Site icon Vistara News

Budget 2024: ಕೇಂದ್ರ ಬಜೆಟ್‌ನಲ್ಲಿ ಅನ್ಯಾಯ; ದೆಹಲಿಯಲ್ಲಿ ಫೆ.7ಕ್ಕೆ ರಾಜ್ಯ ಸರ್ಕಾರದ ಪ್ರತಿಭಟನೆ ಎಂದ ಡಿಕೆಶಿ!

DK Shivakumar attack on central NDA Government

ಬೆಂಗಳೂರು: “ಕೇಂದ್ರ ಬಜೆಟ್‌ನಲ್ಲಿ (Budget 2024) ಕರ್ನಾಟಕ ರಾಜ್ಯಕ್ಕೆ ನಿರಂತರ ಅನ್ಯಾಯವಾಗುತ್ತಿದೆ. ಕೇಂದ್ರದ ಮಲತಾಯಿ ಧೋರಣೆಯಿಂದ ಕಳೆದ ಐದು ವರ್ಷಗಳಲ್ಲಿ ರಾಜ್ಯಕ್ಕೆ 62 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ. ಹೀಗಾಗಿ ಕರ್ನಾಟಕ ಕಾಂಗ್ರೆಸ್‌ ಸರ್ಕಾರವು ‌ಫೆ. 7 ರಂದು ನವ ದೆಹಲಿಯಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಾನು ಸೇರಿದಂತೆ ರಾಜ್ಯದ ಸಚಿವರು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಈ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇವೆ. ಪ್ರತಿಭಟನೆ ಸ್ಥಳಾವಕಾಶದ ಬಗ್ಗೆ ಕೆಂದ್ರಕ್ಕೆ ಪತ್ರ ಬರೆದಿದ್ದು, ಅನುಮತಿ ಸಿಕ್ಕ ಸ್ಥಳದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ತಿಳಿಸಿದರು. ‌

ಇದನ್ನೂ ಓದಿ: 40 per cent commission: ಸಿದ್ದರಾಮಯ್ಯ ಸರ್ಕಾರ ಕಡು ಭ್ರಷ್ಟತೆಗೆ ಹೊಸ ಇತಿಹಾಸ ಬರೆಯುತ್ತಿದೆ: ಬಿ.ವೈ. ವಿಜಯೇಂದ್ರ

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರತಿಭಟನೆ ನಮ್ಮ ಮೂಲಭೂತ ಹಕ್ಕು. ಕಾಂಗ್ರೆಸ್ ಜನಪ್ರತಿನಿಧಿಗಳು ಭಾಗವಹಿಸಲಿರುವ ಈ ಪ್ರತಿಭಟನೆಯಲ್ಲಿ ಪ್ರತಿಪಕ್ಷದ ಸಂಸದರು, ಶಾಸಕರು ಭಾಗವಹಿಸಬೇಕು ಎಂದು ಮನವಿ ಮಾಡುತ್ತೇನೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

2018-19ರಲ್ಲಿ ಕೇಂದ್ರ ಸರ್ಕಾರದ ಬಜೆಟ್ ಗಾತ್ರ 24.5 ಲಕ್ಷ ಕೋಟಿ ರೂಪಾಯಿ ಇತ್ತು. 2023-24ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬಜೆಟ್ ಗಾತ್ರ ದುಪ್ಪಟ್ಟಾಗಿದ್ದು 45 ಲಕ್ಷ ಕೋಟಿಯಾಗಿದೆ. 2018-19ರಲ್ಲಿ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ರಾಜ್ಯಕ್ಕೆ 46 ಸಾವಿರ ಕೋಟಿ ರೂಪಾಯಿ ಅನುದಾನ ಸಿಕ್ಕಿತ್ತು. ಆದರೆ, 2024-25ನೇ ಸಾಲಿನಲ್ಲಿ ರಾಜ್ಯಕ್ಕೆ ಬಂದಿರುವ ಅನುದಾನ ಕೇವಲ 50 ಸಾವಿರ ಕೋಟಿ ರೂ. ಮಾತ್ರ. ಕೇಂದ್ರ ಸರ್ಕಾರದ ಬಜೆಟ್ ಗಾತ್ರ ದುಪ್ಪಟ್ಟಾಗಿದ್ದರೂ ರಾಜ್ಯಕ್ಕೆ ಬರುವ ಅನುದಾನದ ಪ್ರಮಾಣದಲ್ಲಿ ಅತ್ಯಲ್ಪ ಏರಿಕೆ ಮಾತ್ರವಾಗಿದೆ ಎಂದು ಡಿ.ಕೆ. ಶಿವಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮ ಪಾಲು ನ್ಯಾಯಯುತವಾಗಿ ಸಿಕ್ಕಿಲ್ಲ

ಕರ್ನಾಟಕ ರಾಜ್ಯ ದೇಶದಲ್ಲೇ ಪ್ರಗತಿಪರ ರಾಜ್ಯ. ಮಹಾರಾಷ್ಟ್ರ ಬಿಟ್ಟರೆ ಕೇಂದ್ರಕ್ಕೆ ಅತಿ ಹೆಚ್ಚು ತೆರಿಗೆ ಪಾವತಿ ಮಾಡುತ್ತಿರುವ ರಾಜ್ಯ ಕರ್ನಾಟಕ. ನಿನ್ನೆ ಬಜೆಟ್ ಅನ್ನು ನಾವೆಲ್ಲ ಗಮನಿಸಿದ್ದೇವೆ. ಕೇವಲ ನಿನ್ನೆಯ ಬಜೆಟ್ ಮಾತ್ರವಲ್ಲ. ಕಳೆದ ಐದು ವರ್ಷಗಳ ಬಜೆಟ್ ನೋಡಿದರೆ ನಮಗೆ ನಮ್ಮ ಪಾಲು ನ್ಯಾಯಯುತವಾಗಿ ಸಿಕ್ಕಿಲ್ಲ. ರಾಜ್ಯದ 28 ಸಂಸದರ ಪೈಕಿ 27 ಸಂಸದರು ಎನ್‌ಡಿಎ ಮೈತ್ರಿಕೂಟದವರೇ ಆಗಿದ್ದರೂ ನಮಗೆ ಸೂಕ್ತ ನ್ಯಾಯ ಸಿಗುತ್ತಿಲ್ಲ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಅನುದಾನ ಕಡಿಮೆಯಾಗುತ್ತಾ ಬರುತ್ತಿದೆ

2018-19ರಿಂದ ಈಗಿನವರೆಗೂ ಕೇಂದ್ರ ಬಜೆಟ್ ಗಮನಿಸಿದರೆ ನಮ್ಮ ರಾಜ್ಯದ ಪಾಲಿನಲ್ಲಿ 40ರಿಂದ 45% ಪಾಲು ಕಡಿಮೆಯಾಗಿದೆ. ಇದರಿಂದಾಗಿ ನಮ್ಮ ರಾಜ್ಯದ ಮೇಲೆ ಸಾಲದ ಹೊರೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಪ್ರತಿ ವರ್ಷ 7-10 ಸಾವಿರ ಕೋಟಿ ಅನುದಾನ ಕಡಿಮೆಯಾಗುತ್ತಾ ಬರುತ್ತಿದೆ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಘೋಷಣೆ ಮಾಡಿದ್ದ ಅನುದಾನ ಕೂಡ ಸರಿಯಾಗಿ ನೀಡಿಲ್ಲ

14ನೇ ಹಣಕಾಸು ಆಯೋಗದ ಶಿಫಾರಸಿನಂತೆ ಕರ್ನಾಟಕ ರಾಜ್ಯಕ್ಕೆ 4.71% ಪಾಲು ನೀಡಲಾಗಿತ್ತು. ಆದರೆ 15ನೇ ಹಣಕಾಸು ಆಯೋಗದಲ್ಲಿ ರಾಜ್ಯದ ಪಾಲನ್ನು 3.64% ಗೆ ಇಳಿಸಲಾಗಿದೆ. ಇದರಿಂದಾಗಿ ನಮಗೆ ಐದು ವರ್ಷಕ್ಕೆ 62 ಸಾವಿರ ಕೋಟಿಯಷ್ಟು ಹಣ ಕಡಿಮೆಯಾಗಿದೆ. ಇನ್ನು ವಿವಿಧ ರೀತಿಯಲ್ಲಿ ಕರ್ನಾಟಕ ರಾಜ್ಯಕ್ಕೆ ಘೋಷಣೆ ಮಾಡಿದ್ದ ಅನುದಾನ ಕೂಡ ಸರಿಯಾಗಿ ನೀಡಿಲ್ಲ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ನಮಗೆ ಮಲತಾಯಿ ಧೋರಣೆ

ನೀರಾವರಿ ಯೋಜನೆಯಲ್ಲಿ ಭದ್ರ ಮೇಲ್ದಂಡೆ ಯೋಜನೆಗೆ 5,200 ಕೋಟಿ ನೀಡುವುದಾಗಿ ಘೋಷಣೆ ಮಾಡಿದ್ದರು. ಅದನ್ನು ನೀಡಿಲ್ಲ. ಇನ್ನು ಬೆಂಗಳೂರಿನಲ್ಲಿ ಮೆಟ್ರೋಗೆ ಕೂಡ ವಿವಿಧ ಹಂತದ ಯೋಜನೆ ಅನುದಾನ ನೀಡುವುದಾಗಿ ಹೇಳಿದ್ದರು. ನಾನು ಹಲವು ಬಾರಿ ಪ್ರಧಾನಿ, ಜಲಶಕ್ತಿ ಸಚಿವರು, ನಗರಾಭಿವೃದ್ಧಿ ಸಚಿವರಿಗೆ ಪತ್ರ ಬರೆದಿದ್ದೇನೆ. ನಮ್ಮ ರಾಜ್ಯದಿಂದ ಹೆಚ್ಚು ತೆರಿಗೆ ರವಾನೆಯಾಗುತ್ತಿದ್ದರೂ ನಮಗೆ ಮಲತಾಯಿ ಧೋರಣೆ ತೋರುತ್ತಿದ್ದೀರಿ. ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಆದರೂ ಯಾವುದೇ ಪ್ರಯೋಜನ ಆಗಿಲ್ಲ. ಇದರಿಂದಾಗಿ ನಮಗೆ ನಿರಾಸೆಯಾಗಿದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ನಯಾಪೈಸೆ ಹಣ ಬಂದಿಲ್ಲ

ನಮಗೆ ಆಗಿರುವ ಅನ್ಯಾಯದ ಬಗ್ಗೆ ರಾಜ್ಯದ ಜನರಿಗೆ ತಿಳಿಸಬೇಕು. ನಮ್ಮ ರಾಜ್ಯದಲ್ಲಿ ಬರಗಾಲ ಎದುರಾಗಿದೆ. ರಾಜ್ಯದ ಇತಿಹಾಸದಲ್ಲೇ ಅತಿ ಹೆಚ್ಚು ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಕೇಂದ್ರ ಬರ ನಿಯಮಾನುಸಾರ ನಾವು ಘೋಷಣೆ ಮಾಡಿದ್ದೇವೆ. ನಮ್ಮ ಹಣಕಾಸು ಹಾಗೂ ಕೃಷಿ ಸಚಿವರು ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ನೀಡಿದ್ದರು. ಸಂಸದರು ಕೂಡ ಸರ್ಕಾರದ ಮೇಲೆ ಒತ್ತಡ ಹಾಕಿ ರಾಜ್ಯಕ್ಕೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ್ದೆವು. ಆದರೂ ನಯಾಪೈಸೆ ಹಣ ಬಂದಿಲ್ಲ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ನಮಗೆ ನ್ಯಾಯಯುತ ಪಾಲನ್ನು ನೀಡಿ

ನರೇಗಾ ಯೋಜನೆ ಪ್ರಕಾರ ಬರ ಪೀಡಿತ ಪ್ರದೇಶಗಳಲ್ಲಿ ಮಾನವ ಕೂಲಿ ದಿನಗಳನ್ನು 100ರಿಂದ 150 ದಿನಗಳಿಗೆ ಹೆಚ್ಚಳ ಮಾಡಬೇಕು ಎಂದು ಕಾನೂನಿನಲ್ಲಿ ಇದೆ. ಯಾವುದೇ ಯೋಜನೆ ತೆಗೆದುಕೊಂಡರೂ ಕರ್ನಾಟಕ ರಾಜ್ಯಕ್ಕೆ ಅನ್ಯಾಯವಾಗಿದೆ. ಕೇಂದ್ರದ ಅನುದಾನದಲ್ಲಿ ಕರ್ನಾಟಕ ಮತ್ತು ಗುಜರಾತ್ ನಡುವೆ ನಾನು ಹೋಲಿಕೆ ಮಾಡಲು ಹೋಗುವುದಿಲ್ಲ. ಬೇರೆಯವರಿಗೆ ನೀವು ಎಷ್ಟಾದರೂ ನೀಡಿ ಆದರೆ ನಮಗೆ ನ್ಯಾಯಯುತವಾಗಿ ಸಿಗಬೇಕಾದ ನಮ್ಮ ಪಾಲನ್ನು ನೀಡಿ ಎಂದು ಕೇಳುತ್ತಿದ್ದೇವೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ರಾಜ್ಯದ ಪಾಲಿನ ಅನುದಾನ ಮಾತ್ರ ಹೆಚ್ಚಳವಾಗಿಲ್ಲ

ಬಿಜೆಪಿ ಸರ್ಕಾರ ಇದ್ದಾಗ ಡಬಲ್ ಇಂಜಿನ್ ಸರ್ಕಾರದಿಂದ ನಮಗೆ ಲಾಭ ಆಗಿರಬಹುದು ಎಂದು ಭಾವಿಸಿದ್ದೆವು. ಆದರೆ, ಸಚಿವ ಸಂಪುಟದಲ್ಲಿ ಚರ್ಚೆ ಮಾಡಿದಾಗ ನಮ್ಮ ರಾಜ್ಯಕ್ಕೆ 62 ಸಾವಿರ ಕೋಟಿ ನಷ್ಟವಾಗಿದೆ. ಇದನ್ನು ಹೇಗೆ ಅರಗಿಸಿಕೊಳ್ಳುವುದು? ಕೇಂದ್ರ ಸರ್ಕಾರದ ಬಜೆಟ್ ಗಾತ್ರ ಡಬಲ್ ಆಗಿದ್ದರೂ ರಾಜ್ಯದ ಪಾಲಿನ ಅನುದಾನ ಮಾತ್ರ ಹೆಚ್ಚಳವಾಗಿಲ್ಲ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ವಿರೋಧ ಪಕ್ಷದ ಸಂಸದರಿಗೂ ಆಹ್ವಾನ

ಈ ಸಮಯದಲ್ಲಿ ನಾವು ಅನಿವಾರ್ಯವಾಗಿ ಹೋರಾಟ ಮಾಡಬೇಕಿದೆ. ಕರ್ನಾಟಕ ಸರ್ಕಾರ ಮುಖ್ಯಮಂತ್ರಿಗಳ ನೇತೃತ್ವದಲ್ಲಿ 136+2 ಒಟ್ಟು 138 ಶಾಸಕರು, ಎಲ್ಲ ಪರಿಷತ್ ಸದಸ್ಯರು ಫೆ.6ರಂದು ದೆಹಲಿಗೆ ತಲುಪಿ, ಫೆ. 7ರಂದು ದೆಹಲಿಯಲ್ಲಿ ಪ್ರತಿಭಟನೆ ವ್ಯಕ್ತಪಡಿಸುತ್ತೇವೆ. ನಮ್ಮ ಧ್ವನಿಯನ್ನು ದೆಹಲಿ ಸರ್ಕಾರಕ್ಕೆ ಮುಟ್ಟಿಸಲು ಮುಂದಾಗಿದ್ದೇವೆ. ಫೆ.7ರಂದು ಬೆಳಗ್ಗೆ 10 ಗಂಟೆಗೆ ನಮಗೆ ಅನುಮತಿ ನೀಡುವ ಸ್ಥಳದಲ್ಲಿ ಪ್ರತಿಭಟನೆ ಮಾಡುತ್ತೇವೆ. ಈ ಪ್ರತಿಭಟನೆಗೆ ರಾಜ್ಯದ ಎಲ್ಲಾ ಸಂಸದರಿಗೆ ಆಹ್ವಾನ ನೀಡಲಾಗುವುದು. ಎಲ್ಲರೂ ರಾಜ್ಯದ ಹಿತ ಕಾಯಲು ಪಕ್ಷಾತೀತವಾಗಿ ಹೋರಾಟ ಮಾಡಲು ತೀರ್ಮಾನಿಸಿದ್ದೇವೆ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಎಲ್ಲರೂ ಹೋರಾಟದಲ್ಲಿ ಭಾಗಿಯಾಗಬಹುದು

ಈ ಹೋರಾಟಕ್ಕೆ ದೇವೇಗೌಡರಿಗೆ ಆಹ್ವಾನ ನೀಡುತ್ತೀರಾ ಎಂದು ಕೇಳಿದಾಗ, “ಕರ್ನಾಟಕ ರಾಜ್ಯದ ಹಿತ ಕಾಯುವ ಬಗ್ಗೆ ಭಕ್ತಿ, ಭಾವನೆ ಯಾರಿಗೆಲ್ಲ ಇದೆಯೋ ಅವರೆಲ್ಲರೂ ಈ ಹೋರಾಟದಲ್ಲಿ ಭಾಗವಹಿಸಬೇಕು ಎಂದು ನಮ್ರತೆಯಿಂದ ಮನವಿ ಮಾಡುತ್ತೇನೆ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ನಾವು ಈ ಹೋರಾಟವನ್ನು ಅಕಾಲದಲ್ಲಿ ಅಲ್ಲ, ಸಕಾಲದಲ್ಲಿ ಮಾಡುತ್ತಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಹಿತಕ್ಕಾಗಿ ಅವರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡಬೇಕು. ಇದರ ಬಗ್ಗೆ ಜನರಿಗೆ ತಿಳಿಸಬೇಕು. ಪ್ರತಿ ಮತದಾರರಿಗೂ ನ್ಯಾಯ ಒದಗಿಸಬೇಕು. ಹೀಗಾಗಿ ಈ ಹೋರಾಟ ಮಾಡಲಾಗುತ್ತಿದೆ ಎಂದು ಡಿ.ಕೆ. ಶಿವಕುಮಾರ್‌ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

100 ರೂಪಾಯಿಯಲ್ಲಿ 12-13 ರೂ. ಮಾತ್ರ ವಾಪಸ್

ತೆರಿಗೆ ಪಾವತಿಯಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದ್ದರೂ ಅನ್ಯಾಯವಾಗುತ್ತಿರುವುದೇಕೆ ಎಂದು ಕೇಳಿದಾಗ, “ಜಿಎಸ್ಟಿ ಹಾಗೂ ವಿವಿಧ ತೆರಿಗೆ ರೂಪದಲ್ಲಿ ನಮ್ಮ ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ಈ ವರ್ಷ 4 ಲಕ್ಷ ಕೋಟಿ ಹಣ ಸಂಗ್ರಹವಾಗಿದೆ. ಆದರೆ ಕೇಂದ್ರ ಸರ್ಕಾರದಿಂದ ನಮಗೆ ಕೇವಲ 50-53 ಸಾವಿರ ಕೋಟಿ ಮಾತ್ರ ವಾಪಸ್ ನೀಡಲಾಗುತ್ತಿದೆ. ಅಂದರೆ ಪ್ರತಿ ನೂರು ರೂಪಾಯಿಯ ತೆರಿಗೆಯನ್ನು ಕೇಂದ್ರ ಸರ್ಕಾರಕ್ಕೆ ನೀಡಿದರೆ ಅದರಲ್ಲಿ 12-13 ರೂಪಾಯಿ ಮಾತ್ರ ನಮ್ಮ ರಾಜ್ಯಕ್ಕೆ ವಾಪಸ್ ನೀಡಲಾಗುತ್ತಿದೆ. ಕರ್ನಾಟಕ ರಾಜ್ಯಕ್ಕೆ ಅನ್ಯಾಯವಾಗುತ್ತಿರುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಾಗಿಲ್ಲ” ಎಂದು ಡಿ.ಕೆ. ಶಿವಕುಮಾರ್‌ ವಿವರಿಸಿದರು.

ಬಜೆಟ್‌ನಲ್ಲಿ ಬೇರೆ ರಾಜ್ಯಗಳಿಗೆ ನೀಡಿರುವ ಅನುದಾನದ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ಕರ್ನಾಟಕ ರಾಜ್ಯಕ್ಕೆ ಭಾರಿ ಅನ್ಯಾಯವಾಗಿದೆ. ಕರ್ನಾಟಕಕ್ಕೆ ಬರಬೇಕಾದ ಪಾಲಿನ ಅನುದಾನ ಸಿಕ್ಕಿಲ್ಲ ಎಂದು ಡಿ.ಕೆ. ಶಿವಕುಮಾರ್‌ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪಕ್ಷದ ಸಭೆ ವಿಚಾರವಾಗಿ ಕೇಳಿದಾಗ, “ಸಂಸತ್ ಚುನಾವಣೆ ಅಭ್ಯರ್ಥಿಗಳನ್ನು ಅಂತಿಮ ಮಾಡಬೇಕು, ನಾವು ಎಲ್ಲರ ಅಭಿಪ್ರಾಯ ಪಡೆದಿದ್ದೇವೆ. ವೀಕ್ಷಕರಿಂದ ಅಭಿಪ್ರಾಯ ಪಡೆದಿದ್ದೇವೆ. ಕಾರ್ಯಕರ್ತರಿಗೂ ಸೂಕ್ತ ನಿರ್ದೇಶನ ನೀಡಿದ್ದೇವೆ” ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.‌

ಇದನ್ನೂ ಓದಿ: Magadi HC Balakrishna: ಗ್ಯಾರಂಟಿ ವಾಪಸ್;‌ ಕಾಂಗ್ರೆಸ್‌ ಮಾನ್ಯತೆ ರದ್ದುಗೊಳಿಸಲು ಚು. ಆಯೋಗಕ್ಕೆ JDS ದೂರು

ನಾವು ತಪ್ಪು ಮಾಡಿದ್ದರೆ, ಡಬಲ್ ಎಂಜಿನ್ ಸರ್ಕಾರ ಸರಿಪಡಿಸಲಿಲ್ಲ ಯಾಕೆ?

14 ಮತ್ತು 15ನೇ ಹಣಕಾಸು ಆಯೋಗದ ಅನುದಾನ ಹಂಚಿಕೆಯಲ್ಲಿ ಕುಸಿತಕ್ಕೆ ಆಗಿನ ಕಾಂಗ್ರೆಸ್ ಸರ್ಕಾರ ಸರಿಯಾಗಿ ವಿಚಾರ ಮಂಡನೆ ಮಾಡಿಲ್ಲ ಎಂಬ ಬಿಜೆಪಿ ನಾಯಕರ ಆರೋಪದ ಬಗ್ಗೆ ಕೇಳಿದಾಗ, “ನಮ್ಮಿಂದ ತಪ್ಪಾಗಿದ್ದರೆ ಅವರು ಏನು ಮಾಡುತ್ತಿದ್ದರು? ನಮ್ಮ ತಪ್ಪನ್ನು ಸರಿಪಡಿಸಬಹುದಾಗಿತ್ತಲ್ಲವೇ? ಅವರದ್ದು ಡಬಲ್ ಎಂಜಿನ್ ಸರ್ಕಾರ ಇತ್ತಲ್ಲವೇ. ರಾಜ್ಯಕ್ಕೆ ಬರಬೇಕಾದ ಅನುದಾನ ತರುವುದು ಡಬಲ್ ಎಂಜಿನ್ ಸರ್ಕಾರದ ಜವಾಬ್ದಾರಿ ಆಗಿರಲಿಲ್ಲವೇ? ಆ ಸರ್ಕಾರ ಜನರ ಹಿತಕ್ಕೆ ವಿರುದ್ಧವಾಗಿ ಕೆಲಸ ಮಾಡಿತ್ತು. ನಾವು ಸೂಕ್ತ ದಾಖಲೆಗಳನ್ನು ಸಲ್ಲಿಸಿದ್ದು, ಈಗಲಾದರೂ ಕೇಂದ್ರ ಬಿಜೆಪಿ ಸರ್ಕಾರ ಸರಿಪಡಿಸಲಿ” ಎಂದು ಡಿ.ಕೆ. ಶಿವಕುಮಾರ್ ಸವಾಲೆಸೆದರು.

Exit mobile version