Site icon Vistara News

Hindu Temple: ದೇವಸ್ಥಾನದ ಹಣಕ್ಕೆ ಕನ್ನ ಹಾಕುವ ಬದಲು ವಿಧಾನಸೌಧದ ಮುಂದೆ ಹುಂಡಿ ಇಡಿ: ಸರ್ಕಾರಕ್ಕೆ ವಿಜಯೇಂದ್ರ ಸಲಹೆ

Instead of stealing Hindu temple money keep hundi in front of Vidhana Soudha says Vijayendra

ಬೆಂಗಳೂರು: ಈ ರಾಜ್ಯ ಸರ್ಕಾರವು ಆರ್ಥಿಕವಾಗಿ ಸಂಕಷ್ಟದಲ್ಲಿದ್ದು, ಶ್ರೀಮಂತ ದೇವಾಲಯಕ್ಕೂ (Hindu Temple) ಕನ್ನ ಹಾಕುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಕಿಡಿಕಾರಿದರು. ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ ವಿಧೇಯಕಕ್ಕೆ (Hindu Religious Institutions and Charitable Endowments Bill) ವಿಧಾನಸಭಾ ಕಲಾಪದಲ್ಲಿ ಒಪ್ಪಿಗೆ ಪಡೆದುಕೊಂಡ ರಾಜ್ಯ ಸರ್ಕಾರದ ಕ್ರಮವನ್ನು ಕಟುವಾಗಿ ಖಂಡಿಸಿದರು.

ವಿಧಾನಸೌಧದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಬಿ.ವೈ. ವಿಜಯೇಂದ್ರ, ದೇವಸ್ಥಾನದ ಹಣಕ್ಕೆ ಕನ್ನ ಹಾಕುವ ಬದಲು ವಿಧಾನಸೌಧದ ಮುಂದೆ ಒಂದು ಹುಂಡಿ ಇಡಿ. ‘ಸರ್ಕಾರ ನಡೆಸಲು ನಮ್ಮ ಕೈಯಲ್ಲಿ ಆಗುತ್ತಿಲ್ಲ; ಹಣಕಾಸಿನ ತೊಂದರೆ ಇದೆ’ ಎಂದು ತಿಳಿಸಿ ಬಂದ ದಾನಿಗಳಿಂದ ಹಣ ಸಂಗ್ರಹಿಸಬಹುದು ಎಂದು ಮುಖ್ಯಮಂತ್ರಿ‌ ಸಿದ್ದರಾಮಯ್ಯ (CM Siddaramaiah) ಅವರಿಗೆ ಸಲಹೆ ನೀಡುವುದಾಗಿ ತಿಳಿಸಿದರು.

ಅತ್ಯಂತ ಶ್ರೀಮಂತ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಅತ್ಯಂತ ಹೆಚ್ಚು ತೆರಿಗೆಯನ್ನು ಅದು ಸಂಗ್ರಹ ಮಾಡುತ್ತದೆ. ಇಂಥ ಕರ್ನಾಟಕ ರಾಜ್ಯದ ಪರಿಸ್ಥಿತಿ ಹೀಗಾಗಿದೆ ಎಂಬುದು ನಿಜಕ್ಕೂ ದುರದೃಷ್ಟ. ಸರ್ಕಾರ ಈ ಮಟ್ಟಕ್ಕೆ ಇಳಿದಿರುವುದು ನಿಜಕ್ಕೂ ತಲೆತಗ್ಗಿಸುವ ವಿಚಾರ ಎಂದು ‌ಬಿ.ವೈ. ವಿಜಯೇಂದ್ರ ಆಕ್ಷೇಪ ವ್ಯಕ್ತಪಡಿಸಿದರು.

ಗ್ಯಾರಂಟಿಗೆ (Congress Guarantee Scheme) ನಮ್ಮ ಟೀಕೆ ಇಲ್ಲ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಗ್ಯಾರಂಟಿಗಳನ್ನು ಘೋಷಿಸಿದ್ದು, ಅದನ್ನು ಅನುಷ್ಠಾನಕ್ಕೆ ತರುವುದು ಅವರ ಕರ್ತವ್ಯವಾಗಿದೆ. ಅವರು ಕೊಟ್ಟಿರುವ ಭರವಸೆಗಳನ್ನು ಈಡೇರಿಸಬೇಕಿದೆ. ಆದರೆ, ಅದರ ಅರ್ಥ ರಾಜ್ಯದಲ್ಲಿ ಅಭಿವೃದ್ಧಿ ಮಾಡಬಾರದು ಎಂದಲ್ಲ ಎಂದು ಬಿ.ವೈ. ವಿಜಯೇಂದ್ರ ಅಸಮಾಧಾನವನ್ನು ಹೊರಹಾಕಿದರು.

ನಾವು ಶಾಸಕರು ಕ್ಷೇತ್ರಕ್ಕೆ ಹೋದಾಗ ರಸ್ತೆಗಳು, ಶಾಲಾ ಕೊಠಡಿ, ಆಸ್ಪತ್ರೆಗಳ ಬಗ್ಗೆ ಜನರು ನಮ್ಮನ್ನು ಕೇಳುತ್ತಾರೆ. ಆದರೆ, 224 ಕ್ಷೇತ್ರಗಳ ಯಾವುದೇ ಒಬ್ಬ ಶಾಸಕರು ತಮ್ಮ ಕ್ಷೇತ್ರದಲ್ಲಿ ಈ ವಿಚಾರದಲ್ಲಿ ಮಾತನಾಡಲು ಸಾಧ್ಯವೇ ಇಲ್ಲ. ಯಾಕೆಂದರೆ, ರಾಜ್ಯ ಸರ್ಕಾರ ಒಂದು ರೂಪಾಯಿಯನ್ನೂ ಅನುದಾನವಾಗಿ ಕೊಡುತ್ತಿಲ್ಲ ಎಂದು‌ ಬಿ.ವೈ. ವಿಜಯೇಂದ್ರ ಟೀಕಿಸಿದರು.

ರಾಜ್ಯ ಸರ್ಕಾರವು ಯಾವುದೇ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುತ್ತಿಲ್ಲ. ಒಂದು ರೂಪಾಯಿ ಅನುದಾನವನ್ನೂ ಕೊಡುತ್ತಿಲ್ಲ ಎಂದು ಟೀಕಿಸಿದರು. ಸರಕಾರಿ ನೌಕರರಿಗೆ ಸಂಬಳ ಕೊಡತಕ್ಕಂಥ ಸಾಧ್ಯತೆ ಕಡಿಮೆ ಆಗುತ್ತಿದೆ. ಅಂಥ ದಾರುಣ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ‌ಬಿ.ವೈ. ವಿಜಯೇಂದ್ರ ವಿವರಿಸಿದರು.

ಏನಿದು ವಿಧೇಯಕ?

ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ ವಿಧೇಯಕವನ್ನು (Hindu Religious Institutions and Charitable Endowments Bill) ರಾಜ್ಯ ಸರ್ಕಾರ ಬುಧವಾರ ಮಂಡಿಸಿ ಅಂಗೀಕಾರವನ್ನು ಪಡೆದುಕೊಂಡಿದೆ ಇದರ ಅನುಸಾರ ಇನ್ನು ಮುಂದೆ 1 ಕೋಟಿ ರೂಪಾಯಿಗೂ‌ ಆದಾಯ ಮೀರಿದ ಸರ್ಕಾರಿ ದೇವಸ್ಥಾನಗಳು ಆದಾಯದ ಶೇ.10ರಷ್ಟು ಹಣ ಸಲ್ಲಿಕೆ ಮಾಡಬೇಕು. ಅಂದರೆ, ಒಂದು ದೇವಸ್ಥಾನದ ಆದಾಯ 1 ಕೋಟಿ ರೂ. ಇದ್ದರೆ, ಸರ್ಕಾರಕ್ಕೆ 10 ಲಕ್ಷ ರೂಪಾಯಿ ನೀಡಬೇಕಿದೆ.

ಮುಜರಾಯಿ ಇಲಾಖೆಗೆ ದೇವಸ್ಥಾನಗಳು ಕೊಡುತ್ತಿದ್ದ ಆದಾಯದ ಹಣವನ್ನು ರಾಜ್ಯ ಸರ್ಕಾರ ದ್ವಿಗುಣಗೊಳಸಿದೆ. ಇನ್ನು ಮುಂದೆ 10 ಲಕ್ಷದಿಂದ 1 ಕೋಟಿ ರೂಪಾಯಿ ಆದಾಯದ ದೇವಸ್ಥಾನಗಳು ಆದಾಯದ ಶೇ. 5ರಷ್ಟು ಹಣವನ್ನು ಸರ್ಕಾರಕ್ಕೆ ನೀಡಬೇಕು. 1 ಕೋಟಿ ರೂಪಾಯಿಗೂ‌ ಆದಾಯ ಮೀರಿದ ದೇವಸ್ಥಾನಗಳು ಆದಾಯದ ಶೇ.10ರಷ್ಟು ಹಣ ಸಲ್ಲಿಕೆ ಮಾಡಬೇಕು ಎಂದು ವಿಧೇಯಕದಲ್ಲಿ ಹೇಳಲಾಗಿದೆ.

ಅಲ್ಲದೆ, ಸಿ ಗ್ರೇಡ್ ದೇಗುಲದ ಅರ್ಚಕರು, ಸಿಬ್ಬಂದಿಗೆ ವಿಮೆ ಸೌಕರ್ಯ ಒದಗಿಸಲು ವಿಧೇಯಕದಲ್ಲಿ ಅವಕಾಶ ನೀಡಲಾಗಿದೆ. ಅರ್ಚಕರು, ದೇಗುಲ ಸಿಬ್ಬಂದಿ ಮೃತಪಟ್ಟಾಗ ಅವರ ಕುಟುಂಬದವರಿಗೆ 5 ಲಕ್ಷ ರೂಪಾಯಿ ಪರಿಹಾರ ಕೊಡಲು ಅವಕಾಶ ನೀಡಲಾಗಿದೆ. ಈ ಮುಂಚೆ ಮೃತಪಟ್ಟರೆ ಅವರ ಕುಟುಂಬದವರಿಗೆ 35 ಸಾವಿರ ರೂಪಾಯಿಯನ್ನು ಕೊಡಲಾಗುತ್ತಿತ್ತು. ಜತೆಗೆ ಅರ್ಚಕರು, ದೇಗುಲ ಸಿಬ್ಬಂದಿ ಮಕ್ಕಳ ವಿದ್ಯಾಭ್ಯಾಸಕ್ಕೆ 5 ಸಾವಿರ ರೂ. ನಿಂದ 5೦ ಸಾವಿರ ರೂ. ವರೆಗೆ ಸ್ಕಾಲರ್‌ಶಿಪ್ ಕೊಡಲು ಅವಕಾಶವನ್ನು ಈ ವಿಧೇಯಕದ ಮೂಲಕ ಕಲ್ಪಿಸಲಾಗಿದೆ.

ಇದನ್ನೂ ಓದಿ: Job for Kannadigas: ನೋಟಿಸ್ ಬೋರ್ಡ್‌ನಲ್ಲಿ ಕನ್ನಡಿಗರಿಗೆ ನೀಡಿದ ಉದ್ಯೋಗದ ಮಾಹಿತಿ ಪ್ರದರ್ಶನ: ಸಮಿತಿ ರಚಿಸಿದ ತಂಗಡಗಿ

ರಾಜ್ಯ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ 35 ಸಾವಿರ ದೇವಸ್ಥಾನಗಳಿದ್ದು, ಈ ಪೈಕಿ 205 ಎ ಗ್ರೇಡ್, 193 ಬಿ ಗ್ರೇಡ್ ಮತ್ತು 34 ಸಾವಿರ ಸಿ ಗ್ರೇಡ್ ದೇವಸ್ಥಾನಗಳಿವೆ. ಈ ಎಲ್ಲ ದೇಗುಲಗಳು ಈ ನಿಯಮಗಳಿಗೆ ಒಳಪಡುತ್ತವೆ.

Exit mobile version