Site icon Vistara News

Kalyana Karnataka: ಕಲ್ಯಾಣ ಕರ್ನಾಟಕಕ್ಕೆ ಆಗುತ್ತಾ ಅನ್ಯಾಯ? 3 ತಿಂಗಳಲ್ಲಿ 3 ಸಾವಿರ ಕೋಟಿ ರೂ. ಖರ್ಚಾಗುತ್ತಾ?

Kalyana Karnataka Map

ಬೆಳಗಾವಿ: ಕಲ್ಯಾಣ ಕರ್ನಾಟಕದ (Kalyana Karnataka) ಸಮಗ್ರ ಅಭಿವೃದ್ಧಿ ವಿಚಾರದಲ್ಲಿ ಹೊಸ ಸವಾಲು ಎದುರಾಗಿದೆ. ಏಳು ತಿಂಗಳ ಬಳಿಕ ಕೆಕೆಆರ್‌ಡಿಬಿ (KKRDB)ಕಾಮಗಾರಿಗಳ ಕ್ರಿಯಾ ಯೋಜನೆಗೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ. ಅಂದರೆ, 2023-24ರ ಸಾಲಿನ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದ 3 ಸಾವಿರ ಕೋಟಿ ರೂ.ಗಳ ಕಾಮಗಾರಿಗಳಿಗೆ ಸಮ್ಮತಿ ಸಿಕ್ಕಿದೆ. ಆದರೆ, ಇನ್ನು 3 ತಿಂಗಳಲ್ಲಿ 3 ಸಾವಿರ ಕೋಟಿ ಅನುದಾನವನ್ನು ಅಭಿವೃದ್ಧಿಗೆ ಖರ್ಚು ಮಾಡುಲು ಆಗುತ್ತದೆಯೇ ಎಂಬ ಪ್ರಶ್ನೆ ಎದುರಾಗಿದೆ.

ರಾಜಕೀಯ ಕಾರಣಕ್ಕೆ ಹೈಡ್ರಾಮಾ ಮಾಡುವ ಶಾಸಕರು ಅಭಿವೃದ್ಧಿ ವಿಷಯದಲ್ಲಿ ಸುಮ್ಮನಾದರೇ? ಗ್ಯಾರಂಟಿ ಗುಂಗಿನಲ್ಲಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರ ಸಹ ಈ ವಿಷಯದಲ್ಲಿ ಮೌನ ವಹಿಸಿರುವುದು ಏಕೆ ಎಂಬ ಪ್ರಶ್ನೆ ಎದುರಾಗಿದೆ. ಉತ್ತರ ಕರ್ನಾಟಕ ಭಾಗಕ್ಕೆ ನ್ಯಾಯ ಕೊಡಿಸುವ ಬಗ್ಗೆ ಅಧಿವೇಶನದಲ್ಲಿ ಮಾತನಾಡಿದ್ದೇ ಬಂತು ಬಿಟ್ಟರೆ, ನಿಜವಾಗಿಯೂ ನ್ಯಾಯ ಸಿಗುವುದು ಯಾವಾಗ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಎತ್ತಿದ್ದಾರೆ.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) 6 ತಿಂಗಳ ಹಿಂದೆ ಕಳುಹಿಸಿದ್ದ ಕ್ರಿಯಾ ಯೋಜನೆಯನ್ನು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಅನುಮೋದನೆ ನೀಡಿದ್ದಾರೆ. ಆದರೆ, ಪ್ರಸಕ್ತ ಹಣಕಾಸು ಅವಧಿ ಅಂತ್ಯವಾಗುವುದು ಮಾರ್ಚ್‌ನಲ್ಲಾಗಿದೆ. ಈ ಮಾರ್ಚ್‌ ಒಳಗೆ ಟೆಂಡರ್‌ ಕರೆದು ಕಾಮಗಾರಿ ಮುಗಿಸುವ ಸವಾಲು ಎದುರಾಗಿದೆ.

ಖರ್ಚು ಮಾಡದೇ ಇದ್ದರೆ ಖಜಾನೆಗೆ ಹಣ ವಾಪಸ್‌!

ಒಂದೊಮ್ಮೆ ಇನ್ನು ಬಾಕಿ ಇರುವ ಮೂರು ತಿಂಗಳೊಳಗೆ ಟೆಂಡರ್‌ ಕರೆದು ಅಭಿವೃದ್ಧಿ ಕಾರ್ಯ ನಡೆಸಲು ಆಗದೇ ಇದ್ದಲ್ಲಿ 3 ಸಾವಿರ ಕೋಟಿ ರೂ. ಮತ್ತೆ ಸರ್ಕಾರದ ಖಜಾನೆ ಸೇರಲಿದೆ. ಆ ಮೂಲಕ ಕಲ್ಯಾಣ ಕರ್ನಾಟಕ ಜನರ ಅಭಿವೃದ್ಧಿ ಕನಸಿಗೆ ಕೊಳ್ಳಿ ಬೀಳಲಿದೆ. ರಾಜಕೀಯಕ್ಕಾಗಿ ಡ್ರಾಮಾ ಮಾಡುವ ಜನಪ್ರತಿನಿಧಿಗಳು ಅಭಿವೃದ್ಧಿ ವಿಚಾರದಲ್ಲಿ ಮೌನ ತಾಳಿದ್ದೇ ಈ ಸಂಕಷ್ಟಕ್ಕೆ ಕಾರಣ ಅಂತ ಹೇಳಲಾಗುತ್ತಿದೆ. ಇನ್ನು ಅನುಮೋದನೆ ಸಿಕ್ಕಿರುವ ಅನುದಾನವನ್ನು ಸೂಕ್ತವಾಗಿ ಬಳಸಿಕೊಳ್ಳುತ್ತೇವೆ ಎಂದು ಸಚಿವ ಶಿವರಾಜ್‌ ತಂಗಡಗಿ ಹಾಗೂ ಈಶ್ವರ್‌ ಖಂಡ್ರೆ ಅವರು ಹೇಳಿದ್ದಾರೆ.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮರೀಚಿಕೆ!

ವಿಶೇಷ ಸ್ಥಾನಮಾನ ಸಿಕ್ಕಿದ್ದರೂ, ಕಲ್ಯಾಣ ಕರ್ನಾಟಕ ಎಂದು ಹೆಸರನ್ನು ಇಡಲಾಗಿದ್ದರೂ ಇಲ್ಲಿಯ ಭಾಗಕ್ಕೆ ಏನು ಪ್ರಯೋಜನ ಎಂಬ ಸ್ಥಿತಿ ನಿರ್ಮಾಣವಾಗಿದೆ. ಈ ಬಾರಿ ಉತ್ತರ ಕರ್ನಾಟಕಕ್ಕೆ ನ್ಯಾಯ ಕೊಡಿಸಲಾಗುತ್ತದೆ. ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಈ ಭಾಗದ ಅಭಿವೃದ್ಧಿ ಬಗ್ಗೆ ಸಮಗ್ರ ಚರ್ಚೆ ಮಾಡಿ ಲಾಭ ಕಲ್ಪಿಸಿಕೊಡಲಾಗುವುದು ಎಂದು ಹೇಳಲಾಗಿತ್ತು. ಆದರೆ, ಗದ್ದಲಗಳಲ್ಲೇ ಅಧಿವೇಶನ ಮುಕ್ತಾಯವಾಗಿದೆ. ಕಲ್ಯಾಣ ಕರ್ನಾಟಕದ 7 ಜಿಲ್ಲೆಗೆ ಈ ಬಾರಿ ಅನುಮತಿ ಸಿಕ್ಕಿರುವ 3 ಸಾವಿರ ಕೋಟಿ ರೂಪಾಯಿ ಖರ್ಚಾಗುವುದು ಬಹುತೇಕ ಅನುಮಾನವಾಗಿದೆ. ಸಚಿವರು ಏನೇ ಹೇಳಿದರೂ ತಾಂತ್ರಿಕ ದೃಷ್ಟಿಯಿಂದ ಗಮನಿಸಿದಲ್ಲಿ ಕಷ್ಟ ಸಾಧ್ಯ ಎಂದೇ ಹೇಳಲಾಗುತ್ತಿದೆ.

ಇದನ್ನೂ ಓದಿ: Belagavi Winter Session: ಸುವರ್ಣಸೌಧದಲ್ಲಿ ಜಾರಿ ಬಿದ್ದ ಪ್ರಕಾಶ್ ಕೋಳಿವಾಡ;‌ ಸದನಕ್ಕೆ ಲೇಟ್‌ ಎಂಟ್ರಿ!

ಜನಕ್ಕೆ ಉತ್ತರ ಕೊಡುವವರು ಯಾರು?

3 ಸಾವಿರ ಕೋಟಿ ರೂ ಅನುದಾನ ಅಭಿವೃದ್ಧಿಗೆ ಸಿಗಲಿಲ್ಲ ಅಂದರೆ ಯಾರು ಹೊಣೆ? ಇದಕ್ಕೆ ಉತ್ತರದಾಯಿತ್ವ ಯಾರು? ಕಲ್ಯಾಣ ಕರ್ನಾಟಕದ ಏಳೂ ಜಿಲ್ಲೆಗಳ ಜನರ ಪ್ರಶ್ನೆಗೆ ಈಗೇನು ಉತ್ತರವನ್ನು ಕೊಡಲಾಗುತ್ತದೆ? ಬಳ್ಳಾರಿ, ವಿಜಯನಗರ, ಕೊಪ್ಪಳ, ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ ಜಿಲ್ಲೆಗಳ ಅಭಿವೃದ್ಧಿಯ ಕಥೆ ಏನು? ಕೆಕೆಆರ್‌ಡಿಬಿ ವತಿಯಿಂದ ಇನ್ನು 3 ತಿಂಗಳಲ್ಲಿ 3 ಕೋಟಿ ರೂಪಾಯಿ ಅನುದಾನವನ್ನು ಅಭಿವೃದ್ಧಿಗೆ ಖರ್ಚು ಮಾಡಲಾಗುತ್ತದೇ? ಆಗುತ್ತದೆ ಎಂದು ಹೇಳುವ ಸಚಿವರು, ಅನುಷ್ಠಾನವಾಗದೇ ಇದ್ದರೆ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತಾರೆಯೇ? ಇದಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ ಅಲ್ಲಿನ ಶಾಸಕರೇ ಉತ್ತರ ಕೊಡಬೇಕಿದೆ. ಒಟ್ಟಿನಲ್ಲಿ ಆ ಭಾಗದ ಜನರಿಗೆ ನ್ಯಾಯವನ್ನು ಕಲ್ಪಿಸಿಕೊಡಬೇಕಿದೆ.

Exit mobile version