ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ (Congress Government) ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ (Congress Guarantee) ಬಗ್ಗೆ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ (Infosys Narayana Murthy) ಅವರಿಂದ ಆಕ್ಷೇಪ ಕೇಳಿಬಂದಿದೆ. ಯಾವುದನ್ನೂ ಉಚಿತವಾಗಿ ನೀಡಬಾರದು. ನಾನು ಹೆಚ್ಚು ತೆರಿಗೆ ಕಟ್ಟುತ್ತೇನೆ ಎಂಬ ಕಾರಣದಿಂದ ಇದನ್ನು ಹೇಳುತ್ತಿಲ್ಲ. ಯಾವ ಉತ್ತಮ ಸೌಲಭ್ಯ ಕೊಟ್ಟರೆ ಅದು ಹೇಗೆ ಸಮಾಜಕ್ಕೆ ವಾಪಸ್ ಬರುತ್ತದೆ ಅನ್ನೋದನ್ನು ನೋಡಬೇಕು ಎಂದು ಸಲಹೆ ನೀಡಿದ್ದಾರೆ.
ಬೆಂಗಳೂರು ಟೆಕ್ ಸಮ್ಮಿಟ್ನಲ್ಲಿ (Bangalore Tech Summit) ಮಾತನಾಡಿದ ನಾರಾಯಣ ಮೂರ್ತಿ, ಸರ್ಕಾರದಿಂದ ಒದಗಿಸುವ ಸೇವೆಗಳು ಮತ್ತು ಸಬ್ಸಿಡಿಗಳನ್ನು ಪಡೆಯುವ ಜನರು ಸಮಾಜದ ಒಳಿತಿಗಾಗಿ ಮತ್ತೆ ಕೊಡುಗೆ ನೀಡಬೇಕು. ನಾವು ಬಡ ಸಮುದಾಯಕ್ಕೆ ಉತ್ತಮ ಸೌಲಭ್ಯವನ್ನು ಹೇಗೆ ಕಲ್ಪಿಸಿ ಕೊಡಬೇಕು ಎಂಬುದನ್ನು ನೋಡಬೇಕು. ಯಾವ ಉತ್ತಮ ಸೌಲಭ್ಯ ಕೊಟ್ಟರೆ ಅದು ಹೇಗೆ ಸಮಾಜಕ್ಕೆ ವಾಪಸ್ ಬರುತ್ತದೆ ಅನ್ನೋದನ್ನು ನಾವು ನೋಡಬೇಕು ಎಂದು ಕಿವಿಮಾತು ಹೇಳಿದರು.
ಇದನ್ನೂ ಓದಿ: Indira Canteen : ಹೆಚ್ಚುವರಿ 188 ಇಂದಿರಾ ಕ್ಯಾಂಟೀನ್ ಸ್ಥಾಪನೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಕೊಡುಗೆ ಇಲ್ಲದೆ ಇರುವವರಿಗೆ ಉಚಿತ ಸ್ಕೀಮ್ ಕೊಡಬಾರದು
ಉಚಿತ ವಿದ್ಯುತ್ ಕೊಡುತ್ತೇವೆ ಎನ್ನುವುದು ಸರ್ಕಾರಕ್ಕೆ ಉತ್ತಮವಾಗಿ ಕಾಣಬಹುದು. ಶಾಲೆಗಳಲ್ಲಿ 20% ಹಾಜರಾತಿ ಇದ್ದರೆ ಕೊಡುತ್ತೇವೆ ಎಂಬ ರೀತಿಯಲ್ಲಿ ಅದು ಇರಬೇಕು. ಏಕೆಂದರೆ ಈ ಸಬ್ಸಿಡಿ ಸ್ಕೀಮ್ಗಳನ್ನು ಪಡೆಯುವವರು ಸಮಾಜಕ್ಕೆ ಕೊಡುಗೆ ಕೊಡುವ ರೀತಿ ಇರಬೇಕು. ಆ ರೀತಿ ಸಮಾಜಕ್ಕೆ ಕೊಡುಗೆ ನೀಡುವಂತೆ ಈ ಉಚಿತ ಯೋಜನೆಗಳು ಇರಬೇಕು. ಸಮಾಜಕ್ಕೆ ಕೊಡುಗೆ ಇಲ್ಲದೆ ಇರುವವರಿಗೆ ಉಚಿತ ಸ್ಕೀಮ್ ಕೊಡಬಾರದು ಎಂದು ನಾರಾಯಣ ಮೂರ್ತಿ ಹೇಳಿದರು.
ನಾನು ಉಚಿತ ಯೋಜನೆಗಳ ವಿರುದ್ಧ ಇಲ್ಲ. ನಾನು ಸಹ ಬಡ ಕುಟುಂಬದಿಂದಲೇ ಬಂದವನು. ಯಾರು ಉಚಿತ ಸಬ್ಸಿಡಿ ತೆಗೆದುಕೊಳ್ಳುತ್ತಾರೋ ಅವರು ತಮ್ಮದೇ ಮಕ್ಕಳ ಭವಿಷ್ಯಕ್ಕಾಗಿ ಕೊಡುಗೆ ನೀಡಬೇಕು ಎಂಬ ನಿರೀಕ್ಷೆ ನನ್ನದು ಎಂದು ನಾರಾಯಣ ಮೂರ್ತಿ ಹೇಳಿದರು.
ಹೆಚ್ಚಿನ ಇಂಗ್ಲಿಷ್ ಮಾಧ್ಯಮ ಶಾಲೆ ತೆರೆಯಬೇಕು
ಬೆಂಗಳೂರನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು. ಉತ್ತಮ ಸಾರ್ವಜನಿಕ ಆಡಳಿತ ವ್ಯವಸ್ಥೆಯನ್ನು ನೀಡಬೇಕು. ಹೆಚ್ಚಿನ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಲು ಒತ್ತು ನೀಡುವುದರ ಜತೆಗೆ ನಗರದಲ್ಲಿ ಮೂಲ ಸೌಕರ್ಯಗಳನ್ನು ಸುಧಾರಿಸುವಲ್ಲಿ ತ್ವರಿತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಾರಾಯಣ ಮೂರ್ತಿ ಸಲಹೆ ನೀಡಿದರು.
ವಿದೇಶಿ ನೇರ ಹೂಡಿಕೆ ಹೆಚ್ಚಳವಾಗಬೇಕು
ಭಾರತದಂತಹ ಬಡ ದೇಶವು ಸಮೃದ್ಧ ರಾಷ್ಟ್ರವಾಗಲು ಉದಾರ ಬಂಡವಾಳಶಾಹಿಯೇ ಏಕೈಕ ಪರಿಹಾರ. ಮುಕ್ತ ಮಾರುಕಟ್ಟೆ ಮತ್ತು ಉದ್ಯಮಶೀಲತೆಯ ಅವಳಿ ಸ್ತಂಭಗಳನ್ನು ಆಧರಿಸಿದ ಉದಾರ ಬಂಡವಾಳಶಾಹಿ ಹೊಂದಿರುವ ಯಾವುದೇ ದೇಶ ತನ್ನ ಬಡತನದ ಸಮಸ್ಯೆಯನ್ನು ಪರಿಹರಿಸಬಹುದು. ಮತ್ತು ಇದು ಏಕೈಕ ಮಾರ್ಗ. ರಾಜಕೀಯ ಪಕ್ಷಗಳು, ಬುದ್ಧಿಜೀವಿಗಳು, ಶಿಕ್ಷಣ ತಜ್ಞರು ಮತ್ತು ಕಾರ್ಪೊರೇಟ್ ನಾಯಕರು ಒಟ್ಟಾಗಿ ವಿದೇಶಿ ನೇರ ಹೂಡಿಕೆಗಳನ್ನು ಹೆಚ್ಚಿಸುವ ಪ್ರಾಯೋಗಿಕ ಪರಿಹಾರಗಳ ಬಗ್ಗೆ ಯೋಚಿಸಬೇಕು. ಜಿಡಿಪಿ ಹೆಚ್ಚಿಸುವ ಕುರಿತು ಸರ್ಕಾರಕ್ಕೆ ನೀಡಿದ ಸಲಹೆಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, “ರಾಜಕೀಯ ನಾಯಕರು ಚೀನಾವನ್ನು ಬಹಳ ಎಚ್ಚರಿಕೆಯಿಂದ ಅಧ್ಯಯನ ಮಾಡಬೇಕು ಎಂದು ನಾರಾಯಣ ಮೂರ್ತಿ ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕ್ರಮ ಅಭಿನಂದನೀಯ. ಸರಿಯಾದ ದಿಕ್ಕಿನಲ್ಲಿ ಇಟ್ಟಿರುವ ಹೆಜ್ಜೆ ಇದಾಗಿದೆ. ಡಾ. ಕೆ. ಕಸ್ತೂರಿ ರಂಗನ್ ಅವರು ಅಧ್ಯಕ್ಷರಾಗಿದ್ದರು. ಮಂಜುಲ್ ಭಾರ್ಗವ ಅವರಂಥವರು ಎನ್ಇಪಿ ಭಾಗವಾಗಿದ್ದರು. ಈ ಪ್ರಯತ್ನ ನಮಗೆ ಉತ್ತಮ ಮಾರ್ಗ ತೋರಿಸುತ್ತದೆ ಎಂದು ನಾರಾಯಣ ಮೂರ್ತಿ ಅಭಿಪ್ರಾಯಪಟ್ಟರು.
ಇದನ್ನೂ ಓದಿ: Laxmi Hebbalkar : ಬೆಳಗಾವಿ ರೈತರಿಗೆ ಗುಡ್ ನ್ಯೂಸ್ ಕೊಟ್ಟ ಲಕ್ಷ್ಮಿ ಹೆಬ್ಬಾಳ್ಕರ್; ಜಮೀನು ಬಾಡಿಗೆ ಹೆಚ್ಚಳ!
ನಾವು ಚೀನಾದಿಂದ ಕಲಿಯುವಂಥದ್ದು ಇದೆ
ನಮ್ಮಂತೆಯೇ ಎಲ್ಲ ಸಮಸ್ಯೆಗಳನ್ನು ಹೊಂದಿರುವ ಚೀನಾವು ಭಾರತಕ್ಕಿಂತ ಐದು ಅಥವಾ ಆರು ಪಟ್ಟು ಹೆಚ್ಚು ಜಿಡಿಪಿಗೆ ತಲುಪಿದೆ. ಆದ್ದರಿಂದ ನಾನು ನಮ್ಮ ರಾಜಕೀಯ ನಾಯಕರನ್ನು ವಿನಮ್ರವಾಗಿ ವಿನಂತಿಸುತ್ತೇನೆ. ಚೀನಾವನ್ನು ಬಹಳ ಎಚ್ಚರಿಕೆಯಿಂದ ಅಧ್ಯಯನ ಮಾಡಬೇಕು. ನಂತರ ಉತ್ತಮ ವಿಷಯಗಳು ಯಾವುವು ಎಂದು ಗಮನಿಸಿ. ನಾವು ಚೀನಾದಿಂದ ಕಲಿಯಬಹುದು. ಇದರಿಂದ ಭಾರತವು ಚೀನಾದಂತೆಯೇ ಅದೇ ವೇಗದಲ್ಲಿ ಮುಂದುವರಿಯಲು ಸಾಧ್ಯವಾಗುತ್ತದೆ. ಜನರ ಬಡತನವೂ ಕಡಿಮೆಯಾಗುತ್ತದೆ ಎಂದು ನಾರಾಯಣ ಮೂರ್ತಿ ಅಭಿಪ್ರಾಯಪಟ್ಟರು.