತಮವಾಗಿ ಹಾಗೂ ಸತ್ಯವನ್ನೇ ಬರೆದಿದ್ದಾರೆ. ನನ್ನ ಉತ್ತಮ ಸ್ನೇಹಿತರಾಗಿರುವ ಟಿ.ಎನ್.ಸೀತಾರಾಂ ಅವರು ಬರೆದಿರುವ ಕೃತಿಯನ್ನು ಅತ್ಯಂತ ಸಂತೋಷದಿಂದ ಬಿಡುಗಡೆ ಮಾಡಿದ್ದೇನೆ ಎಂದು ತಿಳಿಸಿದರು.

ಖ್ಯಾತ ನಟ, ರಾಜಕಾರಣಿ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಅರಸು ನಂತರ ಅವರಂತೆಯೇ ಸರ್ವ ಜನಾಂಗದ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಎಂದರೆ ಸಿದ್ದರಾಮಯ್ಯ. ಅವರು ತಾವೇ ಮಾಡಿಸಿದ ಜಾತಿ ಜನಗಣತಿಯನ್ನು ಒಪ್ಪಿಕೊಂಡು, ಅದರ ಅನುಷ್ಠಾನಕ್ಕೆ ಮುಂದಾಬೇಕು ಎಂದು ಹೇಳಿದರು.

ಕೃತಿಯ ಲೇಖಕ ಟಿ.ಎನ್‌. ಸೀತಾರಾಮ್‌ ಮಾತನಾಡಿ, ತಮ್ಮ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒಡನಾಟವನ್ನು ನೆನಪಿಸಿಕೊಂಡರು. ಎತ್ತರಕ್ಕೇರಿದರೂ ಸ್ವಲ್ಪವೂ ಗರ್ವ ಇರದ ರಾಜಕಾರಣಿ ಎಂದರೆ ಸಿದ್ದರಾಮಯ್ಯ. ನಾನು ಹಲವಾರು ಮುಖ್ಯಮಂತ್ರಿಗಳೊಂದಿಗೆ ಒಡನಾಟ ಹೊಂದಿದ್ದರೂ, ಸಿದ್ದರಾಮಯ್ಯರನ್ನು ಹೆಚ್ಚು ಇಷ್ಟ ಪಡಲು ಇದೇ ಕಾರಣ ಎಂದು ಹೇಳಿದರು.

ಇದನ್ನೂ ಓದಿ: Shiva Rajkumar: ಲೋಕಸಭೆಗೆ ಸ್ಪರ್ಧಿಸಿ ಎಂದ ಡಿಕೆಶಿ; ನಾನು ರಾಜಕೀಯಕ್ಕೆ ಬರಲ್ಲ ಎಂದ ಶಿವರಾಜ್‌ಕುಮಾರ್!

ಕಾರ್ಯಕ್ರಮದಲ್ಲಿ ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ, ಲೇಖಕರಿಯರ ಸಂಘದ ಅಧ್ಯಕ್ಷೆ, ಕವಯತ್ರಿ ಎಚ್‌.ಎಲ್‌. ಪುಷ್ಪಾ, ಪತ್ರಕರ್ತ ಹಾಗೂ ಸಾಹಿತಿ ಜೋಗಿ, ಸಾವಣ್ಣ ಪ್ರಕಾಶನದ ಜಮೀಲ್‌ ಸಾವಣ್ಣ ಉಪಸ್ಥಿತರಿದ್ದರು.

Exit mobile version