ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ (Congress Karnataka) ಆಂತರಿಕ ಭಿನ್ನಮತ ದಿನೇ ದಿನೆ ಹೆಚ್ಚುತ್ತಲಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಬಣಗಳ ನಡುವಿನ ತಿಕ್ಕಾಟಗಳು ಜೋರಾಗಿವೆ. ಹೇಗಾದರೂ ಮಾಡಿ ಡಿ.ಕೆ. ಶಿವಕುಮಾರ್ ಅವರನ್ನು ಬಗ್ಗುಬಡಿಯಬೇಕು ಎಂದು ಪಣತೊಟ್ಟಿರುವ ದಲಿತ ಮತ್ತು ಸಿಎಂ ಆಪ್ತ ಸಚಿವರು ಹೆಚ್ಚುವರಿ ಡಿಸಿಎಂ ಹುದ್ದೆಗೆ ಬೇಡಿಕೆ ಇಟ್ಟಿದ್ದಾರೆ. ಆದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (AICC president Mallikarjun Kharge) ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ (Randeep Singh Surjewala), ಇಂಥ ಪ್ರಸ್ತಾವನೆ ತಮ್ಮ ಮುಂದೆ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಆದರೂ, ಎದುರಾಳಿ ಬಣ ಪ್ರಯತ್ನ ಬಿಡದ ಹಿನ್ನೆಲೆಯಲ್ಲಿ ಡಿಕೆಶಿ ಮಾಸ್ಟರ್ ಸ್ಟ್ರೋಕ್ ಕೊಟ್ಟಿದ್ದಾರೆ. ಇಂಥ ಹೇಳಿಕೆ ಕೊಡುವವರಿಗೆ ಎಲೆಕ್ಷನ್ ಜವಾಬ್ದಾರಿ ಕೊಡಿ ಎಂದು ಸಲಹೆ ನೀಡಿದ್ದಾರೆ.
ರಾಜ್ಯದಲ್ಲಿ ಹೆಚ್ಚುವರಿ ಡಿಸಿಎಂ ಹುದ್ದೆ ಚೆಂಡು ಈಗ ಪುನಃ ಹೈಕಮಾಂಡ್ ಅಂಗಳಕ್ಕೆ ತಲುಪಿದೆ. ಸಿದ್ದರಾಮಯ್ಯ ಬಣದ ಸಚಿವರು ದೆಹಲಿಯಲ್ಲಿ ಲಾಬಿ ನಡೆಸುತ್ತಿದ್ದು, ಈ ಸಂಬಂಧ ಕಳೆದ ಒಂದು ವಾರದಿಂದ ಮೀಟಿಂಗ್ ಮೇಲೆ ಮೀಟಿಂಗ್ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ರಣದೀಪ್ ಸಿಂಗ್ ಸುರ್ಜೇವಾಲ ಅವರು ಯಾವುದೇ ಕಾರಣಕ್ಕೂ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಮಾಡುವುದಿಲ್ಲ ಎಂದು ಹೇಳಿದರೂ ಸಿಎಂ ಬಣ ಪಟ್ಟು ಬಿಡುತ್ತಿಲ್ಲ.
ಪ್ರತ್ಯಾಸ್ತ್ರ ಬಿಟ್ಟ ಡಿಕೆಶಿ
ಈ ಬೆಳವಣಿಗೆಯಿಂದ ಸಿಟ್ಟಿಗೆದ್ದ ಡಿ.ಕೆ. ಶಿವಕುಮಾರ್ ಪ್ರತ್ಯಾಸ್ತ್ರ ಬಿಟ್ಟಿದ್ದಾರೆ. ಇಂತಹ ಹೇಳಿಕೆ ಕೊಡುವವರಿಗೆ ಎಲೆಕ್ಷನ್ ಜವಾಬ್ದಾರಿಯನ್ನು ಕೊಡಿ. ಅಲ್ಲದೆ, ಅವರನ್ನೇ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿ ಮಾಡಿ. ಆ ಮೂಲಕ ಪ್ರಬಲ ಅಭ್ಯರ್ಥಿ ಕೊರತೆಯನ್ನು ನೀಗಿಸಿ ಎಂದು ಸಲಹೆ ಕೊಟ್ಟಿದ್ದಾರೆ ಎನ್ನಲಾಗಿದೆ.
ಹೀಗೆಲ್ಲ ಮಾತನಾಡುವ 8 ಸಚಿವರ ಪಟ್ಟಿಯನ್ನು ಡಿ.ಕೆ. ಶಿವಕುಮಾರ್ ಹೈಕಮಾಂಡ್‌ಗೆ ನೀಡಿದ್ದಾರೆ ಎನ್ನಲಾಗಿದೆ. ಈ ಸಚಿವರನ್ನು ಬರುವ ಲೋಕಸಭೆಯಲ್ಲಿ ಸ್ಪರ್ಧೆಗೆ ಇಳಿಸಲು ಸಲಹೆ ಕೊಟ್ಟಿದ್ದಾರೆ. ಅವರು ಅಲ್ಲಿ ಗೆದ್ದು ತೋರಿಸಲಿ, ಆ ಮೂಲಕ ಅಭ್ಯರ್ಥಿಯ ಕೊರತೆಯೂ ನೀಗಿದಂತೆ ಆಗುತ್ತದೆ ಎಂದು ಹೇಳಿದ್ದಾರೆನ್ನಲಾಗಿದೆ.
ಡಿಕೆಶಿ ಪಟ್ಟಿಯಲ್ಲಿ ಯಾರು ಯಾರಿದ್ದಾರೆ?
- ತುಮಕೂರು – ರಾಜಣ್ಣ / ಪರಮೇಶ್ವರ್
- ಚಾಮರಾಜನಗರ- ಡಾ. ಎಚ್.ಸಿ. ಮಹದೇವಪ್ಪ
- ಬೆಳಗಾವಿ – ಸತೀಶ್ ಜಾರಕಿಹೊಳಿ
- ಕೋಲಾರ – ಮುನಿಯಪ್ಪ
- ಬೆಂಗಳೂರು ಉತ್ತರ – ಕೃಷ್ಣಬೈರೇಗೌಡ
- ಬೆಂಗಳೂರು ಕೇಂದ್ರ – ಜಮೀರ್ ಅಹಮದ್ ಖಾನ್
- ಬೀದರ್ – ಈಶ್ವರ್ ಖಂಡ್ರೆ
- ಬಳ್ಳಾರಿ – ನಾಗೇಂದ್ರ
ಈ ಎಂಟು ಸಚಿವರನ್ನು ಕಣಕ್ಕೆ ಇಳಿಸುವ ಬಗ್ಗೆ ಡಿ.ಕೆ. ಶಿವಕುಮಾರ್ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Congress Guarantee: ಕಾಂಗ್ರೆಸ್ ಚೇಲಾಗಳ ಬಿರಿಯಾನಿ ಊಟಕ್ಕೆ 150 ಕೋಟಿ ರೂ.: ಆರ್. ಅಶೋಕ್ ಕಿಡಿ
ಸ್ಪರ್ಧೆಗೆ ಆಸಕ್ತಿ ತೋರದ ಸಚಿವರು
ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಗಾಗಿ ಇಷ್ಟೆಲ್ಲ ಹೋರಾಟ ಮಾಡುತ್ತಿರುವ ಸಚಿವರ ಗುಂಪು, ರಾಷ್ಟ್ರ ರಾಜಕಾರಣದ ಬಗ್ಗೆ ಮಾತ್ರ ತಮಗೆ ಆಸಕ್ತಿ ಇಲ್ಲ ಎಂದು ಹೇಳುತ್ತಿದ್ದಾರೆ. ನಮಗೆ ಬೇಡ ನಾವು ಸೂಚಿಸಿದವರಿಗೆ ಕೊಡಿ ಎಂದು ಹೇಳ್ಳುತ್ತಿದ್ದಾರೆ. ಆದರೆ, ಈಗ ಹೀಗೆಲ್ಲ ಮಾತನಾಡುವ ಇವರನ್ನು ಕಣಕ್ಕೆ ಇಳಿಸಬೇಕು ಎಂದು ಡಿ.ಕೆ. ಶಿವಕುಮಾರ್ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಇದು ಈಗ ಸಚಿವರ ಆತಂಕಕ್ಕೆ ಕಾರಣವಾಗಿದೆ. ಡಿಸಿಎಂ ಹುದ್ದೆ ಸೃಷ್ಟಿ ಹಿಂದೆ ಬಿದ್ದು, ಇರುವ ಸಚಿವಗಿರಿಯನ್ನೂ ಕಳೆದುಕೊಂಡರೆ ಎಂಬ ಆತಂಕ ಎದುರಾಗಿದೆ. ಆದರೆ, ದೆಹಲಿಯಲ್ಲಿ ನಡೆಯುವ ಸಭೆಯಲ್ಲಿ ಸ್ಪರ್ಧೆ ಬಗ್ಗೆ ಅಂತಿಮ ನಿರ್ಧಾರಗಳು ಹೊರಬೀಳಲಿವೆ.