ಮುಂಬಯಿ: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಬಿಡಿಸಲಾಗದ ಹಂತಕ್ಕೆ ಹೋಗುತ್ತಿರುವಂತೆ, ಇದನ್ನು ಬಗೆಹರಿಸಿ ಅಂತಿಮ ನಿರ್ಣಯ ನೀಡಬಲ್ಲ ರಾಜ್ಯಪಾಲರ ನಿರ್ಣಾಯಕ ಅಧಿಕಾರದತ್ತ ಎಲ್ಲರ ಗಮನ ಹರಿಯುತ್ತಿದೆ.
ಸಂವಿಧಾನದ 174(2)(b) ಆರ್ಟಿಕಲ್ ಮೂಲಕ ದತ್ತವಾಗಿರುವ ಅಧಿಕಾರದಂತೆ ಈಗ ರಾಜ್ಯಪಾಲರು ಸಂಪುಟದ ಸಲಹೆಯ ಮೇರೆಗೆ ವಿಧಾನಸಭೆಯನ್ನು ವಿಸರ್ಜಿಸುವ ಅಧಿಕಾರ ಹೊಂದಿದ್ದಾರೆ. ಆದರೆ ಇಂಥ ಸಂದರ್ಭಗಳಲ್ಲಿ ರಾಜ್ಯಪಾಲರು ತಮ್ಮ ವಿವೇಚನೆ ಉಪಯೋಗಿಸಿ ಕ್ರಮ ತೆಗೆದುಕೊಳ್ಳಬಹುದು.
ಸದನದಲ್ಲಿ ವಿಶ್ವಾಸಮತಕ್ಕೆ ಸಂಬಂಧಪಟ್ಟಂತೆ 2020ನೇ ಇಸವಿಯಲ್ಲಿ “ಶಿವರಾಜ್ ಸಿಂಗ್ ಚೌಹಾಣ್ ಮತ್ತು ಇತರರು ವರ್ಸಸ್ ಸ್ಪೀಕರ್ʼ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ನಿರ್ಣಾಯಕವಾಗಿದೆ. ಸಂವಿಧಾನದ 175(ಎ) ಆರ್ಟಿಕಲ್ ಪ್ರಕಾರ ಮುಖ್ಯಮಂತ್ರಿಗೆ ವಿಶ್ವಾಸಮತ ಯಾಚಿಸಲು ರಾಜ್ಯಪಾಲರು ಆದೇಶಿಸಬಹುದು.
2020ರಲ್ಲಿ ಮಧ್ಯಪ್ರದೇಶ ರಾಜ್ಯಪಾಲರು ಇಂಥ ಸನ್ನಿವೇಶ ಎದುರಿಸಿದ್ದರು. ಜ್ಯೋತಿರಾದಿತ್ಯ ಸಿಂಧ್ಯಾ ಮತ್ತು ಶಾಸಕರ ಬಣ ಕಾಂಗ್ರೆಸ್ ತೊರೆದಿತ್ತು. ಮುಖ್ಯಮಂತ್ರಿ ಕಮಲ್‌ನಾಥ್ ಅವರು ವಿಧಾನಸಭೆ ವಿಸರ್ಜಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದರು. ಆದರೆ ಅದರ ಬದಲಾಗಿ ರಾಜ್ಯಪಾಲರು ವಿಶ್ವಾಸಮತ ಪರೀಕ್ಷೆಗೆ ಆದೇಶಿಸಿದ್ದರು.
ವಿಧಾನಸಭೆ ಅಧಿವೇಶನ ನಡೆಯುತ್ತಿರುವಾಗ ವಿಶ್ವಾಸಮತ ಪರೀಕ್ಷೆಗೆ ಸ್ಪೀಕರ್ ಆದೇಶಿಸಬಹುದು. ಆದರೆ ಅಧಿವೇಶನ ಇಲ್ಲದಿದ್ದಾಗ ರಾಜ್ಯಪಾಲರು ಈ ಕುರಿತು ನಿರ್ಣಯ ತೆಗೆದುಕೊಳ್ಳಬಹುದು.
ಇದೇ ಹೊತ್ತಿನಲ್ಲಿ, ಇತರ ಪಕ್ಷಗಳು ಮೂಲಕ ರೆಸಾರ್ಟ್‌ಗೆ ಸೆಳೆದೊಯ್ಯಲ್ಪಟ್ಟ ಶಾಸಕರನ್ನು ಮರಳಿ ಕರೆಸುವ ಅಧಿಕಾರಸ್ಥ ಪಕ್ಷದ ಅಧಿಕಾರವನ್ನೂ ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ. ಆದರೆ ಸರಕಾರದಲ್ಲಿ ತಾವು ಮುಂದುವರಿಯಬೇಕೇ ಬೇಡವೇ ಎಂಬುದನ್ನು ನಿರ್ಧರಿಸುವುದು ಶಾಸಕರ ಹಕ್ಕು; ಆದರೆ ಅದು ಸದನದಲ್ಲಿ ನಡೆಯಬೇಕು ಎಂದು ಹೇಳಿದೆ.
ಇದನ್ನೂ ಓದಿ: Maharashtra politics: ಏಕನಾಥ್ ಶಿಂಧೆ ಟೀಮಲ್ಲಿ 37+ ಶಾಸಕರು, ಏನಿದು 37ರ ಮಹಿಮೆ?
ಮಹಾರಾಷ್ಟ್ರ ರಾಜ್ಯಪಾಲರಾದ ಭಗತ್ ಸಿಂಗ್ ಕೋಶ್ಯಾರಿ ಅವರಿಗೂ ಉದ್ಧವ್ ಠಾಕ್ರೆಗೂ ಅಂಥ ಉತ್ತಮ ಸಂಬಂಧವೇನಿಲ್ಲ. ಈಗ ಎಂವಿಎ ಸರ್ಕಾರ ಅಧಿಕಾರದಲ್ಲಿ ಉಳಿಯಲು ಬೇಕಾದ ನಂಬರ್ ಹೊಂದಿದೆಯೇ ಎಂದು ಕೊಶ್ಯಾರಿ ಅಂತಿಮವಾಗಿ ನಿರ್ಧರಿಸಲಿದ್ದಾರೆ.
ಒಂದು ವೇಳೆ ಸರ್ಕಾರ ಅಲ್ಪಮತಕ್ಕೆ ಇಳಿದರೆ ಉದ್ಧವ್ ಠಾಕ್ರೆ ಅಧಿಕಾರದಿಂದ ಕೆಳಗಿಳಿಯಬೇಕಾಗುತ್ತದೆ. ರಾಜ್ಯಪಾಲರು ಅವರನ್ನು ವಿಶ್ವಾಸಮತ ಸಾಬೀತುಪಡಿಸುವಂತೆ ಕೇಳಬಹುದು. ಮತ್ತೊಂದು ಸಾಧ್ಯತೆಯೆಂದರೆ ಶಿಂಧೆ ನೇತೃತ್ವದ ಗುಂಪು ಕೋಶ್ಯಾರಿಯನ್ನು ಸಂಪರ್ಕಿಸಿ ತಮಗೆ ಬಿಜೆಪಿ ಬೆಂಬಲ ಇದೆ ಎಂದು ತಿಳಿಸಬಹುದು. ಆ ಸಂದರ್ಭದಲ್ಲಿ, ರಾಜಭವನ ಮೊದಲು ಸರಕಾರದ ಬಹುಮತ ಅಥವಾ ಅಲ್ಪಮತ ಖಚಿತಪಡಿಸಿಕೊಂಡು ಮುಂದುವರಿಯಬೇಕಾಗುತ್ತದೆ.
ಪಕ್ಷಾಂತರ ನಿಷೇಧ ಕಾಯಿದೆಯ ಪ್ರಕಾರ, ಶಿಂಧೆ ನೇತೃತ್ವದ ಬಣದಲ್ಲಿರುವ ಶಾಸಕರ ಸಂಖ್ಯೆಯು ವಿಧಾನಸಭೆಯಲ್ಲಿರುವ ಶಿವಸೇನೆ ಶಾಸಕರ (55) ಮೂರನೇ ಎರಡು ಭಾಗಕ್ಕಿಂತ ಕಡಿಮೆಯಿದ್ದರೆ ಅವರನ್ನು ಅನರ್ಹಗೊಳಿಸಲಾಗುತ್ತದೆ. ಅಂದರೆ 37 ಶಾಸಕರು ಇರಬೇಕು. 37 ಸದಸ್ಯರನ್ನು ಒಟ್ಟುಗೂಡಿಸಲು ಯಶಸ್ವಿಯಾದರೆ ಮತ್ತು ಅನರ್ಹತೆಯನ್ನು ತಪ್ಪಿಸಿದರೆ ಶಿಂಧೆ ಬಣವನ್ನು ಮೂಲ ಶಿವಸೇನೆಯ ಶಾಸಕಾಂಗ ಗುಂಪು ಎಂದು ಪರಿಗಣಿಸಬಹುದು. ಅನರ್ಹಗೊಂಡರೆ ಶಾಸಕರು ಚುನಾವಣೆ ಎದುರಿಸಬೇಕಾಗುತ್ತದೆ.
ಇದನ್ನೂ ಓದಿ: Maha Politics | ರೆಬೆಲ್ ಶಾಸಕರ ಅನರ್ಹತೆಗೆ ಸೇನೆ ಮನವಿ; ಗಾಡಿ ತುಂಬಾ ಮುಂದೆ ಹೋಗಿದೆ ಎಂದ ಶಿಂಧೆ