Site icon Vistara News

V Somanna: ನನ್ನ ಮಗನಿಗಾಗಿ ಏನೂ ಕೇಳಿಲ್ಲ; ನಾನು ರಾಜ್ಯಸಭೆಗೆ ಬೇಡಿಕೆ ಇಟ್ಟಿದ್ದೇನೆ: ವಿ. ಸೋಮಣ್ಣ

V Somanna and bjp logo

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ (Assembly election) ಸ್ಪರ್ಧೆ ಮಾಡಿದ್ದ ಮಾಜಿ ಸಚಿವ, ಬಿಜೆಪಿ ಹಿರಿಯ ಮುಖಂಡ ವಿ. ಸೋಮಣ್ಣ (V Somanna) ಎರಡೂ ಕ್ಷೇತ್ರದಲ್ಲಿ ಸೋಲು ಕಂಡ ಬಳಿಕ ಪಕ್ಷದ ಕೆಲವು ನಾಯಕರ ವಿರುದ್ಧ ಹರಿಹಾಯುತ್ತಲೇ ಬಂದಿದ್ದಾರೆ. ಈಗ ಈ ಸಂಬಂಧ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Union Home Minister Amit Shah) ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (JP Nadda) ಅವರನ್ನು ಭೇಟಿ ಮಾಡಿ ಮನದಾಳವನ್ನು ಹಂಚಿಕೊಂಡಿದ್ದಾರೆ. ಈ ಸಂಬಂಧ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿರುವ ವಿ. ಸೋಮಣ್ಣ, ತಮ್ಮ ಮಗನಿಗಾಗಿ ವರಿಷ್ಠರ ಬಳಿ ಏನನ್ನೂ ಕೇಳಿಲ್ಲ. ಆದರೆ, ನನಗೆ ರಾಜ್ಯಸಭಾ ಸದಸ್ಯತ್ವ (Rajya Sabha membership) ನೀಡುವಂತೆ ಮನವಿ ಮಾಡಿದ್ದೇನೆ ಎಂದು ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ವಿ. ಸೋಮಣ್ಣ, ದೆಹಲಿಗೆ ಹೋಗಿದ್ದೆ, ಹಿರಿಯ ನಾಯಕರ ಭೇಟಿ ಮಾಡಿ ಬಂದೆ‌. ಸಾಮಾನ್ಯ ಜನರ ಕುಟುಂಬ ಬಡವರಾಗಿ ಉಳಿಯಬಾರದು ಅಂತ ಕೆಲಸ ಮಾಡಿದ್ದೆ. ಅದು ಬೇರೆ ರೀತಿ ನೆರವಾಗುತ್ತದೆ ಅನ್ನೋದು ದೆಹಲಿ ಪ್ರವಾಸದಲ್ಲಿ ಕಂಡುಬಂತು. ಜೆ.ಪಿ. ನಡ್ಡಾ ಹಾಗೂ ಅಮಿತ್ ಶಾ ಅವರನ್ನು ಭೇಟಿ ಮಾಡಿ ಅವರ ಅಂತರಾಳದ ಮಾತುಗಳನ್ನು ಕೇಳಿದೆ. ರಾಷ್ಟ್ರೀಯ ನಾಯಕರ ಅಂತರಾಳದಲ್ಲಿ ಇಷ್ಟು ಒಳ್ಳೆಯ ಮನಸ್ಸಿದೆ ಅನ್ನೋದು ತಿಳಿಯಿತು. ರಾಷ್ಟ್ರಕ್ಕೆ ನರೇಂದ್ರ ಮೋದಿ ಅವರ ಅವಶ್ಯಕತೆ ಇದೆ. ಹೀಗಾಗಿ ಕೆಲಸ ಮಾಡಿ ಮುಂದೆ ತೀರ್ಮಾನ ಮಾಡುತ್ತೇನೆ ಎಂದು ಹೇಳಿದರು.

28 ಲೋಕಸಭಾ ಕ್ಷೇತ್ರದಲ್ಲಿನ ಎಲ್ಲ ವಿವರವನ್ನೂ ನೀಡಿ ಬಂದಿದ್ದೇನೆ. 28 ಕ್ಷೇತ್ರದ ಬಗ್ಗೆ ಹೇಳುತ್ತಿದ್ದಂತೆ ನಿಮಗೆ ಏನಾಗಬೇಕು ಅಂತ ಅಮಿತ್‌ ಶಾ ಕೇಳಿದರು. ನಾನು ರಾಜ್ಯಸಭೆಗೆ ಟಿಕೆಟ್ ಕೇಳಿದೆ. ನಾನು ಐದರಿಂದ ಹತ್ತು ನಿಮಿಷ ಚರ್ಚೆಗೆ ಅವಕಾಶ ಕೇಳಿದೆ. ಅವರು ಅರ್ಧ ಗಂಟೆ ಸಮಯ ಕೊಟ್ಟರು. ನನಗೆ 73 ವರ್ಷವಾಗಿದ್ದರೂ ಆರೋಗ್ಯವಾಗಿದ್ದೇನೆ. ಯಾವುದಾದರೂ ಮೂರು ಲೋಕಸಭಾ ಕ್ಷೇತ್ರವನ್ನು ಕೊಡಿ ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಹೇಳಿರುವುದಾಗಿ ವಿ. ಸೋಮಣ್ಣ ತಿಳಿಸಿದರು.

ರಾಜ್ಯಾಧ್ಯಕ್ಷರು ಒಳ್ಳೆಯ ಕ್ರಮ ತೆಗೆದುಕೊಂಡಿದ್ದಾರೆ

ಅರುಣ್ ಸೋಮಣ್ಣಗೆ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಕೈ ತಪ್ಪಿದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ವಿ. ಸೋಮಣ್ಣ, ನನ್ನ ಮಗನಿಗಾಗಿ ನಾನು ಏನನ್ನೂ ಕೇಳಿಲ್ಲ‌. ಬೆಂಗಳೂರು ದಕ್ಷಿಣ ಕ್ಷೇತ್ರದ ಅಧ್ಯಕ್ಷರಾಗಿ ರಾಮಮೂರ್ತಿ ಆಗಿದ್ದಾರೆ. ಅವರು ನಮ್ಮ ಹುಡುಗನೇ. ಎರಡು ಬಾರಿ ಕಾರ್ಪೊರೇಟರ್ ಆಗಿದ್ದಾರೆ. ಈಗ ಶಾಸಕ ಕೂಡ ಆಗಿದ್ದಾನೆ, ಒಳ್ಳೆಯದಾಗಲಿ. ಹಲ್ಕಾ ಕೆಲಸ ಮಾಡಿದವರು ಆಗಬಾರದು ಅನ್ನೋದೆ ನಮ್ಮ ಉದ್ದೇಶವಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷರು ಒಳ್ಳೆಯ ಕ್ರಮವನ್ನು ತೆಗೆದುಕೊಂಡಿದ್ದಾರೆ. ಇನ್ನು ಈ ಕ್ಷೇತ್ರದಲ್ಲಿ ನನ್ನದೇ ಆದ ಕೊಡುಗೆ ಇದೆ. ಸವಿತಾ ಸಮಾಜದಿಂದ ಹಿಡಿದು ಅನೇಕ ಸಮುದಾಯಕ್ಕೆ ಸಹಾಯ ಮಾಡಿದ್ದೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಅನಂತ್‌ ಕುಮಾರ್‌ ಹೆಗಡೆ ಹಾಗೆ ಹೇಳಬಾರದಿತ್ತು

ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ ಅವರ ಹೇಳಿಕೆಯನ್ನು ನಾನು ಗಮನಿಸಿದ್ದೇನೆ. ಅವರನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಅವರು ತುಂಬಾ ಒಳ್ಳೆಯ ವ್ಯಕ್ತಿ, ಹೇಳಿಕೆ ಕೊಡುವಾಗ ನನ್ನ ಹಾಗೇ ಏನೇನೋ ಹೇಳಿಬಿಡುತ್ತಾರೆ. ಸಿದ್ದರಾಮಯ್ಯ ಅವರು ಏನೇನೋ ಮಾತನಾಡುತ್ತಾರೆ ಅಂತ ನಾವು ಹಾಗೆ ಹೇಳಬಾರದು. ಹೆಗಡೆ ಅವರು ಸುಸಂಸ್ಕೃತ ಕುಟುಂಬದಿಂದ ಬಂದವರು. ನಾವು ಮಾತನಾಡುವಾಗ ಅವರು ಏಳು ಕೋಟಿ ಜನರ ಸಿಎಂ ಅಂತ ನೋಡ ಮಾತನಾಡಬೇಕು. ಅವರು ಸಿಎಂ ಹೇಗಾದರು ಅನ್ನೋ ಚರ್ಚೆ ಬೇಡ. ಅವರ ಬಗ್ಗೆ ಮಾತನಾಡುವಾಗ ಹೇಳಿಕೆಯನ್ನು ಹೇಗೆಂದರೆ ಹಾಗೆ ಹೇಳಿಕೆ ಕೊಡಬಾರದು ಎಂದು ಪ್ರಶ್ನೆಯೊಂದಕ್ಕೆ ವಿ. ಸೋಮಣ್ಣ ಉತ್ತರಿಸಿದರು.

ಇದನ್ನೂ ಓದಿ: BJP Karnataka: 39 ಸಂಘಟನಾತ್ಮಕ ಜಿಲ್ಲೆಗಳಿಗೆ ನೂತನ ಬಿಜೆಪಿ ಅಧ್ಯಕ್ಷರ ನೇಮಕ

ಅಯೋಧ್ಯೆ ರಾಮಮಂದಿರ ಕೀರ್ತಿ ಮೋದಿಗೆ ಸಲ್ಲಿಕೆ

ಅಯೋಧ್ಯೆಗೆ ಹೋಗುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ವಿ. ಸೋಮಣ್ಣ, ಅಯೋಧ್ಯೆ ಶ್ರೀರಾಮಚಂದ್ರನ ಇತಿಹಾಸವನ್ನು ವಿಶ್ವಕ್ಕೆ ಪರಿಚಯಿಸಲಾಗುತ್ತಿದೆ. 147 ರಾಷ್ಟ್ರದ ನಾಯಕರು ಇಲ್ಲಿಗೆ ಬರುತ್ತಿದ್ದಾರೆ. ಅದರ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದು ವಿ. ಸೋಮಣ್ಣ ಹೇಳಿದರು.

Exit mobile version